Wednesday, September 15, 2021

ಆಕಾಶದ ನಕ್ಷತ್ರಗಳನ್ನು ಎಣಿಸುವವರಾರು?

ಬೆಂಗಳೂರಿನವರಿಗೆ ಮಾಳಿಗೆಯ ಮೇಲೆ ಮಲಗಿ ಅಭ್ಯಾಸವಿಲ್ಲ. ಆದರೆ ಒಂದೆರಡು ದಶಕಗಳ ಹಿಂದೆ ಉತ್ತರ ಕರ್ನಾಟಕದ ಜನರು ಬೇಸಿಗೆ ಕಾಲದ ರಾತ್ರಿಗಳನ್ನು ಕಳೆಯುತ್ತಿದ್ದದ್ದೇ ಮಾಳಿಗೆಗಳ ಮೇಲೆ. ಆಗ ಹುಣ್ಣಿಮೆ ಬೆಳಕು ತರುವ ಆನಂದ, ಅಮಾವಾಸ್ಯೆ ಕತ್ತಲು ಹುಟ್ಟಿಸುವ ದಿಗಿಲು ಎಲ್ಲವೂ ನಮ್ಮ ಅನುಭವಕ್ಕೆ ಬರಲು ಸಾಧ್ಯವಿತ್ತು. ಮನೆ ಹೊರಗೆ ಕಟ್ಟೆಯ ಮೇಲೆ ಮತ್ತು ಮಾಳಿಗೆ ಮೇಲೆ ಮಲಗಿ ಬೆಳೆದ ನಾನು, ಪ್ರತಿ ರಾತ್ರಿ ಅಂದು ಚಂದ್ರ ಎಲ್ಲಿದ್ದಾನೆ, ಎಷ್ಟು ಚುಕ್ಕಿಗಳು ಕಾಣುತ್ತಿದ್ದಾವೆ ಎಂದು ಆಕಾಶ ದಿಟ್ಟಿಸುತ್ತಲೇ ನಿದ್ರೆಗೆ ಜಾರುತ್ತಿದ್ದೆ. ಆಗ ನನಗೆ ರಾತ್ರಿಯ ಆಕಾಶವೆಂದರೆ ಕಪ್ಪು ಪರದೆಯ ಮೇಲೆ ಮೂಡಿರುವ ಬಿಳಿ ಚುಕ್ಕಿಗಳು ಮಾತ್ರ. ಕೆಲವು ಚುಕ್ಕಿಗಳು ಮಿರಿ ಮಿರಿ ಮಿನುಗಿದರೆ, ಇನ್ನು ಕೆಲವು ಮಂದ. ಕೆಲವು ಮಿಂಚಿ ಮಾಯವಾದರೆ, ಇನ್ನು ಕೆಲವು ಬೇರೆ ಕಡೆ ಪ್ರತ್ಯಕ್ಷ. ಚಂದ್ರನನ್ನು ಗುರುತಿಸುವದಕ್ಕೆ ನಮ್ಮ ಪ್ರಯತ್ನ ನಿಲ್ಲಿಸದೆ, ಸ್ವಲ್ಪ ಪ್ರಯತ್ನ ಪಟ್ಟರೆ ಕೆಂಪು ಬಣ್ಣದ ಮಂಗಳ ಗ್ರಹವನ್ನು ಮತ್ತು ಬೃಹತ್ ಗಾತ್ರದ ಗುರು ಗ್ರಹವನ್ನು ಗುರುತಿಸಲು ಸಾಧ್ಯ, ಟೆಲಿಸ್ಕೋಪ್ ಸಹಾಯ ಪಡೆದರೆ, ನಮ್ಮ ಸೌರ ಮಂಡಲದ ಇತರ ಸದಸ್ಯರನ್ನು ಕಂಡು ಖುಷಿ ಪಡಬಹುದು.

 

ಆಕಾಶ ವೀಕ್ಷಣೆಯ ಹವ್ಯಾಸ ಪ್ರಾಚೀನ ಕಾಲದಿಂದಲೂ ಭಾರತೀಯರಿಗಿತ್ತು. ಹೆಣ್ಣು ಮಕ್ಕಳು ಚುಕ್ಕಿ ಸೇರಿಸಿ ರಂಗೋಲಿ ಬಿಡಿಸಿದ ಹಾಗೆ, ಆಕಾಶದ ಚುಕ್ಕಿಗಳನ್ನು ಸೇರಿಸಿ, ಯಾವುದೊ ಒಂದು ಪ್ರಾಣಿಗೆ ಹೋಲಿಕೆ ಮಾಡಿ ಜ್ಯೋತಿಷ್ಯ ಶಾಸ್ತ್ರದ ರಾಶಿಗಳನ್ನು ಮತ್ತು ಅವುಗಳಿಗೆ ನಮ್ಮ ಜೀವನ ಜೊತೆ ಇರಬಹುದಾದ ಅವಿನಾನುಭವ ಸಂಬಂಧಗಳ ಬಗ್ಗೆ ಸವಿಸ್ತಾರ ಸಿದ್ಧಾಂತವನ್ನೇ ಅವರು ಮಂಡಿಸಿದರು. ನಮ್ಮ ಜೀವನವನ್ನು ನಾವು ಕೈಗತ್ತಿಕೊಳ್ಳದೆ ಇದ್ದರೆ, ನಮಗೆ ಶನಿ ಗ್ರಹ ಕಾಡದೆ ಬಿಡುವುದಿಲ್ಲ.

 

ಆಕಾಶ ವೀಕ್ಷಣೆಯ ಹುಚ್ಚು ಪಾಶ್ಚತ್ಯರಿಗೆ ಏನು ಕಡಿಮೆ ಇರಲಿಲ್ಲ. ಕೊಪರ್ನಿಕಸ್ ೧೬ನೆ ಶತಮಾನದಲ್ಲಿ, ಭೂಮಿಯೇ ಸೂರ್ಯನ ಸುತ್ತುವುದು ಎಂದು ಹೇಳಿದ್ದು ಅರಗಿಸಿಕೊಳ್ಳಲು ಮನುಷ್ಯ ಕುಲಕ್ಕೆ ಶತಮಾನಗಳೇ ಬೇಕಾದವು. ಗೆಲಿಲಿಯೋ ತಾನೇ ಒಂದು ಟೆಲಿಸ್ಕೋಪ್ ತಯಾರಿಸಿಕೊಂಡಿದ್ದ. ಭೂಮಿಯ ಸುತ್ತ ಚಂದ್ರ ಸುತ್ತಿದ ಹಾಗೆ, ಗುರು ಗ್ರಹವನ್ನು ಮೂರು ಚಂದ್ರರು ಸುತ್ತುವುದನ್ನು ತನ್ನ ಟೆಲಿಸ್ಕೋಪ್ ಮೂಲಕ ತೋರಿಸಿದ. ಅಲ್ಲಿಂದ ಶುರುವಾದ ನಮ್ಮ ಮನುಜ ಕುಲದ ಆಕಾಶದ ಚುಕ್ಕಿಗಳ ಎಣಿಸುವಿಕೆಯ ಕಾರ್ಯ ಇಂದಿಗೂ ಮುಂದುವರೆದಿದೆ.

 

ನಮ್ಮ ಸೌರ ಮಂಡಲವನ್ನೇ ನಮ್ಮ ಜಗತ್ತು ಎಂದುಕೊಂಡಿದ್ದ ನಾವು, ನಮ್ಮ ಸೂರ್ಯನಿಗಿಂತ ನೂರು ಪಟ್ಟು ದೊಡ್ಡ ಸೂರ್ಯ ಇರುವ ಸಂಗತಿ ತಿಳಿದುಕೊಂಡೆವು. ಸ್ವಂತ ಬೆಳಕು ಚೆಲ್ಲುವ ನಕ್ಷತ್ರಗಳಲ್ಲಿ ಸೂರ್ಯನು ಕೂಡ ಒಂದು ನಕ್ಷತ್ರ. ಹೀಗೆ ಮೂರು ಸಾವಿರಕ್ಕೂ ಹೆಚ್ಚು ನಕ್ಷತ್ರಗಳು ಸೇರಿ ನಮ್ಮ ಮಿಲ್ಕಿ ವೆ ಗ್ಯಾಲಕ್ಸಿ (ತಾರಾಗಣ) ಆಗಿದೆ. ನಮ್ಮ ಪಕ್ಕದ ಆಂಡ್ರೊಮೆಡಾ ಗ್ಯಾಲಕ್ಸಿ, ನಮ್ಮ ಗ್ಯಾಲಕ್ಸಿ ಗಿಂತ ದೊಡ್ಡದು.  ಹೀಗೆ ಕೋಟ್ಯಂತರ ಗ್ಯಾಲಕ್ಸಿ ಗಳನ್ನೂ ಒಟ್ಟಾಗಿ ಯೂನಿವರ್ಸ್ (ಬ್ರಹ್ಮಾಂಡ) ಎನ್ನುತ್ತೇವೆ. ಈ ಬ್ರಹ್ಮಾಂಡಕ್ಕೆ ಇರುವ ಹಲವಾರು ಆಯಾಮಗಳನ್ನು ಒಟ್ಟಾಗಿ multiverse ಎನ್ನುತ್ತೇವೆ.

 

ಆಕಾಶದ ಚುಕ್ಕಿಗಳನ್ನು ಎಣಿಸುವ ವಿಫಲ ಯತ್ನಗಳನ್ನು ಚಿಕ್ಕಂದಿನಲ್ಲೇ ಕೈ ಬಿಟ್ಟಿರುವವರು ನಾವಾದರೆ, ಪ್ರಯತ್ನ ಜಾರಿಯಲ್ಲಿಟ್ಟಿರುವವರು ಮಾತ್ರ ಹೊಸ ಹೊಸ ನಕ್ಷತ್ರಗಳನ್ನು ಹುಡುಕಿ ಪಟ್ಟಿಗೆ ಸೇರಿಸುತ್ತಲೇ ಇದ್ದಾರೆ. ಈ ಕಾರ್ಯ ಹಲವು ಶತಮಾನಗಳಿಂದ ಜಾರಿಯಲ್ಲಿದೆ. ಆದರೂ ಮುಗಿಯಲು ಸಾಧ್ಯ ಆಗುತ್ತಿಲ್ಲ. ಏಕೆಂದರೆ ಬ್ರಹ್ಮಾಂಡ ಅಗಾಧ ಅಷ್ಟೇ ಅಲ್ಲ, ಅನಂತ ಕೂಡ.

Monday, September 13, 2021

ನೋಡಿದ ಕಡೆಯೆಲ್ಲ ದೇವರು

 ದೇವರನ್ನು ಎಲ್ಲೆಲ್ಲೋ ಹುಡುಕಿದೆ,

ಸಿಕ್ಕಿದ್ದು ಬರೀ ನಾನೇ


ನನ್ನನ್ನೇ ಹುಡುಕತೊಡಗಿದೆ,
ನೋಡಿದ ಕಡೆಯೆಲ್ಲ ದೇವರು

- ರೂಮಿ (ಪರ್ಷಿಯಾ ದೇಶದ ಕವಿ)

Friday, September 10, 2021

ಮನಸ್ಸೆಂಬ ಔಷಧಿ

ಅಮೆರಿಕಕ್ಕೆ ವಲಸೆ ಬಂದ, ೪೫ ರ ಹರೆಯದ ಸ್ಟಮ್ಯಾಟಿಸ್ ಎನ್ನುವ ವ್ಯಕ್ತಿಗೆ ವೈದ್ಯರು ತಪಾಸಣೆ ಮಾಡಿ, ಅವನಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆ ಹಚ್ಚಿ, ಅವನು ಇನ್ನು ಒಂಭತ್ತು ತಿಂಗಳಿಗೂ ಹೆಚ್ಚು ಕಾಲ ಬದುಕುವ ಸಾಧ್ಯತೆ ಇಲ್ಲ ಎಂದು ತಿಳಿಸುತ್ತಾರೆ. ಚಿಕಿತ್ಸೆ, ಉಪಚಾರ ಮಾಡಿದರೂ ಅದು ಅವನ ಜೀವಿತಾವಧಿಯನ್ನು ವಿಸ್ತರಿಸುವುದು ಕಷ್ಟವಿತ್ತು. ಉಳಿದಿರುವುದು ಒಂಭತ್ತು ತಿಂಗಳು ಆದರೆ ಅದನ್ನು ತನ್ನ ತಾಯ್ನಾಡಾದ ಗ್ರೀಸ್ ನಲ್ಲೆ ಕಳೆಯುವುದಾಗಿ ಮತ್ತು ಸತ್ತ ನಂತರ ತನ್ನ ಪೂರ್ವಿಕರ ಸಮಾಧಿಗಳ ಜೊತೆ ತನ್ನದು ಒಂದಾಗಲಿ ಎನ್ನುವ ಆಶಯದೊಂದಿಗೆ ಗ್ರೀಸ್ ಗೆ ಅವನು ವಾಪಸ್ಸು ಆಗುತ್ತಾನೆ. ಅವನು ವಾಪಸ್ಸು ಬಂದಿರುವ ವಿಷಯ ತಿಳಿದು ಅವನ ಹಳೆಯ ಸ್ನೇಹಿತರೆಲ್ಲ ಅವನನ್ನು ಕಾಣಲು ಕೈಯಲ್ಲಿ ವೈನ್ ಬಾಟಲಿ ಹಿಡಿದು ಬರುತ್ತಾರೆ. ತಾನು ಚಿಕ್ಕವನಿದ್ದಾಗ ಹೋಗುತ್ತಿದ್ದ ಚರ್ಚ್ ಗೆ ಮತ್ತೆ ಹೋಗಲು ಸ್ಟಮ್ಯಾಟಿಸ್ ಆರಂಭಿಸುತ್ತಾನೆ. ತನ್ನ ತೋಟದಲ್ಲಿ ವಿಧ ವಿಧದ ತರಕಾರಿ, ಹಣ್ಣಿನ ಗಿಡಗಳನ್ನು ಹಾಕುತ್ತಾನೆ. ಅವು ಬೆಳೆ ಬರುವುದರಲ್ಲಿ ತಾನು ಉಳಿಯುತ್ತೇನೋ, ಇಲ್ಲವೋ ಎನ್ನುವುದರ ಬಗ್ಗೆ ಅವನು ತಲೆ ಕೆಡಿಸಿಕೊಳ್ಳದೆ, ತನಗೆ ಆನಂದ ಕೊಡುವ  ಕೆಲಸಗಳಲ್ಲಿ ಅವನು ಮುಳುಗಿ ಹೋಗುತ್ತಾನೆ. ಅವನ ತೋಟದ ಬೆಳೆಗಳು ಬರಲಾರಂಭಿಸುತ್ತವೆ. ಒಂದು ವರ್ಷದ ನಂತರ ಇನ್ನೊಂದು ಕಳೆದು ಹೋಗುತ್ತದೆ. ಸ್ಟಮ್ಯಾಟಿಸ್ ಗೆ ಈಗ ೯೮ ವರ್ಷ ವಯಸ್ಸು.


ಈ ಜೀವನ ವೃತ್ತಾಂತ ತಿಳಿಸಿದ್ದು ಡಾ. ಲಿಸ್ಸಾ ರಾಂಕಿನ್. ಅವಳನ್ನು ಕಾಣಲು ಬರುವ ರೋಗಿಗಳಿಗೆ ಈ ವೈದ್ಯೆ ಬರೀ ಔಷಧವನ್ನಷ್ಟೇ ಕೊಡುವುದಿಲ್ಲ. ಅವರ ಜೀವನವನ್ನು ಸಮಗ್ರವಾಗಿ, ಕೂಲಂಕುಷವಾಗಿ ವಿಚಾರಿಸಿಕೊಳ್ಳುತ್ತಾಳೆ. ಅವರ ಆರೋಗ್ಯದ ಮತ್ತು ವೈಯಕ್ತಿಕ ಸಮಸ್ಯೆಗಳಿಗೆ ಯಾವ ಔಷದಿ ಕೊಟ್ಟರೆ ಚೆನ್ನ ಎಂದು ಅವರಿಗೆ ಅನ್ನಿಸುತ್ತದೆ ಎಂದು ಕೇಳುತ್ತಾಳೆ. ಆಗ ಸಮಸ್ಯೆಗಳ ಮೂಲ ಮತ್ತು ಪರಿಹಾರ ರೋಗಿಗಳ ಬಾಯಿಂದಲೇ ಬರುತ್ತದೆ. 


ಒತ್ತಡದ ಉದ್ಯೋಗ, ಹಣಕಾಸಿನ ಸಮಸ್ಯೆ, ಕೌಟುಂಬಿಕ ಕಲಹಗಳು, ನಿದ್ದೆಗೆಡುವುದು, ಒಬ್ಬಂಟಿ ಜೀವನ ಮುಂತಾದವುಗಳು ಕಾಲ ಕ್ರಮೇಣ ರೋಗಗಳಾಗಿ ಬದಲಾಗಿ ಅನಾರೋಗ್ಯಕ್ಕೆ ಈಡು ಮಾಡುತ್ತವೆ. ಬದುಕುವ ಆಸೆ ಕಡಿಮೆಯಾದಂತೆಲ್ಲ ರೋಗಗಳು ಉಲ್ಬಣಗೊಳ್ಳುತ್ತ ಹೋಗುತ್ತವೆ. ಮೂಲ ಸಮಸ್ಯೆಗಳನ್ನು ಬಗೆಹರಿಸದೆ ಬರೀ ಔಷಧಿ ತೆಗೆದುಕೊಂಡರೆ ಆಗುವ ಪ್ರಯೋಜನ ಅಂತಹ ದೊಡ್ಡದೇನಲ್ಲ. ಇದಕ್ಕೆ ತದ್ವಿರುದ್ಧವಾಗಿ, ಜೀವನ ಉಲ್ಲಾಸಮಯವಾದಂತೆಲ್ಲ ರೋಗಗಳ ತೀವ್ರತೆಯು ಕಡಿಮೆಯಾಗುತ್ತ ಹೋಗುತ್ತದೆ. ಶಾಂತ ಮನಸ್ಸು ನಮ್ಮ ದೇಹದ ಸ್ವ-ರಿಪೇರಿ ಮಾಡುವ ತಾಕತ್ತನ್ನು ಹೆಚ್ಚಿಸುತ್ತ ಹೋಗುತ್ತದೆ. ಸ್ವಸ್ಥ ಮನಸ್ಸು ದೇಹದ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.


ಕೆಲಸದಲ್ಲಿ ಒತ್ತಡ ಯಾರಿಗಿಲ್ಲ? ಆದರೆ ಸಹೋದ್ಯೋಗಿಗಳೊಂದಿಗೆ ಸ್ಪರ್ಧೆಗೆ ಬೀಳದೆ ಒತ್ತಡ ಕಡಿಮೆ ಮಾಡಿಕೊಳ್ಳುವ ಆಯ್ಕೆ ನಮಗೆ ಬಿಟ್ಟಿದ್ದು. ಇರುವ ರಜೆಗಳ ಸಂಪೂರ್ಣ ಉಪಯೋಗ ಪಡೆದು, ಒತ್ತಡ ಕಡಿಮೆ ಮಾಡುವ ಹವ್ಯಾಸಗಳಲ್ಲಿ ತೊಡಗಿ, ಮನಸ್ಸಿಗೆ ಮತ್ತು ದೇಹಕ್ಕೆ ವಿಶ್ರಾಂತಿ ಕೊಟ್ಟರೆ ಅದು ಆರೋಗ್ಯವನ್ನು ಪುನಶ್ಚೇತನಗೊಳಿಸುತ್ತದೆ. ಕೌಟುಂಬಿಕ ಸಂಬಂಧಗಳು ಸರಿ ಹೋಗದಿದ್ದರೆ, ಸಹನೆಯ ಮಿತಿಯನ್ನು ದಾಟಿದ್ದರೆ, ಪ್ರತಿ ದಿನ ವಿಷ ನುಂಗುವುದಕ್ಕಿಂತ ಧೈರ್ಯ ತೆಗೆದುಕೊಂಡು ಆ ಸಂಬಂಧಗಳನ್ನು ಕೊನೆಗೊಳಿಸಿ ಎನ್ನುವ ಸಲಹೆ ನೀಡುತ್ತಾರೆ ಈ ವೈದ್ಯೆ. ಉತ್ತಮ ಸ್ನೇಹಿತರು ನಿಮ್ಮ ಆಯಸ್ಸನ್ನು ಹೆಚ್ಚಿಗೆ ಮಾಡುತ್ತಾರೆ ಮತ್ತು ನಿಮಗೆ ಬದುಕುವ ಉಲ್ಲಾಸ ತುಂಬುತ್ತಾರೆ. ಹಳೆಯ ಸ್ನೇಹಿತರನ್ನು ಕಳೆದುಕೊಳ್ಳಬೇಡಿ ಮತ್ತು ಹೊಸಬರ ಸ್ನೇಹ ಆಗುತ್ತಿರಲಿ ಎನ್ನುವುದು ಇವರ ಅಭಿಪ್ರಾಯ. ಯೋಗ, ಧ್ಯಾನ, ಆಟಗಳು, ಸಂಗೀತ, ಚಿತ್ರಕಲೆ ಹೀಗೆ ಯಾವುದರಲ್ಲಿ ನಿಮಗೆ ಆಸಕ್ತಿ ಇದೆಯೋ ಅದರಲ್ಲಿ ನಿಮ್ಮ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಿ. ಇವೆಲ್ಲ ನೀವು ರೋಗಗಳಿಂದ ದೂರಾಗುವಲ್ಲಿ ನೆರವಾಗುತ್ತವೆ. ದೇಹದ ಕಾರ್ಯ ಕ್ಷಮತೆ ಹೆಚ್ಚಿಸಿ, ನಿಮ್ಮ ಜೀವನ ಕಾಲ ವಿಸ್ತರಿಸುವಂತೆ ಮಾಡುತ್ತವೆ. ನೀವು ಸಂತೋಷವಾಗಿಲ್ಲದೆ, ಔಷಧಿ ಮಾತ್ರ ತೆಗೆದುಕೊಂಡರೆ ಅದರ ಪ್ರಯೋಜನ ಅಷ್ಟಕಷ್ಟೇ ಎನ್ನುವ ಸತ್ಯ ಬಿಚ್ಚಿಡುತ್ತಾರೆ. 


ಇದು ನಮಗೆ ತಿಳಿಯದ ಹೊಸ ವಿಷಯವೇನಲ್ಲ. ಆದರೆ ವೈದ್ಯರೇ ಇದನ್ನು ಧೃಡೀಕರಿಸುವದು ಇದರ ಪ್ರಾಮುಖ್ಯತೆ ತೋರಿಸುತ್ತದೆ. ಔಷಧಿ ಚೀಟಿಯನ್ನು ಈ ವೈದ್ಯರು ಬರೆದು ಕೊಡದೆ, ನಮಗೆ ನಾವೇ ಬರೆದುಕೊಳ್ಳುವಂತೆ ಪ್ರಚೋದಿಸುವ ಈ ವೈದ್ಯೆ ವಿಶಿಷ್ಟ ಎನಿಸುತ್ತಾರೆ. ಇನ್ನು ಹೆಚ್ಚಿನ ವಿಷಯಗಳನ್ನು ಅವರಿಂದಲೇ ತಿಳಿದುಕೊಳ್ಳಿ.

https://www.youtube.com/watch?v=gcai0i2tJt0



Sunday, September 5, 2021

ಹೀರೋ ಎನ್ನುವ ಕಲ್ಪನೆ, ವಿಲ್ಲನ್ ಎಂಬ ವಾಸ್ತವ

ನಾವು ನೋಡುವ ಚಲನ ಚಿತ್ರಗಳಲ್ಲಿ ನಾಯಕ, ನಾಯಕಿ, ಖಳನಾಯಕ ಇವರುಗಳ ಪಾತ್ರ ಸೃಷ್ಟಿ ಹೇಗೆ ಆಗುತ್ತೆ ಎನ್ನುವ ಕಡೆಗೆ ಗಮನ ಹರಿಸಿದ್ದೀರಾ? ಯಾವುದೇ ಕತೆಗಾರನ ಅಥವಾ ಚಲನ ಚಿತ್ರ ನಿರ್ದೇಶಕನ ಅಂತರಂಗವನ್ನು ಕೆದಕಿ ನೋಡಿ. ನಾಯಕನನ್ನು ಆದರ್ಶವಾಗಿ ಚಿತ್ರಿಸಲು, ಅವನು ಹೇಗಿದ್ದರೆ ಚೆನ್ನ ಎನ್ನುವ ಕಲ್ಪನೆಯ ಮೊರೆ ಹೋಗುತ್ತಾರೆ. ನಾಯಕಿಗೆ ರೂಪ, ಲಾವಣ್ಯಗಳೇ ಅಳತೆಗೋಲು. ಖಳನಾಯಕನನ್ನು ನಮ್ಮ ಸಮಾಜದ ನಡುವೆಯಿಂದ ಎತ್ತಿಕೊಂಡು ಬರುತ್ತಾರೆ, ಇಲ್ಲವೇ ವಾಸ್ತವಕ್ಕೆ ಹತ್ತಿರವಾಗಿ ಇರುವ ವ್ಯಕ್ತಿಗಳನ್ನೇ ಆಧರಿಸಿಕೊಂಡು ಬಿಡುತ್ತಾರೆ.


ಹೀರೋನ ಇಮೇಜ್ ವಿಲ್ಲನ್ ಮೇಲೆ ಅವಲಂಬಿಸುರುತ್ತದೆ. ಖಳನಾಯಕ ಎಷ್ಟು ಭೀಕರ ಇರುತ್ತಾನೋ ಅಷ್ಟು ನಾಯಕನ ಮೌಲ್ಯ ಬೆಳೆಯುತ್ತದೆ. ಖಳನಾಯಕ ಸಾದಾ ಎನಿಸಿದರೆ ಹಲವಾರು ಖಳನಾಯಕರನ್ನು ಸೃಷ್ಟಿಸಲಾಗುತ್ತದೆ. ಹಿಂದೆ ಕರಾಟೆ ಪಟ್ಟು ತೆಗೆಯುತ್ತಿದ್ದ ಶಂಕರ್ ನಾಗ್ ರಿಗೆ ಹಲವಾರು ಖಳರೊಂದಿಗೆ ಒಟ್ಟಿಗೆ ಬಡಿದಾಡುವ ಸನ್ನಿವೇಶಗಳಿರುತ್ತಿದ್ದವು. ಇತ್ತೀಚಿನ 'ಬಾಹುಬಲಿ' ಚಿತ್ರದಲ್ಲಿ ನಾಯಕನಿಗೆ ಸರಿ ಸಮಾನ ದೇಹ ಧಾರ್ಡ್ಯ ಇರುವ ಖಳನಾಯಕ ಇದ್ದ. ಸವಾಲು ಹಾಕುವ ಖಳನಾಯಕನೇ ಇರದಿದ್ದರೆ ನಾಯಕನಿಗೆ ಎಲ್ಲಿಯ ಬೆಲೆ? ಚಿತ್ರ ನೋಡುವ ವೀಕ್ಷಕರೆಲ್ಲರೂ ಆ ಚಿತ್ರದಲ್ಲಿ ತಾವೇ ಹೀರೋ ಅನ್ನುವಂತೆ ಚಿತ್ರವನ್ನು ವೀಕ್ಷಿಸುತ್ತಾರೆ ಹಾಗೆಯೆ ಅವರಿಗೆ ಖಳನಾಯಕ ತಮ್ಮ ಜೀವನದಲ್ಲಿ ಪ್ರತಿಸ್ಪರ್ಧಿ ಎನ್ನಿಸುವುದು ಸಾಧಾರಣ ಸಂಗತಿ. ಆದರೆ ನೀವು ಯಾರನ್ನು ಖಳನಾಯಕನ ಪಾತ್ರದಲ್ಲಿ ನಿಲ್ಲಿಸಿ ನೋಡುತ್ತಿರೋ, ಅವನು ಅದೇ ಚಿತ್ರವನ್ನು ತಾನೇ ಹೀರೋ ಎನ್ನುವಂತೆ ವೀಕ್ಷಣೆ ಮಾಡುತ್ತಿರುತ್ತಾನೆ. ಮತ್ತು ಅವರಿಗೆ ನೀವೇ ವಿಲ್ಲನ್.


ಚಲನಚಿತ್ರದ ಪಾತ್ರಗಳಲ್ಲಿ ನಾವು ಒಂದಾಗದೆ ಸ್ವಲ್ಪ ದೂರ ನಿಂತುಕೊಂಡು ಗಮನಿಸಿ ನೋಡಿ. ಪರದೆಯ ಮೇಲೆ ಹೊಡೆದಾಡಿ ಗೆಲ್ಲುವ ನಾಯಕ, ನಿಜ ಜೀವನದಲ್ಲಿ ಅಷ್ಟು ಶಕ್ತಿವಂತನಾಗಿರುವುದಿಲ್ಲ. ಆದರೆ ಖಳನಾಯಕ ವಾಸ್ತವದಲ್ಲಿ ಚಿತ್ರದಲ್ಲಿಗಿಂತ ಹೆಚ್ಚಿನ ಕಟುಕ ಆಗಿದ್ದರು ಆಶ್ಚರ್ಯವಿಲ್ಲ.  ಬಹಳಷ್ಟು ಚಿತ್ರಗಳು, ಕಾದಂಬರಿಗಳು ಮದುವೆಯಲ್ಲೋ, ಇಲ್ಲವೇ ನಾಯಕನ ಸಾವಿನಲ್ಲೂ ಮುಕ್ತಾಯವಾಗುತ್ತವೆ. ಆದರೆ ನಿಜ ಜೀವನದಲ್ಲಿ ದೈಹಿಕ ಶಕ್ತಿಗಿಂತ ಧೈರ್ಯ, ಸಾಹಸ, ಬುದ್ಧಿವಂತಿಕೆ, ಸಮಯ ಪ್ರಜ್ಞೆ ಇಬ್ಬರಲ್ಲಿ ಯಾರಿಗೆ ಹೆಚ್ಚಿದೆಯೋ ಅವರ ಕೈ ಮೇಲಾಗುತ್ತದೆ. ಆದರೆ ಗೆಲುವು ಕೂಡ ಶಾಶ್ವತ ಅಲ್ಲ. ಒಂದು ಗೆಲುವು ಸಾಧಿಸಿದ ಸ್ವಲ್ಪೇ ಸಮಯಕ್ಕೆ ನಿಮ್ಮ ಜೀವನದಲ್ಲಿ ಇನ್ನೊಬ್ಬ ಖಳನಾಯಕ ಕಾಲಿಟ್ಟು ಬಿಡುತ್ತಾನೆ, 'ಅಭಿ ಪಿಕ್ಚರ್ ಬಾಕಿ ಹೈ' ಎನ್ನುವ ಹಾಗೆ.


ಚಿತ್ರಗಳಲ್ಲಿ ನಾಯಕನ ಸ್ನೇಹಿತರಿಗೆ ಖಳನಾಯಕನಿಗೆ ಇರುವ ಪ್ರಾಶಸ್ತ್ಯ ಇಲ್ಲ. ಅವರು ಕಥೆಗೆ ಪೂರಕ ಇದ್ದರೂ ನಿರ್ಣಾಯಕ ಸನ್ನಿವೇಶಗಳಲ್ಲಿ ಅವರು ಕಾಣುವುದೇ ಇಲ್ಲ. ಆಗ ನಮ್ಮ ಹೀರೋ ಒಬ್ಬಂಟಿ. ಗೆದ್ದರೂ, ಸೋತರೂ ಅದು ಅವನ ಪ್ರಯತ್ನದಿಂದ. ಇದು ಮಾತ್ರ ನಿಜ ಜೀವನಕ್ಕೂ ಅನ್ವಯಿಸುತ್ತದೆ. ನಕ್ಕು ಹಗುರಾಗಲು, ಕಷ್ಟದಲ್ಲಿ ಸಹಾಯ ಮಾಡಲು ನಮಗೆ ಹಲವಾರು ಸ್ನೇಹಿತರಿದ್ದರೂ, ಅವರು ನಮಗೆ ಸವಾಲಾಗುವುದಿಲ್ಲ. ಖಳನಾಯಕನೇ ನಮ್ಮನ್ನು ಬಲೆಗೆ ಸಿಕ್ಕಿ ಹಾಕಿಸಿ ಚಿತ್ರಹಿಂಸೆ ಕೊಡುವುದು. ಖಳನಾಯಕನನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತೇವೆ ಎನ್ನುವುದು ನಮ್ಮ ಅಳಿವು-ಉಳಿವನ್ನು ನಿರ್ಧರಿಸುತ್ತದೆ. ಹಾಗಾಗಿ ಖಳನಾಯಕರು ನಮ್ಮ ಸ್ನೇಹಿತರಿಂಗಿಂತ ಹೆಚ್ಚು ಅನ್ನಿಸುವಷ್ಟು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತಾರೆ.


ನಮ್ಮ ಸಮಾಜದಲ್ಲಿ ಹೀರೋಗಳು ತುಂಬಾ ವಿರಳ. ಆದರೆ ವಿಲ್ಲನ್ ಗಳು ಹಾದಿಗೊಬ್ಬರು, ಬೀದಿಗೊಬ್ಬರು. ಒಂದು ವೇಳೆ ನಿಮಗೆ ನೀವು ಹೀರೋ ಅನ್ನಿಸಿದರೆ, ನಿಮ್ಮನ್ನು ಹೀರೋ ಮಾಡಿದ್ದು ಆ ವಿಲ್ಲನ್ ಗಳೇ ಎನ್ನುವುದೇ ನೆನಪಿರಲಿ. ನಿಮ್ಮ ಶಕ್ತಿ, ಸಾಮರ್ಥ್ಯಕ್ಕೆ ಅವರು ಸವಾಲು ಹಾಕಿದ್ದಕ್ಕೆ ಅಲ್ಲವೇ ನೀವು ಹೀರೋ ಆಗಿ ಬೆಳೆದದ್ದು? ಸ್ನೇಹಿತರನ್ನು ನೀವು ಆಯ್ಕೆ ಮಾಡುವ ಅಗತ್ಯವಿಲ್ಲ. ಆದರೆ ಪ್ರತಿಸ್ಪರ್ಧಿಯನ್ನು ಮಾತ್ರ ನೀವು ಅಳೆದು, ತೂಗಿ ಆಯ್ಕೆ ಮಾಡಬೇಕು. ಏಕೆಂದರೆ ಇಲ್ಲಿ ಗೆದ್ದವನೇ ಹೀರೋ ಮತ್ತು ಸೋತವನು ಕೈಲಾಗದವನು ಅಷ್ಟೇ.

Saturday, September 4, 2021

ನಮ್ಮೂರೇ ನಮಗೆ ಮೇಲು ಎಂದು ಹಾಡುವ ಮುನ್ನ ಸ್ವಲ್ಪ ಅಲೆದು ಬನ್ನಿ

ಊರೂರು ಸುತ್ತುವುದಕ್ಕಿಂತ ಸುಮ್ಮನೆ ಒಂದೂರಲ್ಲಿ ಕುಳಿತುಕೊಳ್ಳುವುದೆಕ್ಕೆನು ಧಾಡಿ ಎಂದು ನಾವು ಯಾರಿಗಾದರೂ ಬೈಯುತ್ತೇವೆಲ್ಲ? ಜಗತ್ತಿನ ಎಲ್ಲ ಜನರು ತಮ್ಮೂರಲ್ಲೇ, ತಮ್ಮ ಮನೆಯಲ್ಲೇ ಕುಳಿತುಕೊಂಡಿದ್ದರೆ, ನಾವು ಇನ್ನು ಶಿಲಾಯುಗದಲ್ಲೇ ಇರುತ್ತಿದ್ದೆವೇನೋ? ವಲಸಿಗರೇ ಕಟ್ಟಿದ ಅಮೇರಿಕ ದೇಶವನ್ನು ನಾವು ಇಂದು ಹಾಡಿ ಹೊಗುಳುವುದಿಲ್ಲವೇ? ಭಾರತಕ್ಕೆ ಸಮುದ್ರ ಮಾರ್ಗ ಕಂಡು ಹಿಡಿದ ಅಲೆಮಾರಿ ವಾಸ್ಕೋ-ಡಾ-ಗಾಮ ಚರಿತ್ರೆಯ ಪುಟದಲ್ಲಿ ಸೇರಿ ಹೋಗಿಲ್ಲವೇ? ಆದಿ ಶಂಕರ ಕೇರಳದಿಂದ ಹಿಮಾಲಯಕ್ಕೆ ಕಾಲ್ನಡಿಗೆಯಲ್ಲಿ ಹೋಗಲಿಲ್ಲವೇ? ಅವನು ವೇದಗಳಿಗಿಂತ ಹೆಚ್ಚು ತನ್ನ ಪ್ರವಾಸದಿಂದ ಕಲಿತದ್ದು ಎನ್ನುವುದು ನನ್ನ ಸ್ವಂತ ಅಭಿಪ್ರಾಯ. ಚೀನಾ ದೇಶದ ಪ್ರವಾಸಿಗರು, ಭಾರತದಿಂದ ಚಹಾ ತಯಾರಿಸುವುದನ್ನು ಕಲಿತು ಹೋದರೆ, ವಾಪಸ್ಸು ಬಂದು ಚಹಾವನ್ನು ಕುಡಿಯಲು ಪಿಂಗಾಣಿ ಕಪ್ ಗಳನ್ನು ಕೊಟ್ಟು ಹೋದರು. ಅವರು ಧರಿಸಿದ ಹೊಳಪಿನ ಬಟ್ಟೆ 'ಚೈನಾ ಸಿಲ್ಕ್' ಹೊತ್ತು ತರಲು ಬಳಸಿದ 'ಸಿಲ್ಕ್ ರೂಟ್' ದಾರಿಗಳು ಮುಂದೆ ಹೆದ್ದಾರಿಗಳಾಗಿ ಬದಲಾದವು. ವಿಚಾರ, ಸಂಸ್ಕೃತಿ ವಿನಿಮಯವಾಗಿದ್ದೆ ಪ್ರವಾಸಿಗರಿಂದ, ಅಲೆಮಾರಿಗಳಿಂದ. ಭಾಷೆ ಗೊತ್ತಿಲ್ಲದ, ನಿಮಗೆ ಗೊತ್ತಿರುವವರು ಯಾರು ಇಲ್ಲದ ಊರಿಗೆ ಹೋಗಿ ಬನ್ನಿ. ಆಮೇಲೆ ನಮ್ಮೂರೇ ಚೆನ್ನ ಎಂದು ಹೇಳಿ, ಅಡ್ಡಿ ಇಲ್ಲ. 


ಅದು ೨೦೦೬ನೆ ವರ್ಷ. ಆಗ ನಾನು ಕೆಲಸ ಮಾಡುತ್ತಿದ್ದ GE ಕಂಪನಿಯಿಂದ ಇಟಲಿ ದೇಶದ ಫ್ಲಾರೆನ್ಸ್ ಎನ್ನುವ ಪ್ರವಾಸಿ ನಗರದಲ್ಲಿ ಎರಡು ತಿಂಗಳುಗಳ ಕಾಲ ಕೆಲಸದ ಮೇಲೆ ಹೋಗಿದ್ದೆ. ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲೆ ನನ್ನ ಪಾಸ್ ಪೋರ್ಟ್ ನಲ್ಲಿ ಸೀಲ್ ಹಾಕಿ 'ವೆಲ್ ಕಮ್ ಟು ಯುರೋಪ್' ಎಂದು ಹೇಳಿದಾಗ ನನಗೆ ಪರಮಾಶ್ಚರ್ಯ. ಆದರೆ ಆ ಸ್ವಾಗತ ಮತ್ತು ಇಂಗ್ಲಿಷ್ ಭಾಷೆ ಅಲ್ಲಿಗೆ ಕೊನೆ ಎಂದು ಗೊತ್ತಿರಲಿಲ್ಲ. ಫ್ಲಾರೆನ್ಸ್ ನಗರ ತಲುಪಿ ಮರು ದಿನ ಬೆಳಿಗ್ಗೆ ಫ್ಯಾಕ್ಟರಿಗೆ ಹೋಗಲು ವಿಳಾಸ ತೋರಿಸಿ, ಹೋಗುವ ಮಾರ್ಗ ಹೇಗೆ ಎಂದು ಹೋಟೆಲ್ ನ ಅಟೆಂಡರ್ ಕೇಳಿದರೆ ಅವನು ಇಟಾಲಿಯನ್ ಭಾಷೆಯಲ್ಲಿ ಉತ್ತರ ನೀಡಿದ. ಅವನಿಗೆ ಇಂಗ್ಲಿಷ್ ಭಾಷೆ ಬಾರದು. ನನಗೆ ಅವರ ಭಾಷೆ ಸ್ವಲ್ಪ ಕೂಡ  ಅರ್ಥವಾಗುತ್ತಿರಲಿಲ್ಲ. ಸರಿ, ಇನ್ನೇನು ಮಾಡುವುದು? ಯಾವುದೊ ಒಂದು ಭಾಷೆಯಲ್ಲಿ ಮಾತನಾಡಬೇಕಲ್ಲ. ಕನ್ನಡದಲ್ಲೇ ಮತ್ತೆ 'ಟ್ಯಾಕ್ಸಿ ಎಲ್ಲಿ ಸಿಗುತ್ತೆ?' ಎಂದು ಕೇಳಿದೆ. ಅವನು ನನಗೆ ಒಂದು ಗ್ಲಾಸ್ ನೀರು ತಂದುಕೊಟ್ಟು, ತನಗೆ ಏನು ಅರ್ಥವಾಗುತ್ತಿಲ್ಲ ಎನ್ನುವ ಹಾಗೆ ಕೈ ಚೆಲ್ಲಿ ದೈಹಿಕ ಭಾಷೆಯಲ್ಲಿ ಹೇಳಿ ಹೋದ. ಕೊನೆಗೆ ಇಂಗ್ಲಿಷ್ ಭಾಷೆ ಬರುವ ಒಬ್ಬರನ್ನು ಹುಡುಕಿ ಆಫೀಸ್ ತಲುಪಿದೆವು. ಅದು ಇಟಲಿ ಸರ್ಕಾರ ನಡೆಸುತ್ತಿದ್ದ ಫ್ಯಾಕ್ಟರಿ. ಆ ಫ್ಯಾಕ್ಟರಿ ಯಲ್ಲಿ ತಯಾರಿ ಆಗುತ್ತಿದ್ದದ್ದು ಬೃಹತ್ ಗಾತ್ರದ ಕಂಪ್ರೆಸರ್ ಗಳು. ಅವುಗಳು ಅಲ್ಲಿಂದ ಸೌದಿ ಅರೇಬಿಯಾಕ್ಕೆ ಹೋಗಿ, ಅಲ್ಲಿ ಕಚ್ಚಾ ತೈಲ ಉತ್ಪಾದನೆಗೆ ಬಳಕೆಯಾಗುತ್ತಿದ್ದವು. ಅಲ್ಲಿ ಹೊರ ತೆಗೆದ ತೈಲ ನೂರಾರು ದೇಶಗಳಿಗೆ ತಲುಪಿದಾಗ ತಾನೇ ಕಾರು, ಬಸ್ಸು, ರೈಲುಗಳು ಚಲಿಸುವುದು? ಪ್ರಪಂಚದ ಎಲ್ಲ ಜನರು ತಮ್ಮ ಮನೆಯಲ್ಲೇ ಕುಳಿತುಕೊಂಡಿದ್ದರೆ, ತೈಲ ಉದ್ಯಮ ಮತ್ತು ಆಟೋಮೊಬೈಲ್ ಉದ್ಯಮ ಎಲ್ಲಿರುತ್ತಿತ್ತು? ವಿಚಾರ ಮಾಡಿ ನೋಡಿದರೆ, ಅಲೆಮಾರಿಗಳೇ ಜಗತ್ತನ್ನು ಮುನ್ನಡೆಸುವುದು.


ಸಂಜೆಯಾದರೆ ಸಾಕು ನಾನು ಆ ಊರು ಸುತ್ತಲು ಹೊರಟು ಬಿಡುತ್ತಿದ್ದೆ. ಫ್ಲಾರೆನ್ಸ್ ಊರಿನ ತುಂಬಾ ಚರ್ಚ್ ಗಳು ಮತ್ತು ಮ್ಯೂಸಿಯಂ ಗಳು . ನಮ್ಮ ಹಂಪಿಯಲ್ಲಿ ಬೀದಿ ಬೀದಿಗೆ ದೇವಸ್ಥಾನಗಳು ಸಿಕ್ಕುತ್ತಾವಲ್ಲ ಹಾಗೆ. ಸಣ್ಣದು, ದೊಡ್ಡದು, ಗುಡ್ಡದ ಮೇಲೆ, ಗುಡ್ಡದ ಕೆಳಗೆ, ಹಳೆಯದು, ಹೊಸದು ಹೀಗೆ ಅವುಗಳು ತರಹಾವರಿ. ಖ್ಯಾತ ಶಿಲ್ಪಿ ಮೈಕಲ್ ಆಂಜೆಲೋ ನಿರ್ಮಿಸಿದ ಡೇವಿಡ್ ಪ್ರತಿಮೆ ಕೂಡ ಆ ಊರಿನಲ್ಲಿದೆ. ಭಾಷೆ ಬಾರದ ಊರಿನಲ್ಲಿ ಅಲೆಯುವಾಗ ತೆರೆದುಕೊಳ್ಳುವ ಲೋಕ ವಿಶಿಷ್ಟ ಎನಿಸುತ್ತಿತ್ತು. ನೀವು ಎಷ್ಟೇ ಪುಸ್ತಕ ಓದಿ ಅಥವಾ ಚಲನ ಚಿತ್ರಗಳನ್ನು ನೋಡಿ. ಅವುಗಳು ಅಲೆಮಾರಿತನ ತಂದು ಕೊಡುವ ಅನುಭವಕ್ಕೆ ಸಾಟಿಯಾಗವು. ಮನುಷ್ಯನನ್ನು ಹೊರತು ಪಡಿಸಿ ಪ್ರಕೃತಿಯಲ್ಲಿರುವ ಎಲ್ಲ ಜೀವಿಗಳು ಅಲೆಮಾರಿಗಳು. ನೀರು ಸಿಗುವುದು ಒಂದು ಕಡೆ ಆದರೆ ಆಹಾರ ಸಿಗುವುದು ಇನ್ನೊಂದೆಡೆ. ದೈಹಿಕ ಕರ್ಮಗಳಿಗೆ ಹುಡುಕಬೇಕು ಮತ್ತೊಂದು ಜಾಗ. ಹೀಗೆ ಪ್ರಾಣಿ, ಪಕ್ಷಿಗಳು ತಮ್ಮ ಶಕ್ತಿಯನುಸಾರ ದಿನವಿಡೀ ಅಲೆಯುತ್ತವೆ. ಹುಲಿ, ಸಿಂಹಗಳು ತಮ್ಮ ಗಡಿಯನ್ನು ಗುರುತು ಮಾಡುತ್ತ ಅಲೆಯುತ್ತವೆ. ಹೆಚ್ಚು ಅಲೆದ ಆನೆ ಗುಂಪಿಗೆ ನಾಯಕನಾಗುತ್ತದೆ. ಆದರೆ ಮನುಷ್ಯನಿಗೆ ಮಾತ್ರ ಮನೆಯಲ್ಲಿಯೇ ಇದೆ ಬಾತ್ ರೂಮ್ ಹಾಗೆ ಕಿಚನ್. ಇವತ್ತಿನ ಕಾಲದಲ್ಲಿ ಏನಾದರು ಬೇಕಾದರೆ ಮನೆ ಬಾಗಿಲಿಗೆ ತಲುಪಿಸಲಿಕ್ಕೆ ಇವೆ ಅಮೆಜಾನ್ ಮತ್ತು ಝೋಮ್ಯಾಟೊ. ಆದರೆ ಪ್ರಕೃತಿ ಕೆಲವರನ್ನಾದರೂ ಮನೆ ಬಾಗಿಲಿಂದ ಆಚೆ ಹೋಗುವಂತೆ ಪ್ರೇರೇಪಿಸುತ್ತದೆ. ಅದೇ ನೆಮ್ಮದಿ. ಅವರಿಂದಲೇ ಏನಾದರು ಹೊಸ ಬದಲಾವಣೆಗಳು ಬರುವುದು.


ಕೆಲಸ ಮುಗಿಯುವ ಮುನ್ನ, ಸಮುದ್ರದ ಅಂಚಿನಲ್ಲಿರುವ ಮಸ್ಸಾ ಎನ್ನುವ ಪಟ್ಟಣಕ್ಕೆ ಒಂದು ದಿನ ಹೋಗಬೇಕಾಗಿ ಬಂತು. ಆ ದಿನ ಸಂಜೆ ಕಡಲ ತಡಿಗೆ ಹೋಗಿ ಕುಳಿತುಕೊಂಡೆ. ಸಮುದ್ರ ತೀರದ ತುಂಬೆಲ್ಲ ಬಿಳಿ ಬಣ್ಣದ, ಬೂದು ಬಣ್ಣದ ವಲಸೆ ಪಕ್ಷಿಗಳು. ಎಲ್ಲಿಂದ ಬಂದವೋ ಮತ್ತು ಮುಂದೆಲ್ಲಿಗೆ ಹೋಗುತ್ತವೋ? ಅಪಾಯದ ನಡುವೆಯೂ ಅವುಗಳು ಹೊಸ ಅನುಭವಕ್ಕೆ ತಮ್ಮನ್ನು ಒಡ್ಡಿಕೊಳ್ಳುವುದು ವಿಶಿಷ್ಟ ಎನಿಸಿತು. ಅನುಭವ ವಿಸ್ತಾರ ಆಗಲೆಂದು ಪ್ರಕೃತಿಯು ಹೀಗೆ ಜೀವ ವಿನ್ಯಾಸ ಮಾಡಿತೋ ಏನೋ? ನಿಂತ ನೀರು ಕೆಡಬಹುದು ಆದರೆ ಹರಿಯುವ ನೀರು ನವೀಕರಣಗೊಳ್ಳುತ್ತ ಸಾಗುತ್ತದೆ. ಪ್ರಕೃತಿಗೆ ಬೇಕಾದದ್ದು ಅದೇ ಅಲ್ಲವೇ ಅನ್ನಿಸಿತು.


"ಏನೇನೋ ಕಂಡ ಮೇಲೆ ನಮ್ಮೂರೇ ನಮಗೆ ಮೇಲು" ಎನ್ನುವ ಹಾಡನ್ನು ನಾನು ಕೂಡ ಒಪ್ಪುತ್ತೇನೆ. ಆದರೆ ಏಳು ಕೆರೆ ನೀರು ಕುಡಿದು ಬಂದು ಆ ಹಾಡು ಹಾಡಿದರೆ ಅದು ನಮ್ಮ ಅನುಭವದ ಹಾಡಾಗುತ್ತದೆ. ಭಾವಿಯ ಕಪ್ಪೆಯ ಹಾಗೆ ನನ್ನದೇ ದೊಡ್ಡ ಭಾವಿ ಎನ್ನುವದಕ್ಕಿಂತ, ಬೇರೆ ಭಾವಿ ಒಮ್ಮೆಯಾದರೂ ನೋಡಿ ಬರುವುದೇ ಲೇಸು ಎನ್ನುವುದು ನನ್ನ ಅಭಿಪ್ರಾಯ. ಸ್ವಲ್ಪವಾದರೂ ಅಲೆಮಾರಿತನ ನಮ್ಮಲ್ಲಿ ಹೊಸತನ ತರುತ್ತದೆ. ಈ ಕೊರೊನ ಕಾಟ ಮುಗಿದ ಮೇಲೆ, ಇದುವರೆಗೆ ಹೋಗಿರದ ಜಾಗಕ್ಕೆ ಹೋಗಿ ಬರೋಣ ಎನ್ನುವ ವಿಚಾರದಲ್ಲಿದ್ದೇನೆ. ನೀವೆಲ್ಲಿಗೆ ಹೋಗುವ ಯೋಜನೆ ಹಾಕಿದ್ದೀರಿ?