Thursday, December 3, 2020

ಕೈಯಲ್ಲಿನ ಫೋನ್ ಬದಲಿಸಿದ ನಮ್ಮ ಜೀವನ ಶೈಲಿಗಳು

"ಊರಿಗೆ ಹೋದ ಮೇಲೆ ಪತ್ರ ಬರಿ". ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬಸ್ ಸ್ಟಾಂಡ್ ನಲ್ಲಿ ಬಸ್ ಹತ್ತಿಸಲು ಬಂದವರು ಹೇಳುತ್ತಿದ್ದ ಸಾಮಾನ್ಯ ಮಾತು. ಇಂದಿಗೆ ಬಸ್ ಹತ್ತಿಸಲು ಬರುವವರ ಸಂಖ್ಯೆಯೂ ಕಡಿಮೆ. ಬರುವ ಒಬ್ಬಿಬ್ಬರು 'ಆಮೇಲೆ ಫೋನ್ ಮಾಡು' ಎಂದು ಹೇಳಿ ಹೊರಡುತ್ತಾರೆ. ಹೋಗುತ್ತಿರುವುದು ಖಾಸಗಿ ಬಸ್ ನಲ್ಲಾದರೆ ಸೀಟು ಹಿಡಿಯುವ ತಾಪತ್ರಯವು ಇಲ್ಲ ಮತ್ತು ಬ್ಯಾಗ್ ಎತ್ತಿಡಲು ಸಹಾಯವೂ ದೊರೆಯುತ್ತದೆ. ಹಾಗಾಗಿ ಊರಿಂದೂರಿಗೆ ಪ್ರಯಾಣ ಇವತ್ತಿಗೆ 'ಚಾ ಕುಡಿದ್ರಾ' ಎಂದು ಕೇಳಿದಷ್ಟೇ ಸುಲಭ. ಹಾಗಾಗಿ ಪ್ರಯಾಣಿಕರ ಮುಖದ ಮೇಲೆ ಯಾವುದೇ ಆತಂಕ ಕಾಣುವುದಿಲ್ಲ. ವಿದೇಶಕ್ಕೆ ಹೋಗುವವರು ಸಹ ಕೈ ಬೀಸಿ ಮುಗುಳ್ನಕ್ಕು ಮತ್ತೆ ಸಿಗುವ ಎನ್ನುವ ಮುಖ ಭಾವ ಹೊತ್ತು ಸಾಗುತ್ತಾರೆ. ಕೈಯಲ್ಲಿನ ಫೋನ್ ಮತ್ತು ನಮ್ಮ ಹೆಬ್ಬೆರಳ ತುದಿಯಲ್ಲಿ ಸಿಗುವ ಸಂಪರ್ಕ ವಿಶಾಲ ಜಗತ್ತನ್ನು ಒಂದು ಚಿಕ್ಕ ಹಳ್ಳಿಯನ್ನಾಗಿ ಮಾರ್ಪಡಿಸಿದೆ.


ಇಂದು ಮಳೆ ಬರಬಹುದೋ ಎಂದು ಆಕಾಶದೆಡೆಗೆ ತಲೆ ಎತ್ತಿ, ಅಂಗೈಯನ್ನು ಹಣೆಯ  ಮೇಲಿಟ್ಟುಕೊಂಡು, ಮೋಡಗಳನ್ನು ದಿಟ್ಟಿಸುವ ಕಾಲವೂ ಮುಗಿದು ಹೋಗಿದೆ. ಸ್ಮಾರ್ಟ್ ಫೋನ್ ನಲ್ಲಿ ಇರುವ ಗೂಗಲ್ ನಲ್ಲಿ ಮಳೆ ಬರುವುದರ ಮುನ್ಸೂಚನೆ ತಾಸು-ತಾಸಿನ ಲೆಕ್ಕದಲ್ಲಿ ಸಿಗುತ್ತದೆ. ಮೊನ್ನೆ ಬೆಂಗಳೂರಿನ ಎಫ್.ಎಂ. ರೇಡಿಯೋ ನಲ್ಲಿ, ಪಿ. ಬಿ. ಶ್ರೀನಿವಾಸ್ ರವರು ಹಾಡಿದ ಹಳೆಯ ಚಲನ ಚಿತ್ರ ಗೀತೆಗಳು  ಪ್ರಸಾರವಾಗುತ್ತಿದ್ದವು. ಅದರಲ್ಲಿ ಒಂದು ಹಾಡು ಹೀಗಿತ್ತು. 


"ಬೀಸೋ ಗಾಳಿಯಲಿ, ಹರಿವ ನೀರ ಅಲೆ

ಹೇಳು ಏನೆಂದಿದೆ ಓ ಗೆಳತಿ?"


ಪ್ರಕೃತಿಯ ಮಧ್ಯೆ ಬದುಕುವವರು ಬೀಸುವ ಗಾಳಿಯ, ಹರಿವ ನೀರಿನ ಸಂದೇಶಗಳನ್ನು ಸ್ವೀಕರಿಸುವುದು ಸಾಧ್ಯವಿತ್ತು, ಕಾಳಿದಾಸ ಮೇಘ ಸಂದೇಶಗಳನ್ನು ಉಪಯೋಗಿಸಿಕೊಂಡ ರೀತಿಯಲ್ಲಿ. ಆದರೆ ಬೆಂಗಳೂರಿನಲ್ಲಿ ಯಾವುದೇ ನದಿಗಳಿಲ್ಲ. ಇಲ್ಲಿ ಮಳೆ ನೀರು ಹರಿಯುವ ಗುಂಡಿಗೆ ಕೊಳಚೆಯೂ ಹರಿಯುತ್ತೆ. (ಅವಕ್ಕೆ ರಾಜ ಕಾಲುವೆ ಎಂದು ಬೇರೆ ಹೆಸರು). ಅವುಗಳ ಮೇಲೆ ಬೀಸುವ ಗಾಳಿ ಹೇಳುವುದು ಮೂಗು ಮುಚ್ಚಿಕೊಳ್ಳಿ ಎಂದು. ಪ್ರಕೃತಿಯನ್ನು ಕೃತಕವಾಗಿಸಿದ ಈ ಊರು ತಂತ್ರಜ್ಞಾನವನ್ನು ಬೆಳೆಸುತ್ತೆ ಆದರೆ ನಿಸರ್ಗವನ್ನು ಕಡೆಗಣಿಸುತ್ತದೆ. ಇಲ್ಲಿ ಎಲ್ಲರಿಗೂ ಪ್ರತಿ ದಿನ ಗೆಲ್ಲುವ ಧಾವಂತ. ಅವರಿಗೆ ಕೈಯಲ್ಲಿನ ಸ್ಮಾರ್ಟ್ ಫೋನ್ ಸಂಗಾತಿ, ಪ್ರಕೃತಿ ಅಲ್ಲವೇ ಅಲ್ಲ.


ನೀವು ಗೊತ್ತಿರದ ಹೊಸ ಜಾಗಗಳಿಗೆ ಹೋಗುತ್ತಿರುವಿರಿ. ಆದರೆ ದಾರಿ ಗೊತ್ತಿಲ್ಲದ ನಿಮಗೆ ಇಂದಿಗೆ ಜಿ.ಪಿ.ಎಸ್ ಇದೆ. ಆದರೆ ಹಿಂದೆ ರಸ್ತೆಯಲ್ಲಿ ಹೋಗುತ್ತಿರುವವರು ಅಥವಾ ಅಕ್ಕ ಪಕ್ಕದ ಅಂಗಡಿಗಳವರು  ನಿಮಗೆ ಮಾರ್ಗದರ್ಶನ ನೀಡುತ್ತಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ಕೆಮ್ಮಣ್ಣುಗುಂಡಿಯ ಹತ್ತಿರ ನಾನು ದಾರಿ ಹೇಗೆ ಎಂದು ಕೇಳಿದ್ದು ರಸ್ತೆಯ ಹತ್ತಿರವೇ ಆಡಿಕೊಂಡಿದ್ದ ಚಿಕ್ಕ ಮಕ್ಕಳ ಗುಂಪನ್ನು. ಅವರು ಸರಿ ದಾರಿ ತೋರಿಸಿಯಾದ ಮೇಲೆ, ನಾನು 'ಥ್ಯಾಂಕ್ಸ್' ಹೇಳಿ ಮುಂದೆ ಬರುವಷ್ಟರಲ್ಲಿ, ಆ ಮಕ್ಕಳು ಜೋರಾಗಿ 'ಇವರು ಬೆಂಗಳೂರಿನವರು ಇರಬೇಕು, ಅದಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾರೆ' ಎಂದು ಮಾತಾಡಿಕೊಳ್ಳುತ್ತಿದ್ದರು. ಈ ಥರದ ಅನುಭವಗಳು ಅಥವಾ ದಾರಿ ತಪ್ಪಿದ ಅನುಭವಗಳಿಗೆ ಇಂದಿಗೆ ಅವಕಾಶವೇ ಇಲ್ಲ. ಜಿ.ಪಿ.ಎಸ್ ಸರಿ ದಾರಿ ತೋರಿಸಿ, ನೀವು ಇಲ್ಲಿಗೆ ಬಂದಾಯಿತು ಎಂದು ಹೇಳಿ ಸುಮ್ಮನಾಗುತ್ತದೆ. ಅದಕ್ಕೆ ಮನುಷ್ಯ ಸಹಜ ಭಾವನೆಗಳು ಬರಲು ಹೇಗೆ ಸಾಧ್ಯ?


ಇಂದಿಗೆ ಫೇಸ್ ಬುಕ್ ನಿಮಗೆ ನೆನಪಿಸುತ್ತಿದೆ ವರ್ಷದ ಹಿಂದೆ ಅಥವಾ ಕೆಲವು ವರ್ಷಗಳ ಹಿಂದೆ ಈ ದಿನ ಏನು ಮಾಡುತ್ತಿದ್ದೀರಿ ಎಂದು. ಅದು ನಮ್ಮನ್ನು ಹಳೆಯ ನೆನಪಿಗಳಿಗೆ ಕರೆದೊಯ್ಯುತ್ತದೆ. ಆದರೆ ಸ್ಮಾರ್ಟ್ ಫೋನ್ ಇಲ್ಲದ ಕಾಲದಲ್ಲಿ ಬೆಳೆದ ನಮಗೆ ಗುಡ್ಡ ಹತ್ತಿದ್ದು, ಹಳ್ಳದಲ್ಲಿ ಆಡಿದ್ದು, ಕಾಲುವೆಯಲ್ಲಿ ಈಜು ಕಲಿತದ್ದು ನೆನಪಿಸಲು ಯಾವುದೇ ಸ್ಮಾರ್ಟ್ ಫೋನ್ ಮತ್ತು ಫೇಸ್ ಬುಕ್ ಸಹಾಯ ಬೇಕಿರಲಿಲ್ಲ ಅಲ್ಲವೇ. ಆದರೂ ಸ್ಮಾರ್ಟ್ ಫೋನ್ ಒಂದು ಹಿತ ನೀಡುವ ಸಂಗಾತಿಯಾಗಿದೆ. ಅದಕ್ಕೆ ಇರುವ ನೆನಪಿನ ಶಕ್ತಿಯ ಅಗಾಧತೆಯ ಮುಂದೆ ನಾವು ಕುಬ್ಜರು. 


ತಂತ್ರಜಾನದ ಬೆಳವಣಿಗೆ ಮತ್ತು ಅದು ಸ್ಮಾರ್ಟ್ ಫೋನ್ ಗಳಲ್ಲಿ ಜೋಡಿಗೊಂಡ ರೀತಿ ಅದ್ಭುತ. ಅದರಿಂದ ಆಗಿರುವ ಅನುಕೂಲಗಳನ್ನು ಅಲ್ಲಗೆಳೆಯಲು ಸಾಧ್ಯವೇ ಇಲ್ಲ. ಆದರೆ ಅದು ನಮ್ಮನ್ನು ಕೆಲವು ಸಲ ಭಾವನಾರಹಿತ ಮನುಜರನ್ನಾಗಿ, ನಮ್ಮ ಜೀವನ ಶೈಲಿ ಬದಲಾಯಿಸಿದರೂ ಅದನ್ನು ಸಹಿಸಿಕೊಳ್ಳಲೇ ಬೇಕು. ಇಂದಿಗೆ ನಾನು ನಿಮ್ಮನ್ನು ತಲುಪುತ್ತಿರುವುದು ಅದೇ ತಂತ್ರಜ್ಞಾನದ ಮೂಲಕ ಅಲ್ಲವೇ? ಎಲ್ಲ ಸ್ನೇಹಿತರ ಆಗು-ಹೋಗುಗಳನ್ನು ತಿಳಿದುಕೊಳ್ಳುವ ಸೌಲಭ್ಯ ಕಲ್ಪಿಸಿದ ಈ ತಂತ್ರಜಾನಕ್ಕೆ ಶರಣು. ಪೋಸ್ಟ್ ಆಫೀಸ್ ಮುಂದೊಂದು ದಿನ ಮುಚ್ಚಿ ಹೋದರೆ ಅಥವಾ ಬೇರೆ ಕಾರ್ಯಗಳಿಗೆ ಬದಲಾದರೆ ಏನಂತೆ? ನಾವೀಗಾಗಲೇ ವಾಟ್ಸ್ ಆಪ್ ಸೇರಿ ಆಗಿದೆಯಲ್ಲ. ಗೊತ್ತಿಲ್ಲದ ಊರೋ, ದಾರಿಯಲ್ಲಿ ಮಳೆ-ಚಳಿ ಎಲ್ಲದಕ್ಕೂ ನಮಗೆ ಮುನ್ಸೂಚನೆಗಾಗಿ, ದಾರಿ ದೀಪದಂತೆ ಕೈಯಲ್ಲಿ ಇದೆಯಲ್ಲ ನಮ್ಮ ಆಪ್ತ ಮಿತ್ರ, ನಮ್ಮ ಸ್ಮಾರ್ಟ್-ಫೋನ್. 

No comments:

Post a Comment