ಪುಸ್ತಕ ಓದುಗರಿಗೆ 'ವಿಶ್ವ ಪುಸ್ತಕ ದಿನದ' ಶುಭಾಶಯಗಳು. ಅದರ ಪ್ರಯುಕ್ತ ಜಿಮ್ ಕಾರ್ಬೆಟ್ ಅವರು ಬರೆದ 'My India' ಪುಸ್ತಕದ ಪರಿಚಯ ಪುಟಗಳ ಭಾವಾನುವಾದ ಇಲ್ಲಿದೆ.
'ನನ್ನ ಭಾರತ'
ಅಂದರೆ ಏನು ಅರ್ಥ ಎಂದು ನೀವು ಕೇಳುವ ಪ್ರಶ್ನೆ ಸಮಂಜಸ ಆಗಿದೆ. ಎರಡು ಸಾವಿರ ಮೈಲಿ ಉದ್ದ ಮತ್ತು ಅಷ್ಟೇ
ಅಗಲದ ಪ್ರದೇಶದಲ್ಲಿ ವಾಸಿಸುವ ಎಲ್ಲ ಜನರನ್ನು 'ಭಾರತೀಯರು' ಎಂದು ಕರೆಯುವುದು ವಿಶ್ವದ ವಾಡಿಕೆ. ಆದರೆ
ನಲವತ್ತು ಕೋಟಿ ಜನ ಭಾರತೀಯರು ಜಾತಿ, ಮತ, ಪಂಗಡ, ಭಾಷೆ ಇತ್ಯಾದಿಯಾಗಿ ವಿಂಗಡಿಸಲ್ಪಟ್ಟರೂ, ಯುರೋಪ್
ದೇಶಗಳಲ್ಲಿ ಕಾಣ ಸಿಗಲಾರದ ವೈವಿಧ್ಯತೆಯಿಂದ ಕೂಡಿದ್ದಾರೆ.
ಹಾಗಾಗಿ ನನಗೆ
ನನ್ನ ಪುಸ್ತಕದ ಶೀರ್ಷಿಕೆಯ ವಿವರಣೆ ನೀಡುವ ಅಗತ್ಯ ಇದೆ.
'ನನ್ನ ಭಾರತ' ಇದು ನಾನು ಚಿಕ್ಕಂದಿನಿಂದ ನೋಡಿದ, ನಾನು ಕೆಲಸ ಮಾಡಿದ, ಸುಮಾರು ಎಪ್ಪತ್ತು ವರುಶಗಳಷ್ಟು ಕಾಲ ಕಳೆದ ವಿಶಾಲವಾದ ಪ್ರದೇಶಗಳ ಜನರ, ಅವರ ವ್ಯಕ್ತಿತ್ವಗಳ ಮತ್ತು ಅವರ ಜೀವನ ಶೈಲಿಯ ಕುರಿತಾದದ್ದಾಗಿದೆ. ಭಾರತದ ನಕ್ಷೆಯನ್ನು ಕೈಗತ್ತಿಕೊಳ್ಳಿ. ಅಲ್ಲಿ ಉತ್ತರ ಭಾರತದ ಗಂಗೆ ಹರಿಯುವ ಪ್ರದೇಶದ ಕಡೆಗೆ ಕಣ್ಣು ಹಾಯಿಸಿ. ಅಲ್ಲಿ ನಿಮಗೆ 'ನೈನಿತಾಲ್' ಎನ್ನುವ ಗಿರಿಧಾಮ ಕಣ್ಣಿಗೆ ಬೀಳುತ್ತದೆ. ಬೇಸಿಗೆಯಲ್ಲಿ ಜನರಿಂದ ಗಿಜಿಗುಟ್ಟುವ ಈ ಪ್ರದೇಶ, ಚಳಿಗಾಲದಲ್ಲಿ ಅದಕ್ಕೆ ತದ್ವಿರುದ್ಧವಾಗಿ ಕೆಲವೇ ಜನರಿಗೆ, ಅಲ್ಲಿ ಶಾಶ್ವತವಾಗಿ ವಾಸ ಮಾಡುವವರಿಗೆ ಮಾತ್ರ ಸೀಮಿತವಾಗುತ್ತದೆ. ಅವರಲ್ಲಿ ನಾನು ಕೂಡ ಒಬ್ಬ. ಮತ್ತೆ ನಕ್ಷೆಯಲ್ಲಿ ಗಂಗೆ ಸಮುದ್ರ ಸೇರುವ ದಾರಿಯನ್ನು ಗಮನಿಸುತ್ತಾ ಹೋಗಿ. ಅಲಹಾಬಾದ್, ಬನಾರಸ್, ಪಾಟ್ನಾ ದಾಟಿ 'ಮೊಕಾಮೇ ಘಾಟ್' ಸಿಗುತ್ತದೆ. ಅಲ್ಲಿ ನಾನು ಇಪ್ಪತ್ತು ವರುಷಗಳ ಕಾಲ ಕೆಲಸ ಮಾಡಿದ್ದು. ನನ್ನ ಭಾರತ ಇವೆರಡರ - ನೈನಿತಾಲ್ ಮತ್ತು ಮೊಕಾಮೇ ಘಾಟ್ ಗಳ ನಡುವಿನ ಪ್ರದೇಶ.
ನೀವು ನೈನಿತಾಲ್
ತಲುಪಲು ಸುಸಜ್ಜಿತ ರಸ್ತೆಯ ಸೌಕರ್ಯವಿದೆ. ಸುಮಾರು ೪,೫೦೦ ಅಡಿ ಎತ್ತರದಲ್ಲಿ, ಪೂರ್ವದಿಂದ ಪಶ್ಚಿಮಕ್ಕೆ ಹಬ್ಬಿಕೊಂಡ ಕಣಿವೆ ಪ್ರದೇಶ ಇದು. ಮೂರು ಕಡೆಯಿಂದ ದೊಡ್ಡ ಬೆಟ್ಟಗಳು ಸುತ್ತುವರಿದಿವೆ. ತಳದಲ್ಲಿ ಎರಡು
ಮೈಲಿಗೂ ಹೆಚ್ಚಿನ ಪರಿಧಿ ಇರುವ ಸರೋವರ ಇದೆ. ಕಣಿವೆಯ ಒಂದು ತುದಿಯಿಂದ ಇನ್ನೊಂದು ತುದಿಯವೆರಗೂ ಬಜಾರಗಳು
ಹಬ್ಬಿವೆ. ಅವಕ್ಕೆ ಹೊಂದಿಕೊಂಡಂತೆ ಮನೆಗಳು, ಚರ್ಚ್ ಗಳು, ಶಾಲೆಗಳು, ಹೋಟೆಲ್ ಗಳು ತುಂಬಿಕೊಂಡಿವೆ.
ಸರೋವರದ ಒಂದು ತುದಿಯಲ್ಲಿ ಒಂದು ಹಿಂದೂ ದೇವಸ್ಥಾನವಿದೆ. ಅಲ್ಲಿ ಪವಿತ್ರ ಕಲ್ಲುಗಳಿಗೆ ಪೂಜೆ ಮಾಡುವ
ಬ್ರಾಹ್ಮಣ ಪೂಜಾರಿ ನನಗೆ ಅಜೀವ ಪರ್ಯಂತದ ಗೆಳೆಯ.
ಸರೋವರ ಹೇಗೆ
ಅಲ್ಲಿ ಉದ್ಭವ ಆಯಿತು ಎನ್ನುವದರ ಬಗ್ಗೆ ಭೂವಿಜ್ಞಾನಿಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಅದು
ಹಿಮಪ್ರವಾಹದಿಂದ ಆದದ್ದು ಎಂದರೆ ಇನ್ನು ಕೆಲವರು ಅದು ಜ್ವಾಲಾಮುಖಿಯಿಂದ ಆದದ್ದು ಎನ್ನುತ್ತಾರೆ. ಆದರೆ
ಹಿಂದೂ ಪುರಾಣಗಳು ಇದಕ್ಕೆ ಮೂಲ ಕಾರಣ ಮೂವರು ಮುನಿಗಳು - ಅತ್ರಿ, ಪುಲಸ್ತ್ಯ ಮತ್ತು ಪುಲಹ ಎಂದು ಹೇಳುತ್ತವೆ.
ಸ್ಕಂದ ಪುರಾಣದ ಪ್ರಕಾರ, ಆ ಮೂರು ಮುನಿಗಳು ಇಲ್ಲಿಗೆ ಬಂದಾಗ ಅವರಿಗೆ ಬಾಯಾರಿಕೆ ಆಗಿತ್ತು, ಆದರೆ
ನೀರಿನ ಸೌಲಭ್ಯ ಇರಲಿಲ್ಲ. ಅದಕ್ಕಾಗಿ ಬೆಟ್ಟದ ಅಡಿ, ಕೆರೆ ನಿರ್ಮಿಸಿ ಅದಕ್ಕೆ ಮಾನಸ ಸರೋವರದಿಂದ ನೀರು
ತುಂಬಿದರು ಎಂದು ಪ್ರತೀತಿ. ಕೆರೆಯ ಸುತ್ತ ಬೆಟ್ಟಗಳಲ್ಲಿ ಕಾಡು ಬೆಳೆದು, ಅಲ್ಲಿ ಮಳೆಯಿಂದ ಸಂಗ್ರಹವಾದ
ನೀರು ಸರೋವರಕ್ಕೆ ಹರಿದು ಅದು ಪ್ರಾಣಿ, ಪಕ್ಷಿ ಸಂಕುಲವನ್ನು ಆಕರ್ಷಿಸಿತು.
ಬೆಟ್ಟಗಳ ನಡುವೆ
ಇರುವ ಸರೋವರ ಇದೆ ಎನ್ನುವ ವದಂತಿ ೧೮ನೆ ಶತಮಾನದಲ್ಲಿ ಬ್ರಿಟಿಷರನ್ನು ಆಕರ್ಷಿಸಿ ತು. ಮತ್ತು ಅವರು
ಇಲ್ಲಿ ತಳ ಊರಲು ಕಾರಣ ಆಯಿತು. ಇಲ್ಲಿರುವ ಸರೋವರದ ಸುತ್ತಲಿನ ಬೆಟ್ಟಗಳಲ್ಲೇ ದೊಡ್ಡದಾದ ಚೀನಾ ಬೆಟ್ಟವನ್ನು
ನೀವು ಹತ್ತಿದರೆ ವೈವಿಧ್ಯಮಯ ಗಿಡ-ಮರಗಳ ಪಕ್ಷಿಗಳ, ಹೂಗಳ ಸ್ವರ್ಗವನ್ನೇ ಕಾಣಬಹದು. ನೀವು ಮುನಿಗಳ
ಹಾಗೆ ಬಾಯಾರಿದ್ದರೆ, ಹತ್ತಿರದಲ್ಲೇ ಇರುವ ನೀರಿನ ತೊರೆಯನ್ನು ನಾನು ತೋರಿಸುತ್ತೇನೆ. ನೀವು ಬೆಟ್ಟದ
ಆಚೆಗೆ ಕಣ್ಣು ಹಾಯಿಸಿದರೆ ಕಣಿವೆಯ ಕೆಳಗೆ ಹರಿಯುವ ಕೋಸಿ ನದಿವನ್ನು ಕಾಣಬಹುದು. ಆ ನದಿ ಹರಿವಿನಲ್ಲೇ
ಅಲ್ಮೊರಾ, ರಾಣಿಖೇತ್ ಊರುಗಳು ಕಾಣ ಸಿಗುತ್ತವೆ. ಇನ್ನು ದೂರಕ್ಕೆ ಕಣ್ಣು ಹಾಯಿಸಿದರೆ ಹಿಮ ಮುಸುಕಿದ
ಹಿಮಾಲಯ ಬೆಟ್ಟಗಳ ಶ್ರೇಣಿಯೇ ಕಾಣುತ್ತದೆ.
ನೀವು ಉತ್ತರಕ್ಕೆ
ನೋಡಿದರೆ, ಸುಮಾರು ಅರವತ್ತು ಮೈಲಿ ದೂರದಲ್ಲಿ ತ್ರಿಶೂಲ್ ಎನ್ನುವ ಪ್ರದೇಶ ಕಾಣುತ್ತದೆ. ನಿಮ್ಮ ದೃಷ್ಟಿ
ತೀಕ್ಷ್ಣವಾಗಿದ್ದರೆ ಅಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ್, ಬದರಿನಾಥ್ ಗೆ ಹೋಗುವ ಯಾತ್ರಿಗಳ
ಗುಂಪುಗಳನ್ನು ಗುರುತಿಸಬಹುದು. ಅಲ್ಲಿಂದ ಇನ್ನು ದೂರಕ್ಕೆ ಕಣ್ಣು ಹಾಯಿಸಿದರೆ ನಿಮಗೆ ನಂದಾ ದೇವಿ
(೨೫,೬೮೯ ಅಡಿ ಎತ್ತರ), ಭಾರತದಲ್ಲೇ ಅತಿ ಎತ್ತರವಾದ ಬೆಟ್ಟ ಕಾಣ ಸಿಗುತ್ತದೆ. ಅದರ ಪೂರ್ವಕ್ಕೆ 'ಪಾಂಚ್
ಚೌಲಿ' (ಅಡಿಗೆ ಮಾಡುವ ಸ್ಥಳ) ಎನ್ನುವ ಐದು ಬೆಟ್ಟಗಳ ತುದಿಗಳು ಕಾಣುತ್ತವೆ. ಆ ಮಾರ್ಗವಾಗೇ ಪಾಂಡವರು
ಕೈಲಾಸಕ್ಕೆ ತೆರಳಿದ್ದು ಎಂದು ಮಹಾಭಾರತ ಹೇಳುತ್ತದೆ.
ನೀವು ಹೊರಳಿ
ನಿಂತು ದಕ್ಷಿಣದ ಕಡೆಗೆ ಮುಖ ಮಾಡಿದರೆ ಸಮತಟ್ಟಾದ ಪ್ರದೇಶದಲ್ಲಿ ಬರೈಲಿ, ಕಾಶೀಪುರ ಮತ್ತು ಮೊರಾದಾಬಾದ್
ಪಟ್ಟಣಗಳು ಕಾಣುತ್ತವೆ. ಇಲ್ಲಿ ವ್ಯವಸಾಯ ಮತ್ತು ರೈಲು ವ್ಯವಸ್ಥೆಗಳಿಂದ, ಅಪಾರ ಪ್ರಮಾಣದ ಹಳ್ಳಿಗಳು
ಸಾಧ್ಯವಾಗಿ ಜನ ಸಮುದಾಯ ಬೆಳೆದಿದೆ. ನೈನಿತಾಲ್ ಗೆ ಹತ್ತಿರದ ಹಳ್ಳಿಗಳೆಂದರೆ ಕಲಾಧುನ್ಗಿ ಮತ್ತು ಛೋಟಾ
ಹಲ್ಡ್ವಾನಿ. ಇಲ್ಲಿಯೇ ಭಾರತದಲ್ಲಿ ಮೊದಲು ಕಬ್ಬಿಣದ ಅದಿರು ತೆಗೆದದ್ದು. ಅಲ್ಲಿಂದ ದೂರದಲ್ಲಿ ಸೂರ್ಯನ
ಬೆಳಕಿನಲ್ಲಿ ಹೊಳೆಯುವ ಗಂಗಾ ನದಿ ಕಾಣುತ್ತದೆ.
ಅಲ್ಲಿಂದ ನೀವು ಪೂರ್ವಕ್ಕೆ ತಿರುಗಿದರೆ, ತ್ರಿಕೋನಾಕಾರದ 'ಛೋಟಾ ಕೈಲಾಸ್' ಬೆಟ್ಟ ಕಾಣುತ್ತದೆ. ಅದರಾಚೆಗೆ ಕಾಣುವ 'ಕಾಲಾ ಅಗರ್ ' ಪರ್ವತ ಶ್ರೇಣಿಗಳಲ್ಲಿ, ಚೌಗರಃ ಪ್ರದೇಶದಲ್ಲಿ ಒಂದು ನರಭಕ್ಷಕ ಹುಲಿಯನ್ನು ನಾನು ಬೇಟೆಯಾಡಿದ್ದು. ಇನ್ನು ದೂರಕ್ಕೆ ನೀವು ಕಣ್ಣು ಹಾಯಿಸಿದರೆ ನಿಮಗೆ ನೇಪಾಳದ ಪರ್ವತ ಶ್ರೇಣಿಗಳು ಕಾಣುತ್ತವೆ.