'ಛೆ! ಅವರು ಹೀಗೆ ಮಾಡಬಾರದಾಗಿತ್ತು" ಎಂದು ಕೆಲವೊಂದು ಸಲ ನಾವು ಹೇಳುತ್ತಿರುತ್ತಿವೆ. ಯಾರೋ ಹಾಗೆ ಮಾಡಿದ್ದರೆ ನಾವು ಚಿಂತೆ ಮಾಡುತ್ತಿರಲಿಲ್ಲ. ಆದರೆ ನಮ್ಮ ಬಂಧು, ಸ್ನೇಹಿತರು, ಹತ್ತಿರದವರು ನಾವು ಅಂದುಕೊಳ್ಳದ ರೀತಿಯಲ್ಲಿ ವರ್ತಿಸಿರುತ್ತಾರೆ. ಅದು ನಮಗೆ ಬೇಸರ ಮೂಡಿಸಿ ಈ ಮಾತು ನಮ್ಮಿಂದ ಹೊರಬಿದ್ದಿರುತ್ತದೆ.
ಅವರು ಏಕೆ ಹಾಗೆ ಮಾಡಿದರು ಅನ್ನುವುದಕ್ಕೆ ಹಲವಾರು ಕಾರಣಗಳಿರಬಹುದು. ಆಕಸ್ಮಿಕವೋ, ಗೊತ್ತಿಲ್ಲದೆಯೋ, ಪರಿಸ್ಥಿತಿಯ ಒತ್ತಡದಿಂದಲೋ ಅಥವಾ ಗೊತ್ತಿದ್ದೂ ನಿಮಗೆ ನೋವುಂಟು ಮಾಡಲು ಎಂದೇ ಅವರು ಹಾಗೆ ಮಾಡಿರಬಹುದು. ನೀವು ಅವರನ್ನೇ ಕೇಳಿ ನೋಡಿ, ಆಗ ಪ್ರಾಮಾಣಿಕ, ಸಮಂಜಸ ಎನ್ನುವ ಉತ್ತರ ಬರದಿದ್ದರೆ ಅದು ನೀವು ಜಾಗೃತ ಆಗುವ ಸಮಯ. ನಿಮ್ಮನ್ನು ಬಲಿಪಶು ಮಾಡಲೆಂದೇ ಅಥವಾ ನಿಮ್ಮನ್ನು ದುರುಪಯೋಗ ಮಾಡಿಕೊಳ್ಳಲೆಂದೇ ಅವರು ಹಾಗೆ ವರ್ತಿಸಿದ್ದರೆ, ನಿಮಗೆ ನೀವು ಬೇರೆ ಪ್ರಶ್ನೆಗಳನ್ನು ಕೇಳಿಕೊಳ್ಳಲೇಬೇಕು ಎನ್ನುವ ಸಮಯ.
ಅವರು ಹೇಗೆ ವರ್ತಿಸಬೇಕಿತ್ತು ಎನ್ನುವದಕ್ಕಿಂತ, ಆಗ ನೀವು ಏನು ಮಾಡಬಹುದಾಗಿತ್ತು ಎನ್ನುವ ವಿಚಾರವೇ ಹೆಚ್ಚು ಉಪಯೋಗಕರ. ಅವರಿಗೆ ತಮಗೆ ಹೇಗೆ ಬೇಕು ಹಾಗೆ ವರ್ತಿಸಿದರು. ಅಲ್ಲಿ ನೀವು ಮಾಡುವುದು ಏನು ಇಲ್ಲ. ಆದರೆ ಅದು ಪುನರಾವರ್ತನೆ ಆಗುವುದಿಲ್ಲ ಎಂದು ಏನು ಗ್ಯಾರಂಟಿ? ಹಾಗಾಗಿ, ಅವರ ಆ ರೀತಿಯ ವರ್ತನೆಗೆ ಮೂಲ ಕಾರಣ ಹುಡುಕುವುದಕ್ಕಿಂತ, ನೀವು ಬೇರೆಯ ಕೆಲಸಕ್ಕೆ ತೊಡಗಬೇಕು. ಆ ಪರಿಸ್ಥಿತಿಯಲ್ಲಿ ನಿಮಗಿರುವ ಆಯ್ಕೆಗಳು ಏನು? ನಿಮ್ಮ ಯಾವ ಪ್ರತಿಕ್ರಿಯೆ ನಿಮ್ಮನ್ನು ಬಲಿಪಶು ಆಗದಂತೆ ತಡೆಯುತ್ತದೆ ಎಂದು ವಿಚಾರ ಮಾಡಿ ನೋಡಿ. ನಿಮಗೆ ಅವರಿಂದಾಗುವ ಹಾನಿಯನ್ನು ಹೇಗೆ ಕಡಿಮೆ ಮಾಡಬಹುದು ಎನ್ನುವ ಕಡೆಗೆ ಲಕ್ಷ್ಯ ಹರಿಸಿ. ನೀವು ನೀಡುವ ಪ್ರತಿಕ್ರಿಯೆ ನೀವು ಮೂಕ ಪ್ರೇಕ್ಷಕರಾಗುವುದನ್ನು ತಪ್ಪಿಸಿ, ಪರಿಸ್ಥಿತಿ ಮತ್ತೆ ನಿಮ್ಮ ಹತೋಟಿಗೆ ಸಿಗುವ ಪ್ರಕ್ರಿಯೆ ಆಗಿರಬೇಕು.
ಪ್ರತಿಯೊಂದು ಸಲ ನೀವು ಗೆದ್ದೇ ಬಿಡುವಿರಿ ಎಂದೇನಿಲ್ಲ. ಆದರೆ ನೀವೀಗ ಮೂಕ ಪ್ರೇಕ್ಷಕರಲ್ಲ, ನೀವೂ ಒಬ್ಬ ಆಟಗಾರರು. ಆಟದಲ್ಲಿನ ಪ್ರತಿಯೊಬ್ಬರ ಮೇಲಿನ ನಿಮ್ಮ ನಿಗಾ, ಅವರ ನಡೆಯನ್ನು ಮೊದಲೇ ಊಹಿಸುವಂತೆ ಮಾಡುತ್ತದೆ. ಅವರ ಪಟ್ಟುಗಳ ಅಂದಾಜು ನಿಮಗೆ ಸಿಗತೊಡಗುತ್ತದೆ. ಅವರು ಹಿಂದೆ ನಿಮಗೆ ಉಂಟು ಮಾಡಿದ್ದ ಆಶ್ಚರ್ಯ ನಡೆಗೆ ಈಗ ಅವಕಾಶವೇ ಇಲ್ಲ. ನಿಮ್ಮನ್ನು ಸುಲಭದಲ್ಲಿ ಸಿಕ್ಕಿಸಿ, ನಿಮಗೆ ನೋವುಂಟು ಮಾಡುವ ಅವರ ಉದ್ದೇಶಗಳಿಗೆ ನೀವು ನೀಡುವ ಪ್ರತಿರೋಧ ನಿಮ್ಮನ್ನು ರಕ್ಷಿಸುತ್ತದೆ. ಈ ವಿದ್ಯೆ ನಿಮಗೆ ಕೈಗತವಾದಾಗ, ನೀವು ಇತರೆ ಬಲಿಪಶುಗಳಿಗೆ ಪರಿಸ್ಥಿತಿಯ ತಿಳುವಳಿಕೆ ನೀಡಿ ಎಚ್ಚರ ಮಾಡಿದರೆ ಆಗ ನೀವೇ ಒಬ್ಬ ಹೀರೋ. ನೀವು ನಿಸ್ಸಹಾಯಕರಲ್ಲ ಎನ್ನುವ ಸಂದೇಶ ಸ್ಪಷ್ಟವಾಗಿ ತಲುಪಿದರೆ ಸಾಕು. ನಿಮ್ಮ ಹಿತ ಶತ್ರುಗಳ ಆಟ ಕಳೆಗುಂದುತ್ತದೆ.
ನೆನಪಿಡಿ, ಅವರು ಏನು ಮಾಡಿದರು ಎನ್ನುವುದು ಮುಖ್ಯವಲ್ಲ, ನೀವು ಹೇಗೆ ಪ್ರತಿಕ್ರಿಯೆ ನೀಡಿದಿರಿ ಎನ್ನುವುದೇ ಮುಖ್ಯ. ಇನ್ನೊಮ್ಮೆ ಯಾವಾಗಾದರೂ "ಅವರು ಹೀಗೆ ಮಾಡಬಾರದಾಗಿತ್ತು" ಅನ್ನಿಸಿದರೆ, ಅದರಿಂದ ನೀವು ಕಲಿತದ್ದು ಏನು ಎಂದು ತೀರ್ಮಾನಿಸಿ ಮತ್ತು ಇನ್ನೊಮ್ಮೆ ಹಾಗೆ ಆಗುವ ಅವಕಾಶ ನೀಡಬೇಡಿ.