Thursday, November 10, 2022

ಆಸ್ತಿ ಎನ್ನುವ ಉರುಳು ಕಂಟಕ

ಎರಡು ವರುಷದ ಹಿಂದೆ 'ಆಸ್ತಿ ಜಗಳಗಳ ಸುತ್ತ' ಎನ್ನುವ ಕಿರು ಲೇಖನ ಬರೆದಿದ್ದೆ. ಮೂರು ತಲೆಮಾರುಗಳಕ್ಕಿಂತ ಹೆಚ್ಚಿಗೆ ಉಳಿಯದ ಆಸ್ತಿಗೆ ಬಡಿದಾಡಿ ಜನ ಹೇಗೆ ನೆಮ್ಮದಿ ಕಳೆದುಕೊಳ್ಳುತ್ತಾರೆ ಎನ್ನುವುದರ ಕುರಿತ ಲೇಖನ ಅದಾಗಿತ್ತು. (https://booksmarketsandplaces.blogspot.com/2020/01/blog-post.html). ಆಗ ಆಸ್ತಿ ಎನ್ನುವುದು ಉರುಳು ಕಂಟಕ ಎನ್ನುವ ಸ್ಪಷ್ಟತೆ ಮೂಡಿರಲಿಲ್ಲ.


ಆಸ್ತಿ ತರುವ ಅಧಿಕಾರ, ದವಲತ್ತು, ಸವಲತ್ತುಗಳು ಯಾರಿಗೆ ಬೇಡ? ಆದರೆ ಅದರ ಜೊತೆಗೆ ಆಪತ್ತುಗಳು ಕೂಡ ಬರುತ್ತವೆ. ಅದು ನಿಮ್ಮನ್ನು ನಿಮ್ಮ ಇಷ್ಟದ ಹಾಗೆ ಬದುಕಲು ಬಿಡುವುದಿಲ್ಲ. ನಿಮ್ಮವರೇ ನಿಮ್ಮಿಂದ ದೂರಾಗುತ್ತಾರೆ. ಅದುವರೆಗೆ ನಿಮ್ಮ ಮೇಲೆ ಬೀಳದ ಬೇಟೆಗಣ್ಣುಗಳು ನಿಮ್ಮ ಮೇಲೆ ಬೀಳತೊಡಗುತ್ತವೆ. ಕ್ರಮೇಣ ನೀವು ವರ್ತಿಸುವ ರೀತಿಯೇ ಬದಲಾಗಿಬಿಡುತ್ತದೆ.


ನೀವು ಶಂಕರ್ ನಾಗ್ ನಿರ್ದೇಶನದ, ಅಣ್ಣಾವ್ರು ಅಭಿನಯದ 'ಒಂದು ಮುತ್ತಿನ ಕಥೆ' ಚಿತ್ರ ನೋಡಿದ್ದೀರಾ? ಅದರಲ್ಲಿ ಸಮುದ್ರಾಳದಲಿ ಮುತ್ತು ಹುಡುಕುವ ಕಥಾ ನಾಯಕನಿಗೆ ಅಸಾಧಾರಣ ಗಾತ್ರದ, ಬೆಲೆ ಕಟ್ಟಲಾಗದ ಒಂದು ಮುತ್ತು ಸಿಗುತ್ತದೆ. ಅದರಿಂದ ತನ್ನ ಬಾಳು ಬದಲಾಗುತ್ತದೆ. ತನ್ನ ಮಗನನ್ನು ಶಾಲೆಗೆ ಕಳುಹಿಸಿ ಓದಿಸಬಹುದು ಎಂದೆಲ್ಲ ಅವನು ಕನಸು ಕಟ್ಟುತ್ತಾನೆ. ಆದರೆ ಅಲ್ಲಿಂದಲೇ ಅವನಿಗೆ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತದೆ. ಅದನ್ನು ಕೊಂಡುಕೊಳ್ಳಲು ವ್ಯಾಪಾರಸ್ಥರು ತಂತ್ರಗಾರಿಕೆ ಹೂಡುತ್ತಾರೆ. ಮಗನನ್ನು ಚಿಕಿತ್ಸೆಗೆಂದು ಕರೆದುಕೊಂಡು ಹೋದರೆ ವೈದ್ಯ ಆ ಮುತ್ತು ಕೊಡದಿದ್ದರೆ ಅವನ ಮಗನನ್ನು ಸಾಯಿಸುವುದಾಗಿ ಬೆದರಿಸುತ್ತಾನೆ. ದೇವಸ್ಥಾನ ಪೂಜಾರಿ ಮುತ್ತು ಕೊಟ್ಟರೆ ಮಾತ್ರ ಪೂಜೆ, ಇಲ್ಲದಿದ್ದರೆ ಇಲ್ಲ ಎಂದು ನಿರಾಕರಿಸುತ್ತಾನೆ. ಅಣ್ಣನ ಹಾಗೆ ಜೊತೆಗಿದ್ದವನು ಆ ಮುತ್ತು ಕದಿಯಲು ಪ್ರಯತ್ನಿಸುತ್ತಾನೆ. ಸ್ನೇಹಿತರೆಲ್ಲ ದೂರಾಗುತ್ತಾರೆ. ನಾಯಕನ ಮೇಲೆ ಮಾರಣಾಂತಿಕ ಹಲ್ಲೆಗಳಾಗುತ್ತವೆ. ಕೊನೆಗೆ ಅವನು ಆ ಮುತ್ತನ್ನು ಮತ್ತೆ ಸಮುದ್ರಕ್ಕೆ ಬೀಸಾಡಿ ಬರುವುದರೊಂದಿಗೆ ಆ ಚಿತ್ರ ಮುಗಿಯುತ್ತದೆ.


ಜಗತ್ತಿನ ಅಧಿಕಾರವೆಲ್ಲ ತನ್ನದಾಗಬೇಕು ಎಂದು ಬಯಸಿದ್ದ ಅಲೆಕ್ಸಾಂಡರ್. ಅವನು ಪರ್ಶಿಯಾದ ರಾಜನ ವಿರುದ್ಧ ಯುದ್ಧಕ್ಕೆ ಇಳಿದಾಗ, ಆ ಯುದ್ಧದಲ್ಲಿ ಎಲ್ಲರ ಕಣ್ಣು ಅಲೆಕ್ಸಾಂಡರ್ ಮೇಲೆ. ಕೆಂಪು ಶಿರಸ್ತ್ರಾಣ ಧರಿಸಿ, ಶ್ವೇತ ಕುದುರೆಯ ಬೆನ್ನೇರಿದವನ ಕಥೆ ಮುಗಿಸಲು ಎಲ್ಲ ಶತ್ರು ಸೈನಿಕರ  ಪ್ರಯತ್ನ. ಆದರೆ ಅಲೆಕ್ಸಾಂಡರ್ ತಲೆ ಕಾಯಲು ಒಂದು ದೊಡ್ಡ ಹಿಂಡೇ ಇತ್ತು. ಆ ಯುದ್ಧ ಅವನು ಗೆದ್ದರೂ, ಅವನ ಅದೃಷ್ಟ ಹಾಗೆ ಉಳಿಯುವುದಿಲ್ಲ. ಮುಂದೊಂದು ಯುದ್ಧದಲ್ಲಿ ಎದೆಗೆ ಬಿದ್ದ ಬಾಣ ಮಾಡಿದ ಗಾಯ ವಾಸಿಯಾಗದೆ ಅವನು ಅಸು ನೀಗುತ್ತಾನೆ. ಅವನ ಸೈನಿಕರಲ್ಲೇ ಪಂಗಡಗಳಾಗುತ್ತವೆ. ಅವನ ಹೆಣ ಕೂಡ ತಾಯ್ನಾಡಿಗೆ ಮರಳುವುದಿಲ್ಲ.


ಮೊಗಲ್ ದೊರೆಗಳನ್ನು ಗಮನಿಸಿ ನೋಡಿ. ಶಾಹ್ ಜಹಾನ್ ಮಗನಿಂದ ಬಂದಿಸಲ್ಪುಡುತ್ತಾನೆ. ಔರಂಗಜೇಬ್ ತನ್ನ ಸೋದರ ಸೋದರಿಯನ್ನೆಲ್ಲ ಯಮ ಪುರಿಗೆ ಅಟ್ಟುತ್ತಾನೆ. ವಿಜಯನಗರ ಸಾಮ್ರಾಜ್ಯ ಇತಿಹಾಸ ಗಮನಿಸಿ ನೋಡಿ. ಆ ರಾಜರುಗಳು ಯುದ್ಧ ಭೂಮಿಯಲ್ಲಿ ಪ್ರಾಣ ಬಿಟ್ಟದ್ದಕ್ಕಿಂತ, ಅಣ್ಣ ತಮ್ಮಂದಿರು ಹಾಕಿದ ವಿಷಕ್ಕೆ ಪ್ರಾಣ ಬಿಟ್ಟ ಪ್ರಕರಣಗಳೇ ಹೆಚ್ಚು. ಮುಂದೆ ರಾಜಾಧಿಕಾರದ ಬದಲು ಪ್ರಜಾಪ್ರಭುತ್ವ ಬಂತು. ಐದು ವರ್ಷಕ್ಕೆ ಒಮ್ಮೆ ಒಬ್ಬನಿಗೆ ರಾಜನಾಗುವ ಅವಕಾಶ. ಅದು ರಕ್ತಪಾತಗಳನ್ನು ಕಡಿಮೆ ಮಾಡಿದರೂ, ತಂತ್ರಗಾರಿಕೆ ನಿಲ್ಲಲಿಲ್ಲ. ನಮ್ಮ ಯಡಿಯೂರಪ್ಪನವರು ಎಷ್ಟು ಸಲ ಗದ್ದುಗೆ ಏರಿ ಅದನ್ನು ಕಳೆದುಕೊಂಡರು ನೆನಪಿಸಿಕೊಳ್ಳಿ.


ಇವೆಲ್ಲ ದೊಡ್ಡವರ ಕಥೆ ಆದರೆ, ನಮ್ಮಂತ ಸಾಧಾರಣ ಜನರ ಕಥೆ ಏನು ವಿಭಿನ್ನ ಅಲ್ಲ. ನಿಮಗೆ ಸ್ವಂತ ಮನೆ, ಹೊಲ, ಅಸ್ತಿ-ಪಾಸ್ತಿ ಇಲ್ಲವೇ? ನೀವು ಎಷ್ಟು ಅದೃಷ್ಟವಂತರು ಎಂದು ನಿಮಗೆ ಗೊತ್ತೇ  ಇಲ್ಲ. ನಿಮಗೆ ಇರುವ ನೆಮ್ಮದಿ ಯಾರು ಸುಲಭದಲ್ಲಿ ಕಸಿದುಕೊಳ್ಳಲು ಸಾಧ್ಯ ಇಲ್ಲ. ನೀವು ಪುಟದೊಂದು ಮನೆ ಕಟ್ಟಿಸಿಕೊಂಡಿದ್ದೀರಿ. ಆದರೆ ನಿಮ್ಮ ಸೋದರರಿಗೆ ಅದು ಸಾಧ್ಯ ಆಗಿಲ್ಲವೇ? ಆಗ ನಿಮಗೆ ಅಸೂಯೆಯ ಬಿಸಿ ತಟ್ಟುತ್ತಲೇ ಇರುತ್ತದೆ. ಅವರ-ನಿಮ್ಮ ಸಂಬಂಧದಲ್ಲಿ ವಿಶ್ವಾಸ ಸಾಧ್ಯವಿಲ್ಲ. ನಿಮ್ಮ ಬಂಧುಗಳೆಲ್ಲ ಬಡವರು ಆಗಿದ್ದು, ನೀವೊಬ್ಬರು ಮಾತ್ರ ಅನುಕೂಲಸ್ಥರು ಆಗಿದ್ದರೆ, ನಿಮ್ಮದು ರಣರಂಗದಲ್ಲಿನ ಅಲೆಕ್ಸಾಂಡರ್ ಪರಿಸ್ಥಿತಿ.


ಆಸ್ತಿ ಗಳಿಸುವುದಕ್ಕಿಂತ ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆ. ಮೈಸೂರು ಮಹಾರಾಜರು ಮಾಡಿದ್ದ ಆಸ್ತಿ ಏನು ಕಡಿಮೆಯೇ? ಇಂದಿಗೆ ಅವರ ಕುಟುಂಬದವರು ಆ ಆಸ್ತಿ ಉಳಿಸಿಕೊಳ್ಳಲು ಮಾಡುತ್ತಿರುವ ಕಾನೂನು ಸಮರಗಳನ್ನು, ಹರ ಸಾಹಸಗಳನ್ನು ಗಮನಿಸಿ ನೋಡಿ. ಅವರು ತಮ್ಮ ಜೀವನ ಶಕ್ತಿಯನ್ನೆಲ್ಲ ಅದಕ್ಕೆ ವ್ಯಯಿಸುತ್ತಿದ್ದಾರೆ.


ಬೆಂಗಳೂರಿನಲ್ಲಿ ದೊಡ್ಡ ಆಸ್ತಿ ಮಾಡಿ ರಿಯಲ್ ಎಸ್ಟೇಟ್ ಧಂಧೆಯಲ್ಲರುವ ಜನರನ್ನು ಗಮನಿಸಿ ನೋಡಿ. ಅವರು ಎಲ್ಲಿ ಹೋದರೂ ಒಬ್ಬರೇ ಹೋಗುವುದಿಲ್ಲ. ಅವರ ಹಿಂದೇ-ಮುಂದೆ ಹುಡುಗರ ಪಡೆಯನ್ನೇ ಕಟ್ಟಿಕೊಂಡು ಬರುತ್ತಾರೆ. ಅವರಿಗೆ ಯಾವಾಗ ಬೇಕಾದರೂ ಜೀವ ಹೋಗಬಹುದು ಎನ್ನುವ ಭಯ. ಅವರು ಶತ್ರುಗಳ ಕೈಯಲ್ಲಿ ಸಾಯುವುದಕ್ಕಿಂತ ತಮ್ಮ ಬಂಧುಗಳ ಹಾಕುವ ವಿಷಕ್ಕೆ ಸತ್ತು ಹೋಗುತ್ತಾರೆ. ಆ ವಿಷಯಗಳು ಖಾಸಗಿ ಆದ್ದರಿಂದ ಅವು ಎಲ್ಲೂ ಸುದ್ದಿಯಾಗುವುದಿಲ್ಲ. ಆಗ ಆಸ್ತಿಗೆ ಇನ್ನೊಬ್ಬ ಒಡೆಯ. ಅವನ ಜೀವನ ಕಾಲ ಎಷ್ಟೋ?


ಸುಮಾರು ೪.೫ ಶತಕೋಟಿ (ಬಿಲಿಯನ್) ವರ್ಷ ಇತಿಹಾಸ ಇರುವ ಭೂಮಿ, ತನಗೆ ಯಾರಾದರೂ ಒಡೆಯನು ಇದ್ದಾನೆ ಎಂದರೆ ಗಹ ಗಹಿಸಿ ನಗುತ್ತದೆ. ಅವನನ್ನು ತನ್ನಲ್ಲಿ ಲೀನವಾಗಿಸಿ ಇನ್ನೊಬ್ಬನಿಗೆ ಅವಕಾಶ ಮಾಡಿಕೊಡುತ್ತದೆ.

ಮನುಷ್ಯ ಕಲಿಯುವುದಿಲ್ಲ. ಕಲಿತ ಮನುಷ್ಯ ಆಸ್ತಿಗೆ ಆಸೆ ಪಡುವುದಿಲ್ಲ.

No comments:

Post a Comment