ಬೆಂಗಳೂರಿನವರಿಗೆ ಮಾಳಿಗೆಯ ಮೇಲೆ ಮಲಗಿ ಅಭ್ಯಾಸವಿಲ್ಲ. ಆದರೆ ಒಂದೆರಡು ದಶಕಗಳ ಹಿಂದೆ ಉತ್ತರ ಕರ್ನಾಟಕದ ಜನರು ಬೇಸಿಗೆ ಕಾಲದ ರಾತ್ರಿಗಳನ್ನು ಕಳೆಯುತ್ತಿದ್ದದ್ದೇ ಮಾಳಿಗೆಗಳ ಮೇಲೆ. ಆಗ ಹುಣ್ಣಿಮೆ ಬೆಳಕು ತರುವ ಆನಂದ, ಅಮಾವಾಸ್ಯೆ ಕತ್ತಲು ಹುಟ್ಟಿಸುವ ದಿಗಿಲು ಎಲ್ಲವೂ ನಮ್ಮ ಅನುಭವಕ್ಕೆ ಬರಲು ಸಾಧ್ಯವಿತ್ತು. ಮನೆ ಹೊರಗೆ ಕಟ್ಟೆಯ ಮೇಲೆ ಮತ್ತು ಮಾಳಿಗೆ ಮೇಲೆ ಮಲಗಿ ಬೆಳೆದ ನಾನು, ಪ್ರತಿ ರಾತ್ರಿ ಅಂದು ಚಂದ್ರ ಎಲ್ಲಿದ್ದಾನೆ, ಎಷ್ಟು ಚುಕ್ಕಿಗಳು ಕಾಣುತ್ತಿದ್ದಾವೆ ಎಂದು ಆಕಾಶ ದಿಟ್ಟಿಸುತ್ತಲೇ ನಿದ್ರೆಗೆ ಜಾರುತ್ತಿದ್ದೆ. ಆಗ ನನಗೆ ರಾತ್ರಿಯ ಆಕಾಶವೆಂದರೆ ಕಪ್ಪು ಪರದೆಯ ಮೇಲೆ ಮೂಡಿರುವ ಬಿಳಿ ಚುಕ್ಕಿಗಳು ಮಾತ್ರ. ಕೆಲವು ಚುಕ್ಕಿಗಳು ಮಿರಿ ಮಿರಿ ಮಿನುಗಿದರೆ, ಇನ್ನು ಕೆಲವು ಮಂದ. ಕೆಲವು ಮಿಂಚಿ ಮಾಯವಾದರೆ, ಇನ್ನು ಕೆಲವು ಬೇರೆ ಕಡೆ ಪ್ರತ್ಯಕ್ಷ. ಚಂದ್ರನನ್ನು ಗುರುತಿಸುವದಕ್ಕೆ ನಮ್ಮ ಪ್ರಯತ್ನ ನಿಲ್ಲಿಸದೆ, ಸ್ವಲ್ಪ ಪ್ರಯತ್ನ ಪಟ್ಟರೆ ಕೆಂಪು ಬಣ್ಣದ ಮಂಗಳ ಗ್ರಹವನ್ನು ಮತ್ತು ಬೃಹತ್ ಗಾತ್ರದ ಗುರು ಗ್ರಹವನ್ನು ಗುರುತಿಸಲು ಸಾಧ್ಯ, ಟೆಲಿಸ್ಕೋಪ್ ಸಹಾಯ ಪಡೆದರೆ, ನಮ್ಮ ಸೌರ ಮಂಡಲದ ಇತರ ಸದಸ್ಯರನ್ನು ಕಂಡು ಖುಷಿ ಪಡಬಹುದು.
ಆಕಾಶ ವೀಕ್ಷಣೆಯ ಹವ್ಯಾಸ ಪ್ರಾಚೀನ ಕಾಲದಿಂದಲೂ ಭಾರತೀಯರಿಗಿತ್ತು. ಹೆಣ್ಣು ಮಕ್ಕಳು ಚುಕ್ಕಿ ಸೇರಿಸಿ ರಂಗೋಲಿ ಬಿಡಿಸಿದ ಹಾಗೆ, ಆಕಾಶದ ಚುಕ್ಕಿಗಳನ್ನು ಸೇರಿಸಿ, ಯಾವುದೊ ಒಂದು ಪ್ರಾಣಿಗೆ ಹೋಲಿಕೆ ಮಾಡಿ ಜ್ಯೋತಿಷ್ಯ ಶಾಸ್ತ್ರದ ರಾಶಿಗಳನ್ನು ಮತ್ತು ಅವುಗಳಿಗೆ ನಮ್ಮ ಜೀವನ ಜೊತೆ ಇರಬಹುದಾದ ಅವಿನಾನುಭವ ಸಂಬಂಧಗಳ ಬಗ್ಗೆ ಸವಿಸ್ತಾರ ಸಿದ್ಧಾಂತವನ್ನೇ ಅವರು ಮಂಡಿಸಿದರು. ನಮ್ಮ ಜೀವನವನ್ನು ನಾವು ಕೈಗತ್ತಿಕೊಳ್ಳದೆ ಇದ್ದರೆ, ನಮಗೆ ಶನಿ ಗ್ರಹ ಕಾಡದೆ ಬಿಡುವುದಿಲ್ಲ.
ಆಕಾಶ ವೀಕ್ಷಣೆಯ
ಹುಚ್ಚು ಪಾಶ್ಚತ್ಯರಿಗೆ ಏನು ಕಡಿಮೆ ಇರಲಿಲ್ಲ. ಕೊಪರ್ನಿಕಸ್ ೧೬ನೆ ಶತಮಾನದಲ್ಲಿ, ಭೂಮಿಯೇ
ಸೂರ್ಯನ ಸುತ್ತುವುದು ಎಂದು ಹೇಳಿದ್ದು ಅರಗಿಸಿಕೊಳ್ಳಲು ಮನುಷ್ಯ ಕುಲಕ್ಕೆ ಶತಮಾನಗಳೇ ಬೇಕಾದವು. ಗೆಲಿಲಿಯೋ ತಾನೇ ಒಂದು ಟೆಲಿಸ್ಕೋಪ್ ತಯಾರಿಸಿಕೊಂಡಿದ್ದ. ಭೂಮಿಯ ಸುತ್ತ ಚಂದ್ರ ಸುತ್ತಿದ ಹಾಗೆ,
ಗುರು ಗ್ರಹವನ್ನು ಮೂರು ಚಂದ್ರರು ಸುತ್ತುವುದನ್ನು ತನ್ನ ಟೆಲಿಸ್ಕೋಪ್ ಮೂಲಕ ತೋರಿಸಿದ. ಅಲ್ಲಿಂದ
ಶುರುವಾದ ನಮ್ಮ ಮನುಜ ಕುಲದ ಆಕಾಶದ ಚುಕ್ಕಿಗಳ ಎಣಿಸುವಿಕೆಯ ಕಾರ್ಯ ಇಂದಿಗೂ ಮುಂದುವರೆದಿದೆ.
ನಮ್ಮ ಸೌರ ಮಂಡಲವನ್ನೇ
ನಮ್ಮ ಜಗತ್ತು ಎಂದುಕೊಂಡಿದ್ದ ನಾವು, ನಮ್ಮ ಸೂರ್ಯನಿಗಿಂತ ನೂರು ಪಟ್ಟು ದೊಡ್ಡ ಸೂರ್ಯ ಇರುವ ಸಂಗತಿ
ತಿಳಿದುಕೊಂಡೆವು. ಸ್ವಂತ ಬೆಳಕು ಚೆಲ್ಲುವ ನಕ್ಷತ್ರಗಳಲ್ಲಿ ಸೂರ್ಯನು ಕೂಡ ಒಂದು ನಕ್ಷತ್ರ. ಹೀಗೆ ಮೂರು ಸಾವಿರಕ್ಕೂ
ಹೆಚ್ಚು ನಕ್ಷತ್ರಗಳು ಸೇರಿ ನಮ್ಮ ಮಿಲ್ಕಿ ವೆ ಗ್ಯಾಲಕ್ಸಿ (ತಾರಾಗಣ) ಆಗಿದೆ. ನಮ್ಮ ಪಕ್ಕದ ಆಂಡ್ರೊಮೆಡಾ
ಗ್ಯಾಲಕ್ಸಿ, ನಮ್ಮ ಗ್ಯಾಲಕ್ಸಿ ಗಿಂತ ದೊಡ್ಡದು. ಹೀಗೆ
ಕೋಟ್ಯಂತರ ಗ್ಯಾಲಕ್ಸಿ ಗಳನ್ನೂ ಒಟ್ಟಾಗಿ ಯೂನಿವರ್ಸ್ (ಬ್ರಹ್ಮಾಂಡ) ಎನ್ನುತ್ತೇವೆ. ಈ ಬ್ರಹ್ಮಾಂಡಕ್ಕೆ
ಇರುವ ಹಲವಾರು ಆಯಾಮಗಳನ್ನು ಒಟ್ಟಾಗಿ multiverse ಎನ್ನುತ್ತೇವೆ.
ಆಕಾಶದ ಚುಕ್ಕಿಗಳನ್ನು
ಎಣಿಸುವ ವಿಫಲ ಯತ್ನಗಳನ್ನು ಚಿಕ್ಕಂದಿನಲ್ಲೇ ಕೈ ಬಿಟ್ಟಿರುವವರು ನಾವಾದರೆ, ಪ್ರಯತ್ನ ಜಾರಿಯಲ್ಲಿಟ್ಟಿರುವವರು
ಮಾತ್ರ ಹೊಸ ಹೊಸ ನಕ್ಷತ್ರಗಳನ್ನು ಹುಡುಕಿ ಪಟ್ಟಿಗೆ ಸೇರಿಸುತ್ತಲೇ ಇದ್ದಾರೆ. ಈ ಕಾರ್ಯ ಹಲವು ಶತಮಾನಗಳಿಂದ
ಜಾರಿಯಲ್ಲಿದೆ. ಆದರೂ ಮುಗಿಯಲು ಸಾಧ್ಯ ಆಗುತ್ತಿಲ್ಲ. ಏಕೆಂದರೆ ಬ್ರಹ್ಮಾಂಡ ಅಗಾಧ ಅಷ್ಟೇ ಅಲ್ಲ, ಅನಂತ
ಕೂಡ.