Wednesday, May 26, 2021

ಕಥೆ: ಅದೃಷ್ಟ

ಅವಳ ಹೆಸರು ಗಿರಿಜೆ. ಅವಳು ಇದ್ದಿದ್ದೇ ನಾಲ್ಕೂವರೆ ಅಡಿ ಎತ್ತರ. ಕಪ್ಪು ಹಣೆಯ ಮೇಲೆ ಕೆಂಪನೆಯ ದೊಡ್ಡ ಕುಂಕುಮವಿನ್ನಿಟ್ಟುಕೊಂಡು ಮಟ್ಟಸ ಎನ್ನುವ ಹಾಗಿದ್ದಳು. ಅವಳು ನಡು ಬಾಗುವ ಪ್ರಶ್ನೆಯೇ ಇರಲಿಲ್ಲ. ಅಲ್ಲದೆ ಮಾತು ತಮಾಷೆಯದು ಬೇರೆ. ಹಾಗಾಗಿ ಅವಳ ವಯಸ್ಸು ನಲವತ್ತೋ, ಐವತ್ತೋ ಅಥವಾ ಇನ್ನು ಹೆಚ್ಚೊ ಎಂದು ಯಾರಿಗೂ ತಿಳಿಯುತ್ತಿದ್ದಿಲ್ಲ. ಅವಳಿಗೆ ಗಂಡ ಇದ್ದ ಎಂದು ಓಣಿಯ ಹಿರಿಯರು ಹೇಳುತ್ತಿದ್ದರಾದರೂ, ಅವನನ್ನು ಅಲ್ಲಿ ಯಾರೂ ನೋಡಿರಲಿಲ್ಲ. ಅವಳಿಗೆ ಮಕ್ಕಳು ಇರಲಿಲ್ಲ. ವಠಾರದಲ್ಲಿನ ಒಂಟಿ ಕೋಣೆಯೇ ಅವಳ ಮನೆ. ಬೆಳಿಗ್ಗೆಯೇ ಹೊಲಗಳಿಗೆ ಕೂಲಿ ಕೆಲಸಕ್ಕೆ ಹೊರಟು ಬಿಡುತ್ತಿದ್ದ ಅವಳು ಮತ್ತೆ ಮನೆ ಸೇರುವುದು ಸಂಜೆಯೇ. ಹತ್ತು ಅಡಿ ಅಗಲದ ಕೋಣೆ ಸ್ವಚ್ಛಗೊಳಿಸಿ, ತನ್ನೊಬ್ಬಳಿಗೆ ಅಡುಗೆ ಮಾಡುವುದಕ್ಕೆ ಯಾವ ಮಹಾ ಸಮಯ ಬೇಕು? ಚುರುಕಾಗಿದ್ದ ಅವಳು ತನ್ನ ಕೆಲಸ ಬೇಗನೆ ಮುಗಿಸಿಕೊಂಡು ಕತ್ತಲಾಗುವುದಕ್ಕೆ ಮುಂಚೆಯೇ ಮನೆ ಹೊರಗಿನ ಕಟ್ಟೆಯ ಮೇಲೆ ಹಾಜರಾಗಿಬಿಡುತ್ತಿದ್ದಳು. ಸುತ್ತ ಮುತ್ತಲಿನ ಮನೆ ಹುಡುಗರು ಅಲ್ಲಿ ಬೀದಿಯಲ್ಲಿ ಆಟವಾಡಿರುಕೊಂಡಿರುತ್ತಿದ್ದರಲ್ಲ. ಅವರನ್ನು ಗಮನಿಸುತ್ತಾ, ಯಾರಾದರೂ ಹೆಣ್ಣು ಮಕ್ಕಳು ಸಹಾಯಕ್ಕೆ ಕರೆದರೆ, ಅವರಿಗೆ ಮನೆ ಕೆಲಸದಲ್ಲಿ ನೆರವಾಗುತ್ತ, ಅವರ ಜೊತೆ ಸಮಯ ಕಳೆಯುವುದು ಅವಳ ಸಾಯಂಕಾಲದ ದಿನಚರಿ.


ಓಣಿಯ ಹೆಣ್ಣು ಮಕ್ಕಳೆಲ್ಲರೂ, ಅವರಿವರೆನ್ನದೆ  ಅಕ್ಕ ಪಕ್ಕದ ಎಲ್ಲ ಮನೆಗಳವರು, ಅವಶ್ಯಕತೆ ಬಿದ್ದಾಗ ಗಿರಿಜೆಯ ಸಹಾಯ ತೆಗೆದುಕೊಂಡರೂ, ಅವಳನ್ನು ತಮ್ಮ ಕುಟುಂಬದಲ್ಲಿ ಒಬ್ಬರಂತೆ ಕಂಡದ್ದು ಇಲ್ಲ.  ಅಲ್ಲದೇ ಅವಳನ್ನು ಉದ್ದೇಶಿಸಿ 'ಮಕ್ಕಳಿಲ್ಲದಿದ್ದರೆ ಒಂದು ಚಿಂತೆ, ಮಕ್ಕಳಿದ್ದರೆ ನೂರಾರು ಚಿಂತೆ' ಎಂದು ಗಾದೆ ಮಾತು ಹೇಳುವುದೇ ಬೇರೆ. ಆ ಮಾತು ತನ್ನ ಕಿವಿಗೆ ಬಿದ್ದೆ ಇಲ್ಲ ಎನ್ನುವಂತೆ ಗಿರಿಜೆ ಹೋಗಿ ಬಿಡುತ್ತಿದ್ದಳಲ್ಲ. ಆಗ ಆ ಹೆಣ್ಣು ಮಕ್ಕಳ ಹೊಟ್ಟೆ ಉರಿ ಇನ್ನು ಹೆಚ್ಚಾಗುತಿತ್ತು. ಒಂದು ದಿನವೂ ಖಾಯಿಲೆ ಬೀಳದ, ಎಲ್ಲರಿಗೂ ತಮಾಷೆ ಮಾಡುತ್ತ ಜೀವನ ಸವೆಸುವ ಅವಳನ್ನು ಕಂಡರೆ ವಯಸ್ಸಾದವರಿಗೂ ಅಸೂಯೆ. ಗಂಡ-ಮಕ್ಕಳು ಇರದಿದ್ದರೆ, ಒಂಟಿಯಾದರೂ, ನಿಶ್ಚಿಂತೆಯ, ನೆಮ್ಮದಿಯ ಜೀವನ ಸಾಧ್ಯ ಅಲ್ಲವೇ ಎಂದು ಅವರೆಲ್ಲ ಬೆರಗಾಗುತ್ತಿದ್ದರು. ಅವಳದೇ ಅದೃಷ್ಟ ಎನ್ನುವ ತೀರ್ಮಾನಕ್ಕೂ ಬರುತ್ತಿದ್ದರು.


ಆ ಓಣಿಯ ಮನೆಗಳಲ್ಲಿ ಯಾರದರಾದರೊಬ್ಬರದು ಮನೆಯಲ್ಲಿ ಮದುವೆ ನಿಶ್ಚಯ ಆದರೆ, ಆಗ ಗಿರಿಜೆಗೆ ಕೂಲಿಗೆ ಹೋಗದೆ ತಮ್ಮ ಮನೆ ಕೆಲಸಕ್ಕೆ ಬರುವಂತೆ ಹೇಳಲಾಗುತ್ತಿತ್ತು. ಅಲ್ಲಿ ಕೆಲಸದಲ್ಲಿರುವಾಗ, ಮಕ್ಕಳಿಗೆ ಮದುವೆ ಮಾಡುವ ತಾಪತ್ರಯ ಅವಳಿಗಿಲ್ಲ ಎನ್ನುವ ಮಾತಿಗೂ ಅವಳು ನಕ್ಕು ಸುಮ್ಮನಾಗುತ್ತಿದ್ದಳು. ಪಕ್ಕದ ಓಣಿಯಲ್ಲಿ, ಗಂಡನ ಕಿರುಕುಳ ತಾಳದೆ ಒಬ್ಬಳು ಬೆಂಕಿ ಹಚ್ಚಿಕೊಂಡು ತನ್ನನ್ನೇ ಸುಟ್ಟುಕೊಂಡಾಗ, ಆ ಘೋರ ದೃಶ್ಯವನ್ನು ನೋಡಿ ಹೆಣ್ಣು ಮಕ್ಕಳೆಲ್ಲ, ಇಂತಹ ತಾಪತ್ರಯ ಗಿರಿಜೆ ಒಬ್ಬಳಿಗೆ ಮಾತ್ರ ಇಲ್ಲ ಎಂದು ಮಾತನಾಡಿಕೊಂಡರು. ಎಂದಿನಂತೆ ತನಗೂ ಅಂತಹ ಮಾತುಗಳಿಗೂ ಸಂಬಂಧ ಇಲ್ಲವೆನ್ನುವಂತೆ ಗಿರಿಜೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ತನ್ನ ಸಂಬಂಧದ ಒಬ್ಬರ ಕೂಸು ಖಾಲಿಯಾದಾಗ, ಸಮಾಧಾನ ಹೇಳಲಿಕ್ಕೆ ಹೋದ ಗಿರಿಜೆ "ಹೊರಲಿಲ್ಲ, ಹೆರಲಿಲ್ಲ, ಸಂಕಟ ಹೇಗೆ ತಿಳಿದೀತು?" ಎಂದು ಮಾತು ಕೇಳಿದಾಗ ಕೂಡ ಬೇಸರ ಮಾಡಿಕೊಳ್ಳಲಿಲ್ಲ. ವಯಸ್ಸಾದ ಅತ್ತೆ, ಮಾವಂದಿರ ಸೇವೆ ಮಾಡುವ ಹೆಣ್ಣು ಮಕ್ಕಳು ಗಿರಿಜೆಯ ಹತ್ತಿರ ಬಂದು ತಮ್ಮ ಗೋಳು ಹೇಳಿಕೊಂಡು, ತಮ್ಮದು ಪಾಪದ ಬದುಕು, ಅಂತಹ ಕಷ್ಟ ನಿನಗಿಲ್ಲ ಎಂದು ಅಲವತ್ತು ಕೊಂಡಾಗ ಕೂಡ ಅವಳು ತಮಾಷೆಯ, ತೇಲಿಕೆಯ ಮಾತು ಹೇಳಿ ಕಳಿಸಿಬಿಡುತ್ತಿದ್ದಳು.  


ಅದೊಂದು ಮಳೆಗಾಲದ ದಿನದಂದು, ಬೆಳಿಗ್ಗೆ ಕೂಲಿಗೆಂದು ಗಿರಿಜೆ ಹೋದದ್ದನ್ನು ಆ ಓಣಿಯ ಜನ ನೋಡಿದ್ದೇ ಕೊನೆ. ಆ ದಿನ ಮಧ್ಯಾಹ್ನ ಹೊತ್ತಿಗೆಲ್ಲ, ದಟ್ಟಣೆಯ ಕಪ್ಪು ಮೋಡ ಜಮಾವಣೆ ಆಗಿ, ಸಾಯಂಕಾಲಕ್ಕೆ ಮೊದಲೇ ಕತ್ತಲು ಆವರಿಸಿ ಧೋ ಎಂದು ಮಳೆ ಸುರಿಯಿತಲ್ಲ. ಬಾಗಿಲು ಮುಚ್ಚಿಕೊಂಡು ತಮ್ಮ ಮನೆಗಳಲ್ಲಿ ಬಂದಿಯಾಗಿಬಿಟ್ಟರು ಜನ. ಸರಿ ರಾತ್ರಿಯಲ್ಲಿ ಧಡಾಲ್ ಎಂದು ಅಕ್ಕ ಪಕ್ಕದಲ್ಲಿ ಮನೆಗಳು ಬಿದ್ದ ಸದ್ದು. ಬೆಳಿಗ್ಗೆ ಹೊತ್ತಿಗೆ ಮೋಡ ಸರಿದು, ಸೂರ್ಯ ಇಣುಕುವ ಹೊತ್ತಿಗೆ, ಯಾರ ಮನೆ ಬಿದ್ದದ್ದು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಮನೆಯಿಂದ ಹೊರಗೆ ಬಂದರು ಜನ. ಬಿದ್ದ ನಾಲ್ಕಾರು ಮನೆಗಳಲ್ಲಿ ಗಿರಿಜೆಯದು ಒಂದು. ಅವಳಿದ್ದ ಮನೆಯ ಮಣ್ಣಿನ ಮಾಳಿಗೆ ರಾತ್ರಿ ಬಿದ್ದ ದೊಡ್ಡ ಮಳೆಗೆ, ಸಂಪೂರ್ಣ ಕರಗಿ ಹೋಗಿತ್ತು. ಸುಣ್ಣ ಕಾಣದ ಗೋಡೆಗಳು, ಆಕಾಶಕ್ಕೆ ತೆರೆದುಕೊಂಡು ನಿಂತಿದ್ದವು. ಚೆಲ್ಲಾ ಪಿಲ್ಲಿಯಾಗಿದ್ದ ಸಾಮಾನುಗಳು, ಗಿರಿಜೆ ಮನೆಗೆ ವಾಪಸ್ಸು ಬಂದಿಲ್ಲ ಎಂದು ಸೂಚಿಸುತ್ತಿದ್ದವು. ಆ ಮನೆ ಜಂತಿಯಲ್ಲಿ ಓಡಾಡಿಕೊಂಡಿದ್ದ ಹಾವೊಂದು  ಮತ್ತೆಲ್ಲಿಗೆ ಹೋಗುವೊದೋ ಎನ್ನುವ ಚಿಂತೆಯಲ್ಲಿತ್ತು. ಅಲ್ಲಿಯವರೆಗೆ ಗಿರಿಜೆಯದೇ ಅದೃಷ್ಟ ಎಂದು ಮಾತನಾಡಿಕೊಳ್ಳುತ್ತಿದ್ದ ಓಣಿಯ ಹೆಂಗಸರಿಗೆ ಅಂದು ಯಾವ ಪ್ರತಿಕ್ರಿಯೆ ನೀಡಬೇಕೋ ಎಂದು ತಿಳಿಯದೇ ಹೋಯಿತು.

No comments:

Post a Comment