ಎಷ್ಟೋ ಸಾವಿರ ವರ್ಷಗಳ ಹಿಂದೆ ಆದಿ ಮಾನವ ಅಲೆಮಾರಿಯಾಗಿ, ಬೇಟೆ ಆಡುತ್ತ ಜೀವನ ಕಳೆಯುತ್ತಿದ್ದ. ಆಗ ಅವನಿಗೆ ಮತ್ತು ಕಾಡಲ್ಲಿನ ಇತರ ಮೃಗಗಳಿಗೆ ಹೆಚ್ಚಿನ ವ್ಯತ್ಯಾಸ ಇದ್ದಿಲ್ಲ. ಆದರೆ ಅವನು ಕ್ರಮೇಣ ವ್ಯವಸಾಯ ಕಲಿತುಕೊಂಡು, ಸಂಘ ಜೀವಿಯಾಗಿ ಮಾರ್ಪಟ್ಟ. ಜೊತೆಗಾರರ ನಡುವೆ ವ್ಯವಹರಿಸಲು ಅವನು ಬಳಸುತ್ತಿದ್ದ ಸಂಜ್ಞೆ, ಹೂಂಕಾರಗಳು ಕ್ರಮೇಣ ಶಬ್ದಗಳಾಗಿ ರೂಪುಗೊಂಡು, ಶಬ್ದ ಭಂಡಾರ ಬೆಳೆಯುತ್ತ ಅದು ಒಂದು ವ್ಯವಸ್ಥಿತ ಭಾಷೆಯಾಗಿ ಬದಲಾಯಿತು. ಅದು ಮನುಷ್ಯನಿಗೆ ಇತರೆ ಮೂಕ ಪ್ರಾಣಿಗಳಿಗೆ ಇಲ್ಲದಂತಹ ಅನುಕೂಲತೆಯನ್ನು ಒದಗಿಸಿತು. ಅದು ಮನುಷ್ಯರ ನಡುವಿನ ಸಂಪರ್ಕದ ಕ್ಷಮತೆ ಹೆಚ್ಚಿಸುವುದಲ್ಲದೆ, ಇನ್ನೂ ಒಂದು ಅದ್ಬುತ ಬೆಳವಣಿಗೆಗೆ ಕಾರಣವಾಯಿತು. ಅದು ಮನುಷ್ಯ ತಾನು ಕಲಿತುಕೊಂಡ ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಬಗೆ. ಚಿಕ್ಕ ಮಕ್ಕಳನ್ನು ಕೂರಿಸಿಕೊಂಡು ಬೆಟ್ಟದ ಹುಲಿಯ ಕಥೆ ಹೇಳಿದ ಅಜ್ಜ, ಕೂಸುಗಳಿಗೆ ಜೋಗುಳ ಹಾಡುತ್ತ ಮಲಗಿಸಿದ ಅಜ್ಜಿ, ಬಹುಶ ಮನುಷ್ಯ ಕುಲದ ಮೊದಲ ಕಥೆಗಾರರು. ಆ ಕಥೆಗಳು ಮನರಂಜನೆಯ ಜೊತೆ, ಆ ಮಕ್ಕಳ ಬುದ್ಧಿ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾದವು.
ಜೀವನದ ಪಟ್ಟುಗಳ
ಬಗ್ಗೆ ಕಥೆಯ ಮೂಲಕ ಅರಿವು ಮೂಡಿಸಿಕೊಂಡ ಮಕ್ಕಳು, ಮುಂದೆ ತಾವು ದೊಡ್ಡವರಾದಾಗ ತಮ್ಮ ಅನುಭವಗಳನ್ನು
ಹೊಸ ಕಥೆಗಳನ್ನಾಗಿಸಿ ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿದರು. ಕೆಲವು ಕಥೆಗಳು ಹಾಡಿನ ರೂಪಿನಲ್ಲಿದ್ದವು.
ಅವು ಮನುಷ್ಯನಲ್ಲಿ ಕಲಾತ್ಮಕತೆಯನ್ನು ಮೂಡಿಸಿದವು. ಇನ್ನೂ ಕೆಲವು ಕಥೆಗಳನ್ನು ಮನುಷ್ಯ ಅಭಿನಯಿಸಿ
ತೋರಿಸಲಾರಂಭಿಸಿದ. ಅವುಗಳು ಬಯಲಾಟ, ನಾಟಕಗಳಾಗಿ ಮಾರ್ಪಾಡಾದವು. ಅಷ್ಟೊತ್ತಿಗೆ ಬರವಣಿಗೆಯನ್ನು ಕೂಡ
ಮನುಷ್ಯ ಕಲಿತುಕೊಂಡ. ಆಗ ಆ ಕಥೆಗಳೇ ಪುಸ್ತಕಗಳಾದವು. ಹಾಗೆಯೇ ಮನುಷ್ಯ ಚಿತ್ರ ಬಿಡಿಸುವುದನ್ನು ಮಾಡುತ್ತಿದ್ದ.
ಅವೆರಡು ಸೇರಿ ಮುಂದೆ 'ಅಮರ ಚಿತ್ರ ಕಥೆ' ಗಳಾದವು. ರಾಜ, ಮಹಾರಾಜರಿಗೆ ಇರಬೇಕಾದ ಸಮಯ ಪ್ರಜ್ಞೆ, ಶಿಕ್ಷಣಗಳನ್ನೂ
ಅತಿ ಕಡಿಮೆ ಅವಧಿಯಲ್ಲಿ ಕಲಿಸಿಕೊಡಲು 'ಪಂಚ ತಂತ್ರ' ದ ಕಥೆಗಳು ರೂಪುಗೊಂಡವು. ಹಿಂದಿನ ಪೀಳಿಗೆಗಳ
ಅನುಭವ ಸಾರವನ್ನೇ ಮನುಷ್ಯ ಕಥೆಗಳ ಮೂಲಕ ಹಿಡಿದಿಟ್ಟ ಮತ್ತು ಅವುಗಳ ಸದ್ಬಳಕೆ ಮನುಷ್ಯ ಪೀಳಿಗೆಯ ಅಭಿವೃದ್ಧಿಗೆ
ಸಹಾಯವಾಯಿತು.
ಕಥೆಗಳೇ ಇರದಿದ್ದರೆ, ರಾಮಾಯಣ, ಮಹಾಭಾರತ ಎಲ್ಲಿರುತ್ತಿದ್ದವು? ಯಾರೂ ಕಥೆ ಹೇಳದಿದ್ದರೆ, ನಮಗೆ ನಮ್ಮ ಕಳೆದು ಹೋದ ಹಿಂದಿನ ತಲೆಮಾರಿನ ಪರಿಚಯವೇ ಇರುತ್ತಿರಲಿಲ್ಲ. ಆದರೆ ಹಾಗಾಗದೆ, ಮನುಷ್ಯ ಸೊಗಸಾದ ಕಥೆಗಾರನಾಗಿ ರೂಪುಗೊಂಡ ಮತ್ತು ಭವಿಷ್ಯದ ತಲೆಮಾರುಗಳು ಅಭಿವೃದ್ಧಿಯ ಕಡೆ ಸಾಗಲು ನೆರವಾದ. ಇಂದಿಗೆ ಕಥೆಗಳು ಹಲವಾರು ಮಾಧ್ಯಮದಿಂದ ನಮ್ಮನ್ನು ತಲುಪುತ್ತವೆ. ಅವು ಚಲನ ಚಿತ್ರಗಳಾಗಿರಬಹುದು. ದೂರದರ್ಶನದ ಎಳೆದು ಕಥೆ ಹೇಳುವ ಧಾರಾವಾಹಿಗಳಾಗಿರಬಹುದು. ಓದುವ ಕಾದಂಬರಿಗಳಾಗಿರಬಹುದು. ರೇಡಿಯೋನಲ್ಲಿ ಕೇಳುವ ಕಾರ್ಯಕ್ರಮಗಳಾಗಿರಬಹುದು. ನಮ್ಮ ಕಾರ್ಪೊರೇಟ್ ಜಗತ್ತಿನಲ್ಲಿ ಪವರ್ ಪಾಯಿಂಟ್ ಮೂಲಕ ಹೇಳುವುದು ಕೂಡ ಕಥೆಯ ಇನ್ನೊಂದು ರೂಪವೇ ಅಲ್ಲವೇ?
ಕಥೆಗಳು ಕೇವಲ ಮನರಂಜನೆ ಒದಗಿಸುವ, ರೋಮಾಂಚನ ಹುಟ್ಟಿಸುವ ಸಾಧನಗಳು ಅಲ್ಲ. ಅವು ನಮ್ಮನ್ನು ಇತಿಹಾಸ ಮತ್ತು ಭವಿಷ್ಯದ ಜೊತೆ ಸಂಪರ್ಕ ಕಲ್ಪಿಸುವ ಕೊಂಡಿ. ಮನುಷ್ಯ ನಾಗರಿಕತೆಯ ಬೆಳವಣಿಗೆ, ಅವನು ಹೇಳಿದ ಕಥೆಗಳ ಜೊತೆ ಹಾಸು ಹೊಕ್ಕಾಗಿದೆ. ಅದಕ್ಕೆ ನನಗೆ ಅನ್ನಿಸಿದ್ದು, ಕಥೆ ಹೇಳುವುದನ್ನು ಕಲಿತ ಮೇಲೆಯೇ ಮನುಷ್ಯ, ಮನುಷ್ಯನಾಗಿ ಬದಲಾದದ್ದು.
No comments:
Post a Comment