೧೭೫೭ ನೇ ವರ್ಷದ ಜೂನ್ ತಿಂಗಳು. ವ್ಯಾಪಾರಕ್ಕೆಂದು ಕಲ್ಕತ್ತೆಗೆ ಬಂದಿಳಿದ ಬ್ರಿಟಿಷರು, ಕೋಟೆ ಕಟ್ಟಿ, ಯುದ್ಧ ಸಾಮಗ್ರಿ ಸಂಗ್ರಹಿಸುವುದನ್ನು ವಿರೋಧಿಸಿದ್ದು ಅಂದಿನ ಬಂಗಾಳದ ನವಾಬ ಸಿರಾಜುದ್ದೌಲ. ಬ್ರಿಟಿಷರು ಅಲ್ಲಿ ಸ್ವ-ರಕ್ಷಣೆಯ ಉದ್ದೇಶ ಬಿಟ್ಟರೆ ಬೇರೆ ಏನು ಇಲ್ಲ ಎಂದಿದ್ದು ನವಾಬನಿಗೆ ಸಮಂಜಸ ಅನ್ನಿಸಲಿಲ್ಲ. ಆಗ ನವಾಬನಿನ್ನು ಬಿಸಿ ರಕ್ತದ ಯುವಕ. ಯಾವುದೇ ಯುದ್ಧ ಗೆಲ್ಲಬಲ್ಲನೆಂಬ ಧೈರ್ಯ ಮತ್ತು ತಾಕತ್ತು ಅವನಿಗಿತ್ತು. ಆದರೆ ಇರದೇ ಇದ್ದದ್ದು ಅನುಭವ ಮತ್ತು ಪರಿಸ್ಥಿತಿ ಹೇಗೆ ಬೇಕಾದರೂ ಬದಲಾಗಬಹುದೆಂಬ ಎಂಬ ಅಂದಾಜು. ಇತ್ತ ಬ್ರಿಟಿಷರ ಮುಂದಾಳತ್ವ ವಹಿಸಿದ್ದು ರಾಬರ್ಟ್ ಕ್ಲೈವ್. ಶ್ರೀಮಂತಿಕೆ, ಅಧಿಕಾರದ ಹಂಬಲದ ಹೊತ್ತು ಭಾರತಕ್ಕೆ ಬಂದವನು. ಲೂಟಿ ಹೊಡೆದ್ದರಲ್ಲಿ ತನಗೂ ಒಂದು ಪಾಲು ಇದೆ ಎನ್ನುವ ಮನಸ್ಥಿತಿ ಇದ್ದವನು.
ಪರಸ್ಪರರ ಅಸಮಾಧಾನ ಯುದ್ಧಕ್ಕೆ ಬಂದು ತಲುಪಲು ಹೆಚ್ಚು ಸಮಯ ಬೇಕಿರಲಿಲ್ಲ. ಹೂಗ್ಲಿ ನದಿಯ ದಡದಲ್ಲಿ, ಪ್ಲಾಸ್ಸಿ ಎನ್ನುವ ಸ್ಥಳದಲ್ಲಿ ಇಬ್ಬರು ಮುಖಾಮುಖಿಯಾದರು. ನವಾಬನದೊ ದೊಡ್ಡ ಸೈನ್ಯ. ೩೫,೦೦೦ ಜನ ಕಾಲಾಳುಗಳು, ೧೫,೦೦೦ ಕುದುರೆ ಸವಾರರು, ೫೩ ಫಿರಂಗಿಗಳೊಡನೆ ಬ್ರಿಟಿಷರ ನಾಶಕ್ಕಾಗಿ ಬಂದಿದ್ದ ನವಾಬ. ಬ್ರಿಟಿಷರ ಸೈನ್ಯದಲ್ಲಿದ್ದು ಮೂರು ಸಾವಿರ ಜನ ಮಾತ್ರ. ಆದರೂ ಯುದ್ಧ ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದ್ದ ರಾಬರ್ಟ್ ಕ್ಲೈವ್ ದುರ್ಮಾರ್ಗಗಳನ್ನು ಹುಡುಕತೊಡಗಿದ್ದ. ನವಾಬನ ಸೈನ್ಯಾಧಿಕಾರಿಯಲ್ಲೊಬ್ಬನಾದ ಮಿರ್ ಜಾಫರ್ ಗೆ ನವಾಬನನ್ನಾಗಿ ಮಾಡುವ ಆಸೆ ತೋರಿಸಿ ಸೆಳೆದೇಬಿಟ್ಟ. ಒಂದು ವೇಳೆ ಮಿರ್ ಜಾಫರ್ ಕೊನೆ ಕ್ಷಣದಲ್ಲಿ ಹಿಂಜರಿದರೆ, ಯುದ್ಧ ಗೆಲ್ಲುವ ಸಾಧ್ಯತೆ ಕಡಿಮೆ ಇದ್ದದ್ದರಿಂದ ನವಾಬನ ಜೊತೆ ಸಂಧಾನ ಮಾಡಿಕೊಂಡರಾಯಿತು ಎಂದು ಯೋಚಿಸಿದ್ದ ರಾಬರ್ಟ್ ಕ್ಲೈವ್.
ಯುದ್ಧರಂಗದಲ್ಲಿ ಮುಖಾಮುಖಿಯಾದ ಸ್ವಲ್ಪ ಹೊತ್ತಿಗೆ ಮಿರ್ ಜಾಫರ್ ನ ಜೊತೆಗಿದ್ದ ದೊಡ್ಡ ಸೈನ್ಯ ಯುದ್ಧದಲ್ಲಿ ಪಾಲ್ಗೊಳದೇ ಹಿಂದಿರುಗಿತು. ಆಗ ಉಂಟಾದ ಗೊಂದಲ ಯುದ್ಧಕ್ಕೆ ಸನ್ನದ್ದರಾದವನ್ನು ಕೂಡ ಗಾಬರಿಗೊಳಿಸಿತು. ಬ್ರಿಟಿಷರ ಫಿರಂಗಿಗಳನ್ನು ಎದುರಿಸಿ ಹೋರಾಡುತ್ತಿದ್ದವರೂ ಕೂಡ, ಯುದ್ಧ ಬಿಟ್ಟು ಕಾಲ್ಕಿತ್ತರು. ನವಾಬನ ಸೈನ್ಯದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರೆ, ಬ್ರಿಟಿಷರಲ್ಲಿ ಆಗಿದ್ದು ೨೨ ಪ್ರಾಣ ಹಾನಿ ಮಾತ್ರ. ಒಂದು ನಿರ್ಣಾಯಕ ಯುದ್ಧವನ್ನು ಮೊದಲ ಬಾರಿಗೆ ಸುಲಭದಲ್ಲಿ ಗೆದ್ದಿತ್ತು ಬ್ರಿಟಿಷ್ ಮೂಲದ ಈಸ್ಟ್ ಇಂಡಿಯಾ ಕಂಪನಿ. ಹಾಗೆಯೇ ಮಿರ್ ಜಾಫರ್ ನವಾಬನಾದರೂ, ತಾನು ಬ್ರಿಟಿಷರ ಕೈಗೊಂಬೆ ಎನ್ನುವುದು ಅರಿವಾಗಲು ತಡವಾಗಲಿಲ್ಲ.
ಅಲ್ಲಿಯವರೆಗೆ ವ್ಯಾಪಾರ ತರುವ ಲಾಭವನ್ನೇ ನೆಚ್ಚಿಕೊಂಡಿದ್ದ ಈಸ್ಟ್ ಇಂಡಿಯಾ ಕಂಪನಿ ಯುದ್ಧ ಮಾಡುವುದು, ರಾಜ್ಯಭಾರ ಮಾಡುವುದು ಹೆಚ್ಚು ಲಾಭದಾಯಕ ಎನ್ನುವುದು ಕಂಡುಕೊಂಡಿತು. ಕ್ರಮೇಣವಾಗಿ ಇಡೀ ಭಾರತವನ್ನೇ ಆಳುವ ಅವರ ಯೋಜನೆಗೆ ಅಡಿಪಾಯ ಹಾಕಿದ್ದು ರಾಬರ್ಟ್ ಕ್ಲೈವ್ ಎನ್ನುವ ಲೂಟಿಕೋರ. ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಮಾತ್ರ ನಮ್ಮ ಅರಾಜಕತೆ, ಒಳ-ಜಗಳ, ಸಮರ್ಥವಲ್ಲದ ಯುದ್ಧ ಕೌಶಲಗಳು, ದೊಡ್ಡ ಸಂಖ್ಯೆಯಲ್ಲಿದ್ದರೂ ಶಿಸ್ತಿರದ ಸೇನೆ, ಫಿರಂಗಿ-ಬಂದೂಕುಗಳನ್ನು ಭರ್ಚಿ ಹಿಡಿದು ಎದುರಿಸುವ ದಡ್ಡತನ.
ನಮ್ಮ ಮೂರ್ಖತನವನ್ನೇ ಬಂಡವಾಳ ಮಾಡಿಕೊಂಡು ಬ್ರಿಟಿಷರು ನಮ್ಮ ಮೇಲೆ ಅಧಿಕಾರ ಚಲಾಯಿಸಿದ್ದು ಇತಿಹಾಸ. ಶಾಲಾ ಪುಸ್ತಕಗಳಲ್ಲಿ ಸಿಗದಂತಹ ಹಲವಾರು ಮಾಹಿತಿಗಳನ್ನು ನಾನು ಓದಿ ತಿಳಿದುಕೊಂಡಿದ್ದು 'The Anarchy' ಎನ್ನುವ ಪುಸ್ತಕದ ಮೂಲಕ.