Friday, December 4, 2020

ಮಧ್ಯ ವಯಸ್ಸಿನ ಬಿಕ್ಕಟ್ಟು ತರುವ ಹೊಸತನ

ಮಕ್ಕಳಿಗೆ ಎಲ್ಲರೂ ಹೇಳುವುದು "ನೀನು ಬೆಳೆದು ದೊಡ್ಡವನಾಗಿ ಏನು ಬೇಕಾದರೂ ಆಗಬಹುದು". ಅದು ಬರಿ 'ಡಾಕ್ಟರ್', 'ಇಂಜಿನಿಯರ್' ಅಲ್ಲವಲ್ಲ. ಏನು ಬೇಕಾದರೂ ಅಂದ್ರೆ, ಏನು ಬೇಕಾದರು ಆಗಬಹುದು. ಕುಸ್ತಿ ಪಟು, ಪೊಲೀಸ್, ಸೈನ್ಯ ಸೇರುವುದು, ಚಿತ್ರ ನಟ ಅಥವಾ ನಟಿ, ಅಂಬಾನಿಗಳಷ್ಟಲ್ಲದಿದ್ದರೂ ತಕ್ಕ ಮಟ್ಟಿಗೆ ಶ್ರೀಮಂತ, ಉದ್ದಿಮೆಗಳ ಒಡೆಯ, ಸಚಿನ್ ತರಹ ಕ್ರಿಕೆಟ್ ಆಟಗಾರ, ಮೋದಿ ತರಹ ಪ್ರಧಾನ ಮಂತ್ರಿ, ಇಲ್ಲವೇ ಜಯಲಲಿತಾ ತರಹ ಮುಖ್ಯ ಮಂತ್ರಿ ಹೀಗೆ ನೂರಾರು ಆಯ್ಕೆಗಳು ಚಿಕ್ಕ ಮಕ್ಕಳಿಗೆ. ಅವರು ಹಾಗಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವ ಹಾಗೆಯೆ ಇಲ್ಲ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಗುರಿ ಇರುವುದು ಒಳ್ಳೆಯದೇ. ಅದು ಅವರ ಜಗತ್ತಿನ ಪರಿಧಿಯನ್ನು ದೊಡ್ಡದು ಮಾಡುತ್ತದೆ.


ಚಿಕ್ಕ ವಯಸ್ಸಿನಿಂದ ೨೦ ರ ವಯಸ್ಸಿನವರೆಗೆ ಆಶಾವಾದಿಯಾಗಿ ಬೆಳೆದರೆ ತಪ್ಪೇನಿಲ್ಲ. ಆಮೇಲೆ ನಾವು  ಅಂದುಕೊಂಡಿದ್ದು ಆಗದಿದ್ದರೂ, ನಮಗೆ ಸ್ವಲ್ಪ ನಿರಾಸೆ ಆದರೂ, ಸಣ್ಣ ಪಟ್ಟಿಗೆ ಜಗ್ಗುವವರಲ್ಲ ನಾವು. ನಮಗೂ ಒಂದಲ್ಲ ದಿನ ಅವಕಾಶ ಸಿಕ್ಕೇ ಸಿಗುತ್ತದೆ, ನಮ್ಮ ಅದೃಷ್ಟ ಬದಲಾಗುತ್ತದೆ ಮತ್ತು ನಾವು ಅಂದುಕೊಂಡಿದ್ದೆಲ್ಲಾ ಸಾಧ್ಯವಾಗುತ್ತದೆ ಎನ್ನುವ ಮನದ ಮರೆಯ ಆಸೆಗಳಲ್ಲಿ ಇನ್ನೂ ಇಪ್ಪತ್ತು ವರುಷಗಳನ್ನು ಕಳೆದು ಬಿಡುತ್ತೀವಿ.

 

ಆದರೆ ಸಮಸ್ಯೆ ಶುರುವಾಗುವುದು ನಾವು ೪೦ ರ ವಯಸ್ಸಿನ ಆಸು ಪಾಸಿಗೆ ಬಂದಾಗ. ಈಗ ನಮಗೆ ನಾವು  ಏನೆಂದು ಗೊತ್ತಾಗಿದೆ. ನಮ್ಮ ವ್ಯಕ್ತಿತ್ವದ ಶಕ್ತಿ ಹಾಗು ದೌರ್ಬಲ್ಯಗಳು, ಇವೆರಡರ ಸಂಪೂರ್ಣ ಪರಿಚಯ ಈಗ ನಮಗಿದೆ. ಚಿಕ್ಕಂದಿನಲ್ಲಿ ನಮ್ಮದೇ ಬಿಸಿನೆಸ್ ಇರಬೇಕು ಅಂದುಕೊಂಡ ನಮಗೆ ವ್ಯಾಪಾರ ತರುವ  ಅಪಾಯಗಳನ್ನು ಎದುರಿಸುವ ಮನಸ್ಸಿಲ್ಲ ಹಾಗಾಗಿಯೇ ಅದು ಕನಸಾಗಿಯೇ ಉಳಿಯಿತು ಎನ್ನುವ ಸತ್ಯ ಗೊತ್ತಾಗಿದೆ. ಯಾವುದೊ ದೊಡ್ಡ ಕಂಪನಿಯಲ್ಲಿ ಒಂದು ದೊಡ್ಡ ಹುದ್ದೆ ವಹಿಸಿಕೊಳ್ಳುವ ಕನಸಿಗೆ, ನಮ್ಮ ಶಿಕ್ಷಣದ ಕೊರತೆ ಅಥವಾ ಅದಕ್ಕೆ ಬೇಕಿರುವ ಚಾತುರ್ಯಗಳು ನಮ್ಮ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ ಎನ್ನುವ ಕಾರಣಗಳು ಅದನ್ನು ನನಸಾಗಲು ಬಿಡುವುದಿಲ್ಲ ಎನ್ನುವುದು ಮನವರಿಕೆಯಾಗಿದೆ. ಚಲನ ಚಿತ್ರದಲ್ಲಿ ನಾಯಕ, ನಾಯಕಿಯಾಗಲು ನಮಗೆ ರೂಪ-ಲಾವಣ್ಯಗಳ ಕೊರತೆ, ನಮ್ಮ ಮೂಗನ್ನು ಯಾರು ತಿದ್ದಿ ತೀಡಲಿಲ್ಲವಲ್ಲ ಎನ್ನುವುದು ಬೇಸರದ ಸಂಗತಿ. ದೊಡ್ಡ ಉದ್ದಿಮೆಗಾರರಾಗಲು ನಮಗೆ ಸಂಪನ್ಮೂಲಗಳಿಲ್ಲ, ಆದ್ದರಿಂದ ಅದರ ಯೋಚನೆ ನಾವು ಮರೆತು ಹೋದರೂ, ಕೊರಗು ಮಾತ್ರ ಮನಸ್ಸಿನ ಮೂಲೆಯಿಂದ ಹೋಗಲೊಲ್ಲದು.


ಮಧ್ಯ ವಯಸ್ಸು ತಂದು ಒಡ್ಡುವ ಬಿಕ್ಕಟ್ಟು ಎಲ್ಲರನ್ನು ಶಕ್ತಿ ಪರೀಕ್ಷೆಗೆ ಒಳ ಪಡಿಸುತ್ತದೆ. ನಮ್ಮ ಮಕ್ಕಳಿಗೆ 'ಏನು ಬೇಕಾದರೂ ಆಗಬಹುದು' ಎಂದು ಹೇಳಿಕೊಡುವ ನಾವು ಮಾತ್ರ ಅಂದುಕೊಂಡ  ಹಾಗೆ ಆಗುವಲ್ಲಿ ಸೋತಿರುತ್ತೀವಿ. ವಾಸ್ತವದ ಮುಂದೆ ದುಃಖ, ಅವಮಾನ ಹೇಳಿಕೊಂಡು ಪ್ರಯೋಜನವೇನು ಎಂದುಕೊಂಡು ಸುಮ್ಮನಾಗುತ್ತೀವಿ.


ಆದರೆ ಇದೇ ಸಮಸ್ಯೆಯನ್ನು ಬೇರೆ ರೀತಿಯಲ್ಲಿ ನೋಡಿದರೆ, ಅದರ ಪರಿಣಾಮವೇ ಬೇರೆ. 


ಅಂದೊಕೊಂಡ ಹಾಗೆ ಆಗದಿದ್ದರೆ ಏನಂತೆ? ನಾವು ಒಳ್ಳೆಯ ಮಗನಾಗಿ ಅಥವಾ ಮಗಳಾಗಿ, ಸಹೋದರ, ಸಹೋದರಿಯಾಗಿ, ಕುಟುಂಬದಲ್ಲಿ, ಆಫೀಸ್ ನಲ್ಲಿ, ನಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಬಂದಿದ್ದು ಕಡಿಮೆ ಸಾಧನೆಯೇ? ನಾವು ಕಾಳಿದಾಸನ ಹಾಗೆ ಕಾವ್ಯ ಬರೆಯದಿದ್ದರೆ ಏನಂತೆ? ಸ್ನಾನ ಮಾಡುವಾಗ ನಮಗೆ ಎಂದು ಗುನುಗಿಕೊಳ್ಳುವ ಹಾಡುಗಳು ನಮ್ಮಲ್ಲಿ ತುಂಬುವ ಉಲ್ಲಾಸ ಕಡಿಮೆಯೇ? ನಾವು ಆನಂದಿಸುವ ಹವ್ಯಾಸಗಳನ್ನು ನೆನಪಿಸಿಕೊಳ್ಳಿ. ಟ್ರೆಕಿಂಗ್ ಹೋದಾಗ, ನಾವು ಪಟ್ಟ ಖುಷಿ ನಮ್ಮ ಜೊತೆ ಬಂದಿದ್ದ ನಮ್ಮ ಮೇಲಿನ ಅಧಿಕಾರಿಗಿಂತ ಕಡಿಮೆ ಅನ್ನುವಂತಿರಲಿಲ್ಲ, ಅಲ್ಲವೇ? ನಾವು ಮಧ್ಯಮ ವರ್ಗದವರೇ ಇರಬಹುದು. ಆದರೆ ನಮ್ಮ ಮನೆಗೆ ಯಾರೋ ಪರಿಚಯವಿಲ್ಲದ ಒಬ್ಬ ಶ್ರೀಮಂತ ಬಂದರೆ, ನಮ್ಮ ಮನೆಯ ನಾಯಿ ಅವನಿಗೆ ಕೊಡುವ ಮರ್ಯಾದೆ ಎಷ್ಟಿರುತ್ತದೆ? 


ಬದುಕು ಪ್ರತಿಷ್ಠೆಯ ವಿಷಯದಲ್ಲಿ ಸಾಕಷ್ಟು ಅಸಮಾನತೆಗಳನ್ನು ಸೃಷ್ಟಿಸಿದರೂ, ಜೀವನ ಕೊಡುವ ಆನಂದಗಳಲ್ಲಿ ಎಲ್ಲರಿಗೂ ಸಮಾನ ಅವಕಾಶ ಉಂಟು. ನಿಮ್ಮ ನೆರೆಯ ಕ್ರಿಕೆಟ್ ಟೀಮ್ ನ್ನು ನಿಮ್ಮ ಬ್ಯಾಟಿಂಗ್ ನಿಂದ ಗೆಲ್ಲುವಂತೆ ಮಾಡಿ ನೋಡಿ, ಆಗ ನೀವು ಪಡುವ ಸಂತೋಷ ವಿರಾಟ್ ಕೊಹ್ಲಿಗೆ ಕಡಿಮೆ ಏನು ಅಲ್ಲ. ನಿಮಗೆ ಒಂದು ಶಾಲೆ ಕಟ್ಟುವ ಕನಸು ಸಾಕಾರ ಆಗದಿದ್ದರೆ ಏನಂತೆ? ಒಬ್ಬ ಬಡ ಹುಡುಗನಿಗೆ ಟ್ಯೂಷನ್ ಹೇಳಿ ಕೊಟ್ಟು ಅವನಿಗೆ ಪರೀಕ್ಷೆ ಪಾಸಾಗುವ ವಿಶ್ವಾಸ ತುಂಬಿ ನೋಡಿ, ಕಳೆದುಕೊಂಡ ಸಂತೋಷ ಸ್ವಲ್ಪ ಮಟ್ಟಿಗಾದರೂ ಮತ್ತೆ ನಿಮ್ಮದಾಗುತ್ತದೆ.


ಚಿಕ್ಕಂದಿನಲ್ಲಿ ನಾವು ಆಸೆ ಪಟ್ಟಿದ್ದು ದುಡ್ಡು, ಅಧಿಕಾರ, ಪ್ರತಿಷ್ಠೆಗಲ್ಲ. ಆದರೆ ಅವು ತಂದು ಕೊಡುವ ಸಂತೋಷಕ್ಕಾಗಿ. ಸಮಾಜದ ಪ್ರತಿಷ್ಠೆಗೆ ಬೆಂಕಿ ಇಟ್ಟು, ತೆರೆದ ಮನಸ್ಸಿನಿಂದ ವಿಚಾರ ಮಾಡಿ ನೋಡಿ. ನಾವು ಚಿಕ್ಕಂದಿನಲ್ಲಿ ಅಂದುಕೊಂಡ ಹಾಗೆ ಅಲ್ಲದಿದ್ದರೂ, ಸ್ವಲ್ಪ ಬದಲು ಮಾಡಿಕೊಂಡಾದರೂ ಬದುಕಲು ಸಾಧ್ಯ. ನಾನು ಮಧ್ಯ ವಯಸ್ಸು ತಂದು ಒಡ್ಡುವ ಬಿಕ್ಕಟ್ಟನ್ನು ಜೀವನಕ್ಕೆ ಹೊಸತನ ತಂದು ಕೊಡುವ ವಿಷಯವನ್ನಾಗಿ ಬದಲಾಯಿಸಿಯಾಗಿದೆ. 'ಕೈಗಟುಕದ ದ್ರಾಕ್ಷಿ ಹುಳಿ' ಎಂದು ಜನ ನೋಡಿ ನಕ್ಕರೂ ಪರವಾಗಿಲ್ಲ. ಸಕ್ಕರೆ ಕೊಂಡು ಕೊಳ್ಳಲು ಆಗದಿದ್ದರೆ, ಬೆಲ್ಲದ ಚಹಾ ಕುಡಿದು ಸಂತೋಷ ಪಡುವ ಮನಸ್ಥಿತಿ ಇಂದು ನನ್ನದಾಗಿದೆ.


ಶಿಕ್ಷಣಕ್ಕಿಂತ ವಿವೇಕ ದೊಡ್ಡದು. ಬುದ್ಧ ಬುದ್ಧಿಯಿಂದ ಆದವನಲ್ಲವೇ? ನೀವು ನನಗಿಂತ ಜಾಣರು. ನನಸಾಗದ ಕನಸುಗಳಿಗೆ ಕೊರಗದೆ, ನಿಮ್ಮದೇ ವಿಶಿಷ್ಟ ರೀತಿಯ ಜೀವನ ರೂಪಿಸಿಕೊಂಡಿರುತ್ತೀರಿ ಎನ್ನುವ ವಿಶ್ವಾಸ ನನ್ನದು.


No comments:

Post a Comment