Saturday, March 12, 2022

ಕಥೆ: ವಜ್ರದ ಹಾರ

ಲಕ್ಷ್ಮಿ ರೂಪ-ಲಾವಣ್ಯಗಳಲ್ಲಿ ಯಾರಿಗೂ ಕಡಿಮೆ ಇರಲಿಲ್ಲ. ಆದರೆ ಬರೀ ಆಕರ್ಷಕವಾಗಿದ್ದರೆ ಏನು ಉಪಯೋಗ, ಅವಳ ಹೆಸರಿನಲ್ಲಿದ್ದ ಲಕ್ಷ್ಮಿ ಅವಳ ಕುಟುಂಬಕ್ಕೆ ಒಲಿದಿರಲಿಲ್ಲ. ಅವಳ ಮದುವೆ ಒಬ್ಬ ಸಾಮಾನ್ಯ ದರ್ಜೆಯ, ಗುಮಾಸ್ತೆ ಕೆಲಸದಲ್ಲಿದ್ದ ಅನಂತನೊಂದಿಗೆ ನಡೆದು ಹೋಯಿತು. ಲಕ್ಷ್ಮಿಯ ಅಭಿರುಚಿಗಳು ತುಂಬಾ ಸರಳ ಎನ್ನುವಂತೆ ಇದ್ದವು ಏಕೆಂದರೆ ಅವಳಿಗೆ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುವ ತಾಕತ್ತು ಎಲ್ಲಿತ್ತು? ಅವಳಿಗೆ ತನಗೆ ಸರಿ ಸಮ ಅಲ್ಲದ ಬಡವನಾದ ಗಂಡ ಸಿಕ್ಕ ಕೊರಗು ಬೇಕಾದಷ್ಟಿತ್ತು. ಆದರೆ ಐಷಾರಾಮಿ ಜೀವನದ ಆಸೆ ಬಿಟ್ಟು ಹೋಗಲೊಲ್ಲದು. ಅವಳಿಗೆ ತನ್ನ ಮನೆಯ ಬಣ್ಣ ಕಾಣದ ಗೋಡೆಗಳು, ಸವಕಲಾದ ಖುರ್ಚಿಗಳು, ಸಂಪೂರ್ಣ ಮಾಸಿ ಹೋದ ಕಿಟಕಿಯ ಪರದೆಗಳು ನೋಡಿದಾಗಲೆಲ್ಲ ಅವಳಲ್ಲಿ ಜಿಗುಪ್ಸೆ ಹುಟ್ಟಿಸುತ್ತಿದ್ದವು.  ಅವುಗಳ ಬದಲು ವಿಶಾಲವಾದ ಮನೆ, ಅಂದದ ಪೀಠೋಪಕರಣಗಳು, ಊಟಕ್ಕೆ ವಿವಿಧ ಭಗೆಯ ಭಕ್ಷ್ಯಗಳು ಇದ್ದರೆ ತನ್ನನ್ನು ಭೇಟಿಯಾಗ ಬಂದ ಸ್ನೇಹಿತರು ತನ್ನ ಅದೃಷ್ಟವನ್ನು ಹಾಡಿ ಹೊಗಳುತ್ತಿದ್ದರು ಎಂದು ಮನಸ್ಸಿನಲ್ಲೇ ಅಂದುಕೊಳ್ಳುವಳು. ಆದರೆ ವಾಸ್ತವದಲ್ಲಿ ಅವಳಿಗೆ ಉಡಲು ಒಳ್ಳೆಯ ಬಟ್ಟೆಗಳಿರಲಿಲ್ಲ. ಇನ್ನು ಬಂಗಾರದ ಆಭರಣಗಳು ದೂರದ ಮಾತೇ ಸರಿ.


ಒಂದು ಸಂಜೆ ಅವಳ ಗಂಡ ಮನೆಗೆ ಬಂದು ಅವಳ ಕೈಯಲ್ಲಿ ಒಂದು ದಪ್ಪನೆಯ ಕವರ್ ಕೊಟ್ಟು, 'ನೋಡು, ಇದು ನಿನಗಾಗಿ' ಎಂದು ಹೇಳಿದ. ಅವಳು ಆ ಕವರ್ ತೆಗೆದು ನೋಡಿದರೆ ಅದು ಆ ಊರಿನಲ್ಲಿ ನಡೆಯುತ್ತಿರುವ ಶ್ರೀಮಂತರ ಪಾರ್ಟಿಯ ಆಮಂತ್ರಣ ಪಾತ್ರ. ಅವಳ ಗಂಡ ಊಹಿಸಿದ ಹಾಗೆ ಅದು ಲಕ್ಷ್ಮಿಗೆ ಸಂತೋಷ ತರಲಿಲ್ಲ. ಬದಲಿಗೆ ಅದನ್ನು ಬಿಸಾಕಿ 'ಇದನ್ನು ತೆಗೆದುಕೊಂಡು ನಾನೇನು ಮಾಡಬೇಕು?' ಎಂದು ಗಂಡನನ್ನು ಪ್ರಶ್ನಿಸಿದಳು. ಅವಳ ಗಂಡ ಅದಕ್ಕೆ ಉತ್ತರವಾಗಿ 'ಇದು ನಿನಗೆ ಸಂತೋಷ ತರುತ್ತೆ ಎಂದು ಭಾವಿಸಿದ್ದೆ. ಅಲ್ಲಿ ಊರಿನ ದೊಡ್ಡ ಜನರೆಲ್ಲಾ ಸೇರಿರುತ್ತಾರೆ. ಇದರ ಆಮಂತ್ರಣ ಸಿಗುವುದು ಕೆಲವೇ ಜನರಿಗೆ. ಅದರಲ್ಲೂ ಗುಮಾಸ್ತರಿಗೆ ಇದರ ಆಮಂತ್ರಣ ಸಿಗುವುದು ಕಷ್ಟ'. 


'ಅಂತಹ ದೊಡ್ಡ ಪಾರ್ಟಿಗೆ ನಾನೇನು ಉಟ್ಟುಕೊಂಡು ಹೋಗಬೇಕು?' ಎಂದು ಕಣ್ಣಲ್ಲಿ ಬೆಂಕಿ ಸೂಸುತ್ತಾ ಗಂಡನನ್ನು ಪ್ರಶ್ನಿಸಿದಳು ಲಕ್ಷ್ಮಿ. 


ಅವನ ಗಂಡ ಇದರ ಬಗ್ಗೆ ವಿಚಾರ ಮಾಡಿರಲಿಲ್ಲವಾದ್ದರಿಂದ ಸ್ವಲ್ಪ ತಡವರಿಸಿದ. 'ದೇವಸ್ಥಾನಕ್ಕೆ  ಹೋದಾಗ ಉಟ್ಟುಕೊಂಡು ಹೋಗುತ್ತೀಯಲ್ಲ, ಅದು ನಿನಗೆ ಚೆನ್ನಾಗಿ ಕಾಣುತ್ತೆ' ಎಂದು ತನ್ನ ಅಭಿಪ್ರಾಯ ಹೇಳಿದ. ಅವನ ಮಾತು ಮುಗಿಯುವ ಮುಂಚೆಯೇ ತನ್ನ ಪತ್ನಿಯ ಎರಡು ಕಣ್ಣಲ್ಲಿ ದೊಡ್ಡ ದೊಡ್ಡ ಹನಿಗಳು ಉದುರುವುದನ್ನು ನೋಡಿ ಗಾಬರಿಯಾಗಿ, 'ಏಕೆ? ಏನಾಯಿತು?' ಎಂದು ಕೇಳಿದ.


ಅವಳು ತನ್ನ ಕೆನ್ನೆಯ ಮೇಲಿನ ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದಳು 'ಇಂತಹ ಪಾರ್ಟಿಗೆ ಒಪ್ಪುವ ಸೀರೆ ನನ್ನಲ್ಲಿ ಇಲ್ಲ. ನೀವು ಈ ಆಮಂತ್ರಣ ಪತ್ರಿಕೆ ನಿಮ್ಮ ಸ್ನೇಹಿತರಿಗೆ ಯಾರಿಗಾದರೂ ಕೊಟ್ಟು ಬಿಡಿ. ಅವರ ಹೆಂಡತಿಯರಿಗೆ ಉಡಲು ಒಳ್ಳೆಯ ಬಟ್ಟೆಗಳಿದ್ದರೆ ಅವರು ಪಾರ್ಟಿಗೆ ಹೋಗಿ ಸಂತೋಷ ಪಡುತ್ತಾರೆ' ಎಂದು ಹೇಳಿದಳು.

 

ಅನಂತನ ಹೃದಯ ಒಡೆದು ಹೋದರೂ, ಹೆಂಡತಿಯನ್ನು ಒಪ್ಪಿಸುವ ಪ್ರಯತ್ನಕ್ಕಾಗಿ 'ಅಂತಹ ಸೀರೆ ಎಷ್ಟು ಬೆಲೆ ಬಾಳಬಹುದು?' ಎಂದು ಕೇಳಿದ.


ಸ್ವಲ್ಪ ಹೊತ್ತು ವಿಚಾರ ಮಾಡಿದ ಲಕ್ಷ್ಮಿ ಹೇಳಿದಳು 'ನನಗೆ ಬೆಲೆ ಸರಿಯಾಗಿ ಗೊತ್ತಿಲ್ಲ. ಆದರೆ ಕನಿಷ್ಠ ನಾಲ್ಕು ಸಾವಿರ ಆದರೂ ಆಗುತ್ತೆ'


ಗುಮಾಸ್ತೆಯಾಗಿ ಲೆಕ್ಕಾಚಾರದಲ್ಲಿ ಪಳಗಿದ್ದ ಅನಂತ ಅವಸರಕ್ಕೆ ಮನೆ ಖರ್ಚಿಗೆ ಇರಲಿ ಎಂದು ಎತ್ತಿಟ್ಟಿದ್ದ ನಾಲ್ಕು ಸಾವಿರ ರೂಪಾಯಿಗಳನ್ನು ಇದಕ್ಕೆ ಬಳಸಿದರಾಯಿತು ಎಂದು ತೀರ್ಮಾನಿಸಿದ. 


ಪಾರ್ಟಿಯ ದಿನ ಹತ್ತಿರ ಬಂದಿತು. ಲಕ್ಷ್ಮಿಯ ಭರ್ಜರಿ ಸೀರೆಯೂ ಅಷ್ಟರಲ್ಲಿ ಮನೆಗೆ ಬಂದಿತ್ತು. ಆದರೂ ಅವಳ ಮುಖದಲ್ಲಿ ಆತಂಕ. ಅದನ್ನು ಗಮನಿಸಿ ಅವಳ ಗಂಡ ಕೇಳಿಯೇ ಬಿಟ್ಟ 'ನಿನಗೆ ಇನ್ನೂ ಸಮಾಧಾನ ಇಲ್ಲವೇನು?' ಅದಕ್ಕೆ ಅವಳು ಉತ್ತರಿಸಿದಳು 'ನನಗೆ ಧರಿಸಲು ಯಾವ ಒಡವೆಯೂ ಇಲ್ಲ. ಬರೀ ಕೊರಳಲ್ಲಿ ನಾನು ಪಾರ್ಟಿಗೆ ಹೇಗೆ ಬರಲಿ?'


ಇಪ್ಪತ್ತು ರೂಪಾಯಿ ಖರ್ಚು ಮಾಡಿ ಹೂವು ಮುಡಿದುಕೊಂಡರೆ ಅವಳು ಆಕರ್ಷಕವಾಗಿ ಕಾಣುತ್ತಾಳೆ ಎನ್ನುವ ಗಂಡನ ಅಭಿಪ್ರಾಯವನ್ನು ಲಕ್ಷ್ಮಿ ಸಾರಾ ಸಗಟಾಗಿ ತಿರಸ್ಕರಿಸಿದಳು. 'ಶ್ರೀಮಂತರ ನಡುವೆ ನೀವು ನನ್ನ ಮರ್ಯಾದೆ ತೆಗೆದಿಡುತ್ತಿರಿ' ಎಂದು ಕ್ಯಾತೆ ತೆಗೆದಳು. ಕೊನೆಗೆ ಅವಳ ಶ್ರೀಮಂತ ಸ್ನೇಹಿತೆ ಕಮಾಲಾಳಿಂದ ಒಂದು ಒಡವೆಯನ್ನು ಒಂದು ದಿನದ ಮಟ್ಟಿಗೆ ಕೇಳಿ ತಂದರಾಯಿತು ಎನ್ನುವ ಅಭಿಪ್ರಾಯಕ್ಕೆ ಬಂದರು.


ಅಪರೂಪಕ್ಕೆ ಮನೆಗೆ ಬಂದ ಸ್ನೇಹಿತೆ ಲಕ್ಷ್ಮಿಯನ್ನು ಆದರದಿಂದ ಸ್ವಾಗತಿಸಿದಳು ಕಮಲಾ. ನಾಲ್ಕಾರು ಆಭರಣಗಳನ್ನು ಅವಳ ಮುಂದಿರಿಸಿ ಅವಳಿಗೆ ಒಪ್ಪಿಗೆಯಾದದ್ದು ತೆಗೆದುಕೊಳ್ಳುವಂತೆ ಸೂಚಿಸಿದಳು. ಮುತ್ತಿನ ಸರಗಳು, ಬಂಗಾರದ ನೆಕ್ಲೆಸ್, ಸೂಕ್ಷ್ಮ ಕುಸುರಿ ಕೆಲಸದ ಹಾರಗಳು ತನ್ನ ಕುತ್ತಿಗೆಗೆ ಧರಿಸಿ, ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಲಕ್ಷ್ಮಿ 'ಬೇರೆ ಯಾವುದಾದರೂ ಇದೆಯೇ?' ಎಂದು ಸ್ನೇಹಿತೆಗೆ ಕೇಳಿದಳು. 'ನೀನೆ ನೋಡಿಕೋ' ಎಂದು ಆಭರಣ ಪೆಟ್ಟಿಗೆ ಅವಳ ಮುಂದಿರಿಸಿ ಹೇಳಿದಳು ಕಮಲಾ. ಅದರಲ್ಲಿ ನೋಡುತ್ತಿರುವಾಗ ಕಪ್ಪು ಬಣ್ಣದ ಸ್ಯಾಟಿನ್ ಬಟ್ಟೆಯ ಪೆಟ್ಟಿಗೆಯಲ್ಲಿದ್ದ ವಜ್ರದ ನೆಕ್ಲೆಸ್ ಲಕ್ಷ್ಮಿಗೆ ಇಷ್ಟವಾಗಿ ಹೋಯಿತು. ಅದನ್ನು ಧರಿಸಿ ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡಾಗ ಲಕ್ಷ್ಮಿಗೆ ಹರುಷದಿಂದ ಭಾವೋತ್ಕರ್ಷ ಉಂಟಾಯಿತು. ತನ್ನ ಸ್ನೇಹಿತೆಗೆ ಕೇಳಿದಳು 'ಇದೊಂದನ್ನು ಕೊಡು. ಸಾಕು'. ಅವಳ ಸ್ನೇಹಿತೆ ಉತ್ತರಿಸಿದಳು 'ಹಾಗೆಯೇ ಆಗಲಿ'.


ಪಾರ್ಟಿಯ ದಿನ ಬಂದೆ ಬಿಟ್ಟಿತು. ಹಾಗೆಯೇ ಲಕ್ಷ್ಮಿಯ ಪ್ರಯತ್ನಗಳು ಯಶಸ್ಸು ತಂದು ಕೊಟ್ಟವು. ಪಾರ್ಟಿಯಲ್ಲಿ ಶ್ರೀಮಂತ ಹೆಂಗಸರ ನಡುವೆ, ಲಕ್ಷ್ಮಿಯೇ ದೊಡ್ಡ ಆಕರ್ಷಣೆ ಆಗಿಬಿಟ್ಟಳು. ಅವಳ ಸಹಜ ಸೌಂದರ್ಯಕ್ಕೆ ಅವಳ ಉಟ್ಟ ಸೀರೆ, ಧರಿಸಿದ ವಜ್ರದ ನೆಕ್ಲೆಸ್ ಇನ್ನೂ ಹೆಚ್ಚಿನ ಮೆರಗು ತಂದು ಕೊಟ್ಟವು.  ಪಾರ್ಟಿಗೆ ಬಂದ ಹೆಣ್ಣು ಮಕ್ಕಳು ಅವಳ ಹೆಸರೇನು ಎಂದು ಕೇಳಿ ತಿಳಿದುಕೊಂಡರು. ಗಂಡಸರು ಅವಳನ್ನು ದಿಟ್ಟಿಸಿ ನೋಡಿದರು. ದೊಡ್ಡ ದೊಡ್ಡ ಶ್ರೀಮಂತರು ಅವಳನ್ನು ಮುಗುಳ್ನಗೆಯೊಂದಿಗೆ ಮಾತನಾಡಿಸಿದರು. 


ಪಾರ್ಟಿ ಮುಗಿದ ಮೇಲೆ ಒಂದು ಆಟೋ ಹಿಡಿದು ಮನೆಗೆ ಮರಳಿದರು ಅನಂತ ಮತ್ತು ಲಕ್ಷ್ಮಿ. ಮನೆಯಲ್ಲಿ ಬಟ್ಟೆ ಬದಲಾಯಿಸುವಾಗ ತನ್ನ ಕುತ್ತಿಗೆ ಬರಿದಾಗಿದ್ದು ಗಮನಿಸಿಕೊಂಡಳು ಲಕ್ಷ್ಮಿ. ಪಾರ್ಟಿಯಿಂದ ಹೊರಡುವಾಗ ಕುತ್ತಿಗೆ ಸವರಿಕೊಂಡಾಗ ಅಲ್ಲಿಯೇ ಇತ್ತು ನೆಕ್ಲೆಸ್. ಆದರೆ ಮನೆ ತಲುಪಿದಾಗ ಇರಲಿಲ್ಲ. ಅವಳ ಗಂಡ ಅದು ದಾರಿಯಲ್ಲಿ ಎಲ್ಲಿಯಾದರೂ ಬಿದ್ದಿರಬಹುದೇನೋ ಎಂದು ನೋಡಿ ಬಂದ. ಆಟೋದವನನ್ನು ಹುಡುಕಿ ವಿಚಾರಿಸಿದ. ಯಾವುದೂ ಉಪಯೋಗವಾಗಲಿಲ್ಲ. ವಜ್ರದ ನೆಕ್ಲೆಸ್ ಕಳೆದು ಹೋಗಿತ್ತು.


ವಜ್ರದ ನೆಕ್ಲೆಸ್ ಇಟ್ಟ ಬಾಕ್ಸ್ ನಲ್ಲಿ ಅದನ್ನು ತಯಾರಿಸಿದ ಆಭರಣ ಮಳಿಗೆಯ ವಿಳಾಸ ಇತ್ತು. ಅಲ್ಲಿ ಹೋಗಿ ಕಳೆದುಕೊಂಡಿದ್ದ ವಜ್ರದ ನೆಕ್ಲೆಸ್ ತರಹದ್ದು ಎಷ್ಟು ಬೆಲೆಯಾಗಬಹುದು ಎಂದು ವಿಚಾರಿಸಿದರು. ಸುಮಾರು ನಾಲ್ಕೂವರೆ ಲಕ್ಷ ಬೆಲೆಯ ನೆಕ್ಲೆಸ್ ಅದಾಗಿತ್ತು. ಆ ಹಣವನ್ನು ಅನಂತ ಎಲ್ಲಿಂದಲೋ ಸಾಲ ತಂದ. ಅದನ್ನು ಖರೀದಿಸಿ ಆ ನೆಕ್ಲೆಸ್ ಅನ್ನು ತನ್ನ ಸ್ನೇಹಿತೆ ಕಮಲಾಳ ಮನೆಗೆ ಹೋಗಿ ಹಿಂತಿರುಗಿಸಿದಳು ಲಕ್ಷ್ಮಿ. ಅದರ ಬಾಕ್ಸ್ ನ್ನು ತೆರೆದು ಕೂಡ ನೋಡಲಿಲ್ಲ ಕಮಲಾ. ಅದನ್ನು ಯಾವುದೊ ಒಂದು ಸಲ ಹಾಕಿಕೊಂಡಿದ್ದು, ಮತ್ತೆ ಅದನ್ನು ಧರಿಸಲು ತನಗೆ ಇಷ್ಟ ಇಲ್ಲ ಎಂದು ಕೂಡ ಹೇಳಿದಳು.


ಮಾಡಿದ ಸಾಲ ಅನಂತ ಮತ್ತು ಲಕ್ಷ್ಮಿ ಕುಟುಂಬಕ್ಕೆ ಹೊರೆಯಾಗಿ ಬಿಟ್ಟಿತು. ಬಡ್ಡಿ ತೀರಿಸಲು ಹಣ ತೆತ್ತು, ಅವರ ಕುಟುಂಬ ಬಡತನದಿಂದ ಕಡು ಬಡತನಕ್ಕೆ ಇಳಿದುಬಿಟ್ಟಿತು. ಮನೆ ಕೆಲಸದವರನ್ನು ಬಿಡಿಸಿ ಮನೆ ಕೆಲಸವನ್ನು ತಾನೇ ಮಾಡಿಕೊಳ್ಳತೊಡಗಿದಳು ಲಕ್ಷ್ಮಿ. ಅನಂತ ಸಾಯಂಕಾಲ ಕೂಡ ಬೇರೆ ಕೆಲಸಕ್ಕೆ ಹೋಗಲಾರಂಭಿಸಿದ್ದ. ಸಾಲ ಮುಟ್ಟಲು ಕೆಲ ವರುಷಗಳೇ ಹಿಡಿದವು. ಆದರೆ ಅಷ್ಟರಲ್ಲಿ ಲಕ್ಷ್ಮಿಯ ಮುಖದಲ್ಲಿ ಹೊಳಪು ಎಲ್ಲ ಕಳೆದು ಹೋಗಿ, ಮುಖ ಸುಕ್ಕು ಗಟ್ಟಿತ್ತು. ಹತ್ತಾರು ವರುಷಗಳು ಹೆಚ್ಚಿಗೆ ವಯಸ್ಸಾಗಿರುವಂತೆ ಅವಳು ಕಾಣುತ್ತಿದ್ದಳು.


ಒಂದು ಸಂಜೆ ಮಾರುಕಟ್ಟೆಯಲ್ಲಿ ಕಮಲಾಳನ್ನು ನೋಡಿದ ಲಕ್ಸ್ಮಿ ಅವಳನ್ನು ಮಾತನಾಡಿಸಿದಳು. ಗುರುತು ಸಿಗದಂತೆ ಆಗಿದ್ದ ಲಕ್ಷ್ಮಿಯನ್ನು ನೋಡಿದ ಕಮಲಾ ಏನು ತೊಂದರೆ ಎಂದು ಕೇಳಿದಳು. 'ಅದಕ್ಕೆಲ್ಲ ನಿನ್ನ ವಜ್ರದ ನೆಕ್ಲೆಸ್ ಕಾರಣ' ಎಂದು ಹೇಳಿದಳು ಲಕ್ಷ್ಮಿ. ಅದು ತನಗೆ ಅರ್ಥವಾಗಲಿಲ್ಲ ಎನ್ನುವಂತೆ 'ಅದ್ಹೇಗೆ?' ಎಂದು ಪ್ರಶ್ನಿದಳು ಕಮಲಾ. ಅದನ್ನು ಕಳೆದುಕೊಂಡಿದ್ದು ಮತ್ತು ಅದೇ ತರಹದ ಇನ್ನೊಂದು ವಜ್ರದ ನೆಕ್ಲೆಸ್ ತರಲು ಸಾಲ ಮಾಡಿ ಬವಣೆ ಪಟ್ಟಿದ್ದು ಎಲ್ಲವನ್ನು ವಿವರಿಸಿದಳು ಲಕ್ಷ್ಮಿ. 


ಅದನ್ನು ಕೇಳಿ ಮಮ್ಮಲ ಮರುಗಿದ ಕಮಲಾ, ಲಕ್ಷ್ಮಿಯ ಎರಡು ಕೈಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಹೇಳಿದಳು 'ನಿನ್ನ ಪರಿಸ್ಥಿತಿ ನೋಡಿ ಸಂಕಟವಾಗುತ್ತದೆ ಲಕ್ಷ್ಮಿ. ನನ್ನ ವಜ್ರದ ನೆಕ್ಲೆಸ್ ಅಸಲಿಯದ್ದಾಗಿರಲಿಲ್ಲ. ಅದಕ್ಕೆ ಎರಡು ಸಾವಿರ ಕೊಟ್ಟಿದ್ದೆ ಅಷ್ಟೇ' 

No comments:

Post a Comment