ಕಾಲ ಎಷ್ಟೋ ನೋವುಗಳನ್ನು ಮರೆಸಿಬಿಡುತ್ತದೆ. ಚಿಕ್ಕಂದಿನಲ್ಲಿ ನಾವು ಆಟಿಕೆಗೆ ಜಗಳ ಮಾಡಿದ್ದು ಅವತ್ತಿಗೆ ಅದು ನೋವಿನ ಸಂಗತಿ ಆಗಿದ್ದರು, ಇಂದಿಗೆ ಅದು ನೆನಪಿಗೆ ಬಂದರೆ ನಗು ಬರುತ್ತದೆ. ಅದು ಕಾಲನ ಮಹಿಮೆ. ಇನ್ನು ಕೆಲ ವಿಷಯಗಳಲ್ಲಿ ಪೆಟ್ಟಿಗೆ ಬಿದ್ದದ್ದು, ಹಣಕಾಸಿನ ವಿಷಯಗಳಲ್ಲಿ ಮೋಸ ಹೋಗಿದ್ದು ಇತ್ಯಾದಿಗಳು ಕೆಲ ಕಾಲ ಕಳೆದ ನಂತರ ಅವು ಪಾಠ ಕಲಿಸಿದ ಸಂಗತಿಗಳಾಗಿ ನೆನಪಲ್ಲಿ ಉಳಿಯುತ್ತವೆಯೇ ಹೊರತು ಮತ್ತೆ ಮತ್ತೆ ತೀವ್ರ ನೋವು ತರುವ ವಿಷಯಗಳಾಗುವುದಿಲ್ಲ.
ಆದರೆ ಕಾಲ ಮರೆಸಲಾಗದಂತಹ ಕೆಲ ಸಂಗತಿಗಳಿವೆ. ಮೊದಲನೆಯದು, ಬೆಳೆದು ನಿಂತ ಮಗ/ಮಗಳು ಸಾವನ್ನಪ್ಪುವುದು. ಇಪ್ಪತ್ತು ವರುಷದ ಹಿಂದೆ ಆಕ್ಸಿಡೆಂಟ್ ನಲ್ಲಿ ತೀರಿ ಹೋದ ಮಗನನ್ನು ನೆನೆದ ತಕ್ಷಣ ಕಣ್ಣೀರು ಸುರಿಸುವ ಹೆಣ್ಣು ಮಗಳು ನಮ್ಮ ನೆರೆಯಲ್ಲಿದ್ದಾಳೆ. ಅವಳ ನೋವನ್ನು ಕಾಲ ಮರೆಸಿಲ್ಲ ಮತ್ತು ಎಷ್ಟು ಅತ್ತರೂ ಅವಳ ನೋವು ಕಡಿಮೆ ಆಗಿಲ್ಲ. ಎರಡನೆಯದು, ತುಂಬಾ ನಂಬಿಕೊಂಡ ಪ್ರೀತಿಯ ಸಂಗಾತಿ ಮೋಸ ಮಾಡಿ ದೂರಾಗುವುದು. ಆ ಅನುಭವ ಆದ ಜನರನ್ನು ಗಮನಿಸಿ ನೋಡಿ. ಅವರಿಗೆ ಆ ವಿಷಯ ನೆನಪಾದ ತಕ್ಷಣ ಮುಖ ಕಿವಿಚುತ್ತದೆ. ಅದನ್ನು ಮರೆಯಲು ಅವರು ಎಷ್ಟು ಕುಡಿದರೂ ಅದು ಮರೆಯಾಗುವುದಿಲ್ಲ.
ಈ ಎರಡು ನೋವುಗಳು
ಏಕೆ ಜೀವನಪೂರ್ತಿ ಮನುಷ್ಯನನ್ನು ಕಾಡುತ್ತವೆ ಎಂದು ಹುಡುಕಿ ಹೊರಟರೆ ಅದಕ್ಕೆ ಜೀವ ವಿಕಾಸ ಶಾಸ್ತ್ರದಲ್ಲಿ (Evolutionary Biology) ಉತ್ತರ ದೊರೆಯುತ್ತದೆ. ಲಕ್ಷಾಂತರ ವರುಷ ವಿಕಾಸ ಹೊಂದಿದ ಮಾನವನಲ್ಲಿ ಪ್ರಕೃತಿ ಎರಡು ವಿಷಯಗಳನ್ನು ಅಳಿಸಲಾಗದಂತಹ
ಸಾಂಕೇತಿಕ ಭಾಷೆಯಲ್ಲಿ ಬರೆದುಬಿಟ್ಟಿದೆ. ಅವು ಆ ಜೀವಿ ತಾನು ಉಳಿಯಲು ಏನು ಬೇಕೋ ಅದು ಮಾಡುವುದು ಮತ್ತು
ತನ್ನ ವಂಶ ಮುಂದುವರೆಯಲು ಬೇಕಾದ ಏರ್ಪಾಡು ಮಾಡಿಕೊಳ್ಳುವುದು. ಇವೆರಡು ಪ್ರತಿಯೊಂದು ಪ್ರಾಣಿ, ಪಕ್ಷಿಯಲ್ಲಿ
ಬಹು ಮುಖ್ಯವಾದ ಅಂಶಗಳು. ಇವೆರಡಕ್ಕೆ ಸಂಬಂಧಿಸಿದ ವಿಷಯಗಳು ಜೀವಿಗಳಿಗೆ ಅತಿ ಹೆಚ್ಚು ನೋವು ತರುತ್ತದೆ.
ಉಳಿದ ನೋವುಗಳನ್ನು ಕಾಲ ಮರೆಸಿ ಹಾಕುತ್ತದೆ.
ಉದಾಹರಣೆಗೆ, ನಿಮಗೆ
ಹೊಟ್ಟೆ ಹಸಿವಿನ ಸಂಕಟ ತಾಳಲಾಗುತ್ತಿಲ್ಲ. ಅದೇ ಸಮಯಕ್ಕೆ ನಿಮಗೆ ಆಗದವರು ನಿಮ್ಮನ್ನು ಅವಮಾನ ಪಡಿಸಲು
ನೋಡುತ್ತಾರೆ. ಆಗ ನೀವು ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತೀರಿ? ಆಹಾರ ಮೊದಲು ಹುಡುಕಿಕೊಂಡು ಆಮೇಲೆ
ಅವಮಾನಕ್ಕೆ ಪ್ರತಿಕಾರ ತೀರಿಸಬಹುದಲ್ಲವೇ? ಈ ಆದ್ಯತೆಗಳನ್ನು ಜೋಡಿಸಿದ್ದು ಪ್ರಕೃತಿಯು ನಮ್ಮಲ್ಲಿ
ಅಳಿಸಲಾಗದಂತೆ ಮೂಡಿಸಿರುವ ಸಾಂಕೇತಿಕ ಭಾಷೆ. ಮೊದಲು ನಾವು ಉಳಿಯಬೇಕು ಆಮೇಲೆ ಸನ್ಮಾನ, ಸತ್ಕಾರ, ಪ್ರತಿಕಾರ
ಎಲ್ಲ.
ಮನುಷ್ಯನನ್ನು ಜೀವನಪೂರ್ತಿ
ಕಾಡುವ ಮಗನ ಸಾವು, ಸಂಗಾತಿಯ ಬೇರ್ಪಡಿಕೆ ವಿಷಯಗಳು ಮನುಷ್ಯನ ಅಳಿವು-ಉಳಿವಿಗೆ ಸಂಬಂಧಿಸಿದ್ದು. ಅವು
ಹೃದಯಕ್ಕೆ ತುಂಬಾ ಹತ್ತಿರ ಮತ್ತು ಮನಸ್ಸಿನಾಳದಲ್ಲಿ ಪ್ರಕೃತಿ ಬರೆದು ಬಿಟ್ಟಿರುವ ಭಾಷೆ. ಅವಕ್ಕೆ
ಕಾಲನಲ್ಲಿ ಮದ್ದಿಲ್ಲ. ಹಾಗಾಗಿ ಜೀವನದಲ್ಲಿ ಸೋತು ಹೋದ ಹತಾಶೆಯನ್ನು ಅವುಗಳು ಶಾಶ್ವತವಾಗಿ ಇರುವಂತೆ
ಮಾಡುತ್ತವೆ. ಹಾಗಾದರೆ ಇದಕ್ಕೆ ಮದ್ದಿಲ್ಲವೇ? ಏಕಿಲ್ಲ?
ಸಾಧು-ಸಂತರನ್ನು ನೋಡಿ. ಅವರು ತಮ್ಮ ಕುಟುಂಬವನ್ನು ಹಿಂದೆ ಬಿಟ್ಟು ಬರುವುದಷ್ಟೇ ಅಲ್ಲ. ಅವರು ತಮ್ಮ ಪಾಲಕರು ಇಟ್ಟ ಹೆಸರನ್ನು ಕೂಡ ಬದಲಾಯಿಸಿರುತ್ತಾರೆ. ಅವರಿಗೆ ನೋವಿಲ್ಲ ಎಂದಲ್ಲ. ಆದರೆ ಅವರು ನೋವನ್ನು ಮೀರಿ ಬೆಳೆದಿರುತ್ತಾರೆ. ಅದು ಏಕೆ ಅವರಿಗೆ ಸಾಧ್ಯ ಆಗುತ್ತದೆ ಎಂದರೆ, ಅವರು ತಮ್ಮ ಸಂಬಂಧಗಳಲ್ಲಿ ಇದ್ದು ಇಲ್ಲದೆ ಹಾಗೆ ಇರುವ ಬೇರ್ಪಡಿಕೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಹಾಗಾಗಿ ಅವರಿಗೆ ನೋವು-ನಲಿವಿನ ಸಂಗತಿಗಳು ಸಮಾನವಾಗಿ ಕಾಣುತ್ತವೆ.
ನೀವು ನೋವು ಗೆಲ್ಲಲು ಸಾಧು-ಸಂತರೇ ಆಗಬೇಕಿಲ್ಲ. ಕುಟುಂಬದಲ್ಲಿ ಇದ್ದುಕೊಂಡು, ಎಲ್ಲ
ಜವಾಬ್ದಾರಿಗಳನ್ನು ನಿಭಾಯಿಸುತ್ತಾ, ಸಂಬಂಧಗಳಿಂದ ಒಂದು ಪ್ರತ್ಯೇಕತೆಯನ್ನು ಕಾಪಾಡಿಕೊಂಡಿದ್ದರೆ
ಸಾಕು. ಆಗ ಎಂತಹ ನೋವೇ ಇರಲಿ, ಕಾಲ ವಾಸಿ ಮಾಡದೆ ಇರುವ ಬೇಸರದ ಸಂಗತಿಯಾಗಿರಲಿ, ಅದು ವಿಧಿಯ ಆಟ ಎನ್ನುವ
ಅರಿವು ನಿಮಗೆ ಮೂಡುತ್ತದೆ. ನೋವು ಪೂರ್ತಿ ಮರೆಯಾಗುವುದಿಲ್ಲ. ಮನಸ್ಸಿನ ಮೂಲೆಯಲ್ಲಿ ಉಳಿದುಕೊಂಡೆ
ಇರುತ್ತದೆ. ಆದರೆ ಅದು ಸದಾ ನಿಮ್ಮನ್ನು ಬಾಧಿಸುವುದಿಲ್ಲ. ಏಕೆಂದರೆ ನಿಮ್ಮ ಪಾಲಿಗೆ ಬಂದದ್ದು ನೀವು
ಸ್ವೀಕರಿಸಿದ್ದೀರಿ ಎನ್ನುವ ಮನೋಭಾವ ಅಷ್ಟೇ ಉಳಿದಿರುತ್ತದೆ.
No comments:
Post a Comment