Sunday, October 30, 2022

ಎರಡು ಚಿತ್ರಗಳು ಮತ್ತು ಒಳ್ಳೆಯತನ ಎನ್ನುವ ಕೆಟ್ಟ ಖಾಯಿಲೆ

ಕಳೆದ ಎರಡು ದಿನದಲ್ಲಿ ನಾನು ನೋಡಿದ ಎರಡು ಚಲನ ಚಿತ್ರಗಳಲ್ಲಿ ಕೆಲವು ಸಮಾನ ಅಂಶಗಳಿವೆ.


ಮೊದಲಿಗೆ 'ಕಾಂತಾರ'. ಅದು ಒಂದು ಅದ್ಭುತ ಚಿತ್ರ. ತಲೆ ತಲಾಂತರಗಳ ಹಿಂದೆ ದಾನವಾಗಿ ಕೊಟ್ಟ ಭೂಮಿಯನ್ನು ವಾಪಸ್ಸು ಬಯಸುವ ಇಂದಿನ ತಲೆಮಾರು, ಅದನ್ನು ಆಗಗೊಡದ ಕ್ಷೇತ್ರಪಾಲಕ ದೈವ.


ಎರಡನೆಯದು 'ಹೆಡ್ ಬುಷ್'  ಚಿತ್ರ. ಅದು ಬೆಂಗಳೂರು ಕಂಡ ಮೊದಲ ಭೂಗತ ದೊರೆ ಜಯರಾಜ್ ನ ಕಥೆ.


ಒಂದು ದೈವದ-ಕ್ಷೇತ್ರ ಪಾಲಕನ ಕಥೆ. ಇನ್ನೊಂದು ಬೆಂಗಳೂರು ಕ್ಷೇತ್ರ ತನ್ನದೇ ಎನ್ನುವ ರೌಡಿಯ ಕಥೆ. ಎರಡೂ ಚಿತ್ರಗಳಲ್ಲಿ ಹೋರಾಟ ಇದೆ. ಮತ್ತು ಎರಡು ಚಿತ್ರಗಳ ಮುಖ್ಯ ಪಾತ್ರಗಳು ಕೈಯಲ್ಲಿ ಮಚ್ಚು ಹಿಡಿಯುತ್ತವೆ. ದೈವದ ಜೊತೆಗೆ ರೌಡಿ ಕಥೆಯ ಹೋಲಿಕೆ ನನ್ನ ಉದ್ದೇಶ ಅಲ್ಲ. ಆದರೆ ಅವಶ್ಯಕತೆ ಬಂದಾಗ ಮಚ್ಚು ಹಿಡಿಯಲು ಈ ಎರಡು ಪಾತ್ರಗಳು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳುವುದಷ್ಟೇ ನನ್ನ ಉದ್ದೇಶ.


ಈ ಎರಡೂ ಕಥೆಗಳಲ್ಲಿ ಕಂಡು ಬರುವ ಸಾಮಾನ್ಯ ಅಂಶವೆಂದರೆ, 'ಕಾಂತಾರ' ದಲ್ಲಿ ನ್ಯಾಯ ಕೊಡಿಸಲು ದೈವವೇ ಬರಬೇಕು. ಆದರೆ ಅನ್ಯಾಯ ಎಸಗಲು ಮಾನವ ಸಾಕು. ಇಲ್ಲಿ ದೈವ ಬರೀ ಒಳ್ಳೆಯತನ ತೋರುವುದಕ್ಕೆ ಸೀಮಿತ ಆಗಿಲ್ಲ. ತಾನು ಯಾವಾಗ ಕೆಟ್ಟವನಾಗಬೇಕು ಎನ್ನುವ ಅಂಶದಲ್ಲಿ ದೈವಕ್ಕೆ ಸ್ಪಷ್ಟತೆ ಇದೆ. ಮತ್ತು ಅದು ಆವಾಹಿಸಿಕೊಳ್ಳುವುದು ಅವಶ್ಯಕತೆ ಬಂದಾಗ ಕೆಟ್ಟವನಾಗಲು ತಯಾರಾಗಿರುವ ಆ ಚಿತ್ರದ ಹೀರೋನನ್ನು.


ಹಾಗೆಯೆ  'ಹೆಡ್ ಬುಷ್' ಚಿತ್ರದಲ್ಲಿ ಜಯರಾಜ್ ಒಬ್ಬ ಹೀರೋ ತರಹ ಕಂಡರೂ ಅವನು ರಾಜಕಾರಣಿಗಳ ಕೈಗೊಂಬೆ ಮಾತ್ರ. ಕೆಟ್ಟವರಿಗೆ ಬುದ್ಧಿ ಕಲಿಸಲು ಯಾವುದೇ ಕೆಡಕು ಮಾಡಲು ಹಿಂದೆ ಮುಂದೆ ನೋಡದ ಜಯರಾಜ್ ನೇ ಆಗಬೇಕು. ಅವನಿಗೆ ರೌಡಿಗಳಷ್ಟೇ ಅಲ್ಲ, ಪೊಲೀಸರು ಮತ್ತು ರಾಜಕಾರಣಿಗಳನ್ನು ಬೆದರಿಸುವ ಸ್ಥೈರ್ಯ ಇದೆ. ಹಾಗೆಯೆ ಬಡವರ ಜೊತೆಗೆ ನಿಲ್ಲುವ ಔದಾರ್ಯ ಕೂಡ ಇದೆ.


ಆದರೆ ನಮ್ಮಂತಹ ಜನರಿಗೆ ಅಷ್ಟು ಗುಂಡಿಗೆ ಇಲ್ಲ. ನಮಗೆ ಎಲ್ಲರಿಂದ ಒಳ್ಳೆಯವರು ಅನಿಸಿಕೊಳ್ಳಬೇಕು ಎನ್ನುವ ಇಚ್ಛೆ. ನಮ್ಮ ಮೇಲೆ ಅನ್ಯಾಯ ಆದಾಗ ನಾವು ಪ್ರತಿಭಟನೆ ಮಾಡುವುದಿಲ್ಲ. ದಬ್ಬಾಳಿಕೆಗಳನ್ನು ಸುಮ್ಮನೆ ಉಗುಳು ನುಂಗಿಕೊಂಡು ಸಹಿಸಿಕೊಂಡುಬಿಡುತ್ತವೆ. ನಮಗೆ ಅನ್ಯಾಯ ಆದಾಗ ನಮಗೆ ಕೆಟ್ಟವರಾಗಲು ಬರುತ್ತದೆ ಎಂದು ತೋರಿಸಿ ಕೊಡಲು ಆಗುವುದಿಲ್ಲ. ಮಚ್ಚು ಹಿಡಿದವರನ್ನು ನಾವು ನೋಡಿದಾಗ ರೋಮಾಂಚಿತರಾಗುತ್ತೇವೆಯೇ ಹೊರತು ನಮಗೆ ಸ್ವತಃ ಮಚ್ಚು ಹಿಡಿದುಕೊಳ್ಳುವ ಧೈರ್ಯ ಇಲ್ಲ. ನಮಗೆಲ್ಲ ಇರುವುದು ಒಳ್ಳೆಯತನ ಎನ್ನುವ ಕೆಟ್ಟ ಖಾಯಿಲೆ. ನಮ್ಮಂತವರ ರಕ್ಷಣೆಗೆ 'ಕಾಂತಾರ' ತರಹದ ದೈವಗಳೇ ಬರಬೇಕು. ಇಲ್ಲವೇ ಜಯರಾಜ್ ತರಹದ ಡಾನ್ ಗಳ ಸಹಾಯ ಕೋರಬೇಕು.


ಕಾಂತಾರ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಹೋರಾಟಕ್ಕೆ ದೈವ ಹಿಂಸೆಗೆ ಇಳಿಯಲು ಹಿಂದೆ ಮುಂದೆ ನೋಡುವುದಿಲ್ಲ. ಅದಕ್ಕೆ ಒಳ್ಳೆಯತನ ಎನ್ನುವ ಕೆಟ್ಟ ಖಾಯಿಲೆ ಇಲ್ಲ. ಆದರೆ ನಾವುಗಳು ಪಾಪ ಮಾಡಿದವರು ಕರ್ಮ ಅನುಭವಿಸುತ್ತಾರೆ ಎಂದುಕೊಂಡು ಸುಮ್ಮನಾಗುತ್ತೇವೆ. ಹಾಗೆಯೆ 'ಹೆಡ್ ಬುಷ್' ಚಿತ್ರದ ಜಯರಾಜ್ ಪಾಪ-ಕರ್ಮಗಳ ಲೆಖ್ಖ ಮಾಡುವುದಿಲ್ಲ. ಕೈಯಲ್ಲಿ ಮಚ್ಚು ಹಿಡಿದು ಎದಿರೇಟು ಕೊಡುತ್ತಾನೆ. ಅದು ಅವನಿಗೆ ಏಕೆ ಸಾಧ್ಯ  ಆಗುತ್ತದೆ ಎಂದರೆ ಅವನಿಗೆ ಕೂಡ ಒಳ್ಳೆಯತನ ಎನ್ನುವ ಕೆಟ್ಟ ಖಾಯಿಲೆ ಇಲ್ಲ. ಅವನು ಮಾಡುವುದು ಸರಿ-ತಪ್ಪು ಎನ್ನುವ ವಿಮರ್ಶೆ ಇಲ್ಲಿ ನಾನು ಮಾಡುತ್ತಿಲ್ಲ. ಆದರೆ ಅವನು ಒಳ್ಳೆಯತನದ ಸೋಗಿನಲ್ಲಿರುವ ಹೇಡಿ ಅಲ್ಲ ಎಂದಷ್ಟೇ ನಾನು ಹೇಳುತ್ತಿರುವುದು.


ಸಮಾಜದ ಹೆಚ್ಚಿನ ಜನ ಒಳ್ಳೆಯತನದ ಸಮಸ್ಯೆಯಿಂದ ನರಳುತ್ತಿರುವವರು. ಅವರಿಗೆ ಪ್ರತಿಭಟಿಸುವ ಆಸೆ ಇದೆ ಆದರೆ ಧೈರ್ಯ ಇಲ್ಲ. ಆ ಸಮಸ್ಯೆ ಇರದ ಹೀರೋಗಳಿರುವ ಚಿತ್ರಗಳನ್ನು ಅವರು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಗೆಲ್ಲಿಸುತ್ತಾರೆ. ಆದರೆ ಮನೆಗೆ ಬಂದ ಮೇಲೆ ಮತ್ತೆ ಒಳ್ಳೆಯತನದ ಮುಸುಕು ಹೊತ್ತು ಮಲಗುತ್ತಾರೆ. ಅನ್ಯಾಯದ ವಿರುದ್ಧ ಪ್ರತಿಭಟಿಸಲು ಮಚ್ಚು ಹಿಡಿಯಲೇಬೇಕು ಎಂದಿಲ್ಲ. ಅನ್ಯಾಯ ಮಾಡುವವರ ಹಾದಿಯನ್ನು ಅಸಹಕಾರದಿಂದ ಕಠಿಣಗೊಳಿಸಬಹುದು. ಆಗ ಅನ್ಯಾಯಗಳ ಪ್ರಮಾಣ ಕಡಿಮೆ ಆಗುತ್ತಾ ಹೋಗುತ್ತವೆ. 


ಆದರೆ ನಮಗೇಕೆ ಬೇಕು ಹೋರಾಟದ ಉಸಾಬರಿ? ನಾವೆಲ್ಲ 'ಕಾಂತಾರ' ಮತ್ತು 'ಹೆಡ್ ಬುಷ್' ವೀಕ್ಷಿಸಿ ಆನಂದಿಸುವ ಒಳ್ಳೆಯವರು ಅಷ್ಟೇ. ನೀವೇನಂತೀರಿ?

No comments:

Post a Comment