೨೦೧೪ ನೇ ವರ್ಷದಲ್ಲಿ ಶ್ರಾವಣ ಶುಕ್ರವಾರದಂದು ಒಂದು ಹೊಸ ಚಿಕ್ಕ ಕಾರನ್ನು ಖರೀದಿಸಿದ್ದೆವು. ಆದರೆ ಅದು ನನಗೆ ವಿಚಿತ್ರ ಅನುಭವಗಳನ್ನು ಕೊಡಲು ಆರಂಭಿಸಿತ್ತು. ಒಂದು ರಾತ್ರಿ ನಾನು ಒಬ್ಬನೇ ಡ್ರೈವ್ ಮಾಡುತ್ತಿರುವಾಗ, ಹಿಂದಿನ ಸೀಟಿನಲ್ಲಿ ಯಾರೋ ಬಂದು ಕೂತಂತೆ ಅನಿಸಿತ್ತು. ಮತ್ತು ಕಾರಿನ ಸ್ಟೀರಿಂಗ್ ನಾನು ಒಂದು ಕಡೆ ತಿರುಗಿಸಿದರೆ, ಅದು ತಾನಾಗೇ ಇನ್ನೊಂದು ಕಡೆ ಎಳೆಯುವ ಅನುಭವ ಆಗುತ್ತಿತ್ತು. ಅದು ಕೆಲವೇ ದಿನಗಳಿಗೆ ದೊಡ್ಡ ಸಮಸ್ಯೆಗೆ ಸಿಕ್ಕಿ ಹಾಕಿಸಲಿದೆ ಎನ್ನುವುದು ಆಗ ನನಗೆ ಗೊತ್ತಿರಲಿಲ್ಲ.
ಆ ವರುಶದ ಡಿಸೆಂಬರ್
ತಿಂಗಳ ಕೊನೆಯಲ್ಲಿ ರಜೆಗಳಿಗೆ ಎಂದು ಅದೇ ಕಾರನ್ನು ತೆಗೆದುಕೊಂಡು ಊರಿಗೆ ಹೊರಟಿದ್ದೆವು. ಕಾರಿನಲ್ಲಿ
ಒಟ್ಟು ಐದು ಜನ. ಬೆಂಗಳೂರಿನಿಂದ ದಾಬಸ್ ಪೇಟೆ ದಾಟಿ ತುಮಕೂರಿಗೆ ಮುಂಚೆಯೇ ಬರುವ ಫ್ಲೈ ಓವರ್ ಒಂದನ್ನು
ಆಗ ತಾನೇ ದಾಟಿದ್ದೆವು. ಯಾವುದೊ ಒಂದು ಕ್ಷಣದಲ್ಲಿ ಕಾರು ನನ್ನ ಹತೋಟಿ ತಪ್ಪಿ, ಏನಾಗುತ್ತಿದೆ ಎಂದು
ಅರಿವಾಗುವಷ್ಟರಲ್ಲಿ ದರದರನೇ ಕಾರನ್ನು ಯಾರೋ ಎಳೆದು ಹಾಕಿದಂತೆ, ಅದು ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿ,
ಅಲ್ಲಿರುವ ಆಳೆತ್ತರದ ಕಲ್ಲಿನ ಕಂಬವೊಂದಕ್ಕೆ ಬಡಿದು, ತಿರುಗಿ, ಉರುಳಿ ಸುಮ್ಮನಾಯಿತು. ಕಾರಿನ ಹೊರಕ್ಕೆ
ಬಂದು ನೋಡಿದಾಗ ಅದರ ಟೈಯರ್ ಗಳು ಒಡೆದು ಹೋಗಿದ್ದವು. ಗಾಜುಗಳೆಲ್ಲ ಪುಡಿಪುಡಿಯಾಗಿದ್ದವು. ಕಾರಿನ
ಒಂದು ಭಾಗ ತಾನು ನಗ್ಗಿ ಹೋದರೂ ನಮ್ಮ ಜೀವ ಉಳಿಸಿತ್ತು.
ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಆದರೆ ಗಂಭೀರ ಎನ್ನುವ ಅಪಾಯ ನಮಗಾರಿಗೂ ಆಗಿರಲಿಲ್ಲ.
ಒಮ್ಮೆ ಸುತ್ತ ನೋಡಿದರೆ ಹತ್ತಿರದ ಬೆಟ್ಟದ ಮೇಲೆ ದೇವಸ್ಥಾನ ಸ್ಪಷ್ಟವಾಗಿ ಕಾಣಿಸಿತ್ತು.
ದಾರಿಯಲ್ಲಿ ಹೋಗುತ್ತಿದ್ದವೆರೆಲ್ಲ
ತಮ್ಮ ಗಾಡಿ ನಿಲ್ಲಿಸಿ ನಮಗೆ ಏನಾದರೂ ಸಹಾಯ ಬೇಕೇ ಎಂದು ವಿಚಾರಿಸತೊಡಗಿದ್ದರು. ಹತ್ತಿರವೇ ಒಂದು ರೂಮಿನಲ್ಲಿ
ವಾಸ ಮಾಡಿಕೊಂಡಿದ್ದ ಹಿಜಡಾ ಗಳು ಓಡಿ ಬಂದರು. ಗಾಬರಿಗೊಂಡಿದ್ದ ನನ್ನ ಚಿಕ್ಕ ಮಗನನ್ನು ಎತ್ತಿಕೊಂಡು
ಸಂತೈಸಿದರು. ತಮ್ಮ ಜಾಗದಲ್ಲಿ ಕುಳಿತುಕೊಂಡು ನಮಗೆ ಸುಧಾರಿಸಿಕೊಳ್ಳಲು ಅನುವು ಮಾಡಿಕೊಟ್ಟರು. ಮನೆಯವರನ್ನು
ಮತ್ತೆ ಬೆಂಗಳೂರಿಗೆ ಇನ್ನೊಂದು ವಾಹನದಲ್ಲಿ ಕಳಿಸಿಕೊಡುವ ವ್ಯವಸ್ಥೆ ಮಾಡಿದೆ. ನಾನು ದೂರು ದಾಖಲಿಸಲು
ಹತ್ತಿರದ ಪೊಲೀಸ್ ಠಾಣೆಗೆ ತೆರಳಿದೆ. ಇನ್ಶೂರೆನ್ಸ್ ಕಂಪನಿಯವರಿಗೆ ವಿಷಯ ತಿಳಿಸಿದೆ. ಕಾರನ್ನು ಮತ್ತೆ
ಬೆಂಗಳೂರಿನ ಸರ್ವಿಸ್ ಸೆಂಟರ್ ಗೆ ತಲುಪಿಸುವಂತೆ ವ್ಯವಸ್ಥೆ ಮಾಡಿ, ನಾನು ಬಸ್ ನಲ್ಲಿ ಬೆಂಗಳೂರಿನ
ಮನೆಗೆ ತಲುಪುವಷ್ಟರಲ್ಲಿ ಸಾಯಂಕಾಲವೇ ಆಗಿತ್ತು. ವಿಚಿತ್ರ ಎಂದರೆ ಕಷ್ಟ ಕಾಲದಲ್ಲಿ ಆಗುವ ಸ್ನೇಹಿತನೊಬ್ಬ
ಅಂದು ಕೂಡ ಎಲ್ಲ ಸರಿಯಾಗಿದೆಯೇ ಎಂದು ಫೋನ್ ಮಾಡಿದ್ದ. ಆದರೆ ಅವತ್ತು ಹೇಗೋ ಪರಿಸ್ಥಿತಿ ನಿಭಾಯಿಸಲು
ಸಾಧ್ಯವಾಗಿತ್ತು.
ಅದುವರೆಗೆ ಒಂದು
ಚಿಕ್ಕ ಅಪಘಾತವನ್ನು ಕೂಡ ಮಾಡದ ನಾನು ಅಂದು ದೊಡ್ಡ ಅಪಘಾತಕ್ಕೀಡಾಗಿದ್ದು ನನ್ನಲ್ಲಿನ ಧೈರ್ಯವನ್ನು
ಉಡುಗಿಸಿಬಿಟ್ಟಿತ್ತು. ಯಾರ ಜೀವ ಹೋಗಿದ್ದರೂ, ಅದರ ಹೊಣೆ ನನ್ನದೇ ಆಗಿತ್ತು ಎನ್ನುವ ವಿಚಾರ ನನ್ನ
ಮನಸ್ಸಿನ ಆಳಕ್ಕೆ ಇಳಿದು ಹೋಗಿತ್ತು. ಅಂದು ನಗ್ಗಿ ಹೋಗಿದ್ದ ನಮ್ಮ ಕಾರು ನೋಡಿದ್ದ ಎಲ್ಲ ಜನರೂ ಜೀವ
ಉಳಿದಿದ್ದೆ ದೈವ ಎನ್ನುವ ಮಾತನಾಡಿದ್ದರು. ಅಪಘಾತಕ್ಕೀಡಾದ ಮೇಲೆ ಕಾರು ಇಳಿದ ನಂತರ ನೋಡಿದ್ದ ದೇವಸ್ಥಾನ
ನನಗೆ ನೆನಪಿಗೆ ಬಂತು. ಸಂಜೆ ಮನೆ ತಲುಪಿದ ಮೇಲೆ ಸ್ನಾನ ಮಾಡಿ, ಕಂಪ್ಯೂಟರ್ ತೆಗೆದು ಈ-ಮೇಲ್ ನೋಡಿದೆ.
ಕೆಲವು ತಿಂಗಳುಗಳ ಹಿಂದೆ NGO ಸಂಸ್ಥೆ ಒಂದರ ಮೂಲಕ ಒಬ್ಬ ಹೆಣ್ಣು ಮಗಳಿಗೆ ಸ್ವಾವಲಂಬಿ ಆಗಲು ಮಾಡಿದ
ಸಹಾಯಕ್ಕೆ ಧನ್ಯವಾದ ಪತ್ರ ಬಂದಿತ್ತು. ಅದನ್ನು ನೋಡಲೆಂದೇ ದೇವರು ನನ್ನ ಜೀವ ಉಳಿಸಿದನೇ ಎನ್ನುವ ವಿಚಾರವು
ಕ್ಷಣ ಕಾಲ ಬಂದು ಹೋಯಿತು. ಹಾಗೆಯೆ Gladiator ಚಿತ್ರದಲ್ಲಿ ಮುಖ್ಯ ಪಾತ್ರದ ಜೊತೆಗಾರ 'ಸಾಯಬೇಕು, ಆದರೆ ಈಗಲ್ಲ, ಈಗಲ್ಲ' ಎನ್ನುವ ಸಂಭಾಷಣೆ ಕೂಡ ನೆನಪಿಗೆ
ಬಂತು. ದೈವವೋ, ವಿಧಿಯೋ, ಕರ್ಮವೋ ಯಾವುದು ಜೀವ ಉಳಿಸಿದ್ದರೂ ಅವರಿಗೆ ಒಂದು ಧನ್ಯವಾದ ಎಂದು ಮನಸ್ಸಿನಲ್ಲೇ
ಹೇಳಿಕೊಂಡು ನಿದ್ದೆ ಹೋದೆ. ಪ್ರಯಾಸದ, ಬಲವಾದ ಆಘಾತವಾದ ದಿನದಂದು ಕೂಡ ನಿದ್ರೆ ಬಂದೆ ಬಿಟ್ಟಿತು.
ಕೆಲವೇ ದಿನಗಳಿಗೆ
ಕಾರನ್ನು ರಿಪೇರಿ ಮಾಡಲು ಸಾಧ್ಯ ಇಲ್ಲ ಎಂದು ಕಾರಿನ ಕಂಪನಿ ಯವರು ಹೇಳಿದರು. ಇನ್ಶೂರೆನ್ಸ್ ಕಂಪನಿಯವರು
ಅದನ್ನು ಮಾರಿ ಹಾಕಿ ನಮಗೆ ಹಣ ಕೊಟ್ಟರು. ನನಗೆ ದೊಡ್ಡ ಮೊತ್ತದ ನಷ್ಟವೇ ಆದರೂ, ಮನಸ್ಸಿಗೆ ಆದ ಆಘಾತ
ಹೆಚ್ಚಿನ ಪ್ರಮಾಣದಲ್ಲಿತ್ತು. ಆದದ್ದನ್ನು ಮನೆಯವರು ಕೆಲವೇ ದಿನಗಳಿಗೆ ಮರೆತು ಹೋದರೂ, ನನಗೆ ಮಾತ್ರ
ಅದು ಸಾಧ್ಯ ಆಗಲಿಲ್ಲ. ಒಂದು ವರುಷದವರೆಗೆ ಯಾವ ಕಾರನ್ನು ಕೂಡ ಡ್ರೈವ್ ಮಾಡುತ್ತಿರಲಿಲ್ಲ. ಒಂದು ದಿನ
ಆಫೀಸಿನ ಆಪ್ತ ಸ್ನೇಹಿತನೊಬ್ಬನಿಗೆ ನಡೆದ ವಿಷಯವನ್ನೆಲ್ಲ ತಿಳಿಸಿದೆ. ಅವನು ನಕ್ಕು, ಅದು ನಡೆದದ್ದು
ಕಳೆದ ವರುಷದಲ್ಲಿ. ಆದರೆ ಈಗಾಗಲೇ ಹೊಸ ವರ್ಷ ಬಂದಾಗಿದೆ. ಬೇರೆ ಕಾರು ತೆಗೆದುಕೋ ಎಂದು ಧೈರ್ಯ ತುಂಬಿದ.
ಸ್ವಲ್ಪ ಭಯದಿಂದಲೇ ಬೇರೆ ಕಾರು ಖರೀದಿಸಿ ಮತ್ತೆ ಡ್ರೈವ್ ಮಾಡಲು ಆರಂಭಿಸಿದೆ. ಮತ್ತೆ ಅದೇ ದಾರಿಯಲ್ಲಿ
ಹೋಗುವಾಗ, ಅಪಘಾತ ನಡೆದ ಸ್ಥಳದಲ್ಲಿ ಕಾರು ನಿಲ್ಲಿಸಿ ಹತ್ತಾರು ಹೆಜ್ಜೆ ಹಾಕಿ ಬಂದೆ. ದುಗುಡ ಕಡಿಮೆ
ಆಗಿ ಹೋಯಿತು. ಅಲ್ಲಿಂದ ಮತ್ತೆ ಸರಾಗವಾಗಿ ಡ್ರೈವ್ ಮಾಡಲು ಶುರು ಮಾಡಿದೆ. ಆ ಮಾರ್ಗದಲ್ಲಿ ಹೋಗುವಾಗ
ಪ್ರತಿ ಬಾರಿ ನಾವು ಬಿದ್ದ ಸ್ಥಳವನ್ನು ಗಮನಿಸುತ್ತಿದ್ದೆ. ಇಂದಿಗೆ ಅಲ್ಲಿ ಖಾಲಿ ಜಾಗವಿಲ್ಲ ಬದಲಿಗೆ
ಅಲ್ಲಿ ಒಂದು ಪೆಟ್ರೋಲ್ ಪಂಪ್ ಬಂದಿದೆ.
ಆ ಘಟನೆಯ ನಂತರ
ನನಗೆ ಅಪಘಾತಗಳು ಕ್ಷಣಾರ್ಧದಲ್ಲಿ ಹೇಗೆ ಸಾವು ತಂದು ಬಿಡುತ್ತವೆ ಎನ್ನುವುದು ಅನುಭವಕ್ಕೆ ಬಂದು ಬಿಟ್ಟಿತ್ತು.
ಹಾಗೆಯೆ ಕಾಯುವ ಶಕ್ತಿಯ ಮೇಲಿನ ನಂಬಿಕೆಯು (ನೀವು ಮೂಢ ನಂಬಿಕೆ ಎಂದರೂ ಪರವಾಗಿಲ್ಲ) ಕೂಡ ಬಲವಾಗತೊಡಗಿತ್ತು.
ಇಂದಿಗೂ ಕಾಣದ ದೇವರಿಗೆ ಕೈ ಮುಗಿಯುತ್ತೇನೆ. ತಿಳಿಯದೆ ಮಾಡಿದ ತಪ್ಪುಗಳಿಗೆ ಕ್ಷಮೆ ಕೋರುತ್ತೇನೆ.
ಗೊತ್ತಿಲ್ಲದ ಜನ ತೊಂದರೆಗೆ ಸಿಕ್ಕಿಕೊಂಡಾಗ ಕೈಲಾದ ಸಹಾಯ ಮಾಡುತ್ತೇನೆ. ಸ್ವಲ್ಪ ಮಟ್ಟಿನ ಸಮಯಕ್ಕಾದರೂ
ನಾನು ಅದೇ ಪರಿಸ್ಥಿತಿಯಲ್ಲಿ ಇದ್ದೆ. ಗಂಡಾಗಿ ಹುಟ್ಟಿ ಹೆಣ್ಣಿನ ವೇಷ ಧರಿಸುವ ಹಿಜಡಾಗಳನ್ನು ಕಂಡರೆ
ಬೇಸರಿಸಿಕೊಳ್ಳುವುದಿಲ್ಲ. ಪುರಾಣ ಕಾಲದ ಅರ್ಧನಾರೀಶ್ವರನ ಕಲ್ಪನೆ ಇವರಿಂದ ಹುಟ್ಟಿದ್ದೋ ಎಂದುಕೊಳ್ಳುತ್ತೇನೆ.
ಕರ್ಮ ಕಾಯುತ್ತದೆಯೋ,
ದೇವರು ಕ್ಷಮಿಸುತ್ತಾನೋ ಎನ್ನುವ ಸಾಕ್ಷಿ, ಪುರಾವೆ ಯಾರಿಗಾದರೂ ಕೊಡುವ ಅವಶ್ಯಕತೆಯೇ ನನಗಿಲ್ಲ. ಅದು
ನನ್ನ ನಂಬಿಕೆ ಅಷ್ಟೇ. ಸಮಸ್ಯೆಗಳಿಂದ ಪಾರು ಮಾಡಿ, ಸದಾವಕಾಶಗಳನ್ನು ಮಾಡಿ ಕೊಡುವ ದೈವಕ್ಕೆ ನಾನು
ಕೃತಜ್ಞನಾಗಿದ್ದೇನೆ.
No comments:
Post a Comment