ಆಗ ತಾನೇ ಹುಟ್ಟಿದ ಕರುವನ್ನು ನೆಕ್ಕುತ್ತ ಸ್ವಚ್ಛಗೊಳಿಸುವ ಹಸು, ಪ್ರಸವದ ನಂತರ ತನ್ನ ಮರಿಯನ್ನು ಹಿಂಗಾಲಿನಿಂದ ಒದ್ದು ಎಬ್ಬಿಸಿ ಸುರಕ್ಷಿತ ತಾಣಕ್ಕೆ ಕರೆದೊಯ್ಯುವ ಜಿರಾಫೆ, ಚೂಪಾದ ಹಲ್ಲಿದ್ದರೂ, ನೋವಾಗದಂತೆ ಮರಿಯನ್ನು ಬಾಯಲ್ಲಿ ಹಿಡಿದು ಬೇರೆ ಸ್ಥಳಕ್ಕೆ ಸಾಗಿಸುವ ಹುಲಿ, ಮೊಟ್ಟೆ ಒಡೆದು ಹೊರಬರುವವರೆಗೆ ದಿನಗಟ್ಟಲೆ ಕಾಯುವ ಮೊಸಳೆ, ಹುಳುಗಳನ್ನು ಹೆಕ್ಕಿ ತಂದು ಗೂಡಲ್ಲಿರುವ ಮರಿಗಳಿಗೆ ತಿನ್ನಿಸುವ ಪಕ್ಷಿಗಳು, ಮಕ್ಕಳ ಸಂತೋಷವನ್ನೇ ತಮ್ಮ ಸಂತೋಷವನ್ನಾಗಿ ಮಾಡಿಕೊಂಡ ನಮ್ಮ ನಿಮ್ಮೆಲ್ಲರ ತಾಯಂದಿರು ಇವರೆಲ್ಲ ಪ್ರಾಣಿ-ಪಕ್ಷಿ-ಮನುಷ್ಯ ಸಂತತಿಯ ಮುಂದುವರಿಕೆಯಲ್ಲಿ ಒಂದು ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.
ಪ್ರಾಯ
ಬಂದಾಗ, ಹಾರ್ಮೋನ್ ಬದಲಾವಣೆ ಮಾಡಿ ಸಂಗಾತಿಯನ್ನು ಹುಡುಕುವಂತೆ
ಪ್ರೇರೇಪಿಸುವ ಪ್ರಕೃತಿ, ಹೊಸ ಪೀಳಿಗೆಯ ರಕ್ಷಣೆ-ಪೋಷಣೆಗೆ ತಾಯಿಯನ್ನು ಮಗುವಿನ ಜೊತೆಗೆ ಭಾವನೆಯ ಬಂಧದಲ್ಲಿ ಬಿಗಿಯುತ್ತದೆ. ತಾಯಿ ಪ್ರೀತಿಯನ್ನು ಪ್ರಕೃತಿ
ಹುಟ್ಟಿಸಿದಿದ್ದರೆ ಹೊಸ ಪೀಳಿಗೆ ಉಳಿಯುವದಂತು?
ಹಾಗಾಗಿ ತನ್ನದೇ ಪ್ರತಿರೂಪವನ್ನು ಪ್ರಕೃತಿ ತಾಯಿಯಲ್ಲಿ ಸೃಷ್ಟಿಸಿತು. ಹಾಗೆ ನೋಡಿದರೆ ಪ್ರತಿ
ಹೆಣ್ಣಿನಲ್ಲೂ ಒಬ್ಬ ತಾಯಿ ಇರುತ್ತಾಳೆ.
ತಮ್ಮಂದಿರ ಬೇಕು-ಬೇಡಗಳನ್ನು ತಾಯಿಯಷ್ಟೇ
ಸೂಕ್ಷ್ಮವಾಗಿ ಗ್ರಹಿಸಬಲ್ಲ ಅಕ್ಕಂದಿರು, ಶಾಲೆಯಲ್ಲಿ ಪ್ರೀತಿಯಿಂದಲೇ ತಿದ್ದುವ ಶಿಕ್ಷಕರು ಹೀಗೆ ಪ್ರತಿಯೊಂದು ಹೆಣ್ಣಿನಲ್ಲಿ
ತಾಯಿಯ ಭಾವ ಜಾಗೃತವಾಗಿರುತ್ತದೆ. ಅದು ಮನುಷ್ಯರಲ್ಲಷ್ಟೇ
ಅಲ್ಲ. ಆನೆ ಹಿಂಡಿನಲ್ಲಿ ತಾಯಿಯಷ್ಟೇ
ಕಾಳಜಿ ವಹಿಸುವ ಇತರೆ ಹೆಣ್ಣು ಆನೆಗಳು
ಇರುತ್ತವೆ. ಕೋತಿ, ಗೊರಿಲ್ಲಾ ದಂತಹ ಸಂಘ ಜೀವಿಗಳು
ಗುಂಪಲ್ಲಿರುವ ಮರಿಗಳನ್ನೆಲ್ಲ ಒಟ್ಟಿಗೆ ಬೆಳೆಸುತ್ತವೆ.
ಪ್ರಾಣಿ
ಸಂಕುಲಕ್ಕೂ, ಮನುಷ್ಯರಿಗೂ ಇರುವ ವ್ಯತ್ಯಾಸ ಎಂದರೆ
ತಾಯಿ ಪ್ರಾಣಿಗಳು, ತಮ್ಮ ಮರಿಗಳು ದೊಡ್ಡವರಾದ
ಮೇಲೆ ತಮ್ಮ ಭಾವನೆಯನ್ನು ಕಡಿದುಕೊಂಡು
ಮುಂದೆ ಸಾಗುತ್ತವೆ. ಆದರೆ ಮನುಷ್ಯರಲ್ಲಿ, ಜನ್ಮ
ಕೊಟ್ಟ ತಾಯಿ ದೇವಕಿಗಾಗಲಿ, ಬೆಳೆಸಿದ
ತಾಯಿ ಯಶೋದೆಗಾಗಲಿ ತಮ್ಮ ಮಕ್ಕಳು ಎಷ್ಟು
ದೊಡ್ಡವರಾದರು ಪ್ರೀತಿ ಕರಗುವುದೇ ಇಲ್ಲ. ಕೆಲವೊಂದು ಸಲ ಅದು ಅತಿಯಾದದ್ದು
ಉಂಟು. ಕುರುಡು ಪ್ರೇಮದ ತಾಯಿ ರಾಮಾಯಣಕ್ಕೆ ಕಾರಣವಾದರೆ,
ಮಹತ್ವಾಕಾಂಕ್ಷೆ ಉಳ್ಳ ತಾಯಂದಿರು ಮಹಾಭಾರತಕ್ಕೆ
ಕಾರಣರಾದರು. ಹಾಗೆಯೆ ಅದು ಹಲವು ಒಳ್ಳೆಯ
ಬದಲಾವಣೆಗೂ ದಾರಿಯಾಗಿದೆ. ಛತ್ರಪತಿ ಶಿವಾಜಿ ಒಬ್ಬ ಸಾಹಸಿ ಆಗುವುದಕ್ಕೆ
ಕಾರಣ ಆತನ ತಾಯಿಯೇ.
ಹೀಗೆ
ಇತಿಹಾಸದ ಉದ್ದಕ್ಕೂ ತಾಯಿಯ ಪಾತ್ರ, ಅವರ ನಿಸ್ವಾರ್ಥ ಪ್ರೀತಿ,
ಹೊಸ ಪೀಳಿಗೆಗಳನ್ನು ಪೋಷಿಸುವ ಅವರ ಆರೈಕೆಯ ಗುಣ,
ಈ ಜಗತ್ತಿನಲ್ಲಿ ಜೀವ ಸಂಕುಲ ಮುಂದುವರೆಯಲು
ಕಾರಣವಾಗಿದೆ. ಎಲ್ಲ ತಾಯಂದಿರಿಗೂ ಮತ್ತು
ತಾಯಿ ಮನಸ್ಸಿನ ಸಹೃದಿಯಿಗಳಿಗೂ ನಮನ.
No comments:
Post a Comment