"ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು" ಎಂದು ಗಾದೆ ಮಾತು ಇದೆಯಲ್ಲ. ಅದು ೨೦೦೯ ರ ಸಮಯ. ನಮ್ಮೂರಾದ ಮಸ್ಕಿಯಲ್ಲಿ ಮನೆ ಕಟ್ಟಿ, ಅದೇ ಮನೆಯಲ್ಲಿ ನಾನು ಮದುವೆಯಾಗ ಹೊರಟಿದ್ದೆ. ಮನೆ ಕಟ್ಟಲು ಸ್ನೇಹಿತರ ಸಹಾಯವಿತ್ತಾದರೂ, ಅವರು ನನಗಿಂತ ತುಂಬಾ ಅನುಭವಸ್ಥರೆನಿದ್ದಿಲ್ಲ. ಕಳ್ಳ ಸುಳ್ಳರೇ ತುಂಬಿರುವ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ, ಸುಣ್ಣಕ್ಕೂ ಬೆಣ್ಣೆಗೂ ವ್ಯತ್ಯಾಸ ತಿಳಿಯದ ನನಗೆ ಹೊಸ ಜಗತ್ತಿನ ಪಾಠಗಳ ಅನಾವರಣ ಆಗುತ್ತಲಿತ್ತು. ಒಪ್ಪಿಕೊಂಡು ಕೆಲಸಕ್ಕೆ ಬಂದ ಗಾರೆ ಕೆಲಸದವರು ಕೆಲಸದ ಅರ್ಧದಲ್ಲೇ ಕಣ್ಮರೆಯಾಗಿ ಬಿಡುತ್ತಿದ್ದರು. ಮತ್ತೆ ಅವರನ್ನು ನಾನು ಹುಡುಕಿ ತಂದು ಕೆಲಸಕ್ಕೆ ಹಚ್ಚಿದರೆ, ಕೆಲ ದಿನಗಳಲ್ಲಿ ಅವರು ಮತ್ತೆ ಕಣ್ಮರೆ. ಹೊಸಬರನ್ನು ಕೆಲಸಕ್ಕೆ ತಂದರೆ, ಹಳಬರು ಬಂದು ತಕರಾರು ತೆಗೆಯುತ್ತಿದ್ದರು. ನನ್ನ ಅನನುಭವದ ಜೊತೆಗೆ, ಶತ್ರುಗಳ ಕೈವಾಡವೂ ಸೇರಿ ಮನೆ ಕೆಲಸ ಮುಂದುವರೆಸುವುದು ಕಗ್ಗಂಟಾಗಿತ್ತು.
ಆ ಸಂದರ್ಭದಲ್ಲಿ ನನಗೆ ಭೇಟಿಯಾದವನೇ ರಮೇಶ. ಜನ ಅವನನ್ನು ಕರಾಟೆ ರಮೇಶ ಎನ್ನುತ್ತಿದ್ದರು. ಚಿಕ್ಕ ಮಕ್ಕಳಿಗೆ ಕರಾಟೆ ಹೇಳಿಕೊಡುತ್ತಿದ್ದ ಅವನಿಗೆ ಅದು ಹೊಟ್ಟೆ ತುಂಬಿಸದೆ, ತನ್ನ ಕುಲ ಕಸುಬಾದ ಗಾರೆ ಕೆಲಸಕ್ಕೆ ಇಳಿದಿದ್ದ. ಅವನು ಅರ್ಧಕ್ಕೆ ನಿಂತ ನನ್ನ ಮನೆ ಕೆಲಸವನ್ನು ಕೈಗತ್ತಿಕೊಂಡ. ಹಳಬರು ನನ್ನ ಜೊತೆ ತಕರಾರಿಗೆ ಬಂದು, ದೈಹಿಕ ಘರ್ಷಣೆಯ ಮಟ್ಟಕ್ಕೆ ಇಳಿದಾಗ ಈ ರಮೇಶ ನನ್ನ ನೆರವಿಗೆ ಧಾವಿಸಿ ಬಂದ. ಬಂದವರು ಕೈ ಕೈ ಹಿಸುಕಿಕೊಂಡು ಏನು ಮಾಡಲಾಗದೆ ಹಿಂತಿರುಗಿದರು. ಇನ್ನೊಂದು ದಿನ, ಈ ರಮೇಶನನ್ನು ನನ್ನ ಜೊತೆ ಹೋಟೆಲ್ ಒಂದಕ್ಕೆ ತಿಂಡಿಗೆ ಎಂದು ಕರೆದುಕೊಂಡು ಹೋಗಿದ್ದೆ. ಅಲ್ಲಿ ಅವಸರದಲ್ಲಿ ಆಫೀಸ್ ನವರು ನನಗೆ ಕೊಟ್ಟಿದ್ದ ದುಬಾರಿಯಾದ 'ಬ್ಲಾಕ್ ಬೆರಿ' ಫೋನ್ ಬೀಳಿಸಿಕೊಂಡು ಬಿಟ್ಟಿದ್ದೆ. ಅದನ್ನು ಬೇರೆಯವರು ತೆಗೆದುಕೊಂಡು ಆ ಕ್ಷಣವೇ ಅಲ್ಲಿಂದ ಪರಾರಿಯಾಗಿದ್ದರು. ಇದನ್ನೆಲ್ಲಾ ದೂರದಿಂದ ಗಮನಿಸಿದ್ದ ರಮೇಶ ಅವರ ಬೆನ್ನತ್ತಿ, ನನ್ನ ಫೋನ್ ವಾಪಸ್ಸು ತಂದಾಗ ನನಗೆ ಹೋದ ಜೀವ ಬಂದಂತಾಗಿತ್ತು. ನಾನು ನನ್ನ ಮನೆಯ ಕೆಲಸದ ಹೆಚ್ಚಿನ ಜವಾಬ್ದಾರಿ ಅವನಿಗೆ ಹೊರಿಸಿ, ಅವನು ಹೆಚ್ಚು ದುಡಿಯುವಂತೆ ನೋಡಿಕೊಂಡೆ. ಮುಗಿಸಲು ಸಾಧ್ಯವೇ ಎಂದುಕೊಂಡಿದ್ದ ಮನೆ ಕೆಲಸ ಕೆಲವು ತಿಂಗಳುಗಳಲ್ಲಿ ಮುಗಿದೇ ಹೋಯಿತು. ಗೃಹ ಪ್ರವೇಶದ ಪೂಜೆಗೆ, ರಮೇಶನಿಗೆ ಅವನಿಷ್ಟದ ಜೀನ್ಸ್ ಪ್ಯಾಂಟ್, ಜಾಕೆಟ್ ಕೊಡಿಸಿ ನಾನು ಸಂತಸ ಪಟ್ಟಿದ್ದೆ.
ಎಲ್ಲಿಯಾದರೂ ಹೊಸ ಕೆಲಸ ಕೊಡಿಸುವಂತೆ ನನಗೆ ರಮೇಶ ಗಂಟು ಬಿದ್ದಿದ್ದ. ಆದರೆ ಅಷ್ಟೇನೂ ಕೌಶಲ್ಯತೆ ಇಲ್ಲದ ಅವನಿಗೆ ಹೆಚ್ಚಿನ ಕೆಲಸ ದೊರಕುತ್ತಿದ್ದಿಲ್ಲ. ಆಗೊಮ್ಮೆ, ಈಗೊಮ್ಮೆ ಅನಿವಾರ್ಯ ಸಮಯದಲ್ಲಿ ನನ್ನ ಹತ್ತಿರ ದುಡ್ಡು ಕೇಳಿ ಪಡೆಯುತ್ತಿದ್ದ. ದುಡ್ಡಿನ ವಿಷಯದಲ್ಲಿ ಅವನು ಹೆಸರು ಕೆಡಿಸಿಕೊಂಡಿದ್ದಾನೆ ಎಂದು ನನಗೆ ಸ್ನೇಹಿತನೊಬ್ಬ ತಿಳಿಸಿದ್ದ. ಇದರ ನಡುವೆ ಅವನು ಕುಡಿಯುವುದು ಅತಿಯಾಗಿತ್ತು. ರಾತ್ರಿ ಕುಡಿದು ಫೋನ್ ಮಾಡಿ ನನ್ನ ಹತ್ತಿರ ಬೈಸಿಕೊಂಡಿದ್ದ. ನನ್ನ ಜಗತ್ತು ಮತ್ತು ಸಮಸ್ಯೆಗಳು ಕೂಡ ಬೇರೆಯಾಗಲಾರಂಭಿಸದ್ದವು. ಕೆಲ ವರ್ಷಗಳಿಗೆ ನನ್ನ ಮತ್ತು ರಮೇಶನ ಸಂಪರ್ಕ ಕಡಿದೇ ಹೋಯಿತು.
ಮೊನ್ನೆ ಊರಿಗೆ ಹೋದಾಗ ರಮೇಶನ ಬಗ್ಗೆ ವಿಚಾರಿಸಿದೆ. ಅವನು ಕೋವಿಡ್ ಸಮಸ್ಯೆಯಲ್ಲಿ ತೀರಿ ಹೋದ ಎಂದು ತಿಳಿಯಿತು. ಅವನಿಗೆ ಇತರ ಅನಾರೋಗ್ಯ ಇತ್ತು ಎಂದು ಕೂಡ ತಿಳಿಸಿದರು. ಕೆಲ ತಿಂಗಳುಗಳ ಹಿಂದೆ ನಮ್ಮ ಮನೆಯ ಒಂದು ಚಿಕ್ಕ ಕೆಲಸ ಮಾಡಿಕೊಟ್ಟು ಹೋಗಿದ್ದ. ಅಷ್ಟೊತ್ತಿಗೆ ಆಗಲೇ ಅವನಲ್ಲಿ ಅನಾರೋಗ್ಯ ಮನೆ ಮಾಡಿತ್ತು. ಒಂದು ಸಲ ಭೇಟಿಯಾದರೆ ಆಯಿತು ಎಂದು ನಾನು ಅಂದುಕೊಳ್ಳುವಷ್ಟರಲ್ಲಿ ಅವನು ಲೋಕವನ್ನೇ ತ್ಯಜಿಸಿದ್ದ.
ಅಂತಹ ಹೇಳಿಕೊಳ್ಳುವಂತ ಕೆಲಸಗಾರ ಅವನಾಗಿರಲಿಲ್ಲ. ಹಾಗಾಗಿ ನನ್ನ ಊರಿನಲ್ಲಿ ಮತ್ತು ನನ್ನ ಸ್ನೇಹಿತರಲ್ಲಿ ಅವನಿಗೆ ಯಾವ ವಿಶೇಷ ಸ್ಥಾನವು ಇರಲಿಲ್ಲ. ಆದರೆ ಬುದ್ಧಿ ತಿಳಿಯದ ಸಮಯದಲ್ಲಿ, ನನಗೆ ಆಸರೆಯಾಗಿ ನಿಂತಿದ್ದ. ಅಸಹಾಯಕ ಪರಿಸ್ಥಿತಿಯಲ್ಲಿ, ನನ್ನ ಕೈ ಬಲ ಪಡಿಸಿದ್ದ. ಅವನ ಸಾವಿನ ಸುದ್ದಿ ನೆರವಾದವರು ಕಣ್ಮರೆಯಾದಾಗ ಹುಟ್ಟಿಸುವ ವಿಷಾದವನ್ನು ನನ್ನಲ್ಲಿ ಕೂಡ ಹುಟ್ಟಿಸಿ ಹೋಯಿತು.
No comments:
Post a Comment