ಊರೂರು ಸುತ್ತುವುದಕ್ಕಿಂತ ಸುಮ್ಮನೆ ಒಂದೂರಲ್ಲಿ ಕುಳಿತುಕೊಳ್ಳುವುದೆಕ್ಕೆನು ಧಾಡಿ ಎಂದು ನಾವು ಯಾರಿಗಾದರೂ ಬೈಯುತ್ತೇವೆಲ್ಲ? ಜಗತ್ತಿನ ಎಲ್ಲ ಜನರು ತಮ್ಮೂರಲ್ಲೇ, ತಮ್ಮ ಮನೆಯಲ್ಲೇ ಕುಳಿತುಕೊಂಡಿದ್ದರೆ, ನಾವು ಇನ್ನು ಶಿಲಾಯುಗದಲ್ಲೇ ಇರುತ್ತಿದ್ದೆವೇನೋ? ವಲಸಿಗರೇ ಕಟ್ಟಿದ ಅಮೇರಿಕ ದೇಶವನ್ನು ನಾವು ಇಂದು ಹಾಡಿ ಹೊಗುಳುವುದಿಲ್ಲವೇ? ಭಾರತಕ್ಕೆ ಸಮುದ್ರ ಮಾರ್ಗ ಕಂಡು ಹಿಡಿದ ಅಲೆಮಾರಿ ವಾಸ್ಕೋ-ಡಾ-ಗಾಮ ಚರಿತ್ರೆಯ ಪುಟದಲ್ಲಿ ಸೇರಿ ಹೋಗಿಲ್ಲವೇ? ಆದಿ ಶಂಕರ ಕೇರಳದಿಂದ ಹಿಮಾಲಯಕ್ಕೆ ಕಾಲ್ನಡಿಗೆಯಲ್ಲಿ ಹೋಗಲಿಲ್ಲವೇ? ಅವನು ವೇದಗಳಿಗಿಂತ ಹೆಚ್ಚು ತನ್ನ ಪ್ರವಾಸದಿಂದ ಕಲಿತದ್ದು ಎನ್ನುವುದು ನನ್ನ ಸ್ವಂತ ಅಭಿಪ್ರಾಯ. ಚೀನಾ ದೇಶದ ಪ್ರವಾಸಿಗರು, ಭಾರತದಿಂದ ಚಹಾ ತಯಾರಿಸುವುದನ್ನು ಕಲಿತು ಹೋದರೆ, ವಾಪಸ್ಸು ಬಂದು ಚಹಾವನ್ನು ಕುಡಿಯಲು ಪಿಂಗಾಣಿ ಕಪ್ ಗಳನ್ನು ಕೊಟ್ಟು ಹೋದರು. ಅವರು ಧರಿಸಿದ ಹೊಳಪಿನ ಬಟ್ಟೆ 'ಚೈನಾ ಸಿಲ್ಕ್' ಹೊತ್ತು ತರಲು ಬಳಸಿದ 'ಸಿಲ್ಕ್ ರೂಟ್' ದಾರಿಗಳು ಮುಂದೆ ಹೆದ್ದಾರಿಗಳಾಗಿ ಬದಲಾದವು. ವಿಚಾರ, ಸಂಸ್ಕೃತಿ ವಿನಿಮಯವಾಗಿದ್ದೆ ಪ್ರವಾಸಿಗರಿಂದ, ಅಲೆಮಾರಿಗಳಿಂದ. ಭಾಷೆ ಗೊತ್ತಿಲ್ಲದ, ನಿಮಗೆ ಗೊತ್ತಿರುವವರು ಯಾರು ಇಲ್ಲದ ಊರಿಗೆ ಹೋಗಿ ಬನ್ನಿ. ಆಮೇಲೆ ನಮ್ಮೂರೇ ಚೆನ್ನ ಎಂದು ಹೇಳಿ, ಅಡ್ಡಿ ಇಲ್ಲ.
ಅದು ೨೦೦೬ನೆ ವರ್ಷ. ಆಗ ನಾನು ಕೆಲಸ ಮಾಡುತ್ತಿದ್ದ GE ಕಂಪನಿಯಿಂದ ಇಟಲಿ ದೇಶದ ಫ್ಲಾರೆನ್ಸ್ ಎನ್ನುವ ಪ್ರವಾಸಿ ನಗರದಲ್ಲಿ ಎರಡು ತಿಂಗಳುಗಳ ಕಾಲ ಕೆಲಸದ ಮೇಲೆ ಹೋಗಿದ್ದೆ. ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲೆ ನನ್ನ ಪಾಸ್ ಪೋರ್ಟ್ ನಲ್ಲಿ ಸೀಲ್ ಹಾಕಿ 'ವೆಲ್ ಕಮ್ ಟು ಯುರೋಪ್' ಎಂದು ಹೇಳಿದಾಗ ನನಗೆ ಪರಮಾಶ್ಚರ್ಯ. ಆದರೆ ಆ ಸ್ವಾಗತ ಮತ್ತು ಇಂಗ್ಲಿಷ್ ಭಾಷೆ ಅಲ್ಲಿಗೆ ಕೊನೆ ಎಂದು ಗೊತ್ತಿರಲಿಲ್ಲ. ಫ್ಲಾರೆನ್ಸ್ ನಗರ ತಲುಪಿ ಮರು ದಿನ ಬೆಳಿಗ್ಗೆ ಫ್ಯಾಕ್ಟರಿಗೆ ಹೋಗಲು ವಿಳಾಸ ತೋರಿಸಿ, ಹೋಗುವ ಮಾರ್ಗ ಹೇಗೆ ಎಂದು ಹೋಟೆಲ್ ನ ಅಟೆಂಡರ್ ಕೇಳಿದರೆ ಅವನು ಇಟಾಲಿಯನ್ ಭಾಷೆಯಲ್ಲಿ ಉತ್ತರ ನೀಡಿದ. ಅವನಿಗೆ ಇಂಗ್ಲಿಷ್ ಭಾಷೆ ಬಾರದು. ನನಗೆ ಅವರ ಭಾಷೆ ಸ್ವಲ್ಪ ಕೂಡ ಅರ್ಥವಾಗುತ್ತಿರಲಿಲ್ಲ. ಸರಿ, ಇನ್ನೇನು ಮಾಡುವುದು? ಯಾವುದೊ ಒಂದು ಭಾಷೆಯಲ್ಲಿ ಮಾತನಾಡಬೇಕಲ್ಲ. ಕನ್ನಡದಲ್ಲೇ ಮತ್ತೆ 'ಟ್ಯಾಕ್ಸಿ ಎಲ್ಲಿ ಸಿಗುತ್ತೆ?' ಎಂದು ಕೇಳಿದೆ. ಅವನು ನನಗೆ ಒಂದು ಗ್ಲಾಸ್ ನೀರು ತಂದುಕೊಟ್ಟು, ತನಗೆ ಏನು ಅರ್ಥವಾಗುತ್ತಿಲ್ಲ ಎನ್ನುವ ಹಾಗೆ ಕೈ ಚೆಲ್ಲಿ ದೈಹಿಕ ಭಾಷೆಯಲ್ಲಿ ಹೇಳಿ ಹೋದ. ಕೊನೆಗೆ ಇಂಗ್ಲಿಷ್ ಭಾಷೆ ಬರುವ ಒಬ್ಬರನ್ನು ಹುಡುಕಿ ಆಫೀಸ್ ತಲುಪಿದೆವು. ಅದು ಇಟಲಿ ಸರ್ಕಾರ ನಡೆಸುತ್ತಿದ್ದ ಫ್ಯಾಕ್ಟರಿ. ಆ ಫ್ಯಾಕ್ಟರಿ ಯಲ್ಲಿ ತಯಾರಿ ಆಗುತ್ತಿದ್ದದ್ದು ಬೃಹತ್ ಗಾತ್ರದ ಕಂಪ್ರೆಸರ್ ಗಳು. ಅವುಗಳು ಅಲ್ಲಿಂದ ಸೌದಿ ಅರೇಬಿಯಾಕ್ಕೆ ಹೋಗಿ, ಅಲ್ಲಿ ಕಚ್ಚಾ ತೈಲ ಉತ್ಪಾದನೆಗೆ ಬಳಕೆಯಾಗುತ್ತಿದ್ದವು. ಅಲ್ಲಿ ಹೊರ ತೆಗೆದ ತೈಲ ನೂರಾರು ದೇಶಗಳಿಗೆ ತಲುಪಿದಾಗ ತಾನೇ ಕಾರು, ಬಸ್ಸು, ರೈಲುಗಳು ಚಲಿಸುವುದು? ಪ್ರಪಂಚದ ಎಲ್ಲ ಜನರು ತಮ್ಮ ಮನೆಯಲ್ಲೇ ಕುಳಿತುಕೊಂಡಿದ್ದರೆ, ತೈಲ ಉದ್ಯಮ ಮತ್ತು ಆಟೋಮೊಬೈಲ್ ಉದ್ಯಮ ಎಲ್ಲಿರುತ್ತಿತ್ತು? ವಿಚಾರ ಮಾಡಿ ನೋಡಿದರೆ, ಅಲೆಮಾರಿಗಳೇ ಜಗತ್ತನ್ನು ಮುನ್ನಡೆಸುವುದು.
ಸಂಜೆಯಾದರೆ ಸಾಕು ನಾನು ಆ ಊರು ಸುತ್ತಲು ಹೊರಟು ಬಿಡುತ್ತಿದ್ದೆ. ಫ್ಲಾರೆನ್ಸ್ ಊರಿನ ತುಂಬಾ ಚರ್ಚ್ ಗಳು ಮತ್ತು ಮ್ಯೂಸಿಯಂ ಗಳು . ನಮ್ಮ ಹಂಪಿಯಲ್ಲಿ ಬೀದಿ ಬೀದಿಗೆ ದೇವಸ್ಥಾನಗಳು ಸಿಕ್ಕುತ್ತಾವಲ್ಲ ಹಾಗೆ. ಸಣ್ಣದು, ದೊಡ್ಡದು, ಗುಡ್ಡದ ಮೇಲೆ, ಗುಡ್ಡದ ಕೆಳಗೆ, ಹಳೆಯದು, ಹೊಸದು ಹೀಗೆ ಅವುಗಳು ತರಹಾವರಿ. ಖ್ಯಾತ ಶಿಲ್ಪಿ ಮೈಕಲ್ ಆಂಜೆಲೋ ನಿರ್ಮಿಸಿದ ಡೇವಿಡ್ ಪ್ರತಿಮೆ ಕೂಡ ಆ ಊರಿನಲ್ಲಿದೆ. ಭಾಷೆ ಬಾರದ ಊರಿನಲ್ಲಿ ಅಲೆಯುವಾಗ ತೆರೆದುಕೊಳ್ಳುವ ಲೋಕ ವಿಶಿಷ್ಟ ಎನಿಸುತ್ತಿತ್ತು. ನೀವು ಎಷ್ಟೇ ಪುಸ್ತಕ ಓದಿ ಅಥವಾ ಚಲನ ಚಿತ್ರಗಳನ್ನು ನೋಡಿ. ಅವುಗಳು ಅಲೆಮಾರಿತನ ತಂದು ಕೊಡುವ ಅನುಭವಕ್ಕೆ ಸಾಟಿಯಾಗವು. ಮನುಷ್ಯನನ್ನು ಹೊರತು ಪಡಿಸಿ ಪ್ರಕೃತಿಯಲ್ಲಿರುವ ಎಲ್ಲ ಜೀವಿಗಳು ಅಲೆಮಾರಿಗಳು. ನೀರು ಸಿಗುವುದು ಒಂದು ಕಡೆ ಆದರೆ ಆಹಾರ ಸಿಗುವುದು ಇನ್ನೊಂದೆಡೆ. ದೈಹಿಕ ಕರ್ಮಗಳಿಗೆ ಹುಡುಕಬೇಕು ಮತ್ತೊಂದು ಜಾಗ. ಹೀಗೆ ಪ್ರಾಣಿ, ಪಕ್ಷಿಗಳು ತಮ್ಮ ಶಕ್ತಿಯನುಸಾರ ದಿನವಿಡೀ ಅಲೆಯುತ್ತವೆ. ಹುಲಿ, ಸಿಂಹಗಳು ತಮ್ಮ ಗಡಿಯನ್ನು ಗುರುತು ಮಾಡುತ್ತ ಅಲೆಯುತ್ತವೆ. ಹೆಚ್ಚು ಅಲೆದ ಆನೆ ಗುಂಪಿಗೆ ನಾಯಕನಾಗುತ್ತದೆ. ಆದರೆ ಮನುಷ್ಯನಿಗೆ ಮಾತ್ರ ಮನೆಯಲ್ಲಿಯೇ ಇದೆ ಬಾತ್ ರೂಮ್ ಹಾಗೆ ಕಿಚನ್. ಇವತ್ತಿನ ಕಾಲದಲ್ಲಿ ಏನಾದರು ಬೇಕಾದರೆ ಮನೆ ಬಾಗಿಲಿಗೆ ತಲುಪಿಸಲಿಕ್ಕೆ ಇವೆ ಅಮೆಜಾನ್ ಮತ್ತು ಝೋಮ್ಯಾಟೊ. ಆದರೆ ಪ್ರಕೃತಿ ಕೆಲವರನ್ನಾದರೂ ಮನೆ ಬಾಗಿಲಿಂದ ಆಚೆ ಹೋಗುವಂತೆ ಪ್ರೇರೇಪಿಸುತ್ತದೆ. ಅದೇ ನೆಮ್ಮದಿ. ಅವರಿಂದಲೇ ಏನಾದರು ಹೊಸ ಬದಲಾವಣೆಗಳು ಬರುವುದು.
ಕೆಲಸ ಮುಗಿಯುವ ಮುನ್ನ, ಸಮುದ್ರದ ಅಂಚಿನಲ್ಲಿರುವ ಮಸ್ಸಾ ಎನ್ನುವ ಪಟ್ಟಣಕ್ಕೆ ಒಂದು ದಿನ ಹೋಗಬೇಕಾಗಿ ಬಂತು. ಆ ದಿನ ಸಂಜೆ ಕಡಲ ತಡಿಗೆ ಹೋಗಿ ಕುಳಿತುಕೊಂಡೆ. ಸಮುದ್ರ ತೀರದ ತುಂಬೆಲ್ಲ ಬಿಳಿ ಬಣ್ಣದ, ಬೂದು ಬಣ್ಣದ ವಲಸೆ ಪಕ್ಷಿಗಳು. ಎಲ್ಲಿಂದ ಬಂದವೋ ಮತ್ತು ಮುಂದೆಲ್ಲಿಗೆ ಹೋಗುತ್ತವೋ? ಅಪಾಯದ ನಡುವೆಯೂ ಅವುಗಳು ಹೊಸ ಅನುಭವಕ್ಕೆ ತಮ್ಮನ್ನು ಒಡ್ಡಿಕೊಳ್ಳುವುದು ವಿಶಿಷ್ಟ ಎನಿಸಿತು. ಅನುಭವ ವಿಸ್ತಾರ ಆಗಲೆಂದು ಪ್ರಕೃತಿಯು ಹೀಗೆ ಜೀವ ವಿನ್ಯಾಸ ಮಾಡಿತೋ ಏನೋ? ನಿಂತ ನೀರು ಕೆಡಬಹುದು ಆದರೆ ಹರಿಯುವ ನೀರು ನವೀಕರಣಗೊಳ್ಳುತ್ತ ಸಾಗುತ್ತದೆ. ಪ್ರಕೃತಿಗೆ ಬೇಕಾದದ್ದು ಅದೇ ಅಲ್ಲವೇ ಅನ್ನಿಸಿತು.
"ಏನೇನೋ ಕಂಡ ಮೇಲೆ ನಮ್ಮೂರೇ ನಮಗೆ ಮೇಲು" ಎನ್ನುವ ಹಾಡನ್ನು ನಾನು ಕೂಡ ಒಪ್ಪುತ್ತೇನೆ. ಆದರೆ ಏಳು ಕೆರೆ ನೀರು ಕುಡಿದು ಬಂದು ಆ ಹಾಡು ಹಾಡಿದರೆ ಅದು ನಮ್ಮ ಅನುಭವದ ಹಾಡಾಗುತ್ತದೆ. ಭಾವಿಯ ಕಪ್ಪೆಯ ಹಾಗೆ ನನ್ನದೇ ದೊಡ್ಡ ಭಾವಿ ಎನ್ನುವದಕ್ಕಿಂತ, ಬೇರೆ ಭಾವಿ ಒಮ್ಮೆಯಾದರೂ ನೋಡಿ ಬರುವುದೇ ಲೇಸು ಎನ್ನುವುದು ನನ್ನ ಅಭಿಪ್ರಾಯ. ಸ್ವಲ್ಪವಾದರೂ ಅಲೆಮಾರಿತನ ನಮ್ಮಲ್ಲಿ ಹೊಸತನ ತರುತ್ತದೆ. ಈ ಕೊರೊನ ಕಾಟ ಮುಗಿದ ಮೇಲೆ, ಇದುವರೆಗೆ ಹೋಗಿರದ ಜಾಗಕ್ಕೆ ಹೋಗಿ ಬರೋಣ ಎನ್ನುವ ವಿಚಾರದಲ್ಲಿದ್ದೇನೆ. ನೀವೆಲ್ಲಿಗೆ ಹೋಗುವ ಯೋಜನೆ ಹಾಕಿದ್ದೀರಿ?
No comments:
Post a Comment