'ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯ ಇಲ್ಲ' ಎನ್ನುವುದು ಸಾಕಷ್ಟು ಜನರ ಅನುಭವದ ಮಾತು. ಹಾಗೆಯೇ ಮುಂದೆ ಹೋಗಿ 'ಕೆಟ್ಟ ಮಗ ಹುಟ್ಟಬಹುದು ಆದರೆ ಕೆಟ್ಟ ಮಗಳು ಹುಟ್ಟಲು ಸಾಧ್ಯ ಇಲ್ಲ' ಎಂದು ಕೂಡ ಹೇಳಬಹುದು. ಸಾಕಷ್ಟು ಜನ ತಂದೆಯರಿಗೆ ತಮ್ಮ ಹೆಣ್ಣು ಮಕ್ಕಳೆಂದರೆ ಹೆಮ್ಮೆ. ಕಡೆಯ ಕಾಲದಲ್ಲಿ ಗಂಡು ಮಕ್ಕಳು - ಸೊಸೆಯಂದಿರು ಊಟ ಹಾಕದಿದ್ದಾಗ ತಮ್ಮ ತಂದೆ-ತಾಯಿಯನ್ನು ಸಲಹುವ ಹಲವಾರು ಹೆಣ್ಣು ಮಕ್ಕಳನ್ನು ನಾನು ನೋಡಿದ್ದೇನೆ. ತಂದೆ-ತಾಯಿಗೆ ಧೈರ್ಯ ಹೇಳುವ ಕೆಲಸ ಬೆಳೆದ ಹೆಣ್ಣು ಮಕ್ಕಳು ಮಾಡಿದರೆ, ಹೆಚ್ಚಿನ ಗಂಡು ಮಕ್ಕಳು ಅವರ ಪೋಷಕರಿಗೆ ತಲೆ ನೋವಾಗಿರುತ್ತಾರೆ.
ಹೆಣ್ಣು ಮಕ್ಕಳ ಮೇಲೆ ಇರುವ ಪ್ರೀತಿ, ತಂದೆಗೆ ಗಂಡು ಮಕ್ಕಳ ಮೇಲೆ ಇರಲು ಸಾಧ್ಯ ಇಲ್ಲ. ಹಾಗೆಯೆ ಹೆಣ್ಣು ಮಕ್ಕಳಿಗೆ ಕೂಡ ತಂದೆಯೇ ಅವರ ಜೀವನದ ಮೊದಲ ಹೀರೋ. ಬೇರೆ ಯಾರು ಆ ಸ್ಥಾನಕ್ಕೆ ಪೈಪೋಟಿ ನೀಡಲು ಸಾಧ್ಯ ಇಲ್ಲವೇ ಇಲ್ಲ. ಇದನ್ನು ಬಹಳಷ್ಟು ಕುಟುಂಬಗಳಲ್ಲಿ ಗಮನಿಸಬಹುದು. ತಂದೆಯ ದೌರ್ಬಲ್ಯಗಳನ್ನು ಮಗಳು ಮುಚ್ಚಿ ಹಾಕಿದರೆ, ತಂದೆಗೆ ಅವನ ಮಗಳಲ್ಲಿ ದೌರ್ಬಲ್ಯಗಳನ್ನು ಹುಡುಕುವುದು ಸಾಧ್ಯವೇ ಆಗುವುದಿಲ್ಲ. ಪ್ರಕೃತಿ ಹುಟ್ಟು ಹಾಕಿದ ಈ ತಂದೆ-ಮಗಳ ಸಂಬಂಧ, ಮಗಳು ಮದುವೆ ಆಗುವವರೆಗೆ ಚೆನ್ನಾಗಿಯೇ ಇರುತ್ತದೆ. ಆದರೆ ಅಲ್ಲಿಂದ ಅದು ಬೇರೆಯೇ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ.
ಮಗಳು ತನ್ನ ತಂದೆಯ ಮೇಲೆ ತೋರಿದ ಪ್ರೇಮ, ಮದುವೆ ಆದ ನಂತರ ಮಗಳು ತನ್ನ ಗಂಡ ಮತ್ತು ಅವನ ಕುಟುಂಬದವರ ಜೊತೆ ತೋರಲು ಸಾಧ್ಯ ಇಲ್ಲ. ತಂದೆ ಸೋಂಭೇರಿ ಆಗಿದ್ದರೂ ಸಹಿಸಿಕೊಳ್ಳುವ ಮಗಳು, ತನ್ನ ಗಂಡ-ಮಾವ-ಅತ್ತೆ ಸೋಂಭೇರಿಗಳಾಗಿದ್ದರೆ ಯಾವುದೇ ಮುಲಾಜಿಲ್ಲದೆ ಮಾನ ಹರಾಜು ಮಾಡಿಬಿಡುತ್ತಾಳೆ. ಇದು ಕೂಡ ಸಾಕಷ್ಟು ಮನೆಗಳ ಸಂಗತಿ.
ಆದರೆ ಆ ಮಗಳಲ್ಲಿ ಕೂಡ ಲೋಪ-ದೋಷಗಳು ಇರುತ್ತಲ್ಲವೇ? ಅದನ್ನು ಮಗಳು ತನ್ನ ಮನೆಯಲ್ಲಿದ್ದಾಗ ಮುಚ್ಚಿ ಹಾಕಿದ ಹಾಗೆ, ಮದುವೆ ಆದ ನಂತರ ಕೂಡ ಅವನ ಮಗಳ ಕುಟುಂಬದಲ್ಲಿ ತಲೆ ಹಾಕಿ ಅವುಗಳನ್ನು ಮುಚ್ಚಿ ಹಾಕುತ್ತ ಹೋದರೆ, ಆ ತಂದೆ ಬಹು ಬೇಗ ಮರ್ಯಾದೆ ಕಳೆದು ಕೊಳ್ಳುತ್ತಾನೆ. ಅವನಿಗೆ ಮಗಳು ಮಾಡುವ ಕೆಲಸಗಳು ಸಹಜ ಅನ್ನಿಸಬಹುದು. ಆದರೆ ಅದೇ ಕೆಲಸಗಳನ್ನು ಅವನ ಸೊಸೆ ಮಾಡಿದರೆ ಅವನು ಸಹಿಸಿಕೊಳ್ಳುವುದಿಲ್ಲ. ಈ ತರಹದ ವಿರೋಧಾಭಾಸಗಳು ಅವನ ಮಗಳು ತಪ್ಪು ತಿದ್ದಿಕೊಳ್ಳುವುದು ಬಿಟ್ಟು, ಅವುಗಳನ್ನು ಹೆಚ್ಚಿಗೆ ಮಾಡುವಂತೆ ಪ್ರಚೋದಿಸುತ್ತವೆ. ಇತ್ತೀಚಿಗೆ ಮದುವೆ ಮುರಿದು ಬಿದ್ದ ಕುಟುಂಬಗಳನ್ನು ಗಮನಿಸುತ್ತಾ ಹೋದರೆ ಅಲ್ಲಿ ಮಗಳಿಗೆ ಬುದ್ಧಿ ಹೇಳದ ತಂದೆಯ ಪಾತ್ರ ಕೂಡ ಗಮನಿಸಬಹುದು.
ತಂದೆಯ ಹತ್ತಿರ ಮಗಳು ಹೇಗೆ ನಡೆಕೊಳ್ಳುತ್ತಾಳೋ, ಅವಳು ಇತರರ ಜೊತೆ ಹಾಗೆ ನಡೆದು ಕೊಳ್ಳುತ್ತಿರುವುದಿಲ್ಲ. ಇದನ್ನು ಗಮನಿಸಲು ತಂದೆ ಸೋತು ಹೋಗುತ್ತಾನೆ. ಮಗಳ ಮೇಲಿನ ಕುರುಡು ಪ್ರೇಮ ಕೂಡ ಅದಕ್ಕೆ ಕಾರಣ ಆಗಿರುತ್ತದೆ. ಅವನು ಮಗಳು ಕೂಡ ತಂದೆ ಜೊತೆ ಸಂಬಂಧ ನಿಭಾಯಿಸಿದ ಹಾಗೆ ಉಳಿದ ಸಂಬಂಧಗಳನ್ನು ನಿಭಾಯಿಸಲು ಸೋತು ಹೋಗುತ್ತಾಳೆ.
ತಂದೆ ಸತ್ತ ಮೇಲೆ ಮಗಳ ಜೀವನ ಮುಂದುವರೆಯಬೇಕಲ್ಲವೇ? ಮಗಳಿಗೆ ಬೇಕಿರುವುದು ತಂದೆಯ ವಿವೇಕ ಮತ್ತು ಅನುಭವ ಅಲ್ಲದೇ ತಂದೆಯ ಮಿತಿ ಮೀರಿದ ಪ್ರೇಮ ಅಲ್ಲ. ಕ್ಷಮಿಸಿ, ಇದು ಎಲ್ಲ ಮನೆಯಲ್ಲಿ ನಡೆಯುವ ಸಂಗತಿ ಅಲ್ಲ. ಆದರೆ ಅನವಶ್ಯಕ ಎನ್ನಿಸುವಷ್ಟು ಮಗಳಿಗೆ ಬೆಂಬಲ ನೀಡುವ ತಂದೆ ಇದ್ದರೆ, ಆ ಮಗಳು ತನ್ನ ಗಂಡನ ಮನೆ ಬಿಟ್ಟು ಬರುವ ಸಾಧ್ಯತೆಗಳು ಕೂಡ ಅಷ್ಟೇ ಜಾಸ್ತಿ ಎನ್ನುವುದು ನನ್ನ ಸ್ವಂತ ಅನುಭವ.
No comments:
Post a Comment