ನೀವು ಯಾವುದೊ ಪಾರ್ಟಿಯಲ್ಲಿ ಸಂತೋಷದಿಂದ (ಅಥವಾ ಬೇಜಾರಿನಿಂದಲೋ) ಕಾಲ ಕಳೆಯುತ್ತಿದ್ದೀರಿ. ಜನರ ಗಡಿಬಿಡಿ, ಸಂತೋಷ, ಧಾವಂತ ಎಲ್ಲ ತರಹದ ಭಾವನೆಗಳನ್ನು ಅಲ್ಲಿ ಸೇರಿದ ಜನರ ಮುಖದ ಮೇಲೆ ಗಮನಿಸುತ್ತಿದ್ದೀರಿ. ಮತ್ತು ಎಲ್ಲ ವಯಸ್ಸಿನ ಜನರು, ಹಸುಳೆಗಳಿಂದ-ಮುದುಕರವರೆಗೆ ಅಲ್ಲಿ ನೆರೆದಿದ್ದಾರೆ. ಹಾಗೆಯೆ ಪಾರ್ಟಿಯಲ್ಲಿ ಹೊಸ ಜನ ಬಂದು ಸೇರುತ್ತಿದ್ದಾರೆ ಹಾಗೆಯೆ ಸ್ವಲ್ಪ ಜನ ಹೊರ ನಡೆದೂ ಇದ್ದಾರೆ.
ಜೀವನವನ್ನು ಒಂದು ಪಾರ್ಟಿ ಅಂದು ಕೊಂಡರೆ, ಅಲ್ಲಿ ಹೊಸದಾಗಿ ಬಂದು ಸೇರುತ್ತಿರುವವರು ಆಗ ತಾನೇ ಹುಟ್ಟಿದವರು. ಮತ್ತು ಅಲ್ಲಿಂದ ಹೊರ ಹೋಗುತ್ತಿರುವವರು ತಮ್ಮ ಜೀವನ ಪಯಣ ಮುಗಿಸಿದವರು. ಈ ಪಾರ್ಟಿ ಲಕ್ಷಾಂತರ ವರುಷಗಳಿಂದ ಶುರುವಾಗಿದೆ ಮತ್ತು ಅದು ಕೊನೆಗೊಳ್ಳುವುದಿಲ್ಲ. ಪಾರ್ಟಿಗೆ ಸೇರಿಕೊಳ್ಳುವವರು ಮತ್ತು ಹೊರ ಹೋಗುವವರು ಬದಲಾಗುತ್ತಾರೆ ಅಷ್ಟೇ.
ಹುಟ್ಟಿದ ಜೀವ ಸಾಯಲೇಬೇಕು ಎಂದು ಗೊತ್ತಿರುವುದು ಮನುಷ್ಯನಿಗೆ ಮಾತ್ರ. ಪ್ರಾಣಿ, ಪಕ್ಷಿಗಳು ಅಪಾಯವನ್ನು ಗಮನಿಸುತ್ತವೆ, ಜೀವ ರಕ್ಷಣೆಗೆ ಹೋರಾಡುತ್ತವೆ. ಆದರೆ ಅವುಗಳಿಗೆ ಇಂದಲ್ಲ ನಾಳೆ ತಾವು ಸಾಯಲೇಬೇಕು ಎನ್ನುವ ಭೀಕರ ಸತ್ಯದ ಬಗ್ಗೆ ಅರಿವು ಇದೆಯೇ? ಅವುಗಳ ನರಮಂಡಲ ಮನುಷ್ಯನ ಹಾಗೆ ಅಭಿವೃದ್ಧಿ ಹೊಂದಿಲ್ಲ. ಹಾಗಾಗಿ ಅವುಗಳಿಗೆ ಅದರ ಅರಿವು ಇರುವುದಿಲ್ಲ ಎನ್ನುತ್ತದೆ ವಿಜ್ಞಾನ. ಹಾಗೆಯೆ ಗಿಡ-ಮರಗಳಲ್ಲಿ ನರಮಂಡಲ ವ್ಯವಸ್ಥೆ ಇಲ್ಲದ ಕಾರಣ ಅವುಗಳು ತಮ್ಮ ಅಂತ್ಯ ಒಂದಲ್ಲ ಒಂದು ದಿನ ಆಗಿಯೇ ತೀರುತ್ತದೆ ಎನ್ನುವ ವಿಷಯ ತಿಳಿದಿಲ್ಲ. ಅವುಗಳಿಗೆ ಸಾವು ಬರುತ್ತದೆ ಮತ್ತು ಸತ್ತು ಹೋಗುತ್ತವೆ.
ಮನುಷ್ಯ ಬುದ್ಧಿ ಜೀವಿ. ಅವನು ತನ್ನ ಸುತ್ತ ಮುತ್ತಲಿನ ಜಗತ್ತಿನಲ್ಲಿ ಸಾವನ್ನು ಅನುದಿನ ಕಾಣುತ್ತಾನೆ. ಒಂದು ವಯಸ್ಸಿನಲ್ಲಿ ಅದು ತನಗೆ ಬರುವುದೇ ಇಲ್ಲ ಎನ್ನುವ ತರಹ ವರ್ತಿಸುತ್ತಾನೆ. ಆದರೆ ಅವನ ಹತ್ತಿರದವರು ತಂದೆ-ತಾಯಿ, ಬಂಧು-ಬಳಗದವರು ಇಲ್ಲವಾದೊಡನೆ ಕಂಗಾಲು ಆಗುತ್ತಾನೆ. ಸಾವು ಅವನನ್ನು ಬಿಡುವುದಿಲ್ಲ ಎನ್ನುವ ವಿಷಯ ಅವನಿಗೆ ಮನದಟ್ಟಾಗುತ್ತದೆ. ಅವನಿಗೆ ಹೇಳದೆ ಬರುವ ಸಾವು ಬೇಕಿಲ್ಲ. ಆದರೆ ಇಷ್ಟವಿಲ್ಲದ ವಿಷಯ ಒಪ್ಪಿಕೊಳ್ಳುವುದು ಹೇಗೆ? ಸಾಯುವುದು ತಪ್ಪಿಸಲು ಆಗುವುದಿಲ್ಲ. ಆದರೆ ಅವನು ಸತ್ತರೂ ಈ ಜಗತ್ತಿನಲ್ಲಿ ಉಳಿದುಕೊಳ್ಳಲು ಬಯಸುತ್ತಾನೆ. ಅದಕ್ಕೆ ಹಲವಾರು ಉಪಾಯಗಳನ್ನು ಹುಡುಕುತ್ತಾನೆ.
ಮೊದಲ ಉಪಾಯ ಅವನ ಮಕ್ಕಳು. ಅವನ ಮಕ್ಕಳು ಅವನಿಂದ ಹುಟ್ಟಿದವರು ಅಲ್ಲವೇ? ತಾನು ಸತ್ತರೆ ಏನಂತೆ? ತನ್ನ ಮಕ್ಕಳು, ನಂತರ ಅವರ ಮಕ್ಕಳು ಹೀಗೆ ಜೀವನ ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ಸಮಾಧಾನ ಮಾಡಿಕೊಳ್ಳುತ್ತಾನೆ. ಅವರಿಗಾಗಿ ಆಸ್ತಿ ಗಳಿಸುತ್ತಾನೆ. ಮಕ್ಕಳನ್ನು, ಮೊಮ್ಮಕ್ಕಳನ್ನು ಮುತುವರ್ಜಿಯಿಂದ ಬೆಳೆಸುತ್ತಾನೆ, ಕಾಪಾಡುತ್ತಾನೆ. ಅವರ ಮೂಲಕ ನಾನು ಬದುಕುತ್ತೇನೆ ಎಂದು ವಿಚಾರ ಮಾಡುತ್ತಾನೆ.
ಎರಡನೆಯದಾಗಿ ಸಮಾಜ ಸೇವೆ. ಮಕ್ಕಳು ಶಾರೀರಿಕವಾಗಿ ತನ್ನಿಂದ ಹುಟ್ಟಿದ್ದರೂ ಅವರು ಬೇರೆಯೇ ತರಹದ ವ್ಯಕ್ತಿಗಳು, ಇವನ ವಿಚಾರಗಳಿಗೆ ಅವರು ಎರಡು ಕಾಸಿನ ಬೆಲೆ ಕೊಡದೆ ಹೋಗಬಹುದು ಎನ್ನುವ ವಿಷಯ ಅವನ ಮನದ ಮೂಲೆಯಲ್ಲಿ ಕೊರೆಯುತ್ತಿರುತ್ತದೆ. ಆಗ ಅವನು ಸಮಾಜಮುಖಿಯಾಗುತ್ತಾನೆ. ಹಿಂದೆ ರಾಜ-ಮಹಾರಾಜರು ಅನೇಕ ದೇವಸ್ಥಾನ, ಕೋಟೆಗಳನ್ನು ಕಟ್ಟಿ ತಮ್ಮ ಹೆಸರು ಕೆತ್ತಿಸಿಕೊಳ್ಳಲಿಲ್ಲವೇ? ಸೂಳೆಯರು ಕೂಡ ಕೆರೆಗಳನ್ನು ಕಟ್ಟಿಸಿದರು. ಎಂತಹ ಸಾಮಾನ್ಯ ವ್ಯಕ್ತಿಯಾಗಲಿ, ತನ್ನ ಹೆಸರು ಸಮಾಜದಲ್ಲಿ ಉಳಿಯಲಿ ಎನ್ನುವ ಪ್ರಯತ್ನ ಮಾಡುತ್ತಾನೆ. ಅವರೆಲ್ಲರೂ ತಮ್ಮ ಹೆಸರು ಉಳಿಯಲಿ ಎಂದು ಆಸೆ ಪಟ್ಟರೋ ಇಲ್ಲವೋ, ಆದರೆ ಅವರಿಂದ ಆ ಕೆಲಸ ಮಾಡಿಸಿದ್ದು ಅವರ ಸುಪ್ತ ಮನಸ್ಸಿನಲ್ಲಿ ಇದ್ದ ಆಸೆ.
ಮನುಷ್ಯನ ಮೂರನೇಯ ಉಪಾಯ ಪುನರ್ಜನ್ಮ. ಮನುಷ್ಯ ಸತ್ತ ಮೇಲೆ ದೇವರು ತನ್ನ ಪಾಪ-ಪುಣ್ಯಗಳನ್ನು ಅಳೆಯುತ್ತಾನೆ ಎನ್ನುವ ಭೀತಿ ಅಥವಾ ಆಸೆ ಮತ್ತು ಅದು ಅವನ ಮುಂದಿನ ಜನ್ಮಕ್ಕೆ ಒಳಿತಾಗಬಹುದು ಎನ್ನುವ ದೂರದೃಷ್ಟಿ ಅವನನ್ನು ಈಗಿನ ಜನ್ಮದಲ್ಲೇ ಮುಂದಿನ ಜನ್ಮಕ್ಕೆ ತಯಾರು ಆಗುವಂತೆ ಮಾಡುತ್ತದೆ. ಈ ಜನ್ಮದಲ್ಲಿ ಸಾವು ತಪ್ಪಿಸಲು ಆಗದಿದ್ದರೆ ಏನು? ಮುಂದಿನ ಜನ್ಮ ನಂತರ ಅದರ ಮುಂದಿನ ಜನ್ಮ ಇದ್ದೇ ಇದೆ.
ಅವನ ಕೊನೆಯ ಉಪಾಯ ಆತ್ಮಕ್ಕೆ ಸಾವಿಲ್ಲ ಎನ್ನುವುದು. ಸಾಯುವುದು ದೇಹ ಮಾತ್ರ ಆದರೆ ಆತ್ಮ ಹುಟ್ಟಿಯೂ ಇಲ್ಲ, ಸಾಯುವುದು ಇಲ್ಲ. ಈ ವಾದವನ್ನು ಹೆಚ್ಚು ಕಡಿಮೆ ಜಗತ್ತಿನ ಎಲ್ಲ ಧರ್ಮಗಳು ಒಪ್ಪಿಕೊಳ್ಳುತ್ತವೆ. ಹಿಂದೂ ಮತ್ತು ಬೌದ್ಧ ಧರ್ಮಗಳು ಇದೆ ತಳಹದಿಯ ಮೇಲೆ ರೂಪುಗೊಂಡಿವೆ.
ಈಜಿಪ್ಟ್ ನಲ್ಲಿ ಸತ್ತ ರಾಜರುಗಳಿಗೆ ಪಿರಮಿಡ್ ಗಳನ್ನು ಕಟ್ಟಿದರೆ, ನಮ್ಮಲ್ಲಿ ಸತ್ತ ಜನರಿಗೆ ಬಹಳಷ್ಟು ವಿಧಿ ವಿಧಾನಗಳಿಂದ ಕೂಡಿದ ಅಂತ್ಯ ಸಂಸ್ಕಾರ ಮಾಡುತ್ತಾರೆ. ಸತ್ತ ಜನರ ಪುಣ್ಯ ಕಾರ್ಯಗಳನ್ನು ಕೊಂಡಾಡುತ್ತಾರೆ. ಮತ್ತು ಅವರ ಹೆಸರಿನಲ್ಲಿ ಅನೇಕ ಸಮಾಜ ಸೇವೆಗಳನ್ನು ಕೂಡ ಮಾಡುತ್ತಾರೆ. ಸತ್ತವರನ್ನು ಮರೆಯಲು ಹೆಣಗಾಡುವ ಮನುಜ, ತಾನು ಸತ್ತಾಗ ಜನ ಮರೆಯದಿರಲಿ ಎಂದು ಬದುಕಿದ್ದಾಗಲೇ ಹೆಣಗಾಡುತ್ತಾನೆ. ಹಾಗೆಯೆ ಅವನ ಪೀಳಿಗೆ ಅದನ್ನು ಮುಂದುವರೆಸಿಕೊಂಡು ಹೋಗುತ್ತದೆ. ಮನುಷ್ಯರು ಚರಿತ್ರೆಯ ಲಕ್ಷಾಂತರ ಪುಸ್ತಕಗಳಾಗುತ್ತಾರೆ. ಆದರೂ ಅವನಿಗೆ ನೆಮ್ಮದಿ ಇಲ್ಲ. ಏಕೆಂದರೆ ಅವನಿಗೆ ಆಯಸ್ಸಿಗೆ ಕೊನೆ ಇದೆ ಎನ್ನುವ ವಿಷಯವೇ ಅವನಿಗೆ ಅಪಥ್ಯ.
(ಪ್ರೇರಣೆ: 'Why We Die' by Venki Ramakrishnan)
No comments:
Post a Comment