ಉತ್ತರ ಕರ್ನಾಟಕದಲ್ಲಿ ಆಡು ಭಾಷೆಯಲ್ಲಿ ಯಾರನ್ನಾದರೂ ಹೀಗಳೆಯೇಬೇಕೆಂದರೆ ಆಡುವ ಮಾತು 'ಬಂದುಬಿಟ್ಟ, ಭಾರಿ ದೊಡ್ಡ ಕೋಮ್ರಮ'. ಈ ಕೋಮ್ರಮ ನೇ ಕುಮಾರ ರಾಮ. ಇಲ್ಲಿಯ ಜನರಿಗೆ ಅವನಂಥ ಗಂಡುಗಲಿ ಇನ್ನಾರಿಲ್ಲ ಎನ್ನುವ ನಂಬಿಕೆ. ಅದು ಸುಮ್ಮನೆ ಬಂದುದು ಅಲ್ಲವಲ್ಲ.
ಕುಮಾರ ರಾಮ ಬರೀ ಕಂಪಿಲ ರಾಜ್ಯದ ರಾಜಕುಮಾರ ಅಷ್ಟೇ ಆಗಿರಲಿಲ್ಲ. ಅವನು ಧೈರ್ಯವೇ ದೇಹದ ರೂಪ ತಾಳಿ ಬಂದಂತಿದ್ದ. ಅವನ ಚೆಲುವಿಗೆ, ಅವನ ಸಾಹಸಕ್ಕೆ, ಯುದ್ಧ ಕೌಶಲ್ಯಗಳಿಗೆ ಮನಸೋತ ಕಾಕತಿಯ ದೊರೆ ಅವನಿಗೆ ಕುದುರೆ 'ಬೊಲ್ಲ' ನನ್ನ ಉಡುಗೊರೆಯಾಗಿ ಕೊಟ್ಟಿದ್ದ. ಕುಮಾರ ರಾಮನಿಗೆ ಅವನಷ್ಟೇ ಸಾಹಸ-ಧೈರ್ಯಗಳಿಂದ ಕಾದಾಡುವ ಸೇನೆ ಜೊತೆಗಿತ್ತು. ತನ್ನ ರಾಜ್ಯವನ್ನು ಹಲವು ಬಾರಿ ದಿಲ್ಲಿ ದೊರೆಗಳ ಧಾಳಿಯಿಂದ ಕಾಪಾಡುವ ಕುಮಾರ ರಾಮನ ಧೈರ್ಯ-ಸಾಹಸಗಳು, ರಣ ತಂತ್ರಗಳು ಅವನಿಗೆ ದೊಡ್ಡ ಹೆಸರನ್ನು ತಂದು ಕೊಟ್ಟವು. ಅದನ್ನು ಕೇಳಿದ ದಿಲ್ಲಿ ತುಘಲಕ್ ಸುಲ್ತಾನನ ಮಗಳು ಕೂಡ ಅವನನ್ನು ವರಿಸಲು ಇಷ್ಟ ಪಟ್ಟಿದ್ದಳು.
ಅದು ೧೨ ನೇ ಶತಮಾನ. ವಿಜಯನಗರ ಸಾಮ್ರಾಜ್ಯ ಅಸ್ಥಿತ್ವಕ್ಕೆ ಬರುವ ಮುಂಚೆ ಅದೇ ಪ್ರದೇಶದಲ್ಲಿ ಇದ್ದ ರಾಜ್ಯಕ್ಕೆ ದೊರೆ ಕಂಪಿಲರಾಯ. ಅವನ ಮಗನೆ ಕುಮಾರ ರಾಮ. ಇಂದಿನ ಕೊಪ್ಪಳ ಜಿಲ್ಲೆಯ ಗಂಗಾವತಿ ಹತ್ತಿರದ ಕಂಪ್ಲಿ, ಆನೆಗುಂದಿ ಮತ್ತು ಕುಮ್ಮಟದುರ್ಗದಲ್ಲಿ ಅವರು ನಿರ್ಮಿಸಿದ್ದ ಅವಶೇಷಗಳು ಉಳಿದಿವೆ. ಕುಮಾರ ರಾಮನ ಅರಮನೆ ಇದ್ದದ್ದು ಕುಮ್ಮಟ ದುರ್ಗದ ಬೆಟ್ಟದ ಮೇಲೆ. ಮೂರು ಸುತ್ತಿನ ಕೋಟೆ ಇಂದಿಗೆ ಹೆಚ್ಚು ಕಡಿಮೆ ನೆಲ ಸಮ ಆಗಿದೆ. ಆದರೂ ರೂಪು-ರೇಷೆಯ ಅಂದಾಜು ಸಿಗುತ್ತದೆ.
ಕಂಪಿಲ ರಾಜ್ಯಕ್ಕೆ ಇದ್ದ ದೊಡ್ಡ ಸಮಸ್ಯೆ ದಿಲ್ಲಿ ಸುಲ್ತಾನರ ಹಾವಳಿ. ಅದು ದಿಲ್ಲಿ ಸುಲ್ತಾನ ತುಘಲಕ ತನ್ನ ಬಂಗಾರದ ಪಾದರಕ್ಷೆಗಳನ್ನು ಕಳಿಸಿ ಕಪ್ಪ-ಕಾಣಿಕೆ ಕೇಳುತ್ತಿದ್ದ ಕಾಲ. ಅವರ ದಬ್ಬಾಳಿಕೆಗೆ ಹಲವಾರು ರಾಜ ಮನೆತನಗಳು ಮೂಲೆಗುಂಪಾಗುತ್ತವೆ. ಆದರೆ ಕಪ್ಪ-ಕಾಣಿಕೆ ನೀಡಲೊಲ್ಲದ ಕುಮಾರ ರಾಮ ಆ ಬಂಗಾರದ ಪಾದರಕ್ಷೆಗಳನ್ನು ಮೆಟ್ಟಿ ನಿಲ್ಲುತ್ತಾನೆ. ಆ ಸುದ್ದಿ ದಿಲ್ಲಿ ಸುಲ್ತಾನರಿಗೂ ತಲುಪುತ್ತದೆ. ಅವರು ಕಳಿಸುವ ಸಣ್ಣ ಪ್ರಮಾಣದ ಸೈನ್ಯಗಳನ್ನು ಧೂಳಿಪಟ ಮಾಡಿ ಕಳಿಸುತ್ತಾನೆ ಕುಮಾರ ರಾಮ. ಮತ್ತೆ ಹೆಚ್ಚಿನ ಪಡೆಗಳು ಬಂದಾಗ ಅದು ಮತ್ತೆ ಪುನರಾವರ್ತನೆ ಆಗುತ್ತದೆ. ಕೊನೆಗೆ ಅಪಾರ ಪ್ರಮಾಣದ ಸೈನ್ಯ ಬಂದಾಗ ಕುಮಾರ ರಾಮ ಸೋಲುತ್ತಾನೆ, ಯುದ್ಧ ನಡೆದ ಪ್ರದೇಶದಲ್ಲಿ ಅವನ ತಲೆ ಕಡಿಯಲಾಗುತ್ತದೆ. ಆ ಜಾಗಕ್ಕೆ ಈಗ ತಲೇಖಾನ್ ಎಂದು ಹೆಸರು. ಅಲ್ಲಿಂದ ಅವನ ತಲೆ ದೆಹಲಿ ತಲುಪುತ್ತದೆ. ಅದೇ ಸಮಯಕ್ಕೆ ದೆಹಲಿಯಲ್ಲಿ ಕ್ಷಾಮ ಬಂದೊಗುತ್ತದೆ. ಸುಲ್ತಾನರು ಅವರ ಆಸ್ಥಾನ ಜ್ಯೋತಿಷಿಗಳು ಹೇಳಿದ ಹಾಗೆ ಕುಮಾರ ರಾಮನ ತಲೆಯನ್ನು ಮತ್ತೆ ವಾಪಸ್ಸು ಅನೆಗೊಂದಿಗೆ ಕಳಿಸುತ್ತಾರೆ. ಅಲ್ಲಿ ಅವನ ರುಂಡಕ್ಕೆ ಪೂಜಿಸಿ ಗುಡಿ ಕಟ್ಟಲಾಗುತ್ತದೆ. ಹೀಗೆ ಅವನ ಮುಂಡ ತಲೇಖಾನ್ ಗ್ರಾಮದಲ್ಲಿ (ಇಂದಿಗೆ ಮಸ್ಕಿ ತಾಲೂಕಿನಲ್ಲಿದೆ) ಆದರೆ ರುಂಡ ಆನೆಗೊಂದಿಯ ಹತ್ತಿರ ದೇವಸ್ಥಾನದಲ್ಲಿ ಅಂತ್ಯ ಸಂಸ್ಕಾರ ಕಾಣುತ್ತದೆ.
ದಿಲ್ಲಿಯ ಸುಲ್ತಾನರನ್ನು ಹಾಡಿ ಹೊಗಳುವ ಜನಕ್ಕೆ ಅವರಿಗೆ ಹಲವು ಬಾರಿ ಸೋಲಿನ ರುಚಿ ತೋರಿಸಿದ ಮತ್ತು ಅದೇ ಕಾರಣಕ್ಕೆ ಪ್ರಾಣ ತೆತ್ತ ಕನ್ನಡದ ಯೋಧ ಕುಮಾರ ರಾಮ ನೆನಪಾಗುವುದಿಲ್ಲ. ಕನ್ನಡಿಗರ ನಿರಭಿಮಾನವೇ ಇಷ್ಟು. ಆದರೂ ಇಂದಿಗೂ ಕುಮಾರ ರಾಮನ ಗುಡಿಗೆ ಪೂಜೆ ಸಲ್ಲುತ್ತದೆ ಎನ್ನುವುದೇ ನೆಮ್ಮದಿ. ಅವನ ಧೈರ್ಯ-ಸಾಹಸಗಳು ಅಪ್ರತಿಮ ಎಂದು ಕೊಂಡಾಡಲಾಗುತ್ತದೆ. ಅವನ ನಂತರ ಆ ತರಹದ ಅಪ್ರತಿಮ ವೀರ ಕನ್ನಡ ನಾಡಿನಲ್ಲಿ ಹುಟ್ಟಲೇ ಇಲ್ಲ. ಉಳಿದವರೆಲ್ಲ ''ಬಂದುಬಿಟ್ಟ, ಭಾರಿ ದೊಡ್ಡ ಕೋಮ್ರಮ" ಎಂದು ಬೈಸಿಕೊಳ್ಳಬೇಕಷ್ಟೆ.
No comments:
Post a Comment