Saturday, June 12, 2021

ಕವಿ ಸಿದ್ದಲಿಂಗಯ್ಯ ನವರಿಗೊಂದು ನಮನ

ಸಿದ್ದಲಿಂಗಯ್ಯ ನವರು ದಲಿತ ಬಂಡಾಯದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಹಾಗೆಯೇ ಕನ್ನಡ ಸಾಹಿತ್ಯಕ್ಕೆ ಹಲವಾರು ಪುಸ್ತಕ, ನಾಟಕ, ಕವನ ಸಂಕಲನಗಳ ರಚನೆಗಳ ಮೂಲಕ ಸೇವೆ ಸಲ್ಲಿಸಿದ್ದು ಅಲ್ಲದೆ, ವಿಶ್ವವಿದ್ಯಾನಿಲಯಗಳಿಗೆ ಮತ್ತು ಸರ್ಕಾರೀ ಪ್ರಾಧಿಕಾರಗಳಿಗೂ ಮಣ್ಣು ಹೊತ್ತಿದ್ದಾರೆ.

 


ಒಬ್ಬ ಹೋರಾಟಗಾರ ಕವಿಯೂ ಆದರೆ, ಅವನಲ್ಲಿ ಹುಟ್ಟುವ ಕವಿತೆಗಳು ತೀಕ್ಷ್ಣವಾಗಿರುತ್ತಲ್ಲವೇ? ಯಾವುದೇ ಕಲೆಗಾರ ತನ್ನ ವಿಚಾರ, ಅಭಿಪ್ರಾಯಗಳನ್ನು ತನ್ನ ಕಲೆಯ ಮೂಲಕವೇ ವ್ಯಕ್ತಪಡಿಸುತ್ತಾನೆ. ಕವಿ ಸಿದ್ದಲಿಂಗಯ್ಯ ನವರು ಬರೆದ ಅನೇಕ ಕವಿತೆಗಳು ನಮ್ಮ ಸಮಾಜದ ಧೂರ್ತತನಕ್ಕೆ ಕನ್ನಡಿ ಹಿಡಿಯುವುದಲ್ಲದೆ, ಚಾಟಿ ಏಟು ಬೀಸಿ ಪ್ರಶ್ನಿಸುತ್ತಿದ್ದವು. ಅವರ ಒಂದು ಕವಿತೆ, ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರದೊಳಗೆ ಉಪಯೋಗವಾಗಿದೆ. ದುಡ್ಡಿನ ಮದದವರಿಗೆ ತರಾಟೆ ತೆಗೆದುಕೊಳ್ಳುವ ಸನ್ನಿವೇಶದಲ್ಲಿ ಈ ಹಾಡು ಮೂಡಿ ಬರುತ್ತದೆ. ಆ ಕವಿತೆಯ ಸಾಲುಗಳನ್ನು ಇಲ್ಲಿ ಓದಿಕೊಂಡು ನೋಡಿ.

 

 

ಕಾಸನು ಬೀಸಿ, ಒಲವಿನ ಬೆಲೆಯನು

ನಿಗದಿ ಮಾಡುವ ಅಂಧಕರೇ,

ಬೀಸುವ ಗಾಳಿಯ ಕೊಳ್ಳುವಿರೇನು,

ನೋಟಿನ ಕಂತೆಯ ಉಳ್ಳವರೇ

 

ದುಡ್ಡಿನ ಗಂಟನು ಮೇಲಕೆ ತೂರಿ,

ಹಾರುವ ಹಕ್ಕಿಯ ಇಳಿಸುವಿರಾ?

ಬಣ್ಣದ ನೋಟಿನ ಬಲೆಯನು ಬೀಸಿ,

ಉರಿಯುವ ಸೂರ್ಯನ ಹಿಡಿಯುವಿರಾ?

 

ಕಾಸನು ಬೀಸಿ, ಒಲವಿನ ಬೆಲೆಯನು

ನಿಗದಿ ಮಾಡುವ ಅಂಧಕರೇ

 

ಕಾಸಿನ ಸದ್ದಿಗೆ ಗಿಡದಲಿ ಮೊಗ್ಗು,

ಅರಳುವುದೇನು ಹೂವಾಗಿ?

ಕಾಸನು ಕಂಡು ಮರದಲಿ ಕಾಯಿ,

ತೂಗುವುದೇನು ಹಣ್ಣಾಗಿ?

 

ಕಾಸನು ಬೀಸಿ, ಒಲವಿನ ಬೆಲೆಯನು

ನಿಗದಿ ಮಾಡುವ ಅಂಧಕರೇ

 

ಮಿರುಗುವ ನೋಟಿನ ಕಟ್ಟನು ತೋರಿ,

ಕಂದನ ನಗುವನು ಕೊಳ್ಳುವಿರಾ?

ಕಾಸನು ಕೊಟ್ಟರೆ ಕಾಮನ ಬಿಲ್ಲನು,

ನೀಲಿಯ ಗಗನದಲಿ ತೋರುವಿರಾ? 

 

ಕಾಸನು ಬೀಸಿ, ಒಲವಿನ ಬೆಲೆಯನು

ನಿಗದಿ ಮಾಡುವ ಅಂಧಕರೇ

 

ಕವನ ಓದುವುದಿಕ್ಕಿಂತ, ಆ ಹಾಡು ಚಿತ್ರದ ತೆರೆಯ ಮೇಲೆ ಬಂದಿದ್ದು ನೀವು ನೋಡುವವರಾದರೆ, ಇಲ್ಲಿದೆ ಅದರ ಲಿಂಕ್.




Thursday, June 10, 2021

ಕನ್ನಡ ನಾಡು, ಸಕಲ ಅನುಭವದ ಬೀಡು

'ಹಸುರಿನ ಬನಸಿರಿಗೆ ಒಲಿದು,

ಸೌಂದರ್ಯ ಸರಸ್ವತಿ ಧರೆಗಿಳಿದು,

ಚೆಲುವಿನ ಬಲೆಯ ಬೀಸಿದಳು,

ಈ ಗಂಧದ ಗುಡಿಯಲಿ ನೆಲೆಸಿದಳು'


ಹೌದು ರೀ, ದೇಶ ವಿದೇಶ ಪ್ರವಾಸ ಮಾಡಿದಾಗ ಸಿಗುವ ಅನುಭವ, ನಮ್ಮ ಕನ್ನಡ ನಾಡನ್ನು ಸುತ್ತಿದಾಗ ಸಿಗುವ ಅನುಭವಕ್ಕಿಂತ ಹೆಚ್ಚಿನದೇನಲ್ಲ. ನಯಾಗರಕ್ಕಿಂತ ನಮ್ಮ ಜೋಗ ಜಲಪಾತವೇ ಹೆಚ್ಚಿನ ರೋಮಾಂಚನ ಸೃಷ್ಟಿಸುತ್ತದೆ. ನೀರಿಲ್ಲದಾಗ ಹೋಗಿ ನನ್ನನ್ನು ಬೈದುಕೊಳ್ಳಬೇಡಿ ಅಷ್ಟೇ. ದೂರದ ಸ್ವಿಟ್ಜರ್ಲ್ಯಾಂಡ್ ಗೆ ಹೋಗಿ, ಹಿಮ ಮುಸುಕಿದ ಪರ್ವತಗಳ ಅಡಿಯಲ್ಲಿರುವ ಊರುಗಳು ಎಷ್ಟು ಅಂದವೋ ಎನ್ನುವುದಕ್ಕಿಂತ, ಚಿಕ್ಕಮಗಳೂರಿನ ಮಂಜು ಮುಸುಕಿದ ಕಾಫಿ ತೋಟಗಳು ಅಷ್ಟೇ ಅಂದ ಅನ್ನುವ ಅನುಭವ ನಿಮಗಾಗದಿದ್ದರೆ ನೋಡಿ. ಸಾಕೆನಿಸದಿದ್ದರೆ ಕುಮಾರ ಪರ್ವತಕ್ಕೆ ಚಾರಣ ಹೋಗಿ ಖಚಿತ ಪಡಿಸಿಕೊಳ್ಳಿ. ಲಕ್ಷಾಂತರ ಖರ್ಚು ಮಾಡಿ, ಕೆನ್ಯಾದ ಕಾಡು ಪ್ರಾಣಿಗಳನ್ನು ನೋಡಲು ಹೋಗದೆ, ನಾಗರ ಹೊಳೆಯಲ್ಲಿ ನಾಲ್ಕಾರು ದಿನ ಉಳಿದುಕೊಳ್ಳಿ. ಹೆಚ್ಚಿನ ಜೀವ ವೈವಿಧ್ಯತೆಯ ಪರಿಚಯ ನಿಮಗಾಗದಿದ್ದರೆ ನೋಡಿ.


ನೀವು ದೈವ ಭಕ್ತರೋ? ಹಿಮಾಲಯದ ಗಂಗೋತ್ರಿಯಲ್ಲಿ ಮಿಂದು ಬಂದರೆ ಯಾವ ಪಾಪ ಕಳೆಯುವುದೋ, ಅದು ತುಂಗೆಯಲ್ಲಿ ಮಿಂದು ಶೃಂಗೇರಿಯ ಶಾರದಾಂಬೆಯ ದರ್ಶನ ಪಡೆದರೂ ಲಭ್ಯ. ಧರ್ಮವ ಸಾರುವ ಧರ್ಮಸ್ಥಳ ಬೇರೆ ಎಲ್ಲುಂಟು? ಮುರುಡೇಶ್ವರದಲ್ಲಿ  ಶಿವ ದರ್ಶನ ಪಡೆದು, ಸಮುದ್ರ ಸ್ನಾನ ಮಾಡಿ ಬಂದರೆ ಹಿತವಲ್ಲವೇ? ನಿಮಗೆ ದ್ವೀಪ ಪ್ರವಾಸ ಮಾಡಬೇಕೆ?  ನೋಡಬಹುದಲ್ಲ, ಸೇಂಟ್ ಮೇರಿ ಐಲ್ಯಾಂಡ್.


ನಿಮಗೆ ಶಿಲ್ಪ ಕಲೆ ಇಷ್ಟವೋ? ಬೇಲೂರಿನ ಶಿಲಾ ಬಾಲಿಕೆಯರಷ್ಟೇ  ಅಲ್ಲ, ಹೊಯ್ಸಳರು ಕಟ್ಟಿದ ಎಲ್ಲಾ ದೇಗುಲಗಳಲ್ಲಿ, ಶಿಲ್ಪಕಲೆಯ ಆರಾಧನೆಯನ್ನು ಕಾಣಬಹುದು. ನಿಮಗೆ ಚರಿತ್ರೆ ಇಷ್ಟವೇ? ಹಾಗಿದ್ದಲ್ಲಿ ಹಂಪೆಯನ್ನು ಮರೆಯುವುದುಂಟೆ? ವೈಭವದಿಂದ ಕೂಡಿದ ಸಾಮ್ರಾಜ್ಯ ಹೇಗಿತ್ತು ಅನ್ನುವುದಷ್ಟೇ ಅಲ್ಲ ಸಕಲ ಕಲೆಗಳ ಬೀಡು ಇದಾಗಿತ್ತು ಎನ್ನುವುದು ಅರಿವಿಗೆ ಬರುತ್ತದೆ. ಕಲ್ಲು ಕಂಬಗಳು ನುಡಿಸುವ ಮರ್ಮರ ಸಂಗೀತಕ್ಕೆ ನೀವೇ ಮೂಕರಾಗಿಬಿಡುವಿರಿ. ಇಲ್ಲಿ ಶ್ರೀಕೃಷ್ಣದೇವರಾಯನು ತನ್ನ ಕುರುಹುಗಳನ್ನು ಬಿಟ್ಟು ಹೋಗಿದ್ದಾನೆ, ಹಾಗೇಯೇ ಪುರಂದರ ದಾಸರು ಕೂಡ. ನಿಮಗೆ ಪುರಾಣ ಇಷ್ಟವೇ? ಹತ್ತಿರದಲ್ಲೇ ಇದೆಯಲ್ಲ, ರಾಮಾಯಣದಲ್ಲಿ ಬರುವ ಕಿಷ್ಕಿಂದೆ, ಅಂಜನಾದ್ರಿ ಬೆಟ್ಟ.


Picture Credit: Shivashankar Banagar




'ವಾತಾಪಿ ಜೀರ್ಣೋಭವ' ಎಂದ ಅಗಸ್ತ್ಯ ಮುನಿ ಇದ್ದ ಬಾದಾಮಿಯನ್ನು ನೋಡಿ ಬನ್ನಿ. ಇದು ಚಾಲುಕ್ಯರ ರಾಜಧಾನಿ ಕೂಡ ಆಗಿತ್ತು. ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆ ಅರಿಯಲು ಐಹೊಳೆ, ಪಟ್ಟದಕಲ್ಲು ನೋಡುವುದು ಅಗತ್ಯ. ಬಿಜಾಪುರದ ಸುಲ್ತಾನರು ಕಟ್ಟಿದ ಗೋಲ್ ಗುಂಬಜ್ ಇಂದಿಗೂ ಮನ ಮೋಹಕ ಮತ್ತು ಮನುಷ್ಯನ ಸಾಧನೆಗಳ ಪ್ರತೀಕ.


ಬಸವನ ಬಾಗೇವಾಡಿಯಿಂದ, ಬಸವ ಕಲ್ಯಾಣ ಅಲ್ಲಿಂದ ಕೂಡಲ ಸಂಗಮಕ್ಕೆ ಬಂದು ನೋಡಿ. ದಾರಿಯಲ್ಲೆಲ್ಲೋ ಕ್ರಾಂತಿಯೋಗಿ ಬಸವಣ್ಣ ನಿಮ್ಮ ಅನುಭವಕ್ಕೆ ಬರುತ್ತಾನೆ. ಹಾಗೆಯೇ ಅನೇಕ ಶರಣರು, ವಚನಕಾರರು ಕೂಡ. ಆ ಪ್ರದೇಶಗಳಲ್ಲಿನ ವಿರಕ್ತ ಮಠಗಳಲ್ಲಿ ಕುಳಿತು ವಚನಗಳನ್ನು ಓದಿಕೊಂಡು ನೋಡಿ. ವೇದಗಳಿಗೂ ಮೀರಿದ ಜ್ಞಾನ ನಿಮಗೆ ಕನ್ನಡ ಭಾಷೆಯಲ್ಲೇ ಸಿಕ್ಕಿಬಿಡುತ್ತದೆ.


ಪ್ರವಾಸ ನಮ್ಮ ಅನುಭವವನ್ನು ವಿಸ್ತಾರಗೊಳಿಸುತ್ತದೆ. ಆದರೆ ಅದಕ್ಕೆ ಬಹು ದೂರದ ಪ್ರದೇಶಗಳಿಗೆ, ವಿದೇಶಗಳಿಗೆ ಹೋಗಬೇಕೆಂದಿಲ್ಲ. ಅಲ್ಲಿಗೆ ನೀವು ಹೋಗುವಿರೋ, ಬಿಡುವಿರೋ ನಿಮಗೆ ಬಿಟ್ಟಿದ್ದು. ಆದರೆ ಕನ್ನಡ ನಾಡನ್ನು ಸುತ್ತುವುದು ಮಾತ್ರ ಕಡೆಗಣಿಸಬೇಡಿ. ನನಗೆ ಈಗಾಗಲೇ ಸ್ಪಷ್ಟವಾಗಿದೆ. ಕನ್ನಡ ನಾಡಿಗಿಂತ ಚೆಲುವ ನಾಡು ಬೇರೊಂದಿಲ್ಲ. ಎಲ್ಲೆಲ್ಲ ಅಡ್ಡಾಡಿ ಬಂದ ಮೇಲೆ ನೀವು ಕೂಡ ಇದೆ ಮಾತು ಹೇಳುವಿರಿ ಎನ್ನುವ ಅಭಿಪ್ರಾಯ ನನ್ನದು.

Saturday, June 5, 2021

ಪ್ರಕೃತಿಯ ಯೋಜನೆಯ ನಂತರದ ಜೀವನ

ಕೊರೊನ ವೈರಸ್ ಹೇಗೆ ರೂಪಾಂತರಿಯಾಗಿ ಬಿಟ್ಟು ಬಿಡದೆ ಕಾಡುತ್ತದೆ ಎಂದು ನಾವೆಲ್ಲ ಗಮನಿಸುತ್ತಿದ್ದೇವೆ. ತಾನು ಸೇರಿಕೊಂಡ ದೇಹ ಅಂತ್ಯವಾದಾಗ ತನ್ನ ಅಂತ್ಯವೂ ಆಗುತ್ತದೆ ಎನ್ನುವುದು ಆ ಸೂಕ್ಷ್ಮ ಜೀವಿಗೂ ಗೊತ್ತು. ಅದಕ್ಕೆ ಅದು ಹೊಸ ಅತಿಥಿಯನ್ನು ಹುಡುಕಿ ಸೇರಿಕೊಳ್ಳುತ್ತದೆ ಮತ್ತು ತನ್ನ ವಂಶವನ್ನು ಮುಂದುವರೆಸುತ್ತದೆ. ಹಾಗೆ ನೋಡಿದರೆ, ಇದು ಪ್ರಕೃತಿಯ ಎಲ್ಲ ಜೀವಿಗಳಲ್ಲಿ ಸಹಜ. ಮನುಷ್ಯನಲ್ಲೂ ಇದೇ ತರಹದ ಪ್ರಕ್ರಿಯೆ ಇದೆ. 'The Selfish Gene' ಎನ್ನುವ ಪುಸ್ತಕ, ನಮ್ಮ ದೇಹದಲ್ಲಿರುವ ಜೀನ್ ಗಳು, ಎಂತಹುದೆ ಪರಿಸ್ಥಿತಿಯಲ್ಲಿ ತಾನು ಉಳಿದುಕೊಳ್ಳುವುದು ಮತ್ತು ವಂಶ ಮುಂದುವರೆಸುವುದು ಈ ಪ್ರಕ್ರಿಯೆಯೆಗಳ ಕಡೆ ಗಮನ ಹರಿಸುವ ಬಗ್ಗೆ ಬೆಳಕು ಚೆಲ್ಲುತ್ತದೆ. ಮನುಷ್ಯ ಸ್ವಾರ್ಥಿಯಾಗುವುದರಲ್ಲಿ ಪ್ರಕೃತಿಯ ಕೈವಾಡವೂ ಇದೆ. ಅದಕ್ಕೆ ಅವನು ಬದುಕುವುದು ಬೇಕು ಮತ್ತು ಅವನ ವಂಶ ಮುಂದುವರೆಯುವುದು ಬೇಕು. ಅದಕ್ಕೆ ಅದು ತನ್ನ ಸಂದೇಶವನ್ನು ಜೀನ್ ಗಳಲ್ಲಿ ಅಡಿಗಿಸಿ ಇಡುತ್ತದೆ. ಅದಕ್ಕೆ ನೋಡಿ, ಸಣ್ಣ ವಯಸ್ಸಿನಲ್ಲಿ ಟೈಫಾಯಿಡ್, ಟಿ.ಬಿ. ಯಂತಹ ರೋಗಗಳು ಬಂದಾಗಲೂ ಮನುಷ್ಯ ಬೇಗನೆ ಚೇತರಿಸಿಕೊಳ್ಳುತ್ತಾನೆ. ಹಾಗೆಯೆ ಯೌವನ ಬಂದಾಗ, ಪ್ರಕೃತಿಯು ಮನುಷ್ಯನ ದೇಹವನ್ನು ಹಾರ್ಮೋನ್ ಬದಲಾವಣೆ ಮೂಲಕ, ಸಂಗಾತಿಯನ್ನು ಹುಡುಕಲು ಮತ್ತು ವಂಶ ಬೆಳೆಸಲು ಪ್ರಚೋದಿಸುತ್ತದೆ. ಅಲ್ಲಿಗೆ ಪ್ರಕೃತಿಯು ಮನುಷ್ಯ ದೇಹದ ಜೀನ್ ಗಳಲ್ಲಿ ಬರೆದ ಸಾಂಕೇತಿಕ ಭಾಷೆಯು ತಾನು ಅಂದು ಕೊಂಡಿದ್ದಕ್ಕೆ ಬಳಕೆ ಆಗುತ್ತದೆ.


ಮನುಷ್ಯ ದೇಹ ನಲವತ್ತರ ನಂತರ ಬೇರೆಯದೇ ತರಹದ ವರ್ತನೆ ತೋರಲು ಆರಂಭಿಸುತ್ತದೆ. ಪ್ರಕೃತಿಯಾಗಲಿ, ಅದು ಸೃಷ್ಟಿಸಿದ ಜೀನ್ ಗಳಾಗಲಿ, ನಲವತ್ತರ ನಂತರದ ಮನುಷ್ಯನನ್ನು ಕಡೆಗಣಿಸುತ್ತವೆ. ಇಷ್ಟು ವರ್ಷ ಅವನು ಬದುಕಿ ವಂಶ ಬೆಳೆಸಿದ್ದರೆ, ಪ್ರಕೃತಿಗೆ  ಅವನನ್ನು ಹುಟ್ಟಿಸಿದ ಅವಶ್ಯಕತೆ ಮುಗಿದಿದೆ. ಒಂದು ವೇಳೆ ಅವನು ಇಷ್ಟರಲ್ಲಾಗಲೇ ವಂಶ ಮುಂದುವರೆಸದಿದ್ದರೆ, ಅವನು ಬದುಕಿದ್ದು ಪ್ರಯೋಜನ ಏನು ಎನ್ನುವುದು ಪ್ರಕೃತಿಯ ಅಭಿಪ್ರಾಯ. ಅದಕ್ಕೆ ನೋಡಿ, ನಲವತ್ತರ ನಂತರ ಮನುಷ್ಯ ದೇಹದ ಶಕ್ತಿ ಮೊದಲಿನ ತರಹ ಇರುವುದಿಲ್ಲ. ಯಾವುದಾದರೂ ರೋಗ ಸೇರಿಕೊಂಡರೆ ಬೇಗನೆ ಬಿಟ್ಟು ಹೋಗುವುದಿಲ್ಲ. ಜೀನ್ ಗಳು ತಾವು ಮರೆಯಾಗಿ ಹೋಗಿ ಮತ್ತೆ ಪ್ರಕೃತಿಯಲ್ಲಿ ಲೀನವಾಗಿ ಹೋಗಲು ಬಯಸುತ್ತವೆ. 


ಆದರೆ ನಲವತ್ತರ ನಂತರವೂ ನೀವು ಅತ್ಯುತ್ತಮ ಅರೋಗ್ಯ ಹೊಂದಿ, ಬದುಕಿನ ಬಗ್ಗೆ ಅಭಿರುಚಿ ಇದ್ದರೆ, ಅದಕ್ಕೆ ನಿಮ್ಮ ಪ್ರಯತ್ನವೇ ಕಾರಣ . ಏಕೆಂದರೆ ಪ್ರಕೃತಿಯು ಈಗ ನಿಮ್ಮ ಸಹಾಯಕ್ಕೆ ಇಲ್ಲ. ಅದಕ್ಕೆ ನಿಮ್ಮಿಂದ ಈಗ ಯಾವ ಪ್ರಯೋಜನವೂ ಇಲ್ಲ. ಹಾಗಾಗಿ ಅದರ ಸಹಾಯ ಮತ್ತು ಪ್ರಭಾವ ಎರಡರಿಂದ ನೀವು ಮುಕ್ತರಾಗಿದ್ದೀರಿ. ಮನುಷ್ಯನನ್ನು ಬಿಟ್ಟು ಬೇರೆಲ್ಲ ಪ್ರಾಣಿ, ಪಕ್ಷಿಗಳ ಜೀವನ ಕ್ರಮ ಗಮನಿಸಿ ನೋಡಿ. ಸಂತಾನೋತ್ಪತ್ತಿ ನಿಲ್ಲಿಸಿದ ಕೆಲವೇ ವರ್ಷಗಳಿಗೆ ಅವುಗಳ ಜೀವನವು ಅಂತ್ಯವಾಗುತ್ತದೆ. ಅದು ಪ್ರಕೃತಿ ಮಾಡಿದ ವಿನ್ಯಾಸ. ಆದರೆ ಮನುಷ್ಯ ಮಾತ್ರ ಅದಕ್ಕೆ ಹೊರತು. ಬೇರೆ ಯಾವುದೇ ಜೀವಿಗಳಿಗೆ ಇರದ ಸೌಲಭ್ಯ ನಮಗಿದೆ. ಅದು ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವ ಮತ್ತು ಅದರ ಮೇಲೆ ಹಿಡಿತ ಸಾದಿಸುವ ಪ್ರಜ್ಞೆ. ಅದಕ್ಕೆ ನೋಡಿ, ನಾವು ನಲವತ್ತರ ನಂತರ ನಮ್ಮ ದೇಹವನ್ನು ತಾತ್ಸಾರವಾಗಿ ಕಾಣಲು ಸಾಧ್ಯವಿಲ್ಲ. ಎಷ್ಟು ಕಾಳಜಿ ವಹಿಸಿ ಕಾಪಾಡಿಕೊಳ್ಳುತ್ತೇವೋ, ಅಷ್ಟು ವರ್ಷದ ಬದುಕು ನಮ್ಮದು. ವೈದ್ಯಕೀಯ ಸೌಲಭ್ಯಗಳು ಕೂಡ ಅದಕ್ಕೆ ಸಹಾಯ ಮಾಡುತ್ತವೆ.


ನಲವತ್ತರ ನಂತರ ಪ್ರಕೃತಿಯು ನಮ್ಮನ್ನು ನಮ್ಮ ಪಾಡಿಗೆ (ಎಲ್ಲರಿಗೂ ಅಲ್ಲವಾದರೂ, ಸಾಕಷ್ಟು ಜನರಿಗೆ) ಬಿಟ್ಟು ಬಿಡುತ್ತದಲ್ಲ. ಆಗ ಜೀವನದ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಮನಸ್ಸು ಸಾಕಷ್ಟು ತಹಬದಿಗೆ ಬಂದಿರುತ್ತದೆ. ಅಲ್ಲಿಯವರೆಗೆ ನೋಡಿದ ಸಾವು ನೋವುಗಳು ನಮ್ಮ ನಶ್ವರತೆಯ ಅರಿವು ಮೂಡಿಸುತ್ತವೆ. ಸ್ವಾರ್ಥದ ಆಚೆಗೆ ಬದುಕು ಇರುವುದು ಅರಿವಿಗೆ ಬರುತ್ತದೆ. ಕಲೆಗಳು ಒಲಿಯತೊಡಗುತ್ತವೆ. ಅಲ್ಲಿಂದ ಆಮೇಲೆ ನಾವು ಪ್ರಕೃತಿಯ ಯೋಜನೆಯಂತೆ ಬದುಕದೆ, ನಮ್ಮ ಇಷ್ಟದಂತೆ ಬದುಕಲು ಸಾಧ್ಯವಾಗುತ್ತದೆ. ಅಲ್ಲಿಂದ ಮುಂದೆ ಎಷ್ಟು ವರ್ಷ ಬದುಕುತ್ತೇವೆ ಎನ್ನುವುದು ನಮ್ಮ ಪ್ರಯತ್ನದ ಮೇಲೆ ಅವಲಂಬಿತವಾಗುತ್ತದೆ. ಚಟಗಳಿಗೆ ದಾಸರಾಗಿ, ದೇಹವನ್ನು ದುರುಪಯೋಗ ಪಡಿಸಿಕೊಂಡರೆ ಅಲ್ಲಿಂದ ಸಾವು ದೂರದ ದಾರಿಯೇನಲ್ಲ. ಹಾಗೆಯೇ ನಿಯಮಿತವಾಗಿ ಬದುಕಿದಷ್ಟು ದೇಹ ತನ್ನ ಇರುವಿಕೆಯನ್ನು ಮುಂದುವರೆಸುತ್ತ ಹೋಗುತ್ತದೆ. ಅದು ಇನ್ನೂ ನಲವತ್ತು ವರುಷ ಮುಂದುವರೆಯಬಹುದು. ಅಥವಾ ಅಸಮರ್ಪಕವಾಗಿದ್ದಲ್ಲಿ, ಬೇಗನೆ ಕೊನೆಗೊಳ್ಳಬಹುದು ಕೂಡ. 


ನಮ್ಮ ಹುಟ್ಟು, ಬೆಳವಣಿಗೆಯ ಎಷ್ಟೋ ಸಂಗತಿಗಳನ್ನು ಪ್ರಕೃತಿಯು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿತ್ತು. ಏನೇ ಕಷ್ಟ ಬರಲಿ, ನಲವತ್ತರ ಅಂಚಿಗೆ ನಮ್ಮನ್ನು ಕರೆ ತರಲು ಅದು ಸಹಾಯ ಮಾಡಿತು. ಆದರೆ ಅದರ ನಂತರದ ನಮ್ಮ ಬದುಕಿಗೆ ಮಾತ್ರ ನಾವೇ ಸಂಪೂರ್ಣ ಹೊಣೆ.  ಹಾಗೆಯೇ ನಂತರದ  ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಅನ್ನುವುದು ನಮ್ಮ ವಿವೇಚನೆಗೆ ಬಿಟ್ಟಿದ್ದು. ನಮ್ಮ ವ್ಯಕ್ತಿತ್ವ ವಿಕಾಸವು ಇದೇ ಸಮಯದಲ್ಲಿ ಸಹಜ ಸಾಧ್ಯ. ನೀವು ಈಗಾಗಲೇ ನಲವತ್ತು ದಾಟಿದ್ದೀರಾ? ನಿಮ್ಮ ದೇಹದ, ಮನಸ್ಸಿನ ಕಾಳಜಿ ನಿಮಗಿದ್ದರೆ, ನಿಮಗೆ ಅಭಿನಂದನೆಗಳು. ಇಲ್ಲದಿದ್ದರೆ ಪ್ರಕೃತಿಯ ಯೋಜನೆಗೆ ವಿರುದ್ಧ ಈಜಿ, ನಿಮ್ಮ ಅದೃಷ್ಟದ ಪರೀಕ್ಷೆ ಮಾಡುತ್ತಿರಿವಿರಿ ಅಷ್ಟೇ.

Friday, June 4, 2021

ಕಥೆ ಹೇಳೋದು ಕಲಿತ ಮೇಲೆ ಮನುಷ್ಯ ಮನುಷ್ಯ ಆಗಿದ್ದು

ಎಷ್ಟೋ ಸಾವಿರ ವರ್ಷಗಳ ಹಿಂದೆ ಆದಿ ಮಾನವ ಅಲೆಮಾರಿಯಾಗಿ, ಬೇಟೆ ಆಡುತ್ತ ಜೀವನ ಕಳೆಯುತ್ತಿದ್ದ. ಆಗ ಅವನಿಗೆ ಮತ್ತು ಕಾಡಲ್ಲಿನ ಇತರ ಮೃಗಗಳಿಗೆ ಹೆಚ್ಚಿನ ವ್ಯತ್ಯಾಸ ಇದ್ದಿಲ್ಲ. ಆದರೆ ಅವನು ಕ್ರಮೇಣ ವ್ಯವಸಾಯ ಕಲಿತುಕೊಂಡು, ಸಂಘ ಜೀವಿಯಾಗಿ ಮಾರ್ಪಟ್ಟ. ಜೊತೆಗಾರರ ನಡುವೆ ವ್ಯವಹರಿಸಲು ಅವನು ಬಳಸುತ್ತಿದ್ದ ಸಂಜ್ಞೆ, ಹೂಂಕಾರಗಳು ಕ್ರಮೇಣ ಶಬ್ದಗಳಾಗಿ ರೂಪುಗೊಂಡು, ಶಬ್ದ ಭಂಡಾರ ಬೆಳೆಯುತ್ತ ಅದು ಒಂದು ವ್ಯವಸ್ಥಿತ ಭಾಷೆಯಾಗಿ ಬದಲಾಯಿತು. ಅದು ಮನುಷ್ಯನಿಗೆ ಇತರೆ ಮೂಕ ಪ್ರಾಣಿಗಳಿಗೆ ಇಲ್ಲದಂತಹ ಅನುಕೂಲತೆಯನ್ನು ಒದಗಿಸಿತು. ಅದು ಮನುಷ್ಯರ ನಡುವಿನ ಸಂಪರ್ಕದ ಕ್ಷಮತೆ ಹೆಚ್ಚಿಸುವುದಲ್ಲದೆ, ಇನ್ನೂ ಒಂದು ಅದ್ಬುತ ಬೆಳವಣಿಗೆಗೆ ಕಾರಣವಾಯಿತು. ಅದು ಮನುಷ್ಯ ತಾನು ಕಲಿತುಕೊಂಡ ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಬಗೆ. ಚಿಕ್ಕ ಮಕ್ಕಳನ್ನು ಕೂರಿಸಿಕೊಂಡು ಬೆಟ್ಟದ ಹುಲಿಯ ಕಥೆ ಹೇಳಿದ ಅಜ್ಜ, ಕೂಸುಗಳಿಗೆ ಜೋಗುಳ ಹಾಡುತ್ತ ಮಲಗಿಸಿದ ಅಜ್ಜಿ, ಬಹುಶ ಮನುಷ್ಯ ಕುಲದ ಮೊದಲ ಕಥೆಗಾರರು. ಆ ಕಥೆಗಳು ಮನರಂಜನೆಯ ಜೊತೆ, ಆ ಮಕ್ಕಳ ಬುದ್ಧಿ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾದವು.

 

ಜೀವನದ ಪಟ್ಟುಗಳ ಬಗ್ಗೆ ಕಥೆಯ ಮೂಲಕ ಅರಿವು ಮೂಡಿಸಿಕೊಂಡ ಮಕ್ಕಳು, ಮುಂದೆ ತಾವು ದೊಡ್ಡವರಾದಾಗ ತಮ್ಮ ಅನುಭವಗಳನ್ನು ಹೊಸ ಕಥೆಗಳನ್ನಾಗಿಸಿ ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿದರು. ಕೆಲವು ಕಥೆಗಳು ಹಾಡಿನ ರೂಪಿನಲ್ಲಿದ್ದವು. ಅವು ಮನುಷ್ಯನಲ್ಲಿ ಕಲಾತ್ಮಕತೆಯನ್ನು ಮೂಡಿಸಿದವು. ಇನ್ನೂ ಕೆಲವು ಕಥೆಗಳನ್ನು ಮನುಷ್ಯ ಅಭಿನಯಿಸಿ ತೋರಿಸಲಾರಂಭಿಸಿದ. ಅವುಗಳು ಬಯಲಾಟ, ನಾಟಕಗಳಾಗಿ ಮಾರ್ಪಾಡಾದವು. ಅಷ್ಟೊತ್ತಿಗೆ ಬರವಣಿಗೆಯನ್ನು ಕೂಡ ಮನುಷ್ಯ ಕಲಿತುಕೊಂಡ. ಆಗ ಆ ಕಥೆಗಳೇ ಪುಸ್ತಕಗಳಾದವು. ಹಾಗೆಯೇ ಮನುಷ್ಯ ಚಿತ್ರ ಬಿಡಿಸುವುದನ್ನು ಮಾಡುತ್ತಿದ್ದ. ಅವೆರಡು ಸೇರಿ ಮುಂದೆ 'ಅಮರ ಚಿತ್ರ ಕಥೆ' ಗಳಾದವು. ರಾಜ, ಮಹಾರಾಜರಿಗೆ ಇರಬೇಕಾದ ಸಮಯ ಪ್ರಜ್ಞೆ, ಶಿಕ್ಷಣಗಳನ್ನೂ ಅತಿ ಕಡಿಮೆ ಅವಧಿಯಲ್ಲಿ ಕಲಿಸಿಕೊಡಲು 'ಪಂಚ ತಂತ್ರ' ದ ಕಥೆಗಳು ರೂಪುಗೊಂಡವು. ಹಿಂದಿನ ಪೀಳಿಗೆಗಳ ಅನುಭವ ಸಾರವನ್ನೇ ಮನುಷ್ಯ ಕಥೆಗಳ ಮೂಲಕ ಹಿಡಿದಿಟ್ಟ ಮತ್ತು ಅವುಗಳ ಸದ್ಬಳಕೆ ಮನುಷ್ಯ ಪೀಳಿಗೆಯ ಅಭಿವೃದ್ಧಿಗೆ ಸಹಾಯವಾಯಿತು.

 

ಕಥೆಗಳೇ ಇರದಿದ್ದರೆ, ರಾಮಾಯಣ, ಮಹಾಭಾರತ ಎಲ್ಲಿರುತ್ತಿದ್ದವು? ಯಾರೂ ಕಥೆ ಹೇಳದಿದ್ದರೆ, ನಮಗೆ ನಮ್ಮ ಕಳೆದು ಹೋದ ಹಿಂದಿನ ತಲೆಮಾರಿನ ಪರಿಚಯವೇ ಇರುತ್ತಿರಲಿಲ್ಲ. ಆದರೆ ಹಾಗಾಗದೆ, ಮನುಷ್ಯ ಸೊಗಸಾದ ಕಥೆಗಾರನಾಗಿ ರೂಪುಗೊಂಡ ಮತ್ತು ಭವಿಷ್ಯದ ತಲೆಮಾರುಗಳು ಅಭಿವೃದ್ಧಿಯ ಕಡೆ ಸಾಗಲು ನೆರವಾದ. ಇಂದಿಗೆ ಕಥೆಗಳು ಹಲವಾರು ಮಾಧ್ಯಮದಿಂದ ನಮ್ಮನ್ನು ತಲುಪುತ್ತವೆ. ಅವು ಚಲನ ಚಿತ್ರಗಳಾಗಿರಬಹುದು. ದೂರದರ್ಶನದ ಎಳೆದು ಕಥೆ ಹೇಳುವ ಧಾರಾವಾಹಿಗಳಾಗಿರಬಹುದು. ಓದುವ ಕಾದಂಬರಿಗಳಾಗಿರಬಹುದು. ರೇಡಿಯೋನಲ್ಲಿ ಕೇಳುವ ಕಾರ್ಯಕ್ರಮಗಳಾಗಿರಬಹುದು. ನಮ್ಮ ಕಾರ್ಪೊರೇಟ್ ಜಗತ್ತಿನಲ್ಲಿ ಪವರ್ ಪಾಯಿಂಟ್ ಮೂಲಕ ಹೇಳುವುದು ಕೂಡ ಕಥೆಯ ಇನ್ನೊಂದು ರೂಪವೇ ಅಲ್ಲವೇ? 


ಕಥೆಗಳು ಕೇವಲ ಮನರಂಜನೆ ಒದಗಿಸುವ, ರೋಮಾಂಚನ ಹುಟ್ಟಿಸುವ ಸಾಧನಗಳು ಅಲ್ಲ. ಅವು ನಮ್ಮನ್ನು ಇತಿಹಾಸ ಮತ್ತು ಭವಿಷ್ಯದ ಜೊತೆ ಸಂಪರ್ಕ ಕಲ್ಪಿಸುವ ಕೊಂಡಿ. ಮನುಷ್ಯ ನಾಗರಿಕತೆಯ ಬೆಳವಣಿಗೆ, ಅವನು ಹೇಳಿದ ಕಥೆಗಳ ಜೊತೆ ಹಾಸು ಹೊಕ್ಕಾಗಿದೆ. ಅದಕ್ಕೆ ನನಗೆ ಅನ್ನಿಸಿದ್ದು, ಕಥೆ ಹೇಳುವುದನ್ನು ಕಲಿತ ಮೇಲೆಯೇ ಮನುಷ್ಯ, ಮನುಷ್ಯನಾಗಿ ಬದಲಾದದ್ದು.

Wednesday, May 26, 2021

ಕಥೆ: ಅದೃಷ್ಟ

ಅವಳ ಹೆಸರು ಗಿರಿಜೆ. ಅವಳು ಇದ್ದಿದ್ದೇ ನಾಲ್ಕೂವರೆ ಅಡಿ ಎತ್ತರ. ಕಪ್ಪು ಹಣೆಯ ಮೇಲೆ ಕೆಂಪನೆಯ ದೊಡ್ಡ ಕುಂಕುಮವಿನ್ನಿಟ್ಟುಕೊಂಡು ಮಟ್ಟಸ ಎನ್ನುವ ಹಾಗಿದ್ದಳು. ಅವಳು ನಡು ಬಾಗುವ ಪ್ರಶ್ನೆಯೇ ಇರಲಿಲ್ಲ. ಅಲ್ಲದೆ ಮಾತು ತಮಾಷೆಯದು ಬೇರೆ. ಹಾಗಾಗಿ ಅವಳ ವಯಸ್ಸು ನಲವತ್ತೋ, ಐವತ್ತೋ ಅಥವಾ ಇನ್ನು ಹೆಚ್ಚೊ ಎಂದು ಯಾರಿಗೂ ತಿಳಿಯುತ್ತಿದ್ದಿಲ್ಲ. ಅವಳಿಗೆ ಗಂಡ ಇದ್ದ ಎಂದು ಓಣಿಯ ಹಿರಿಯರು ಹೇಳುತ್ತಿದ್ದರಾದರೂ, ಅವನನ್ನು ಅಲ್ಲಿ ಯಾರೂ ನೋಡಿರಲಿಲ್ಲ. ಅವಳಿಗೆ ಮಕ್ಕಳು ಇರಲಿಲ್ಲ. ವಠಾರದಲ್ಲಿನ ಒಂಟಿ ಕೋಣೆಯೇ ಅವಳ ಮನೆ. ಬೆಳಿಗ್ಗೆಯೇ ಹೊಲಗಳಿಗೆ ಕೂಲಿ ಕೆಲಸಕ್ಕೆ ಹೊರಟು ಬಿಡುತ್ತಿದ್ದ ಅವಳು ಮತ್ತೆ ಮನೆ ಸೇರುವುದು ಸಂಜೆಯೇ. ಹತ್ತು ಅಡಿ ಅಗಲದ ಕೋಣೆ ಸ್ವಚ್ಛಗೊಳಿಸಿ, ತನ್ನೊಬ್ಬಳಿಗೆ ಅಡುಗೆ ಮಾಡುವುದಕ್ಕೆ ಯಾವ ಮಹಾ ಸಮಯ ಬೇಕು? ಚುರುಕಾಗಿದ್ದ ಅವಳು ತನ್ನ ಕೆಲಸ ಬೇಗನೆ ಮುಗಿಸಿಕೊಂಡು ಕತ್ತಲಾಗುವುದಕ್ಕೆ ಮುಂಚೆಯೇ ಮನೆ ಹೊರಗಿನ ಕಟ್ಟೆಯ ಮೇಲೆ ಹಾಜರಾಗಿಬಿಡುತ್ತಿದ್ದಳು. ಸುತ್ತ ಮುತ್ತಲಿನ ಮನೆ ಹುಡುಗರು ಅಲ್ಲಿ ಬೀದಿಯಲ್ಲಿ ಆಟವಾಡಿರುಕೊಂಡಿರುತ್ತಿದ್ದರಲ್ಲ. ಅವರನ್ನು ಗಮನಿಸುತ್ತಾ, ಯಾರಾದರೂ ಹೆಣ್ಣು ಮಕ್ಕಳು ಸಹಾಯಕ್ಕೆ ಕರೆದರೆ, ಅವರಿಗೆ ಮನೆ ಕೆಲಸದಲ್ಲಿ ನೆರವಾಗುತ್ತ, ಅವರ ಜೊತೆ ಸಮಯ ಕಳೆಯುವುದು ಅವಳ ಸಾಯಂಕಾಲದ ದಿನಚರಿ.


ಓಣಿಯ ಹೆಣ್ಣು ಮಕ್ಕಳೆಲ್ಲರೂ, ಅವರಿವರೆನ್ನದೆ  ಅಕ್ಕ ಪಕ್ಕದ ಎಲ್ಲ ಮನೆಗಳವರು, ಅವಶ್ಯಕತೆ ಬಿದ್ದಾಗ ಗಿರಿಜೆಯ ಸಹಾಯ ತೆಗೆದುಕೊಂಡರೂ, ಅವಳನ್ನು ತಮ್ಮ ಕುಟುಂಬದಲ್ಲಿ ಒಬ್ಬರಂತೆ ಕಂಡದ್ದು ಇಲ್ಲ.  ಅಲ್ಲದೇ ಅವಳನ್ನು ಉದ್ದೇಶಿಸಿ 'ಮಕ್ಕಳಿಲ್ಲದಿದ್ದರೆ ಒಂದು ಚಿಂತೆ, ಮಕ್ಕಳಿದ್ದರೆ ನೂರಾರು ಚಿಂತೆ' ಎಂದು ಗಾದೆ ಮಾತು ಹೇಳುವುದೇ ಬೇರೆ. ಆ ಮಾತು ತನ್ನ ಕಿವಿಗೆ ಬಿದ್ದೆ ಇಲ್ಲ ಎನ್ನುವಂತೆ ಗಿರಿಜೆ ಹೋಗಿ ಬಿಡುತ್ತಿದ್ದಳಲ್ಲ. ಆಗ ಆ ಹೆಣ್ಣು ಮಕ್ಕಳ ಹೊಟ್ಟೆ ಉರಿ ಇನ್ನು ಹೆಚ್ಚಾಗುತಿತ್ತು. ಒಂದು ದಿನವೂ ಖಾಯಿಲೆ ಬೀಳದ, ಎಲ್ಲರಿಗೂ ತಮಾಷೆ ಮಾಡುತ್ತ ಜೀವನ ಸವೆಸುವ ಅವಳನ್ನು ಕಂಡರೆ ವಯಸ್ಸಾದವರಿಗೂ ಅಸೂಯೆ. ಗಂಡ-ಮಕ್ಕಳು ಇರದಿದ್ದರೆ, ಒಂಟಿಯಾದರೂ, ನಿಶ್ಚಿಂತೆಯ, ನೆಮ್ಮದಿಯ ಜೀವನ ಸಾಧ್ಯ ಅಲ್ಲವೇ ಎಂದು ಅವರೆಲ್ಲ ಬೆರಗಾಗುತ್ತಿದ್ದರು. ಅವಳದೇ ಅದೃಷ್ಟ ಎನ್ನುವ ತೀರ್ಮಾನಕ್ಕೂ ಬರುತ್ತಿದ್ದರು.


ಆ ಓಣಿಯ ಮನೆಗಳಲ್ಲಿ ಯಾರದರಾದರೊಬ್ಬರದು ಮನೆಯಲ್ಲಿ ಮದುವೆ ನಿಶ್ಚಯ ಆದರೆ, ಆಗ ಗಿರಿಜೆಗೆ ಕೂಲಿಗೆ ಹೋಗದೆ ತಮ್ಮ ಮನೆ ಕೆಲಸಕ್ಕೆ ಬರುವಂತೆ ಹೇಳಲಾಗುತ್ತಿತ್ತು. ಅಲ್ಲಿ ಕೆಲಸದಲ್ಲಿರುವಾಗ, ಮಕ್ಕಳಿಗೆ ಮದುವೆ ಮಾಡುವ ತಾಪತ್ರಯ ಅವಳಿಗಿಲ್ಲ ಎನ್ನುವ ಮಾತಿಗೂ ಅವಳು ನಕ್ಕು ಸುಮ್ಮನಾಗುತ್ತಿದ್ದಳು. ಪಕ್ಕದ ಓಣಿಯಲ್ಲಿ, ಗಂಡನ ಕಿರುಕುಳ ತಾಳದೆ ಒಬ್ಬಳು ಬೆಂಕಿ ಹಚ್ಚಿಕೊಂಡು ತನ್ನನ್ನೇ ಸುಟ್ಟುಕೊಂಡಾಗ, ಆ ಘೋರ ದೃಶ್ಯವನ್ನು ನೋಡಿ ಹೆಣ್ಣು ಮಕ್ಕಳೆಲ್ಲ, ಇಂತಹ ತಾಪತ್ರಯ ಗಿರಿಜೆ ಒಬ್ಬಳಿಗೆ ಮಾತ್ರ ಇಲ್ಲ ಎಂದು ಮಾತನಾಡಿಕೊಂಡರು. ಎಂದಿನಂತೆ ತನಗೂ ಅಂತಹ ಮಾತುಗಳಿಗೂ ಸಂಬಂಧ ಇಲ್ಲವೆನ್ನುವಂತೆ ಗಿರಿಜೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ತನ್ನ ಸಂಬಂಧದ ಒಬ್ಬರ ಕೂಸು ಖಾಲಿಯಾದಾಗ, ಸಮಾಧಾನ ಹೇಳಲಿಕ್ಕೆ ಹೋದ ಗಿರಿಜೆ "ಹೊರಲಿಲ್ಲ, ಹೆರಲಿಲ್ಲ, ಸಂಕಟ ಹೇಗೆ ತಿಳಿದೀತು?" ಎಂದು ಮಾತು ಕೇಳಿದಾಗ ಕೂಡ ಬೇಸರ ಮಾಡಿಕೊಳ್ಳಲಿಲ್ಲ. ವಯಸ್ಸಾದ ಅತ್ತೆ, ಮಾವಂದಿರ ಸೇವೆ ಮಾಡುವ ಹೆಣ್ಣು ಮಕ್ಕಳು ಗಿರಿಜೆಯ ಹತ್ತಿರ ಬಂದು ತಮ್ಮ ಗೋಳು ಹೇಳಿಕೊಂಡು, ತಮ್ಮದು ಪಾಪದ ಬದುಕು, ಅಂತಹ ಕಷ್ಟ ನಿನಗಿಲ್ಲ ಎಂದು ಅಲವತ್ತು ಕೊಂಡಾಗ ಕೂಡ ಅವಳು ತಮಾಷೆಯ, ತೇಲಿಕೆಯ ಮಾತು ಹೇಳಿ ಕಳಿಸಿಬಿಡುತ್ತಿದ್ದಳು.  


ಅದೊಂದು ಮಳೆಗಾಲದ ದಿನದಂದು, ಬೆಳಿಗ್ಗೆ ಕೂಲಿಗೆಂದು ಗಿರಿಜೆ ಹೋದದ್ದನ್ನು ಆ ಓಣಿಯ ಜನ ನೋಡಿದ್ದೇ ಕೊನೆ. ಆ ದಿನ ಮಧ್ಯಾಹ್ನ ಹೊತ್ತಿಗೆಲ್ಲ, ದಟ್ಟಣೆಯ ಕಪ್ಪು ಮೋಡ ಜಮಾವಣೆ ಆಗಿ, ಸಾಯಂಕಾಲಕ್ಕೆ ಮೊದಲೇ ಕತ್ತಲು ಆವರಿಸಿ ಧೋ ಎಂದು ಮಳೆ ಸುರಿಯಿತಲ್ಲ. ಬಾಗಿಲು ಮುಚ್ಚಿಕೊಂಡು ತಮ್ಮ ಮನೆಗಳಲ್ಲಿ ಬಂದಿಯಾಗಿಬಿಟ್ಟರು ಜನ. ಸರಿ ರಾತ್ರಿಯಲ್ಲಿ ಧಡಾಲ್ ಎಂದು ಅಕ್ಕ ಪಕ್ಕದಲ್ಲಿ ಮನೆಗಳು ಬಿದ್ದ ಸದ್ದು. ಬೆಳಿಗ್ಗೆ ಹೊತ್ತಿಗೆ ಮೋಡ ಸರಿದು, ಸೂರ್ಯ ಇಣುಕುವ ಹೊತ್ತಿಗೆ, ಯಾರ ಮನೆ ಬಿದ್ದದ್ದು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಮನೆಯಿಂದ ಹೊರಗೆ ಬಂದರು ಜನ. ಬಿದ್ದ ನಾಲ್ಕಾರು ಮನೆಗಳಲ್ಲಿ ಗಿರಿಜೆಯದು ಒಂದು. ಅವಳಿದ್ದ ಮನೆಯ ಮಣ್ಣಿನ ಮಾಳಿಗೆ ರಾತ್ರಿ ಬಿದ್ದ ದೊಡ್ಡ ಮಳೆಗೆ, ಸಂಪೂರ್ಣ ಕರಗಿ ಹೋಗಿತ್ತು. ಸುಣ್ಣ ಕಾಣದ ಗೋಡೆಗಳು, ಆಕಾಶಕ್ಕೆ ತೆರೆದುಕೊಂಡು ನಿಂತಿದ್ದವು. ಚೆಲ್ಲಾ ಪಿಲ್ಲಿಯಾಗಿದ್ದ ಸಾಮಾನುಗಳು, ಗಿರಿಜೆ ಮನೆಗೆ ವಾಪಸ್ಸು ಬಂದಿಲ್ಲ ಎಂದು ಸೂಚಿಸುತ್ತಿದ್ದವು. ಆ ಮನೆ ಜಂತಿಯಲ್ಲಿ ಓಡಾಡಿಕೊಂಡಿದ್ದ ಹಾವೊಂದು  ಮತ್ತೆಲ್ಲಿಗೆ ಹೋಗುವೊದೋ ಎನ್ನುವ ಚಿಂತೆಯಲ್ಲಿತ್ತು. ಅಲ್ಲಿಯವರೆಗೆ ಗಿರಿಜೆಯದೇ ಅದೃಷ್ಟ ಎಂದು ಮಾತನಾಡಿಕೊಳ್ಳುತ್ತಿದ್ದ ಓಣಿಯ ಹೆಂಗಸರಿಗೆ ಅಂದು ಯಾವ ಪ್ರತಿಕ್ರಿಯೆ ನೀಡಬೇಕೋ ಎಂದು ತಿಳಿಯದೇ ಹೋಯಿತು.