Monday, September 5, 2022

ಅಧಿಕಾರ ಹೋದ ಮೇಲೆ ಯಾವ ರಾಜ, ಎಲ್ಲಿಯ ಅಹಂಕಾರ

( "Tears of the Begums" ಪುಸ್ತಕದ ಒಂದು ಅಧ್ಯಾಯದ ಭಾವಾನುವಾದ)


ಮುನ್ನೂರು ವರುಷಗಳ ಕಾಲ ಭಾರತವನ್ನು ಆಳಿ ಮೆರೆದ ಮೊಗಲ್ ವಂಶಂಸ್ಥರ ಕೊನೆಯೂ ಕೂಡ ಅಷ್ಟೇ ಭೀಕರವಾಗಿತ್ತು. ೧೮೫೭ ರ ಸಿಪಾಯಿ ದಂಗೆಯ ನಂತರ ಬ್ರಿಟಿಷರ ಎದಿರೇಟಿಗೆ ಮೊಗಲ್ ಸಾಮ್ರಾಜ್ಯ ಸಂಪೂರ್ಣ ಅವನತಿ ಹೊಂದಿತು. ದೆಹಲಿಯ ಕೆಂಪು ಕೋಟೆಯಲ್ಲಿದ್ದ ರಾಜ ವಂಶಸ್ಥರ ಮನೆಗಳು ನಾಶಗೊಂಡವು. ಅರಮನೆ, ಪಲ್ಲಕ್ಕಿಗಳಿಲ್ಲದೆ ಊಟ ಅರಸಿ ಬೀದಿಗೆ ಬಂದ ಅವರುಗಳು ಪ್ರತಿಕೂಲ ವಾತಾವರಣ ಎದುರಿಸುವಲ್ಲಿ ಸೋತು ಹೋದರು. ಹೊಸ ಶತ್ರು ತಂದೊಡ್ಡಿದ ಕಷ್ಟಗಳನ್ನು ತಾಳಲಾರದೆ ಕಣ್ಮರೆಯಾದ ಇಪ್ಪತ್ತೊಂಬತ್ತು ಜನ ರಾಜ ಕುಟುಂಬದ ಸದಸ್ಯರ ಕಥೆಗಳು ಈ ಪುಸ್ತಕದಲ್ಲಿವೆ. ಅದರಲ್ಲಿ ಮುಖ್ಯವಾದದ್ದು ಮೊಗಲ್ ವಂಶದ ಕೊನೆಯ ರಾಜ ಬಹದ್ದೂರ್ ಶಾಹ್ ನದು.


ಒಂದು ವೇಳೆ ಬಹದ್ದೂರ್ ಶಾಹ್ ಸಿಪಾಯಿ ದಂಗೆಯಲ್ಲಿ ಶಾಮೀಲಾಗದಿದ್ದರೆ, ಅವನ ಜೀವನ ನೆಮ್ಮದಿಯಿಂದ ಮತ್ತು ವೈಭವದಿಂದ ಕೂಡಿರುತ್ತಿತ್ತು. ಆದರೆ ದಂಗೆ ಎದ್ದವರು ಹೆಣೆದ ಬಲೆಯಲ್ಲಿ ಅವನು ಸಿಕ್ಕಿಕೊಂಡು ಕೊನೆಯ ದಿನಗಳಲ್ಲಿ ಅವನು ದುಸ್ಥಿತಿಗೆ ಬಂದುಬಿಟ್ಟ.


ಕೊನೆಯ ಬಾರಿಗೆ ದೆಹಲಿ ಕೋಟೆಯಿಂದ ಹೊರ ನಡೆದಾಗ, ಅವನು ಮೊದಲಿಗೆ ಬಂದದ್ದು ಮೆಹಬೂಬ್-ಈ-ಇಲಾಹಿ ದರಗಾಕ್ಕೆ. ಅವನನ್ನು ಒಂದು ಖುರ್ಚಿಯಲ್ಲಿ ಹೊತ್ತು ತಂದ ಸೇವಕರನ್ನು ಬಿಟ್ಟರೆ ಅವನ ಜೊತೆಗೆ ಬೇರೆ ಯಾರು ಇರಲಿಲ್ಲ. ಅವನ ಮುಖದ ತುಂಬಾ ಚಿಂತೆ ಹೊತ್ತ ಗೆರೆಗಳು. ಹಾಗೆಯೆ ಅವನ ಬಿಳಿ ಗಡ್ಡದಲ್ಲಿ ಮಣ್ಣಿನ ಧೂಳು. ದರಗಾದಲ್ಲಿ ಅವನ ಕ್ಷೇಮ ವಿಚಾರಿಸಿದವರಲ್ಲಿ ಅವನು ಹೇಳಿದ:


"ದಂಗೆ ಎದ್ದವರನ್ನು ಬೆಂಬಲಿಸುವುದರಿಂದ ತಮಗೆ ಕೆಟ್ಟದೇ ಆಗುತ್ತದೆ ಎಂದು ತಿಳಿದಿತ್ತು. ಆದರೆ ಅದು ವಿಧಿ ಲಿಖಿತ ಆಗಿತ್ತೋ ಏನೋ? ಅವರು ಓಡಿ ಹೋದರು. ನಾನು ಭಿಕಾರಿಯಾದೆ. ತಿಮೂರನ ವಂಶಸ್ಥನಾದ ನನಗೆ ಹೋರಾಡುವುದು ರಕ್ತದಲ್ಲೇ ಬಂದಿದೆ. ನನ್ನ ಪೂರ್ವಜರು ಎಂಥಹ ಕಷ್ಟದ ಪರಿಸ್ಥಿತಿಯಲ್ಲೂ ಆಶಾವಾದಿ ಆಗಿದ್ದರು. ಆದರೆ ನನ್ನ ಕೊನೆ ನನಗೆ ಕಾಣುತ್ತಿದೆ. ತಿಮೂರನ ವಂಶದ ಕೊನೆಯ ರಾಜ ನಾನೇ ಎನ್ನುವುದರಲ್ಲಿ ನನಗೆ ಯಾವುದೇ ಸಂಶಯ ಉಳಿದಿಲ್ಲ. ಆ ವಂಶದ ಬೆಳಕು ಇನ್ನು ಕೆಲವು ಘಂಟೆಗಳಲ್ಲಿ ಆರಿ ಹೋಗಲಿದೆ. ಅಂದ ಮೇಲೆ ಮತ್ತೆ ರಕ್ತಪಾತ ಮಾಡಿ ಏನು ಪ್ರಯೋಜನ? ಅದಕ್ಕೆ ನಾನು ಕೋಟೆ ಬಿಟ್ಟು ಬಂದದ್ದು. 


ಈ ದೇಶ ಭಗವಂತನಿಗೆ ಸೇರಿದ್ದು. ಅವನು ಇಚ್ಛಿಸಿದವರು ಇಲ್ಲಿ ಅಧಿಕಾರ ನಡೆಸುತ್ತಾರೆ. ನನ್ನ ವಂಶಸ್ಥರು ಹಿಂದುಸ್ಥಾನವನ್ನು ನೂರಾರು ವರುಷಗಳ ಕಾಲ ತೋಳ್ಬಲದಿಂದ ವೈರಿಗಳನ್ನು ಹೆದರಿಸಿ ರಾಜ್ಯಭಾರ ಮಾಡಿದರು. ಈಗ ಬೇರೆಯವರಿಗೆ ಅಧಿಕಾರ ನಡೆಸಲು ಅವಕಾಶ. ನಾವು ಆಳಿಸಿಕೊಳ್ಳುವವರಾಗುತ್ತೀವಿ. ಅವರು ಆಳುವವರಾಗುತ್ತಾರೆ. ನಮ್ಮ ಮೇಲೆ ಯಾರೂ ಅನುಕಂಪ ತೋರಿಸುವ ಅಗತ್ಯ ಇಲ್ಲ. ನಾವು ಬೇರೆಯವರ ವಂಶ ಕೊನೆಗೊಳಿಸಿಯೇ  ಸಿಂಹಾಸನ ಏರಿದ್ದು.


ಇಂದಿಗೆ ನಾವುಗಳು ಸಾವಿನ ತುದಿಯಲ್ಲಿ ನಿಂತಿದ್ದೇವೆ. ಕಳೆದ ಮೂರು ಹೊತ್ತಿನ ಊಟ ನಮಗೆ ಸಿಕ್ಕಿಯೇ ಇಲ್ಲ. ನಿಮ್ಮ ಮನೆಯಲ್ಲಿ ಏನಾದರು ತಿನ್ನಲಿಕ್ಕೆ ಇದ್ದರೆ ತಂದು ಕೊಡಿ"


ತನ್ನ ಮೆಲ್ಲನೆಯ ಧ್ವನಿಯ ಮಾತು ಮುಗಿಸಿದ ಕೊನೆಯ ಮೊಘಲ್ ಚಕ್ರವರ್ತಿ. ಅಲ್ಲಿಂದ ಅವನು ಹುಮಾಯುನ್ ನ ಸಮಾಧಿಗೆ ತೆರಳಿದ. ಅಲ್ಲಿ ಅವನನ್ನು ಬಂಧಿಸಲಾಯಿತು. ಬಂಧನದಲ್ಲಿ ತನ್ನ ಕೊನೆಯ ಉಸಿರು ಹೋಗುವವರೆಗೆ ಆಧ್ಯಾತ್ಮಿಕ ಸಾಧನೆಯ ಕಡೆಗೆ ತನ್ನ ಮನಸ್ಸು ಹೊರಳಿಸಿದ್ದ ಬಹದ್ದೂರ್ ಶಾಹ್ ಜಫರ್.


ಈ ನಿಜ ಕಥೆ ಎಲ್ಲಾ ಮಾನವರಿಗೂ ಎಚ್ಚರಿಕೆಯ ಘಂಟೆ. ಇದಾದ ಮೇಲೆಯೂ ಅಹಂಕಾರ ಕಡಿಮೆ ಮಾಡಿಕೊಳ್ಳದಿದ್ದರೆ ಅವರಿಗೆ ಜೀವನವೇ ಪಾಠ ಕಲಿಸುತ್ತದೆ.



No comments:

Post a Comment