Saturday, May 7, 2022

ಒಂದು ದೊಡ್ಡಮನೆಗೆ ಹಲವಾರು ಮುರಿದ ಮನೆಗಳು

ಟಾಲ್ಸ್ಟಾಯ್ ತಮ್ಮ 'ಅನ್ನಾ ಕರೆನಿನಾ' ಕಾದಂಬರಿಯಲ್ಲಿ ಹೇಳುತ್ತಾರೆ.  "ಎಲ್ಲ ಸುಖಿ ಕುಟುಂಬಗಳು ಒಂದೇ ತರಹ. ಆದರೆ ಮುರಿದು ಹೋದ ಮನೆಗಳಲ್ಲಿ, ಪ್ರತಿಯೊಂದಕ್ಕೂ ಅದರದ್ದೇ ಆದ ಕಾರಣ". ದೇಶ, ಭಾಷೆ ಯಾವುದು ಆದರೇನು? ಮನುಷ್ಯನ ಮನಸ್ಥಿತಿ ಒಂದೇ ಅಲ್ಲವೇ? ರಷ್ಯಾ ದೇಶದಲ್ಲಿ ಟಾಲ್ಸ್ಟಾಯ್ ಅವರು ಗಮನಿಸಿದ್ದು, ಪ್ರಪಂಚದ ಎಲ್ಲ ದೇಶಗಳಿಗೂ ಅನ್ವಯಿಸುತ್ತದೆ.


'ರಸಿಕರ ರಾಜ' ರಾಜಕುಮಾರ್ ಅವರ ಚಿತ್ರಗಳ ನಾಯಕಿಯರಿಗೆ ಇದ್ದ ರೂಪ, ಲಾವಣ್ಯ ಅವರ ಪತ್ನಿ ಪಾರ್ವತಮ್ಮ ಅವರಿಗೆ ಇರಲಿಲ್ಲ. ಆದರೆ ಗಂಡನಿಗೆ ಇರದ ವ್ಯವಹಾರಿಕ ಜಾಣ್ಮೆ ಇತ್ತು. ಕುಟುಂಬವನ್ನು ಸರಿ ತೂಗಿಸುವ, ಸಮಸ್ಯೆಗಳನ್ನು ಬಗೆ ಹರಿಸುವ ಘನತೆ ಇತ್ತು. ರಾಜಕುಮಾರ್ ಮತ್ತು ಪಾರ್ವತಮ್ಮನವರು ಪರಸ್ಪರರನ್ನು ಸಾರ್ವಜನಿಕವಾಗಿ ದೂಷಿಸಿಕೊಂಡಿದ್ದನ್ನು ನೀವು ಎಂದಾದರೂ ನೋಡಿದ್ದೀರಾ?  ಅವರ ನಡುವೆ ಭಿನ್ನಾಭಿಪ್ರಾಯಗಳೇ ಇರಲಿಲ್ಲ ಎಂದಲ್ಲ. ಆದರೆ ಅವನ್ನು ಮೀರಿ ನಿಲ್ಲುವ, ಒಬ್ಬರ ಲೋಪ-ದೋಷಗಳನ್ನು ಇನ್ನೊಬ್ಬರು ಸರಿ ಪಡಿಸುವ ಹೊಂದಾಣಿಕೆ ಇತ್ತು. ಹಾಗಾಗಿ ಅವರ ಕುಟುಂಬ ಕನ್ನಡ ಚಿತ್ರರಂಗ ಗೌರವದಿಂದ ಕಾಣುವ 'ದೊಡ್ಡ ಮನೆ' ಎನಿಸಿಕೊಂಡಿತು.


ಆದರೆ ಮುರಿದು ಬಿದ್ದ ಕುಟುಂಬಗಳಿಗೆ ಹಲವಾರು ಕಾರಣ. ಕುಡುಕ ಗಂಡ, ಬೇಜವಾಬ್ದಾರಿ ಗಂಡ, ಬಾಳಿಸಲಾರದ ಗಂಡ. ಹಾಗೆಯೇ ಸುಮ್ಮನೆ ಜಗಳ ತೆಗೆಯುವ ಹೆಂಡತಿ. ಎಷ್ಟಿದ್ದರೂ ಸಮಾಧಾನ ಇರದ ಹೆಂಡತಿ. ಪ್ರತಿಯೊಂದನ್ನು ತವರು ಮನೆಗೆ ಹೋಲಿಸಿ ಪತಿಯನ್ನು ದೂಷಿಸುವ ಹೆಂಡತಿ. ಹೀಗೆ ಕಾರಣಗಳನ್ನು ಎಷ್ಟು ಬೇಕಾದರೂ ಹುಡುಕಿ ತರಬಹದು.


ಖುಷ್ವಂತ್ ಸಿಂಗ್ ಅವರು ಬರೆದ 'ದಿ ಕಂಪನಿ ಆಫ್ ವಿಮೆನ್' ಎನ್ನುವ ಪುಸ್ತಕ ಓದಿ ನೋಡಿ. ಲೇಖಕರ ಪೋಲಿತನದ ಆಚೆಗೆ ಅವರು ಬಿಚ್ಚಿಡುವ ವಾಸ್ತವ ಸತ್ಯದ ಅರಿವಾಗುತ್ತದೆ. ಪರಸ್ಪರ ಹೊಂದಾಣಿಕೆ ಇರದೇ ಮದುವೆ ಮುರಿದು ಬಿದ್ದು ಹೋದ ಮೇಲೆ ಅದರ ಕಥಾನಾಯಕ ಅನೈತಿಕ ಸಂಬಂಧಗಳಿಗೆ ಹಾತೊರೆಯುತ್ತಾನೆ. ಅವನ ಹಾಗೆಯೆ ಮುರಿದು ಹೋದ ಮದುವೆಯಲ್ಲಿನ ಒಬ್ಬಂಟಿ ಹೆಂಗಸರು ಅವನಿಗೆ ಸಾಲು ಸಾಲಾಗಿ ಜೊತೆಯಾಗುತ್ತ ಹೋಗುತ್ತಾರೆ. ಇಬ್ಬರೂ ತಮ್ಮ ಸಂಬಂಧಗಳನ್ನು ಸಮರ್ಥಿಸಿಕೊಳ್ಳುತ್ತ ಹೋಗುತ್ತಾರೆ. ಮುರಿದು ಬಿದ್ದ ಮದುವೆಗೆ ಜೀವನ ವ್ಯರ್ಥ ಮಾಡಿಕೊಂಡು ಏನು ಪ್ರಯೋಜನ ಎನ್ನುವ ವ್ಯಾವಹಾರಿಕ ಪ್ರಜ್ಞೆಗೆ ಇಳಿಯುತ್ತಾರೆ. ಕೊನೆಗೆ ಏಡ್ಸ್ ರೋಗಕ್ಕೆ ಬಲಿಯಾಗಿ ಕಥಾನಾಯಕ ಅಕಾಲಿಕ ಮರಣ ಹೊಂದುತ್ತಾನೆ. ಇದು ಒಂದು ಕಾಲ್ಪನಿಕ ಕಥೆ ಎಂದು ನಿಮಗೆ ಅನಿಸಿದರೆ, ಸಣ್ಣ ವಯಸ್ಸಿನಲ್ಲೇ ವಿವಾಹ ವಿಚ್ಛೇದನ ಪಡೆದ ಸ್ನೇಹಿತನ ಅಂತರಂಗ ಕೆದಕಿ ನೋಡಿ. ವಾಸ್ತವ ಸತ್ಯದ ಅನಾವರಣ ನಿಮಗೆ ಇನ್ನೊಂದು ಕಾದಂಬರಿ ಬರೆಯುವಷ್ಟು ಸಾಮಗ್ರಿ ಒದಗಿಸಿ ಕೊಡುತ್ತದೆ.


ಪ್ರಕೃತಿ ಮೊದಲಿಗೆ ಜೀವಿಗಳನ್ನು ಸೃಷ್ಟಿಸಿದಾಗ ಗಂಡು-ಹೆಣ್ಣಿನ ಭೇಧ ಇರಲಿಲ್ಲ. ಗಿಡ-ಮರಗಳಲ್ಲಿ ಗಂಡು-ಹೆಣ್ಣು ಬೇರೆ ಬೇರೆ ಎಲ್ಲಿ ಉಂಟು? ಗಂಡು-ಹೆಣ್ಣಿನ ಎರಡೂ ಅಂಶಗಳು ಒಂದೇ ಹೂವಿನಲ್ಲಿ ಜೊತೆಯಲ್ಲೇ ಇರುವುದಿಲ್ಲವೇ? ಆದರೆ ಪ್ರಾಣಿ-ಪಕ್ಷಿಗಳ ಬೆಳವಣಿಗೆಗೆ, ಬದಲಾಗುತ್ತಿರುವ ಪರಿಸರಕ್ಕೆ ಬೇಗ ಹೊಂದಿಕೊಳ್ಳಲು ಅನುಕೂಲವಾಗುವಂತೆ ಪ್ರಕೃತಿ ಗಂಡು-ಹೆಣ್ಣನ್ನು ಬೇರ್ಪಡಿಸಿತು. ಅವೆರಡು ಸಂತತಿ ಬೆಳೆಸಲು ಜೊತೆಗೆ ಬರುವಂತೆ ಪ್ರೇರೇಪಿಸಲು ಹಾರ್ಮೋನ್ ಗಳ ಬಳಕೆ ಆಯಿತು. ಇದು ಮನುಷ್ಯ ಸೇರಿದಂತೆ ಸಕಲ ಪ್ರಾಣಿ-ಪಕ್ಷಿಗಳಿಗೆ ಅನ್ವಯಿಸುತ್ತದೆ. ಆದರೆ ಪ್ರಾಣಿ ಪ್ರಪಂಚದಲ್ಲಿ ಇರದ ಮದುವೆ ಮನುಷ್ಯನಲ್ಲಿ ಮಾತ್ರ ಉಂಟು. ಒಂದು ಗಂಡಿಗೆ ಒಂದೇ ಹೆಣ್ಣು ಎನ್ನುವ ನಿಯಮವನ್ನು ಮನುಷ್ಯ ಜಾರಿಗೆ ತರುವ ಉದ್ದೇಶ ಸಮಾಜದ ಹಿತವನ್ನು ಕಾಯುವುದು ಆಗಿತ್ತು. ಆದರೆ ಮನುಷ್ಯನ ದೇಹದಲ್ಲಿ ಅಡಗಿರುವ ಜೀನ್ ಗಳು ಮದುವೆಗೆ ಕ್ಯಾರೇ ಎನ್ನುವುದಿಲ್ಲ. ಅವು ಹಾರ್ಮೋನ್ ಗಳ ಮೂಲಕ ದೇಹಭಾಧೆ ಹುಟ್ಟಿಸುತ್ತವೆ. ಮದುವೆ ಆಚೆಗಿನ ಸಂಬಂಧ ಆದರೇನು? ಅವಕಾಶ ಇದ್ದಾಗ ಅದರ ಪ್ರಯೋಜನ ಪಡೆದುಕೋ ಎನ್ನುವ ಸಂದೇಶ ರವಾನಿಸುತ್ತವೆ. ಅವು ಗಂಡಸನ್ನು ಲಂಪಟನನ್ನಾಗಿ, ಹೆಂಗಸನ್ನು ಚಂಚಲೆಯನ್ನಾಗಿಸುತ್ತವೆ.


ಆದರೆ ಪ್ರಾಣಿ ಸಂಕುಲದಲ್ಲಿ ಇಲ್ಲದ ವಿವೇಚನಾ ಶಕ್ತಿ ಮನುಷ್ಯನಿಗೆ ಉಂಟು. ಅವನು ತನ್ನ ಇಚ್ಚಾ ಶಕ್ತಿಯನ್ನು (ವಿಲ್ ಪವರ್) ಉಪಯೋಗಿಸಿ ದೇಹಭಾಧೆಯನ್ನು ಹತ್ತಿಕ್ಕಬಹುದು. ಆದರೆ ಬಹುತೇಕ ಮನುಷ್ಯರಿಗೆ ಈ ಇಚ್ಚಾ ಶಕ್ತಿಯ ಕೊರತೆ. ಹಾಗಾಗಿ ಗಂಡು ಒಂದಾದ ನಂತರ ಇನ್ನೊಂದರಂತೆ ಸಿಗರೆಟ್ ಸೇದುತ್ತ ಹೊಗೆ ಬಿಡುತ್ತಾನೆ. ಬೇಕೋ, ಇಲ್ಲವೋ ಹೆಂಗಸು ಸೀರೆ ಖರೀದಿಸುತ್ತ ಹೋಗುತ್ತಾಳೆ. ಇಬ್ಬರಿಗೂ ತಮ್ಮ ದೈಹಿಕ, ಮಾನಸಿಕ ಅಗತ್ಯಗಳೇ ದೊಡ್ಡವು ಎನಿಸುತ್ತವೆ. ಏನಾದರು ತೊಂದರೆ ಬಂದಲ್ಲಿ ಗಂಡ-ಹೆಂಡತಿ ಅದನ್ನು ಪರಸ್ಪರರ ಮೇಲೆ ತಳ್ಳಿ ಹಾಕುತ್ತಾರೆ. ಮತ್ತು ಒಬ್ಬರು ಇನ್ನೊಬ್ಬರಲ್ಲಿ ಲೋಪ-ದೋಷಗಳನ್ನು ಹುಡುಕುತ್ತ ಹೋಗುತ್ತಾರೆ.


ಆದರೆ ಪ್ರಕೃತಿ ಜೀನ್ ಗಳ ಮೂಲಕ ಹುಟ್ಟಿಸಿದ ವಾಂಛೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನೋಡಿ. ಆಗ ಮನುಷ್ಯನನ್ನು ಅರಿಯುವ ಪ್ರಭುದ್ಧತೆ ಬೆಳೆಯುತ್ತದೆ. ಅಂತಹ ಅರಿವು ಮೂಡಿದ ಕುಟುಂಬಗಳಲ್ಲಿ ಏನಾದರು ಎಡವಟ್ಟು ಆದರೂ ಅದನ್ನು ಸರಿಪಡಿಸಿಕೊಳ್ಳುವ ಮತ್ತೆ ಸರಿ ದಾರಿಗೆ ತರುವ ಪ್ರಯತ್ನ ಸುಲಭದಲ್ಲಿ ಆಗುತ್ತದೆ. ಅಲ್ಲಿ ಗಂಡ-ಹೆಂಡತಿ ಇಬ್ಬರಿಗೂ ಪರಸ್ಪರರ ಲೋಪ-ದೋಷಗಳ ಸಂಪೂರ್ಣ ಅರಿವು ಇದೆ. ಅವರು ದೋಷ-ಆರೋಪಣೆಗೆ ತೊಡಗುವುದಿಲ್ಲ. ಬದಲಿಗೆ ಒಬ್ಬರ ಬೆಂಬಲ ಇನ್ನೊಬ್ಬರಿಗೆ ದೊರಕುತ್ತದೆ. ಆ ಮನೆ, ಬೇರೆಯವರ ಸಮಸ್ಯೆಗಳನ್ನು ಕೂಡ ಬಗೆಹರಿಸುವ 'ದೊಡ್ಡ ಮನೆ' ಆಗುತ್ತದೆ. ಆದರೆ ಊರುಗಳಲ್ಲಿ ಒಂದು ದೊಡ್ಡ ಮನೆಗೆ ಹಲವಾರು ಮುರಿದ ಮನೆಗಳು ಅಲ್ಲವೇ? ಇದಕ್ಕೆ ಕಾರಣ ಏನೆಂದು ನಿಮಗೆ ಈಗಾಗಲೇ ಸ್ಪಷ್ಟ ಆಗಿರಬೇಕು.


ಮುರಿದ ಮದುವೆಗಳಲ್ಲಿ ಭವಿಷ್ಯವೇ ಇಲ್ಲ ಎಂದೇನಿಲ್ಲ.  'ಮುರಿದು ಹೋದ ಕೊಳಲು, ಕೊಳಲು ಬರುವನೊಬ್ಬ ಧೀರನು' ಎನ್ನುವ ಅಡಿಗರ ಕಾವ್ಯ ಇಲ್ಲವೇ. ಇಬ್ಬರು ವಿವಾಹ ವಿಚ್ಛೇದಿತರು ಹೊಸ ಮದುವೆಯಲ್ಲಿ ಒಂದಾಗಿ ಹೊಸ ಬಾಳು ಶುರು ಮಾಡುವ ಉದಾಹರಣೆಗಳು ಸಾಕಷ್ಟು. ಅವರಿಬ್ಬರೂ ಅನುಭವಸ್ಥರಾದ್ದರಿಂದ ಅವರಿಗೆ ಸಹನೆ ಬೆಳೆದಿರುತ್ತದೆ. ಹಾಗಾಗಿ ಅವರ ಮೊದಲ ಮದುವೆಯ ಹಾಗೆ ಅದು ಬೇಗನೆ ಮುರಿದು ಬೀಳುವ ಸಾಧ್ಯತೆಯೂ ಕಡಿಮೆ.


ಮದುವೆ ಬೇಗ ಮುಗಿದು ಹೋಗಿ, ಮರು ಮದುವೆಗೆ ಒಪ್ಪದೇ ಇರುವವರು ಇರುತ್ತಾರಲ್ಲ. ಅವರಿಗೆ ಪ್ರಪಂಚದ ಉಳಿದ ಎಲ್ಲ ಬಾಗಿಲುಗಳು ತೆರೆದುಬಿಡುತ್ತವೆ. ಸಣ್ಣ ವಯಸ್ಸಿನಲ್ಲೇ ಪತ್ನಿಯನ್ನು ಕಳೆದುಕೊಂಡ ರವೀಂದ್ರನಾಥ್ ಟಾಗೋರ್ ಅವರು ಕಲಾಭಿಮುಖಿಯಾದರು. ಸಂತ ಶಿಶುನಾಳ ಶರೀಫರು ತತ್ವಜ್ಞಾನಿ ಆದರು. ಆದರೆ ಅಂತಹ ಉದಾಹರಣೆಗಳು ವಿರಳ. ಸಾಧಾರಣ ಮನುಷ್ಯ ಇಂದ್ರಿಯ ಸುಖಗಳಿಗೆ ದಾಸನಾಗಿ ಕಳೆದು ಹೋಗುವುದೇ ಹೆಚ್ಚು. ಹಾಗಾಗಿ ಊರಿಗೆ ಒಂದೆರಡು ದೊಡ್ಡ ಮನೆಗಳು ಇದ್ದರೆ, ಮಠಗಳು ಹತ್ತೂರಿಗೆ ಒಂದು ಕಾಣಬಹುದು ಅಷ್ಟೇ. ಆದರೆ ಮುರಿದು ಹೋದ ಮನೆಗಳು ಪ್ರತಿ ಊರಿನಲ್ಲೂ ಇವೆ. ಅವುಗಳನ್ನು ಲೆಕ್ಕ ಇಟ್ಟು ಯಾವ ಪ್ರಯೋಜನ, ಯಾರಿಗೆ ಉಪಯೋಗ? ಅವು ಕೆಟ್ಟ ಉದಾಹರಣೆಗಳು ಆಗಬಹುದು ಅಷ್ಟೇ.

Saturday, April 23, 2022

ಪುಸ್ತಕ ಪರಿಚಯ: My India by Jim Corbett

ಪುಸ್ತಕ ಓದುಗರಿಗೆ 'ವಿಶ್ವ ಪುಸ್ತಕ ದಿನದ' ಶುಭಾಶಯಗಳು. ಅದರ ಪ್ರಯುಕ್ತ ಜಿಮ್ ಕಾರ್ಬೆಟ್ ಅವರು ಬರೆದ 'My India' ಪುಸ್ತಕದ ಪರಿಚಯ ಪುಟಗಳ ಭಾವಾನುವಾದ ಇಲ್ಲಿದೆ.

 

'ನನ್ನ ಭಾರತ' ಅಂದರೆ ಏನು ಅರ್ಥ ಎಂದು ನೀವು ಕೇಳುವ ಪ್ರಶ್ನೆ ಸಮಂಜಸ ಆಗಿದೆ. ಎರಡು ಸಾವಿರ ಮೈಲಿ ಉದ್ದ ಮತ್ತು ಅಷ್ಟೇ ಅಗಲದ ಪ್ರದೇಶದಲ್ಲಿ ವಾಸಿಸುವ ಎಲ್ಲ ಜನರನ್ನು 'ಭಾರತೀಯರು' ಎಂದು ಕರೆಯುವುದು ವಿಶ್ವದ ವಾಡಿಕೆ. ಆದರೆ ನಲವತ್ತು ಕೋಟಿ ಜನ ಭಾರತೀಯರು ಜಾತಿ, ಮತ, ಪಂಗಡ, ಭಾಷೆ ಇತ್ಯಾದಿಯಾಗಿ ವಿಂಗಡಿಸಲ್ಪಟ್ಟರೂ, ಯುರೋಪ್ ದೇಶಗಳಲ್ಲಿ ಕಾಣ ಸಿಗಲಾರದ ವೈವಿಧ್ಯತೆಯಿಂದ ಕೂಡಿದ್ದಾರೆ.

 

ಹಾಗಾಗಿ ನನಗೆ ನನ್ನ ಪುಸ್ತಕದ ಶೀರ್ಷಿಕೆಯ ವಿವರಣೆ ನೀಡುವ ಅಗತ್ಯ ಇದೆ.

 

'ನನ್ನ ಭಾರತ' ಇದು ನಾನು ಚಿಕ್ಕಂದಿನಿಂದ ನೋಡಿದ, ನಾನು ಕೆಲಸ ಮಾಡಿದ, ಸುಮಾರು ಎಪ್ಪತ್ತು ವರುಶಗಳಷ್ಟು ಕಾಲ ಕಳೆದ ವಿಶಾಲವಾದ ಪ್ರದೇಶಗಳ ಜನರ, ಅವರ ವ್ಯಕ್ತಿತ್ವಗಳ ಮತ್ತು ಅವರ ಜೀವನ ಶೈಲಿಯ ಕುರಿತಾದದ್ದಾಗಿದೆ. ಭಾರತದ ನಕ್ಷೆಯನ್ನು ಕೈಗತ್ತಿಕೊಳ್ಳಿ. ಅಲ್ಲಿ ಉತ್ತರ ಭಾರತದ ಗಂಗೆ ಹರಿಯುವ ಪ್ರದೇಶದ ಕಡೆಗೆ ಕಣ್ಣು ಹಾಯಿಸಿ. ಅಲ್ಲಿ ನಿಮಗೆ 'ನೈನಿತಾಲ್' ಎನ್ನುವ ಗಿರಿಧಾಮ ಕಣ್ಣಿಗೆ ಬೀಳುತ್ತದೆ. ಬೇಸಿಗೆಯಲ್ಲಿ ಜನರಿಂದ ಗಿಜಿಗುಟ್ಟುವ ಈ ಪ್ರದೇಶ, ಚಳಿಗಾಲದಲ್ಲಿ ಅದಕ್ಕೆ ತದ್ವಿರುದ್ಧವಾಗಿ ಕೆಲವೇ ಜನರಿಗೆ, ಅಲ್ಲಿ ಶಾಶ್ವತವಾಗಿ ವಾಸ ಮಾಡುವವರಿಗೆ ಮಾತ್ರ ಸೀಮಿತವಾಗುತ್ತದೆ. ಅವರಲ್ಲಿ ನಾನು ಕೂಡ ಒಬ್ಬ. ಮತ್ತೆ ನಕ್ಷೆಯಲ್ಲಿ ಗಂಗೆ ಸಮುದ್ರ ಸೇರುವ ದಾರಿಯನ್ನು ಗಮನಿಸುತ್ತಾ ಹೋಗಿ. ಅಲಹಾಬಾದ್, ಬನಾರಸ್, ಪಾಟ್ನಾ ದಾಟಿ 'ಮೊಕಾಮೇ ಘಾಟ್' ಸಿಗುತ್ತದೆ. ಅಲ್ಲಿ ನಾನು ಇಪ್ಪತ್ತು ವರುಷಗಳ ಕಾಲ ಕೆಲಸ ಮಾಡಿದ್ದು. ನನ್ನ ಭಾರತ ಇವೆರಡರ - ನೈನಿತಾಲ್ ಮತ್ತು ಮೊಕಾಮೇ ಘಾಟ್ ಗಳ ನಡುವಿನ ಪ್ರದೇಶ.

 

ನೀವು ನೈನಿತಾಲ್ ತಲುಪಲು ಸುಸಜ್ಜಿತ ರಸ್ತೆಯ ಸೌಕರ್ಯವಿದೆ. ಸುಮಾರು ೪,೫೦೦ ಅಡಿ ಎತ್ತರದಲ್ಲಿ, ಪೂರ್ವದಿಂದ ಪಶ್ಚಿಮಕ್ಕೆ ಹಬ್ಬಿಕೊಂಡ ಕಣಿವೆ ಪ್ರದೇಶ ಇದು. ಮೂರು ಕಡೆಯಿಂದ ದೊಡ್ಡ ಬೆಟ್ಟಗಳು ಸುತ್ತುವರಿದಿವೆ. ತಳದಲ್ಲಿ ಎರಡು ಮೈಲಿಗೂ ಹೆಚ್ಚಿನ ಪರಿಧಿ ಇರುವ ಸರೋವರ ಇದೆ. ಕಣಿವೆಯ ಒಂದು ತುದಿಯಿಂದ ಇನ್ನೊಂದು ತುದಿಯವೆರಗೂ ಬಜಾರಗಳು ಹಬ್ಬಿವೆ. ಅವಕ್ಕೆ ಹೊಂದಿಕೊಂಡಂತೆ ಮನೆಗಳು, ಚರ್ಚ್ ಗಳು, ಶಾಲೆಗಳು, ಹೋಟೆಲ್ ಗಳು ತುಂಬಿಕೊಂಡಿವೆ. ಸರೋವರದ ಒಂದು ತುದಿಯಲ್ಲಿ ಒಂದು ಹಿಂದೂ ದೇವಸ್ಥಾನವಿದೆ. ಅಲ್ಲಿ ಪವಿತ್ರ ಕಲ್ಲುಗಳಿಗೆ ಪೂಜೆ ಮಾಡುವ ಬ್ರಾಹ್ಮಣ ಪೂಜಾರಿ ನನಗೆ ಅಜೀವ ಪರ್ಯಂತದ ಗೆಳೆಯ.

 

ಸರೋವರ ಹೇಗೆ ಅಲ್ಲಿ ಉದ್ಭವ ಆಯಿತು ಎನ್ನುವದರ ಬಗ್ಗೆ ಭೂವಿಜ್ಞಾನಿಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಅದು ಹಿಮಪ್ರವಾಹದಿಂದ ಆದದ್ದು ಎಂದರೆ ಇನ್ನು ಕೆಲವರು ಅದು ಜ್ವಾಲಾಮುಖಿಯಿಂದ ಆದದ್ದು ಎನ್ನುತ್ತಾರೆ. ಆದರೆ ಹಿಂದೂ ಪುರಾಣಗಳು ಇದಕ್ಕೆ ಮೂಲ ಕಾರಣ ಮೂವರು ಮುನಿಗಳು - ಅತ್ರಿ, ಪುಲಸ್ತ್ಯ ಮತ್ತು ಪುಲಹ ಎಂದು ಹೇಳುತ್ತವೆ. ಸ್ಕಂದ ಪುರಾಣದ ಪ್ರಕಾರ, ಆ ಮೂರು ಮುನಿಗಳು ಇಲ್ಲಿಗೆ ಬಂದಾಗ ಅವರಿಗೆ ಬಾಯಾರಿಕೆ ಆಗಿತ್ತು, ಆದರೆ ನೀರಿನ ಸೌಲಭ್ಯ ಇರಲಿಲ್ಲ. ಅದಕ್ಕಾಗಿ ಬೆಟ್ಟದ ಅಡಿ, ಕೆರೆ ನಿರ್ಮಿಸಿ ಅದಕ್ಕೆ ಮಾನಸ ಸರೋವರದಿಂದ ನೀರು ತುಂಬಿದರು ಎಂದು ಪ್ರತೀತಿ. ಕೆರೆಯ ಸುತ್ತ ಬೆಟ್ಟಗಳಲ್ಲಿ ಕಾಡು ಬೆಳೆದು, ಅಲ್ಲಿ ಮಳೆಯಿಂದ ಸಂಗ್ರಹವಾದ ನೀರು ಸರೋವರಕ್ಕೆ ಹರಿದು ಅದು ಪ್ರಾಣಿ, ಪಕ್ಷಿ ಸಂಕುಲವನ್ನು ಆಕರ್ಷಿಸಿತು.

 

ಬೆಟ್ಟಗಳ ನಡುವೆ ಇರುವ ಸರೋವರ ಇದೆ ಎನ್ನುವ ವದಂತಿ ೧೮ನೆ ಶತಮಾನದಲ್ಲಿ ಬ್ರಿಟಿಷರನ್ನು ಆಕರ್ಷಿಸಿ ತು. ಮತ್ತು ಅವರು ಇಲ್ಲಿ ತಳ ಊರಲು ಕಾರಣ ಆಯಿತು. ಇಲ್ಲಿರುವ ಸರೋವರದ ಸುತ್ತಲಿನ ಬೆಟ್ಟಗಳಲ್ಲೇ ದೊಡ್ಡದಾದ ಚೀನಾ ಬೆಟ್ಟವನ್ನು ನೀವು ಹತ್ತಿದರೆ ವೈವಿಧ್ಯಮಯ ಗಿಡ-ಮರಗಳ ಪಕ್ಷಿಗಳ, ಹೂಗಳ ಸ್ವರ್ಗವನ್ನೇ ಕಾಣಬಹದು. ನೀವು ಮುನಿಗಳ ಹಾಗೆ ಬಾಯಾರಿದ್ದರೆ, ಹತ್ತಿರದಲ್ಲೇ ಇರುವ ನೀರಿನ ತೊರೆಯನ್ನು ನಾನು ತೋರಿಸುತ್ತೇನೆ. ನೀವು ಬೆಟ್ಟದ ಆಚೆಗೆ ಕಣ್ಣು ಹಾಯಿಸಿದರೆ ಕಣಿವೆಯ ಕೆಳಗೆ ಹರಿಯುವ ಕೋಸಿ ನದಿವನ್ನು ಕಾಣಬಹುದು. ಆ ನದಿ ಹರಿವಿನಲ್ಲೇ ಅಲ್ಮೊರಾ, ರಾಣಿಖೇತ್ ಊರುಗಳು ಕಾಣ ಸಿಗುತ್ತವೆ. ಇನ್ನು ದೂರಕ್ಕೆ ಕಣ್ಣು ಹಾಯಿಸಿದರೆ ಹಿಮ ಮುಸುಕಿದ ಹಿಮಾಲಯ ಬೆಟ್ಟಗಳ ಶ್ರೇಣಿಯೇ ಕಾಣುತ್ತದೆ.

 

ನೀವು ಉತ್ತರಕ್ಕೆ ನೋಡಿದರೆ, ಸುಮಾರು ಅರವತ್ತು ಮೈಲಿ ದೂರದಲ್ಲಿ ತ್ರಿಶೂಲ್ ಎನ್ನುವ ಪ್ರದೇಶ ಕಾಣುತ್ತದೆ. ನಿಮ್ಮ ದೃಷ್ಟಿ ತೀಕ್ಷ್ಣವಾಗಿದ್ದರೆ ಅಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ್, ಬದರಿನಾಥ್ ಗೆ ಹೋಗುವ ಯಾತ್ರಿಗಳ ಗುಂಪುಗಳನ್ನು ಗುರುತಿಸಬಹುದು. ಅಲ್ಲಿಂದ ಇನ್ನು ದೂರಕ್ಕೆ ಕಣ್ಣು ಹಾಯಿಸಿದರೆ ನಿಮಗೆ ನಂದಾ ದೇವಿ (೨೫,೬೮೯ ಅಡಿ ಎತ್ತರ), ಭಾರತದಲ್ಲೇ ಅತಿ ಎತ್ತರವಾದ ಬೆಟ್ಟ ಕಾಣ ಸಿಗುತ್ತದೆ. ಅದರ ಪೂರ್ವಕ್ಕೆ 'ಪಾಂಚ್ ಚೌಲಿ' (ಅಡಿಗೆ ಮಾಡುವ ಸ್ಥಳ) ಎನ್ನುವ ಐದು ಬೆಟ್ಟಗಳ ತುದಿಗಳು ಕಾಣುತ್ತವೆ. ಆ ಮಾರ್ಗವಾಗೇ ಪಾಂಡವರು ಕೈಲಾಸಕ್ಕೆ ತೆರಳಿದ್ದು ಎಂದು ಮಹಾಭಾರತ ಹೇಳುತ್ತದೆ.

 

ನೀವು ಹೊರಳಿ ನಿಂತು ದಕ್ಷಿಣದ ಕಡೆಗೆ ಮುಖ ಮಾಡಿದರೆ ಸಮತಟ್ಟಾದ ಪ್ರದೇಶದಲ್ಲಿ ಬರೈಲಿ, ಕಾಶೀಪುರ ಮತ್ತು ಮೊರಾದಾಬಾದ್ ಪಟ್ಟಣಗಳು ಕಾಣುತ್ತವೆ. ಇಲ್ಲಿ ವ್ಯವಸಾಯ ಮತ್ತು ರೈಲು ವ್ಯವಸ್ಥೆಗಳಿಂದ, ಅಪಾರ ಪ್ರಮಾಣದ ಹಳ್ಳಿಗಳು ಸಾಧ್ಯವಾಗಿ ಜನ ಸಮುದಾಯ ಬೆಳೆದಿದೆ. ನೈನಿತಾಲ್ ಗೆ ಹತ್ತಿರದ ಹಳ್ಳಿಗಳೆಂದರೆ ಕಲಾಧುನ್ಗಿ ಮತ್ತು ಛೋಟಾ ಹಲ್ಡ್ವಾನಿ. ಇಲ್ಲಿಯೇ ಭಾರತದಲ್ಲಿ ಮೊದಲು ಕಬ್ಬಿಣದ ಅದಿರು ತೆಗೆದದ್ದು. ಅಲ್ಲಿಂದ ದೂರದಲ್ಲಿ ಸೂರ್ಯನ ಬೆಳಕಿನಲ್ಲಿ ಹೊಳೆಯುವ ಗಂಗಾ ನದಿ ಕಾಣುತ್ತದೆ.

 

ಅಲ್ಲಿಂದ ನೀವು ಪೂರ್ವಕ್ಕೆ ತಿರುಗಿದರೆ, ತ್ರಿಕೋನಾಕಾರದ 'ಛೋಟಾ ಕೈಲಾಸ್' ಬೆಟ್ಟ ಕಾಣುತ್ತದೆ. ಅದರಾಚೆಗೆ ಕಾಣುವ 'ಕಾಲಾ ಅಗರ್ ' ಪರ್ವತ ಶ್ರೇಣಿಗಳಲ್ಲಿ, ಚೌಗರಃ ಪ್ರದೇಶದಲ್ಲಿ ಒಂದು ನರಭಕ್ಷಕ ಹುಲಿಯನ್ನು ನಾನು ಬೇಟೆಯಾಡಿದ್ದು. ಇನ್ನು ದೂರಕ್ಕೆ ನೀವು ಕಣ್ಣು ಹಾಯಿಸಿದರೆ ನಿಮಗೆ ನೇಪಾಳದ ಪರ್ವತ ಶ್ರೇಣಿಗಳು ಕಾಣುತ್ತವೆ.




Monday, April 18, 2022

Financially freedom is the goal (and not wealth creation)

Financial freedom is not any new concept, but many Indians fail to understand what it is meant for, so they have no appreciation for such a thought. They think it is ok for those who are born rich but not for the common people to live like that. They believe we all need to work and accumulate as much money as possible until death or retirement age hits us. In a country where majority live in middle-class or poor societies, aspiration for wealth is not a surprise for anyone.


In the Western countries, there are many who pursue hobbies and put life first over accumulating wealth. Money is just a means for them and not the whole purpose of living. Read newspapers and journals produced in America, mentions of people retiring early are quite common. And surprisingly, there are mentions of few who have managed to achieve financial freedom at the age of 35. Dig into the details, you will find that they were not born rich. Those lucky people had no windfall gains either. But they had managed to keep their expenses low and saved enough to pay for their future expenses which were not exorbitant either. Trick is in keeping their wealth expectations low and that ensures you don’t need to work for lifetime. Financial freedom is the goal for them and not wealth creation. Once they achieve it, they have all the time in the world to do what they liked to do. Be it travel, writing, painting, or just retire to calm places.


Pursuit of making money by finding a paying work makes us relocate to far-off places. We loose our roots and embrace a completely different approach to life. And the competition with fellow human beings makes our goals being revised to even higher goals. Without noticing, we get drawn into the vicious competition of accumulating wealth and fall prey to it. Life goes on. When someone we know retires early, we tend to think that person has low ambitions and dismiss him as a loser. But who are we to judge what is right for him?

 

Money will solve all money problems. But beyond a point, law of diminishing marginal utility comes into play. Should not we be questioning ourselves what we wanted to do with the wealth we accumulate? If we wanted to pursue a hobby which makes us happy and if it is not expensive, then why create higher wealth goals? We need a house to live, money to educate our children and for other household expenses including medial care. They are all our needs. Beyond them everything else is greed. That luxury car we wanted to buy, a vast farmhouse we wanted to buid, expensive lifestyle etc. are not our needs. They are signals we use to show society we are doing better than them. If we can draw a clear line between need and greed and be happy with meeting the needs and don't care for the pecking order of society, major battle is won. And achieving financial freedom becomes just a matter of time.

 

I had decided couple of years ago to get out of corporate race and had put a plan in place. That worked well and now I am on the verge of financial freedom. My challenge now is not money but convincing the near and dear one’s that this can work. Most of them don’t seem to agree with me as there are not many examples of it in our society. It is not my problem. I would rather become the first example to the people who know me. Sooner than later, I would quietly disengage from corporate race and spend that time doing what I like most. Don't tell me I did not tell you all of this. I would rather prefer to talk with you on literature, travel and my other engagements.

Saturday, April 2, 2022

ಕವನ: ಸಾಕಿನ್ನು ಸಂಬಳ

(ಹಣಕಾಸು ಸ್ವಾತಂತ್ರ್ಯದ ಬಗೆಗೆ ಒಂದು ಕವನ)


ಸಾಲ ತೀರಿತು,

ಮನೆ ನಮ್ಮದೇ ಆಯಿತು


ಇನ್ನೂ ನೌಕರಿ ಬೇಕಿಲ್ಲ,

ಸಂಬಳದ ಹಂಗಿಲ್ಲ


ಸತ್ತರೆ ಇದೆ ವಿಮೆ,

ಸಾಯದೆ ಇದ್ದರೂ ಆಗುವುದು ಜಮೆ


ಮಕ್ಕಳೇ ಒಂದು ಆಸ್ತಿ,

ಅವರಿಗೆಂದೇ ಮಾಡಿದೆ ಅಲ್ಪ ಆಸ್ತಿ-ಪಾಸ್ತಿ


ನಿವೃತ್ತಿಯ ಬಗ್ಗೆ ಇಲ್ಲ ಅಲಕ್ಷ,

ಎತ್ತಿಟ್ಟಾಗಿದೆ ಹಲವು ಲಕ್ಷ


ಜವಾಬ್ದಾರಿಯ ನೊಗ ಕಳಚಿಲ್ಲ,

ಆದರೆ ಹಣದ ತಲೆ ಬಿಸಿ ಇನ್ನಿಲ್ಲ


ಹಲವಾರು ತಾಣಗಳು ಕರೆದಿದೆ ಕೈ ಬೀಸಿ,

ಹೋಗಿ ಬರುವುದಷ್ಟೇ ಬಾಕಿ


ಸಾಹಿತ್ಯ, ವಿಜ್ಞಾನ, ಇತಿಹಾಸ,

ಸಾಧನೆಗೆ ಮಿತಿ ಆಕಾಶ


ಸಾಕಾಗುತ್ತಿಲ್ಲ ಆನಂದ,

ಆಗಬೇಕಿದೆ ಸಚ್ಚಿದಾನಂದ

ಕವನ: ಯುಗಾದಿ ತರಲಿ ನೆಮ್ಮದಿ

ಕಬ್ಬಿನ ಬೆಲ್ಲದ ಸಿಹಿ,

ಹದವಾಗಿ ಬೆರೆಸಿ ಬೇವಿನ ಕಹಿ


ರಾಜ ವಸಂತನ, ಚೈತ್ರದ ಕೋಗಿಲೆಯ ಆಗಮನ,

ಕಟ್ಟಿರಿ ಮನೆಗೂ, ಮನಕೂ ಹಸಿರು ತೋರಣ


ಹೊಸ ವರುಷ ಚಿಗುರಿಸಲಿ ಹೊಸತನ,

ನೀಗಿಸಲಿ ಅನನುಭವಗಳ ಬಡತನ


ನೋವು-ನಲಿವಿನ ಮಿಶ್ರಣ,

ಪಳಗಿದ ಜೀವನದ ಆಭರಣ


ಮತ್ತೆ ಮತ್ತೆ ಬರುವ ಯುಗಾದಿ,

ತರಲಿ ನಿಮಗೆ ಅನುದಿನ ನೆಮ್ಮದಿ!