'ಹಸುರಿನ ಬನಸಿರಿಗೆ ಒಲಿದು,
ಸೌಂದರ್ಯ ಸರಸ್ವತಿ ಧರೆಗಿಳಿದು,
ಚೆಲುವಿನ ಬಲೆಯ ಬೀಸಿದಳು,
ಈ ಗಂಧದ ಗುಡಿಯಲಿ ನೆಲೆಸಿದಳು'
ಹೌದು ರೀ, ದೇಶ ವಿದೇಶ ಪ್ರವಾಸ ಮಾಡಿದಾಗ ಸಿಗುವ ಅನುಭವ, ನಮ್ಮ ಕನ್ನಡ ನಾಡನ್ನು ಸುತ್ತಿದಾಗ ಸಿಗುವ ಅನುಭವಕ್ಕಿಂತ ಹೆಚ್ಚಿನದೇನಲ್ಲ. ನಯಾಗರಕ್ಕಿಂತ ನಮ್ಮ ಜೋಗ ಜಲಪಾತವೇ ಹೆಚ್ಚಿನ ರೋಮಾಂಚನ ಸೃಷ್ಟಿಸುತ್ತದೆ. ನೀರಿಲ್ಲದಾಗ ಹೋಗಿ ನನ್ನನ್ನು ಬೈದುಕೊಳ್ಳಬೇಡಿ ಅಷ್ಟೇ. ದೂರದ ಸ್ವಿಟ್ಜರ್ಲ್ಯಾಂಡ್ ಗೆ ಹೋಗಿ, ಹಿಮ ಮುಸುಕಿದ ಪರ್ವತಗಳ ಅಡಿಯಲ್ಲಿರುವ ಊರುಗಳು ಎಷ್ಟು ಅಂದವೋ ಎನ್ನುವುದಕ್ಕಿಂತ, ಚಿಕ್ಕಮಗಳೂರಿನ ಮಂಜು ಮುಸುಕಿದ ಕಾಫಿ ತೋಟಗಳು ಅಷ್ಟೇ ಅಂದ ಅನ್ನುವ ಅನುಭವ ನಿಮಗಾಗದಿದ್ದರೆ ನೋಡಿ. ಸಾಕೆನಿಸದಿದ್ದರೆ ಕುಮಾರ ಪರ್ವತಕ್ಕೆ ಚಾರಣ ಹೋಗಿ ಖಚಿತ ಪಡಿಸಿಕೊಳ್ಳಿ. ಲಕ್ಷಾಂತರ ಖರ್ಚು ಮಾಡಿ, ಕೆನ್ಯಾದ ಕಾಡು ಪ್ರಾಣಿಗಳನ್ನು ನೋಡಲು ಹೋಗದೆ, ನಾಗರ ಹೊಳೆಯಲ್ಲಿ ನಾಲ್ಕಾರು ದಿನ ಉಳಿದುಕೊಳ್ಳಿ. ಹೆಚ್ಚಿನ ಜೀವ ವೈವಿಧ್ಯತೆಯ ಪರಿಚಯ ನಿಮಗಾಗದಿದ್ದರೆ ನೋಡಿ.
ನೀವು ದೈವ ಭಕ್ತರೋ? ಹಿಮಾಲಯದ ಗಂಗೋತ್ರಿಯಲ್ಲಿ ಮಿಂದು ಬಂದರೆ ಯಾವ ಪಾಪ ಕಳೆಯುವುದೋ, ಅದು ತುಂಗೆಯಲ್ಲಿ ಮಿಂದು ಶೃಂಗೇರಿಯ ಶಾರದಾಂಬೆಯ ದರ್ಶನ ಪಡೆದರೂ ಲಭ್ಯ. ಧರ್ಮವ ಸಾರುವ ಧರ್ಮಸ್ಥಳ ಬೇರೆ ಎಲ್ಲುಂಟು? ಮುರುಡೇಶ್ವರದಲ್ಲಿ ಶಿವ ದರ್ಶನ ಪಡೆದು, ಸಮುದ್ರ ಸ್ನಾನ ಮಾಡಿ ಬಂದರೆ ಹಿತವಲ್ಲವೇ? ನಿಮಗೆ ದ್ವೀಪ ಪ್ರವಾಸ ಮಾಡಬೇಕೆ? ನೋಡಬಹುದಲ್ಲ, ಸೇಂಟ್ ಮೇರಿ ಐಲ್ಯಾಂಡ್.
ನಿಮಗೆ ಶಿಲ್ಪ ಕಲೆ ಇಷ್ಟವೋ? ಬೇಲೂರಿನ ಶಿಲಾ ಬಾಲಿಕೆಯರಷ್ಟೇ ಅಲ್ಲ, ಹೊಯ್ಸಳರು ಕಟ್ಟಿದ ಎಲ್ಲಾ ದೇಗುಲಗಳಲ್ಲಿ, ಶಿಲ್ಪಕಲೆಯ ಆರಾಧನೆಯನ್ನು ಕಾಣಬಹುದು. ನಿಮಗೆ ಚರಿತ್ರೆ ಇಷ್ಟವೇ? ಹಾಗಿದ್ದಲ್ಲಿ ಹಂಪೆಯನ್ನು ಮರೆಯುವುದುಂಟೆ? ವೈಭವದಿಂದ ಕೂಡಿದ ಸಾಮ್ರಾಜ್ಯ ಹೇಗಿತ್ತು ಅನ್ನುವುದಷ್ಟೇ ಅಲ್ಲ ಸಕಲ ಕಲೆಗಳ ಬೀಡು ಇದಾಗಿತ್ತು ಎನ್ನುವುದು ಅರಿವಿಗೆ ಬರುತ್ತದೆ. ಕಲ್ಲು ಕಂಬಗಳು ನುಡಿಸುವ ಮರ್ಮರ ಸಂಗೀತಕ್ಕೆ ನೀವೇ ಮೂಕರಾಗಿಬಿಡುವಿರಿ. ಇಲ್ಲಿ ಶ್ರೀಕೃಷ್ಣದೇವರಾಯನು ತನ್ನ ಕುರುಹುಗಳನ್ನು ಬಿಟ್ಟು ಹೋಗಿದ್ದಾನೆ, ಹಾಗೇಯೇ ಪುರಂದರ ದಾಸರು ಕೂಡ. ನಿಮಗೆ ಪುರಾಣ ಇಷ್ಟವೇ? ಹತ್ತಿರದಲ್ಲೇ ಇದೆಯಲ್ಲ, ರಾಮಾಯಣದಲ್ಲಿ ಬರುವ ಕಿಷ್ಕಿಂದೆ, ಅಂಜನಾದ್ರಿ ಬೆಟ್ಟ.
Picture Credit: Shivashankar Banagar |
'ವಾತಾಪಿ ಜೀರ್ಣೋಭವ' ಎಂದ ಅಗಸ್ತ್ಯ ಮುನಿ ಇದ್ದ ಬಾದಾಮಿಯನ್ನು ನೋಡಿ ಬನ್ನಿ. ಇದು ಚಾಲುಕ್ಯರ ರಾಜಧಾನಿ ಕೂಡ ಆಗಿತ್ತು. ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆ ಅರಿಯಲು ಐಹೊಳೆ, ಪಟ್ಟದಕಲ್ಲು ನೋಡುವುದು ಅಗತ್ಯ. ಬಿಜಾಪುರದ ಸುಲ್ತಾನರು ಕಟ್ಟಿದ ಗೋಲ್ ಗುಂಬಜ್ ಇಂದಿಗೂ ಮನ ಮೋಹಕ ಮತ್ತು ಮನುಷ್ಯನ ಸಾಧನೆಗಳ ಪ್ರತೀಕ.
ಬಸವನ ಬಾಗೇವಾಡಿಯಿಂದ, ಬಸವ ಕಲ್ಯಾಣ ಅಲ್ಲಿಂದ ಕೂಡಲ ಸಂಗಮಕ್ಕೆ ಬಂದು ನೋಡಿ. ದಾರಿಯಲ್ಲೆಲ್ಲೋ ಕ್ರಾಂತಿಯೋಗಿ ಬಸವಣ್ಣ ನಿಮ್ಮ ಅನುಭವಕ್ಕೆ ಬರುತ್ತಾನೆ. ಹಾಗೆಯೇ ಅನೇಕ ಶರಣರು, ವಚನಕಾರರು ಕೂಡ. ಆ ಪ್ರದೇಶಗಳಲ್ಲಿನ ವಿರಕ್ತ ಮಠಗಳಲ್ಲಿ ಕುಳಿತು ವಚನಗಳನ್ನು ಓದಿಕೊಂಡು ನೋಡಿ. ವೇದಗಳಿಗೂ ಮೀರಿದ ಜ್ಞಾನ ನಿಮಗೆ ಕನ್ನಡ ಭಾಷೆಯಲ್ಲೇ ಸಿಕ್ಕಿಬಿಡುತ್ತದೆ.
ಪ್ರವಾಸ ನಮ್ಮ ಅನುಭವವನ್ನು ವಿಸ್ತಾರಗೊಳಿಸುತ್ತದೆ. ಆದರೆ ಅದಕ್ಕೆ ಬಹು ದೂರದ ಪ್ರದೇಶಗಳಿಗೆ, ವಿದೇಶಗಳಿಗೆ ಹೋಗಬೇಕೆಂದಿಲ್ಲ. ಅಲ್ಲಿಗೆ ನೀವು ಹೋಗುವಿರೋ, ಬಿಡುವಿರೋ ನಿಮಗೆ ಬಿಟ್ಟಿದ್ದು. ಆದರೆ ಕನ್ನಡ ನಾಡನ್ನು ಸುತ್ತುವುದು ಮಾತ್ರ ಕಡೆಗಣಿಸಬೇಡಿ. ನನಗೆ ಈಗಾಗಲೇ ಸ್ಪಷ್ಟವಾಗಿದೆ. ಕನ್ನಡ ನಾಡಿಗಿಂತ ಚೆಲುವ ನಾಡು ಬೇರೊಂದಿಲ್ಲ. ಎಲ್ಲೆಲ್ಲ ಅಡ್ಡಾಡಿ ಬಂದ ಮೇಲೆ ನೀವು ಕೂಡ ಇದೆ ಮಾತು ಹೇಳುವಿರಿ ಎನ್ನುವ ಅಭಿಪ್ರಾಯ ನನ್ನದು.
No comments:
Post a Comment