ಸುಮಾರು ಹತ್ತು ವರ್ಷಗಳ ಹಿಂದೆ ಅಮೆರಿಕೆಯ ಸಾಂಟಾ ಕ್ಲಾರಾ ಪಟ್ಟಣದಲ್ಲಿ 'ಕ್ವಾಲಿಟಿ ಇನ್' ಎಂಬ ಹೋಟೆಲಿನಲ್ಲಿ ಸುಮಾರು ಎರಡು ತಿಂಗಳುಗಳು ಉಳಿದುಕೊಂಡಿದ್ದೆ. ಜೊತೆಗಿದ್ದ ಸಹೋದ್ಯೋಗಿಗಳು ಒಂದೆರಡು ವಾರದಲ್ಲಿ ವಾಪಸ್ಸು ಹೊರಟು ಬಿಟ್ಟರು. ನಾನು ಒಬ್ಬಂಟಿಯಾಗಿ ಹಲವು ವಾರ ಕಳೆಯಬೇಕಾದ ಅಗತ್ಯ ನನಗಿತ್ತು. ಚಳಿಗಾಲದ ಆ ಸಮಯದಲ್ಲಿ ಪ್ರವಾಸಿಗರು ತುಂಬಾ ಕಡಿಮೆ ಇದ್ದರು. ಇಡೀ ಹೋಟೆಲಿನಲ್ಲಿ ಒಂದೆರಡು ರೂಮುಗಳನ್ನು ಬಿಟ್ಟರೆ ಉಳಿದವೆಲ್ಲ ಖಾಲಿ ಖಾಲಿ. ಹಗಲು ಹೊತ್ತಿನಲ್ಲಿ ಆಫೀಸ್ ನಲ್ಲಿ ಹೊತ್ತು ಕಳೆದದ್ದು ಗೊತ್ತಾಗುತ್ತಿರಲಿಲ್ಲ. ಆದರೆ ಸಾಯಂಕಾಲಗಳು ಮತ್ತು ವಾರಾಂತ್ಯದಲ್ಲಿ ಏನು ಮಾಡುವುದು? ತೆಗೆದುಕೊಂಡು ಹೋಗಿದ್ದ ಪುಸ್ತಕಗಳೆನ್ನೆಲ್ಲ ಓದಿ ಮುಗಿಸಿ ಆಯಿತು. ಹತ್ತಿರವಿದ್ದ ಶಾಪಿಂಗ್ ಸೆಂಟರ್ ಗಳೆನ್ನೆಲ್ಲ ಸುತ್ತಿದ್ದಾಯಿತು. ಆದರೂ ಬೇಸರ ಕಳೆಯಲೊಲ್ಲದು.
ಒಂದು ಸಾಯಂಕಾಲ ಹೋಟೆಲ್ ಗೆ ಮರಳಿದಾಗ, ಹೋಟೆಲ್ ನ ಮಾಲೀಕ ತನ್ನ ಆಫೀಸ್ ನ ಹೊರಗೆ ನಿಂತು ನನಗೆ ಒಳ ಬರುವಂತೆ ಆಹ್ವಾನಿಸಿದ. ಸುಮಾರು ಎಪ್ಪತ್ತು ವರುಷ ಮೀರಿದ, ಧಡೂತಿ ದೇಹದ, ದಕ್ಷಿಣ ಕೊರಿಯಾ ಮೂಲದ ವ್ಯಕ್ತಿ ಆತ. ತುಂಬಾ ಮಿತ ಭಾಷಿಯಾದ ಆತ ನನ್ನನ್ನು ಮಾತನಾಡಿಸಿದ್ದು ನನಗೆ ಆಶ್ಚರ್ಯ ಮತ್ತು ಸಂತೋಷ ಒಟ್ಟಿಗೆ ಆಯಿತು. ಹೃದಯ ಬೇನೆಯಿಂದ ಬಳಲುತ್ತಿದ್ದ ಆತ ತುಂಬಾ ಪ್ರಯಾಸ ಪಟ್ಟು, ಹರುಕು-ಮುರುಕು ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದ. ಆತನ ಹೆಸರು ಯುವಾನ್ ಎಂದು ತಿಳಿಯಿತು. ಆದರೆ ಆತನ ಉಳಿದ ಮಾತುಗಳು ನನಗೆ ಅರ್ಥ ಆಗುತ್ತಿರಲಿಲ್ಲ. ಆತನ ಜೊತೆ ಮಾತನಾಡುತ್ತ ನಾನು ಯಾವುದೊ ಸಂಬಂಧ ಇಲ್ಲದ ಪ್ರಶ್ನೆಗಳನ್ನು ಕೇಳಿದೆ. ಆತ ಅದಕ್ಕೆ ಅರ್ಥವಾಗದಂತೆ ಉತ್ತರ ಕೊಟ್ಟ. ನಮ್ಮ ಮಾತುಕತೆ ಅಸಮರ್ಪಕ ಆಗಿದ್ದರೂ, ನಾನು ಸಮಾಧಾನದಿಂದ ಆತನ ಮಾತುಗಳನ್ನು ಕೇಳಿಸಿಕೊಳ್ಳುವುದು ಆತನಿಗೆ ಇಷ್ಟವಾಗಿ ಹೋಯಿತು. ಆ ರಾತ್ರಿ ನನ್ನ ರೂಮಿಗೆ ಹಣ್ಣಿನ ಬುಟ್ಟಿ ಕಳುಹಿಸಿಕೊಟ್ಟ.
ದಿನ ಸಾಯಂಕಾಲ ನಾನು ಬರುವುದನ್ನು ಎದುರು ನೋಡುತ್ತಾ ಆತ ನನ್ನನು ಪ್ರತಿ ದಿನ ಮಾತನಾಡಿಸಲಾರಂಭಿಸಿದ. ನನಗೆ ಕ್ರಮೇಣ ಆತನ ಮಾತುಗಳು ಅರ್ಥ ಆಗಲಾರಂಭಿಸಿದವು. ನಮ್ಮ ಪರಿಚಯ ಸ್ನೇಹಕ್ಕೆ ತಿರುಗಿತು. ಉಳಿದೆಲ್ಲ ಭಾರತೀಯರು ತುಂಬಾ ಗಲಾಟೆ ಹಾಕುತ್ತಾರೆ ಆದರೆ ನಾನು ಹಾಗಲ್ಲ ಎಂದು ತಿಳಿಸಿದ. ತನ್ನ ಕುಟುಂಬದ, ಆರೋಗ್ಯದ ಸಮಸ್ಯೆಗಳನ್ನು ನನ್ನ ಹತ್ತಿರ ಹೇಳುತ್ತಿದ್ದ. ಒಬ್ಬನೇ ಇದ್ದು ಬೇಜಾರಾಗಿ ಹೋಗಿದ್ದ ನಾನು ಸುಮ್ಮನೆ ಹೂಂ ಗುಡುತ್ತ, ಆಗೊಮ್ಮೆ ಈಗೊಮ್ಮೆ ನನಗೆ ತಿಳಿದದ್ದು ಹೇಳುತ್ತಾ ಹೋಗುತ್ತಿದ್ದೆ. ಅಷ್ಟರಲ್ಲಿ ನಾನು ಭಾರತಕ್ಕೆ ವಾಪಸ್ಸಾಗುವ ದಿನ ಬಂದೇ ಬಿಟ್ಟಿತು. ಅಂದು ಆತ ನನಗೆ ಊಟಕ್ಕೆ ಎಂದು ತನಗೆ ಇಷ್ಟವಾದ ಕಡೆ ಕರೆದುಕೊಂಡು ಹೋದ. ದಕ್ಷಿಣ ಕೊರಿಯಾದ ಆ ರೆಸ್ಟಾರಂಟ್ ನಲ್ಲಿ ಸಸ್ಯಾಹಾರಿ ತಿಂಡಿ ಯಾವುದೂ ಇರಲಿಲ್ಲ. ಕೊನೆಗೆ ಅಡುಗೆ ಮನೆಯಿಂದ ಬಾಣಸಿಗನನ್ನು ಕರೆದು ಅವರ ಭಾಷೆಯಲ್ಲಿ ಏನೋ ಹೇಳಿದ. ಅನ್ನಕ್ಕೆ ಮೊಟ್ಟೆ ಸೇರಿಸಿ ಮಾಡಿದ ಒಂದು ವಿಚಿತ್ರ ಬಗೆಯ ಭಕ್ಷ್ಯ ನನಗಾಗಿ ತಯಾರಾಗಿ ಬಂತು. ಮತ್ತೆ ಉಳಿದುಕೊಂಡಿದ್ದ ಹೋಟೆಲಿಗೆ ವಾಪಸ್ಸು ಕರೆ ತಂದು, ಇನ್ನೊಂದು ಸಲ ಬಂದಾಗ ಬಂದು ಕಾಣು ಎಂದು ಹೇಳಿ, ಕೊನೆಯ ದಿನದ ಹೋಟೆಲಿನ ಚಾರ್ಜ್ ತೆಗೆದುಕೊಳ್ಳದೆ ನನ್ನನ್ನು ಬೀಳ್ಕೊಟ್ಟ.
ಒಂದೆರಡು ವರ್ಷದ ನಂತರ ನಾನು ಅಲ್ಲಿಗೆ ಹೋದಾಗ ಬೇರೆ ಹೋಟೆಲಿನಲ್ಲಿ ಉಳಿದುಕೊಂಡರೂ, ಆತನನ್ನು ಭೇಟಿಯಾಗಲು ಹೋದೆ. ಅನಾರೋಗ್ಯದ ಕಾರಣ ಆತ ಹೋಟೆಲಿಗೆ ಬರುತ್ತಿಲ್ಲ, ಆತನ ಮಕ್ಕಳು ಹೋಟೆಲ್ ನಡೆಸುತ್ತಾರೆ ಎಂದು ತಿಳಿಯಿತು. ನಮ್ಮ ಅನೀರೀಕ್ಷಿತ ಸ್ನೇಹಕ್ಕೆ ಅಲ್ಲಿಗೆ ತೆರೆ ಬಿದ್ದಿತು.
No comments:
Post a Comment