Saturday, October 1, 2022

ವಿಕ್ರಮನಿಗೆ ಕಥೆ ಹೇಳಲು ಬೇತಾಳವೇ ಏಕೆ ಬೇಕು?

'ವಿಕ್ರಮ ಮತ್ತು ಬೇತಾಳ' ಕಥೆಗಳನ್ನು ಮೊದಲು ನಾನು ಓದಿದ್ದು ಚಂದಮಾಮದಲ್ಲಿ. ಹೆಣವನ್ನು ಹೆಗಲಿಗೆ ಹಾಕಿಕೊಂಡು, ಒಂದು ಕೈಯಲ್ಲಿ ಕತ್ತಿ ಹಿರಿದು ಸ್ಮಶಾನದಲ್ಲಿ ಸಾಗಿ ಹೋಗುವ ರಾಜ ವಿಕ್ರಮಾದಿತ್ಯನ ಚಿತ್ರ ಭೀತಿ ಹುಟ್ಟಿಸುತಿತ್ತು. ಹಾಗೆಯೆ ಅವನ ಧೈರ್ಯ, ಸಾಹಸಗಳು ಬೆರಗು ಮೂಡಿಸುತ್ತಿತ್ತು. ಕ್ರಮೇಣ ಗೊತ್ತಾಯಿತು. ಬೇತಾಳ ಹೇಳುತ್ತಿದ್ದ ಕಥೆಗಳು ದೆವ್ವಗಳ ಕಥೆಗಳಲ್ಲ. ಬದಲಿಗೆ ರಾಜನ ಜಾಣ್ಮೆ, ವಿವೇಕ ಪರೀಕ್ಷೆ ಮಾಡುವ ಮತ್ತು ನೈತಿಕ ಸಂಧಿಗ್ದತೆ ಬಂದಾಗ ಸರಿ-ತಪ್ಪುಗಳನ್ನು ಅಳೆದು ನೋಡಿ ನಿರ್ಧಾರಕ್ಕೆ ಬರುವ ಕಥೆಗಳು ಆಗಿದ್ದವು.


ಅವು ನಿಜ ಕಥೆಗಳೋ ಅಥವಾ ದಂತ ಕಥೆಗಳೋ ಅನ್ನುವುದಕ್ಕಿಂತ ಅವುಗಳು ಕಥೆ ಕೇಳುವವರಲ್ಲಿ ಹುಟ್ಟಿಸುವ ಪ್ರಜ್ಞೆಯೇ ಮುಖ್ಯ. ಅದೇ ತರಹದ ಉದ್ದೇಶವನ್ನು ಪಂಚತಂತ್ರದ ಕಥೆಗಳು ಕೂಡ ಹೊಂದಿವೆ. ಸಮಸೆಗಳನ್ನು ಉಪಾಯದಿಂದ ಪರಿಹರಿಸಿಕೊಳ್ಳುವ ಅಕ್ಬರ್-ಬೀರಬಲ್, ತೆನಾಲಿ ರಾಮಕೃಷ್ಣರ ಕಥೆಗಳು ಕೂಡ ನಮ್ಮಲ್ಲಿವೆ.


ಉಜ್ಜಯಿನಿಯ ರಾಜ ವಿಕ್ರಮಾದಿತ್ಯ ನ್ಯಾಯ ನೀತಿಗೆ ಪ್ರಸಿದ್ಧನಾದವನು. ಅವನಿಗೆ ಸವಾಲೊಡ್ಡುವ ಕಥೆಗಳನ್ನು ಹೇಳುವ ಬೇತಾಳ. ಉತ್ತರ ಗೊತ್ತಿದ್ದೂ ಹೇಳದೆ ಹೋದರೆ 'ತಲೆ ಸಿಡಿದು ನೂರು ಚೂರಾಗುವುದು' ಎನ್ನುವ ಅದರ ಬೆದರಿಕೆ ಬೇರೆ. ಮೌನ ಮುರಿದರೆ ಮತ್ತೆ ಬೇತಾಳವನ್ನು ಹೊತ್ತು ಕಥೆ ಕೇಳುವ ಪರಿಸ್ಥಿತಿ ರಾಜನಿಗೆ. ಆದರೂ ಅವನು ಮೌನ ಮುರಿಯುತ್ತಾನೆ. ತನ್ನ ಸರಿ-ತಪ್ಪಿನ ತೀರ್ಪು ನೀಡುತ್ತಾನೆ. ಮತ್ತೆ ಹೊಸ ಕಥೆ ಹುಟ್ಟುತ್ತದೆ. ಆದರೆ ರಾಜನಿಗೆ ಕಥೆ ಹೇಳಲು ಬೇತಾಳವೇ ಏಕೆ ಬೇಕಿತ್ತು? ಬೇರೆ ಯಾರೂ ಮಾನವರು ಆ ಕಥೆಗಳನ್ನು ಹೇಳಲು ಸಾಧ್ಯ ಆಗುತ್ತಿರಲಿಲ್ಲವೇ? ಬೇತಾಳ ಹೇಳಿದ ಕಥೆಗಳನ್ನು ಗಮನಿಸಿ ನೋಡಿದರೆ ಸಂದೇಹವೇ ಬೇಡ. ಕಥೆಗಳಲ್ಲಿ ಬರುವ ಸನ್ನಿವೇಶಗಳು, ಸರಿ-ತಪ್ಪಿನ ಸವಾಲುಗಳು ಜೀವನವನ್ನು ಒಟ್ಟಾರೆಯಾಗಿ ನೋಡಿದಾಗ ಮಾತ್ರ ಹುಟ್ಟುವಂತಹವು. ಸಾಮಾನ್ಯ ಮನುಷ್ಯ ಯಾವುದೊ ಆಸೆಯ ಹಿಂದೆ ಬಿದ್ದಿರುತ್ತಾನೆ ಮತ್ತು ಸಮಸ್ಯೆ ಬಂದಾಗ ಸ್ವಾರ್ಥಿಯಾಗಿ ನಡೆದುಕೊಳ್ಳುತ್ತಾನೆ. ಅವನಿಗೆ ಸರಿ-ತಪ್ಪಿನ ವಿವೇಚನೆಗಿಂತ ತನ್ನ ಬೆಳವಣಿಗೆಯೇ ಮುಖ್ಯ. ಸಾಮಾನ್ಯ ಮನುಷ್ಯ ಮಾಡುವ ತಪ್ಪುಗಳನ್ನು ಎತ್ತಿ ತೋರಿಸುವ ಕಥೆಗಳನ್ನು ಬೇತಾಳ ಹೇಳುವುದೇ ಸಮಂಜಸ ಅಲ್ಲವೇ? ಆದರೆ ರಾಜ ವಿವೇಕ ಎತ್ತಿ ಹಿಡಿಯುವವನಾಗಿದ್ದ. ಬೇತಾಳ ಕೇಳುವ ಪ್ರಶ್ನೆಗೆ ಸಮಂಜಸ ಉತ್ತರ ನೀಡುತ್ತಿದ್ದ. ಹೀಗಾಗಿ ಆ ಕಥೆಗಳನ್ನು ಕೇಳಿದವರಲ್ಲಿ ನೈತಿಕ ಪ್ರಜ್ಞೆ ಜಾಗೃತ ಆಗುತ್ತಿತ್ತು. ಇಷ್ಟಕ್ಕೂ ಪ್ರಶ್ನೆ ಕೇಳಲು ಬೇತಾಳನೇ ಆಗಬೇಕಿಲ್ಲ. ನಮ್ಮ ಅಂತಃಪ್ರಜ್ಞೆಯೇ ಸಾಕು. ಮತ್ತು ಕಥೆ ಕೇಳಲು ರಾಜನೇ ಆಗಬೇಕಿಲ್ಲ. ನಮ್ಮಂತ ಸಾಮಾನ್ಯ ಜನರು ದೈನಂದಿನ ಕಾರ್ಯಗಳಲ್ಲಿ ತೆಗೆದುಕೊಳ್ಳುವ ಸರಿ-ತಪ್ಪಿನ ನಿರ್ಧಾರಗಳನ್ನು ವಿವೇಚನೆಯಿಂದ ತೆಗೆದುಕೊಂಡರೆ ಸಾಕು.


ಇಂದಿಗೆ ನಮ್ಮ ಎಷ್ಟು ಮಕ್ಕಳಿಗೆ ವಿಕ್ರಮ ಮತ್ತು ಬೇತಾಳನ ಕಥೆಗಳು ಗೊತ್ತಿವೆ? ಅವರು 'ಮೇರಿ ಹ್ಯಾಡ್ ಎ ಲಿಟಲ್ ಲ್ಯಾಂಬ್' ಎಂದು ಹಾಡುತ್ತಾರೆ. ಈ ವಿಷಯ ಪ್ರಸ್ತಾಪಿಸಿದರೆ ನನ್ನ ಸ್ನೇಹಿತರು ಇಂಗ್ಲಿಷ್ ಮತ್ತು ತಂತ್ರಜ್ಞಾನ ಹೊಟ್ಟೆ ತುಂಬಿಸುತ್ತದೆ. ಆದರೆ ನೈತಿಕತೆಯಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆ ಹಾಕುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆ ಅವಶ್ಯಕ ಮತ್ತು ಇಂಗ್ಲಿಷ್ ಅದಕ್ಕೆ ಅನುಕೂಲಕರ. ಆದರೆ ನೋಡಿ ನೈತಿಕತೆ ಇರದ ತಂತ್ರಜ್ಞಾನ ಒಡ್ಡುವ ಅಪಾಯಗಳ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ತಂತ್ರಜ್ಞಾನ ಪರಮಾಣು ಬಾಂಬ್ ಗಳನ್ನೂ ಕೂಡ ಸೃಷ್ಟಿಸುತ್ತದೆ. ಮೊದಲಿಗೆ ಅದರ ಉಪಯೋಗ ಶತ್ರುಗಳ ಮೇಲೆ. ಅವರು ನಾಶವಾದ ನಂತರ ತಮ್ಮ-ತಮ್ಮೊಳಗೆ ಜಗಳ ಹುಟ್ಟಿದರೆ?


ಮುಂದೊಂದು ದಿನ ಮಾನವ ಜಗತ್ತು ನಾಶವಾದರೆ, ಅದು ಕೇವಲ ತಂತ್ರಜ್ಞಾನದ ಬೆಳವಣಿಗೆಯಿಂದ ಅಲ್ಲ. ಅದು ನೈತಿಕತೆ ಮತ್ತು ಸರಿ-ತಪ್ಪಿನ ವಿವೇಚನೆ ಮರೆತದ್ದಕ್ಕಾಗಿ. ಮತ್ತು ಚಿಕ್ಕಂದಿನಲ್ಲಿ ವಿಕ್ರಮ ಮತ್ತು ಬೇತಾಳ ತರಹದ ಕಥೆಗಳನ್ನು ಕೇಳದಿದ್ದಕ್ಕಾಗಿ. ಎಲ್ಲ ನಾಶವಾದ ಮೇಲೆ ಕಥೆ ಹೇಳುವ ಬೇತಾಳಗಳು ಸಾಕಷ್ಟು ಹುಟ್ಟುತ್ತವೆ. ಆದರೆ ವಿವೇಚನೆಯಿಂದ ಸರಿ-ತಪ್ಪು ನಿರ್ಧಾರ ಮಾಡುವ ವಿಕ್ರಮಾದಿತ್ಯರು ಇರುವುದಿಲ್ಲ.



No comments:

Post a Comment