Saturday, May 7, 2022

ಒಂದು ದೊಡ್ಡಮನೆಗೆ ಹಲವಾರು ಮುರಿದ ಮನೆಗಳು

ಟಾಲ್ಸ್ಟಾಯ್ ತಮ್ಮ 'ಅನ್ನಾ ಕರೆನಿನಾ' ಕಾದಂಬರಿಯಲ್ಲಿ ಹೇಳುತ್ತಾರೆ.  "ಎಲ್ಲ ಸುಖಿ ಕುಟುಂಬಗಳು ಒಂದೇ ತರಹ. ಆದರೆ ಮುರಿದು ಹೋದ ಮನೆಗಳಲ್ಲಿ, ಪ್ರತಿಯೊಂದಕ್ಕೂ ಅದರದ್ದೇ ಆದ ಕಾರಣ". ದೇಶ, ಭಾಷೆ ಯಾವುದು ಆದರೇನು? ಮನುಷ್ಯನ ಮನಸ್ಥಿತಿ ಒಂದೇ ಅಲ್ಲವೇ? ರಷ್ಯಾ ದೇಶದಲ್ಲಿ ಟಾಲ್ಸ್ಟಾಯ್ ಅವರು ಗಮನಿಸಿದ್ದು, ಪ್ರಪಂಚದ ಎಲ್ಲ ದೇಶಗಳಿಗೂ ಅನ್ವಯಿಸುತ್ತದೆ.


'ರಸಿಕರ ರಾಜ' ರಾಜಕುಮಾರ್ ಅವರ ಚಿತ್ರಗಳ ನಾಯಕಿಯರಿಗೆ ಇದ್ದ ರೂಪ, ಲಾವಣ್ಯ ಅವರ ಪತ್ನಿ ಪಾರ್ವತಮ್ಮ ಅವರಿಗೆ ಇರಲಿಲ್ಲ. ಆದರೆ ಗಂಡನಿಗೆ ಇರದ ವ್ಯವಹಾರಿಕ ಜಾಣ್ಮೆ ಇತ್ತು. ಕುಟುಂಬವನ್ನು ಸರಿ ತೂಗಿಸುವ, ಸಮಸ್ಯೆಗಳನ್ನು ಬಗೆ ಹರಿಸುವ ಘನತೆ ಇತ್ತು. ರಾಜಕುಮಾರ್ ಮತ್ತು ಪಾರ್ವತಮ್ಮನವರು ಪರಸ್ಪರರನ್ನು ಸಾರ್ವಜನಿಕವಾಗಿ ದೂಷಿಸಿಕೊಂಡಿದ್ದನ್ನು ನೀವು ಎಂದಾದರೂ ನೋಡಿದ್ದೀರಾ?  ಅವರ ನಡುವೆ ಭಿನ್ನಾಭಿಪ್ರಾಯಗಳೇ ಇರಲಿಲ್ಲ ಎಂದಲ್ಲ. ಆದರೆ ಅವನ್ನು ಮೀರಿ ನಿಲ್ಲುವ, ಒಬ್ಬರ ಲೋಪ-ದೋಷಗಳನ್ನು ಇನ್ನೊಬ್ಬರು ಸರಿ ಪಡಿಸುವ ಹೊಂದಾಣಿಕೆ ಇತ್ತು. ಹಾಗಾಗಿ ಅವರ ಕುಟುಂಬ ಕನ್ನಡ ಚಿತ್ರರಂಗ ಗೌರವದಿಂದ ಕಾಣುವ 'ದೊಡ್ಡ ಮನೆ' ಎನಿಸಿಕೊಂಡಿತು.


ಆದರೆ ಮುರಿದು ಬಿದ್ದ ಕುಟುಂಬಗಳಿಗೆ ಹಲವಾರು ಕಾರಣ. ಕುಡುಕ ಗಂಡ, ಬೇಜವಾಬ್ದಾರಿ ಗಂಡ, ಬಾಳಿಸಲಾರದ ಗಂಡ. ಹಾಗೆಯೇ ಸುಮ್ಮನೆ ಜಗಳ ತೆಗೆಯುವ ಹೆಂಡತಿ. ಎಷ್ಟಿದ್ದರೂ ಸಮಾಧಾನ ಇರದ ಹೆಂಡತಿ. ಪ್ರತಿಯೊಂದನ್ನು ತವರು ಮನೆಗೆ ಹೋಲಿಸಿ ಪತಿಯನ್ನು ದೂಷಿಸುವ ಹೆಂಡತಿ. ಹೀಗೆ ಕಾರಣಗಳನ್ನು ಎಷ್ಟು ಬೇಕಾದರೂ ಹುಡುಕಿ ತರಬಹದು.


ಖುಷ್ವಂತ್ ಸಿಂಗ್ ಅವರು ಬರೆದ 'ದಿ ಕಂಪನಿ ಆಫ್ ವಿಮೆನ್' ಎನ್ನುವ ಪುಸ್ತಕ ಓದಿ ನೋಡಿ. ಲೇಖಕರ ಪೋಲಿತನದ ಆಚೆಗೆ ಅವರು ಬಿಚ್ಚಿಡುವ ವಾಸ್ತವ ಸತ್ಯದ ಅರಿವಾಗುತ್ತದೆ. ಪರಸ್ಪರ ಹೊಂದಾಣಿಕೆ ಇರದೇ ಮದುವೆ ಮುರಿದು ಬಿದ್ದು ಹೋದ ಮೇಲೆ ಅದರ ಕಥಾನಾಯಕ ಅನೈತಿಕ ಸಂಬಂಧಗಳಿಗೆ ಹಾತೊರೆಯುತ್ತಾನೆ. ಅವನ ಹಾಗೆಯೆ ಮುರಿದು ಹೋದ ಮದುವೆಯಲ್ಲಿನ ಒಬ್ಬಂಟಿ ಹೆಂಗಸರು ಅವನಿಗೆ ಸಾಲು ಸಾಲಾಗಿ ಜೊತೆಯಾಗುತ್ತ ಹೋಗುತ್ತಾರೆ. ಇಬ್ಬರೂ ತಮ್ಮ ಸಂಬಂಧಗಳನ್ನು ಸಮರ್ಥಿಸಿಕೊಳ್ಳುತ್ತ ಹೋಗುತ್ತಾರೆ. ಮುರಿದು ಬಿದ್ದ ಮದುವೆಗೆ ಜೀವನ ವ್ಯರ್ಥ ಮಾಡಿಕೊಂಡು ಏನು ಪ್ರಯೋಜನ ಎನ್ನುವ ವ್ಯಾವಹಾರಿಕ ಪ್ರಜ್ಞೆಗೆ ಇಳಿಯುತ್ತಾರೆ. ಕೊನೆಗೆ ಏಡ್ಸ್ ರೋಗಕ್ಕೆ ಬಲಿಯಾಗಿ ಕಥಾನಾಯಕ ಅಕಾಲಿಕ ಮರಣ ಹೊಂದುತ್ತಾನೆ. ಇದು ಒಂದು ಕಾಲ್ಪನಿಕ ಕಥೆ ಎಂದು ನಿಮಗೆ ಅನಿಸಿದರೆ, ಸಣ್ಣ ವಯಸ್ಸಿನಲ್ಲೇ ವಿವಾಹ ವಿಚ್ಛೇದನ ಪಡೆದ ಸ್ನೇಹಿತನ ಅಂತರಂಗ ಕೆದಕಿ ನೋಡಿ. ವಾಸ್ತವ ಸತ್ಯದ ಅನಾವರಣ ನಿಮಗೆ ಇನ್ನೊಂದು ಕಾದಂಬರಿ ಬರೆಯುವಷ್ಟು ಸಾಮಗ್ರಿ ಒದಗಿಸಿ ಕೊಡುತ್ತದೆ.


ಪ್ರಕೃತಿ ಮೊದಲಿಗೆ ಜೀವಿಗಳನ್ನು ಸೃಷ್ಟಿಸಿದಾಗ ಗಂಡು-ಹೆಣ್ಣಿನ ಭೇಧ ಇರಲಿಲ್ಲ. ಗಿಡ-ಮರಗಳಲ್ಲಿ ಗಂಡು-ಹೆಣ್ಣು ಬೇರೆ ಬೇರೆ ಎಲ್ಲಿ ಉಂಟು? ಗಂಡು-ಹೆಣ್ಣಿನ ಎರಡೂ ಅಂಶಗಳು ಒಂದೇ ಹೂವಿನಲ್ಲಿ ಜೊತೆಯಲ್ಲೇ ಇರುವುದಿಲ್ಲವೇ? ಆದರೆ ಪ್ರಾಣಿ-ಪಕ್ಷಿಗಳ ಬೆಳವಣಿಗೆಗೆ, ಬದಲಾಗುತ್ತಿರುವ ಪರಿಸರಕ್ಕೆ ಬೇಗ ಹೊಂದಿಕೊಳ್ಳಲು ಅನುಕೂಲವಾಗುವಂತೆ ಪ್ರಕೃತಿ ಗಂಡು-ಹೆಣ್ಣನ್ನು ಬೇರ್ಪಡಿಸಿತು. ಅವೆರಡು ಸಂತತಿ ಬೆಳೆಸಲು ಜೊತೆಗೆ ಬರುವಂತೆ ಪ್ರೇರೇಪಿಸಲು ಹಾರ್ಮೋನ್ ಗಳ ಬಳಕೆ ಆಯಿತು. ಇದು ಮನುಷ್ಯ ಸೇರಿದಂತೆ ಸಕಲ ಪ್ರಾಣಿ-ಪಕ್ಷಿಗಳಿಗೆ ಅನ್ವಯಿಸುತ್ತದೆ. ಆದರೆ ಪ್ರಾಣಿ ಪ್ರಪಂಚದಲ್ಲಿ ಇರದ ಮದುವೆ ಮನುಷ್ಯನಲ್ಲಿ ಮಾತ್ರ ಉಂಟು. ಒಂದು ಗಂಡಿಗೆ ಒಂದೇ ಹೆಣ್ಣು ಎನ್ನುವ ನಿಯಮವನ್ನು ಮನುಷ್ಯ ಜಾರಿಗೆ ತರುವ ಉದ್ದೇಶ ಸಮಾಜದ ಹಿತವನ್ನು ಕಾಯುವುದು ಆಗಿತ್ತು. ಆದರೆ ಮನುಷ್ಯನ ದೇಹದಲ್ಲಿ ಅಡಗಿರುವ ಜೀನ್ ಗಳು ಮದುವೆಗೆ ಕ್ಯಾರೇ ಎನ್ನುವುದಿಲ್ಲ. ಅವು ಹಾರ್ಮೋನ್ ಗಳ ಮೂಲಕ ದೇಹಭಾಧೆ ಹುಟ್ಟಿಸುತ್ತವೆ. ಮದುವೆ ಆಚೆಗಿನ ಸಂಬಂಧ ಆದರೇನು? ಅವಕಾಶ ಇದ್ದಾಗ ಅದರ ಪ್ರಯೋಜನ ಪಡೆದುಕೋ ಎನ್ನುವ ಸಂದೇಶ ರವಾನಿಸುತ್ತವೆ. ಅವು ಗಂಡಸನ್ನು ಲಂಪಟನನ್ನಾಗಿ, ಹೆಂಗಸನ್ನು ಚಂಚಲೆಯನ್ನಾಗಿಸುತ್ತವೆ.


ಆದರೆ ಪ್ರಾಣಿ ಸಂಕುಲದಲ್ಲಿ ಇಲ್ಲದ ವಿವೇಚನಾ ಶಕ್ತಿ ಮನುಷ್ಯನಿಗೆ ಉಂಟು. ಅವನು ತನ್ನ ಇಚ್ಚಾ ಶಕ್ತಿಯನ್ನು (ವಿಲ್ ಪವರ್) ಉಪಯೋಗಿಸಿ ದೇಹಭಾಧೆಯನ್ನು ಹತ್ತಿಕ್ಕಬಹುದು. ಆದರೆ ಬಹುತೇಕ ಮನುಷ್ಯರಿಗೆ ಈ ಇಚ್ಚಾ ಶಕ್ತಿಯ ಕೊರತೆ. ಹಾಗಾಗಿ ಗಂಡು ಒಂದಾದ ನಂತರ ಇನ್ನೊಂದರಂತೆ ಸಿಗರೆಟ್ ಸೇದುತ್ತ ಹೊಗೆ ಬಿಡುತ್ತಾನೆ. ಬೇಕೋ, ಇಲ್ಲವೋ ಹೆಂಗಸು ಸೀರೆ ಖರೀದಿಸುತ್ತ ಹೋಗುತ್ತಾಳೆ. ಇಬ್ಬರಿಗೂ ತಮ್ಮ ದೈಹಿಕ, ಮಾನಸಿಕ ಅಗತ್ಯಗಳೇ ದೊಡ್ಡವು ಎನಿಸುತ್ತವೆ. ಏನಾದರು ತೊಂದರೆ ಬಂದಲ್ಲಿ ಗಂಡ-ಹೆಂಡತಿ ಅದನ್ನು ಪರಸ್ಪರರ ಮೇಲೆ ತಳ್ಳಿ ಹಾಕುತ್ತಾರೆ. ಮತ್ತು ಒಬ್ಬರು ಇನ್ನೊಬ್ಬರಲ್ಲಿ ಲೋಪ-ದೋಷಗಳನ್ನು ಹುಡುಕುತ್ತ ಹೋಗುತ್ತಾರೆ.


ಆದರೆ ಪ್ರಕೃತಿ ಜೀನ್ ಗಳ ಮೂಲಕ ಹುಟ್ಟಿಸಿದ ವಾಂಛೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನೋಡಿ. ಆಗ ಮನುಷ್ಯನನ್ನು ಅರಿಯುವ ಪ್ರಭುದ್ಧತೆ ಬೆಳೆಯುತ್ತದೆ. ಅಂತಹ ಅರಿವು ಮೂಡಿದ ಕುಟುಂಬಗಳಲ್ಲಿ ಏನಾದರು ಎಡವಟ್ಟು ಆದರೂ ಅದನ್ನು ಸರಿಪಡಿಸಿಕೊಳ್ಳುವ ಮತ್ತೆ ಸರಿ ದಾರಿಗೆ ತರುವ ಪ್ರಯತ್ನ ಸುಲಭದಲ್ಲಿ ಆಗುತ್ತದೆ. ಅಲ್ಲಿ ಗಂಡ-ಹೆಂಡತಿ ಇಬ್ಬರಿಗೂ ಪರಸ್ಪರರ ಲೋಪ-ದೋಷಗಳ ಸಂಪೂರ್ಣ ಅರಿವು ಇದೆ. ಅವರು ದೋಷ-ಆರೋಪಣೆಗೆ ತೊಡಗುವುದಿಲ್ಲ. ಬದಲಿಗೆ ಒಬ್ಬರ ಬೆಂಬಲ ಇನ್ನೊಬ್ಬರಿಗೆ ದೊರಕುತ್ತದೆ. ಆ ಮನೆ, ಬೇರೆಯವರ ಸಮಸ್ಯೆಗಳನ್ನು ಕೂಡ ಬಗೆಹರಿಸುವ 'ದೊಡ್ಡ ಮನೆ' ಆಗುತ್ತದೆ. ಆದರೆ ಊರುಗಳಲ್ಲಿ ಒಂದು ದೊಡ್ಡ ಮನೆಗೆ ಹಲವಾರು ಮುರಿದ ಮನೆಗಳು ಅಲ್ಲವೇ? ಇದಕ್ಕೆ ಕಾರಣ ಏನೆಂದು ನಿಮಗೆ ಈಗಾಗಲೇ ಸ್ಪಷ್ಟ ಆಗಿರಬೇಕು.


ಮುರಿದ ಮದುವೆಗಳಲ್ಲಿ ಭವಿಷ್ಯವೇ ಇಲ್ಲ ಎಂದೇನಿಲ್ಲ.  'ಮುರಿದು ಹೋದ ಕೊಳಲು, ಕೊಳಲು ಬರುವನೊಬ್ಬ ಧೀರನು' ಎನ್ನುವ ಅಡಿಗರ ಕಾವ್ಯ ಇಲ್ಲವೇ. ಇಬ್ಬರು ವಿವಾಹ ವಿಚ್ಛೇದಿತರು ಹೊಸ ಮದುವೆಯಲ್ಲಿ ಒಂದಾಗಿ ಹೊಸ ಬಾಳು ಶುರು ಮಾಡುವ ಉದಾಹರಣೆಗಳು ಸಾಕಷ್ಟು. ಅವರಿಬ್ಬರೂ ಅನುಭವಸ್ಥರಾದ್ದರಿಂದ ಅವರಿಗೆ ಸಹನೆ ಬೆಳೆದಿರುತ್ತದೆ. ಹಾಗಾಗಿ ಅವರ ಮೊದಲ ಮದುವೆಯ ಹಾಗೆ ಅದು ಬೇಗನೆ ಮುರಿದು ಬೀಳುವ ಸಾಧ್ಯತೆಯೂ ಕಡಿಮೆ.


ಮದುವೆ ಬೇಗ ಮುಗಿದು ಹೋಗಿ, ಮರು ಮದುವೆಗೆ ಒಪ್ಪದೇ ಇರುವವರು ಇರುತ್ತಾರಲ್ಲ. ಅವರಿಗೆ ಪ್ರಪಂಚದ ಉಳಿದ ಎಲ್ಲ ಬಾಗಿಲುಗಳು ತೆರೆದುಬಿಡುತ್ತವೆ. ಸಣ್ಣ ವಯಸ್ಸಿನಲ್ಲೇ ಪತ್ನಿಯನ್ನು ಕಳೆದುಕೊಂಡ ರವೀಂದ್ರನಾಥ್ ಟಾಗೋರ್ ಅವರು ಕಲಾಭಿಮುಖಿಯಾದರು. ಸಂತ ಶಿಶುನಾಳ ಶರೀಫರು ತತ್ವಜ್ಞಾನಿ ಆದರು. ಆದರೆ ಅಂತಹ ಉದಾಹರಣೆಗಳು ವಿರಳ. ಸಾಧಾರಣ ಮನುಷ್ಯ ಇಂದ್ರಿಯ ಸುಖಗಳಿಗೆ ದಾಸನಾಗಿ ಕಳೆದು ಹೋಗುವುದೇ ಹೆಚ್ಚು. ಹಾಗಾಗಿ ಊರಿಗೆ ಒಂದೆರಡು ದೊಡ್ಡ ಮನೆಗಳು ಇದ್ದರೆ, ಮಠಗಳು ಹತ್ತೂರಿಗೆ ಒಂದು ಕಾಣಬಹುದು ಅಷ್ಟೇ. ಆದರೆ ಮುರಿದು ಹೋದ ಮನೆಗಳು ಪ್ರತಿ ಊರಿನಲ್ಲೂ ಇವೆ. ಅವುಗಳನ್ನು ಲೆಕ್ಕ ಇಟ್ಟು ಯಾವ ಪ್ರಯೋಜನ, ಯಾರಿಗೆ ಉಪಯೋಗ? ಅವು ಕೆಟ್ಟ ಉದಾಹರಣೆಗಳು ಆಗಬಹುದು ಅಷ್ಟೇ.

No comments:

Post a Comment