Saturday, August 3, 2024

ನೀನಾರಿಗಾದೆಯೋ ಎಲೆ ಮಾನವ?

ಕೇರಳದ ವೈನಾಡಿನಲ್ಲಿ ಮತ್ತು ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಮತ್ತು ಅದು ಸೃಷ್ಟಿಸಿದ ಅನಾಹುತ ಸಾವು-ನೋವುಗಳು ಅಪಾರ. ಮೇಲ್ನೋಟಕ್ಕೆ ಇದು ಪ್ರಕೃತಿಯ ವಿಕೋಪ ಎನಿಸಿದರೂ ಅದು ಮನುಷ್ಯನೇ ಮಾಡಿಕೊಂಡ ಅಪಘಾತ.

ಹೀಗೆ ಆಗುತ್ತಿರುವುದು ಇದೇ ಮೊದಲೇನಲ್ಲ. ಉತ್ತರಾಖಂಡ ನಲ್ಲಿ ಹಲವಾರು ಬಾರಿ ಹೀಗೆ ಆಗಿದೆ. ನೇಪಾಳದಲ್ಲಿ, ಚೆನ್ನೈ ನಲ್ಲಿ, ಕೊಡಗಿನಲ್ಲಿ, ಹೀಗೆ ಪ್ರತಿ ವರ್ಷ ಒಂದಲ್ಲ ಒಂದು ಸ್ಥಳದಲ್ಲಿ ಮಳೆ ಸೃಷ್ಠಿಸುತ್ತಿರುವ ನೆರೆ ಜನರನ್ನು ತೊಂದರೆಗೆ ಒಳ ಪಡಿಸುತ್ತಲೇ ಇದೇ. ಹಾಗೆಯೆ ಪ್ರತಿ ಸಾರಿ ತಜ್ಞರು ಹೇಳುತ್ತಲೇ ಇದ್ದಾರೆ. ನದಿ ಪಾತ್ರದಲ್ಲಿ ಕಟ್ಟಡಗಳನ್ನು ಕಟ್ಟಬೇಡಿ  ಎಂದು. ಆದರೆ ಜನ ನದಿಯ ಹತ್ತಿರವೇ ವಾಸ ಸ್ಥಳಗಳನ್ನು ನಿರ್ಮಿಸುವುದು ಬಿಡುತ್ತಿಲ್ಲ. ನೀರು ನಿಲ್ಲುವ ಜಾಗಗಳಲ್ಲಿ, ಕೆರೆಗಳನ್ನು ಒತ್ತುವರಿ ಮಾಡಿ ಜನ ತಮ್ಮ ಉಪಯೋಗಗಳಗೆ ಬಳಸಿ ಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ಮಳೆ ನೀರು ಆ ಜಾಗಗಳಿಗೆ ನುಗ್ಗಿ ನೈಸರ್ಗಿಕವಾಗಿ ತನ್ನದ ಆದ ಜಾಗವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಅದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ತಿಕ್ಕಾಟ. 
  
ಗುಡ್ಡ ಪ್ರದೇಶಗಳಲ್ಲಿ ನಡೆಯುವ ಗಣಿಗಾರಿಕೆ, ಬಂಡೆ ಕೊರೆಯುವ ಸಲುವಾಗಿ ಉಪಯೋಗಿಸುವ ಸ್ಫೋಟಕಗಳು ಬೆಟ್ಟದ ಮಣ್ಣನ್ನು ಸಡಿಲಗೊಳಿಸಿ ಮಳೆಗಾಲದಲ್ಲಿ ಅದು ಸುಲಭವಾಗಿ ಜಾರಿ ಹೋಗುವಂತೆ ಮಾಡುತ್ತವೆ. ಆ ದಾರಿಯಲ್ಲಿ ರಸ್ತೆಗಳು, ತೋಟಗಳು, ಮನೆಗಳು ಇದ್ದರೆ ಆ ಮಣ್ಣು ಅವುಗಳ ಮೇಲೆ ಜಾರದೆ ಬಿಟ್ಟಿತೇ? ಭೂಕುಸಿತ ಎಂದು ವರದಿ ಮಾಡುವ ಮಾಧ್ಯಮಗಳು ಅಲ್ಲಿ ನಡೆಸಿದ ಬೇಕಾಬಿಟ್ಟಿ ಗಣಿಗಾರಿಕೆಗಳನ್ನು ಅಷ್ಟೇ ಮುತುವರ್ಜಿಯಿಂದ ಏಕೆ ವರದಿ ಮಾಡುವುದಿಲ್ಲ?

ಈಗಲೂ ತಜ್ಞರು ಹೇಳುತ್ತಲೇ ಇದ್ದಾರೆ. ಹಿಮಾಲಯದಲ್ಲಿ ಅಣೆಕಟ್ಟುಗಳನ್ನು ಕಟ್ಟಬೇಡಿ, ದೊಡ್ಡ ಕಾಮಗಾರಿಗಳನ್ನು ಮಾಡಬೇಡಿ ಎಂದು. ಆದರೆ ನಮ್ಮ ಸರ್ಕಾರ ಗಂಗೋತ್ರಿಗೆ ಚತುಷ್ಪತ ರಸ್ತೆ ಹೆದ್ದಾರಿ ನಿರ್ಮಿಸಿದೆ. ಖಾಸಗಿ ಕಂಪನಿಗಳು ನದಿ ಹರಿಯುವ ಜಾಗಗಳಿಗೆ ಹತ್ತಿರದಲ್ಲೇ ರೆಸಾರ್ಟ್ ನಿರ್ಮಿಸುತ್ತಿದ್ದಾರೆ. ನದಿ, ಕಾಡು ಪರಿಸರಗಳನ್ನು ಉದ್ಯಮಗಳನ್ನಾಗಿಸಿ ಹಣ ಮಾಡುವ ಹುನ್ನಾರದಲ್ಲಿದ್ದಾರೆ. ಆದರೆ ಅವರ ಯೋಜನೆಗಳನ್ನು ಮಣ್ಣು ಮಾಡಲು ಪ್ರಕೃತಿಗೆ ಒಂದು ಮಳೆ ಸಾಕು.

ಪ್ರಕೃತಿಯ ವಿಕಾಸದಲ್ಲಿ ಕೊನೆಗೆ ಬಂದ ಮಾನವ, ಪ್ರಕೃತಿಯನ್ನೇ ತನ್ನ ಮುಷ್ಟಿಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದರೆ, ಅಪಾರ ಶಕ್ತಿಯ ಪ್ರಕೃತಿ ಅವನನ್ನೇ ತುಳಿದು ಹಾಕುತ್ತಿದೆ. ಮನುಷ್ಯನನ್ನು ಬಿಟ್ಟು ಯಾವುದೇ ಪ್ರಾಣಿ-ಪಕ್ಷಿಗಳು ಆಣೆಕಟ್ಟು ಕಟ್ಟುವುದಿಲ್ಲ. ಪ್ರಕೃತಿಯನ್ನು ತನ್ನ ಸ್ವಾರ್ಥ ಸಾಧನೆಗೆ ಬಳಸಿಕೊಳುವುದಿಲ್ಲ. ಬದಲಿಗೆ ಪ್ರಕೃತಿಯೊಡನೆ ಹೊಂದಿಕೊಂಡು ಬಾಳುತ್ತವೆ. ಆದರೆ ಬುದ್ದಿವಂತಿಕೆ ಹೊಂದಿದ ಮಾನವ, ಸಣ್ಣ ಪುಟ್ಟ ವಿಜಯಗಳನ್ನು ಸಾಧಿಸಿದ ಹಾಗೆ ಕಂಡರೂ, ಪ್ರಕೃತಿಯ ಯೋಜನೆಗಳ ಮುಂದೆ ಕುಬ್ಜನಾಗಿಬಿಡುತ್ತಾನೆ.

ಪರಸ್ಪರ ಹೊಂದಿಕೊಂಡು ಬಾಳುವುದೇ ಬದುಕು ಆದರೆ ಮಾನವ ಮಾಡುತ್ತಿರುವುದು ಏನು? ನೆರೆ ಅನಾಹುತಗಳು ಅವನು ಮಾಡುತ್ತಿರುವ ತಪ್ಪುಗಳಿಗೆ ಅವನಿಗೆ ಸಿಕ್ಕ ಶಿಕ್ಷೆ ಅಲ್ಲವೇ? ಇಷ್ಟಕ್ಕೂ ಮಾನವನ ಮೇಲೆ ಅನುಕಂಪ ತೋರಿಸುವ ಅವಶ್ಯಕತೆ ಇತರ ಪ್ರಾಣಿ-ಪಕ್ಷಿಗಳಿಗೆ, ಪ್ರಕೃತಿಗೆ ಏಕಿರುತ್ತದೆ? ಅವುಗಳು ಕೇಳುತ್ತಿರಬಹುದಲ್ಲವೇ - ನೀನಾರಿಗಾದೆಯೋ, ಎಲೆ ಮಾನವ?

No comments:

Post a Comment