ಪ್ರಕೃತಿ ಎಲ್ಲರನ್ನು ಹೇಗೆ ಹುಟ್ಟು ಸ್ವಾರ್ಥಿಗಳನ್ನಾಗಿಸುತ್ತದೆ ಎಂದು ಕಳೆದ ಲೇಖನದಲ್ಲಿ ಗಮನಿಸಿದ್ದೆವು. ಆದರೆ ಕೆಲವೇ ಕೆಲವರಿಗಾದರೂ ಸ್ವಾರ್ಥ ಭಾವದಿಂದ ಹೊರ ಬಂದು ಮಾನವ ಕಲ್ಯಾಣ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದಲ್ಲ. ಇಲ್ಲದಿದ್ದರೆ ಎಷ್ಟೊಂದು ಗುಡಿ, ಮಠಗಳು, ಅನಾಥಾಶ್ರಮಗಳು, ಮನುಷ್ಯ ಕಲ್ಯಾಣಕ್ಕೆಂದೇ ಮೀಸಲಾಗಿರುವ ಸಂಘ-ಸಂಸ್ಥೆಗಳು ಹುಟ್ಟಿಕೊಳ್ಳಲು ಸಾಧ್ಯವಿತ್ತೇ? ಮನುಷ್ಯನ ಆ ಇನ್ನೊಂದು ಪ್ರಕ್ರಿಯೆ ಬಗ್ಗೆ ಗಮನ ಹರಿಸೋಣ.
ವಿಪರೀತ ನೋವನ್ನುಂಡ
ಮನುಷ್ಯನಲ್ಲಿ, ಇತರೆ ಜೀವಿಗಳಲ್ಲಿ ಆ ನೋವನ್ನು ಗುರುತಿಸುವುದು ಮತ್ತು ಮತ್ತು ಅವರ ನೋವಿಗೆ ಮಿಡಿಯುವುದು
ಸಾಧ್ಯವಾಗುತ್ತದೆ. ಸಾಮ್ರಾಟ್ ಅಶೋಕನಿಗೆ ಸಾಧ್ಯವಾಗಿದ್ದು ಅದೇ. ಯುದ್ಧ ಮಾಡಿ ಸಾಮ್ರಾಜ್ಯ ಗೆಲ್ಲುವ
ಆಕಾಂಕ್ಷೆಯನ್ನು ಅಲ್ಲಿಗೆ ಕೊನೆಗೊಳಿಸಿ, ಪ್ರಜೆಗಳನ್ನು ಮಕ್ಕಳ ಹಾಗೆ ಗಮನಿಸಲು ಆರಂಭ ಮಾಡಿದಾಗ ಅವನು
ಗೆದ್ದದ್ದು ಅವನ ಮನದಲ್ಲಿನ ಸ್ವಾರ್ಥ ಭಾವವನ್ನು. ಇಂದಿಗೂ ಇತಿಹಾಸ ಅವನನ್ನು ದಾಖಲಿಸುವುದು ಒಬ್ಬ
ಕರುಣಾಮಯಿ ಚಕ್ರವರ್ತಿಯನ್ನಾಗಿ.
ಸಕಲ ಜೀವಾತ್ಮಗಳಲ್ಲಿರುವ
ಶಕ್ತಿ ಒಂದೇ. ನಾವು ಮತ್ತು ಈ ಜಗತ್ತು ಬೇರೆ ಬೇರೆಯಲ್ಲ ಎಂದು ತಿಳಿಸಿದ್ದು ಪ್ರಾಚೀನ ಕಾಲದಲ್ಲಿ ರೂಪುಗೊಂಡ
ಉಪನಿಷತ್ತುಗಳು - ಐತ್ತರಿಯ ಉಪನಿಷತ್ತು (ಪ್ರಜ್ಞೆಯೇ ಬ್ರಹ್ಮ), ಬೃಹದಾರಣ್ಯಕ ಉಪನಿಷತ್ತು (ಅಹಂ ಬ್ರಹ್ಮಾಸ್ಮಿ),
ಚಂದೋಗ್ಯ ಉಪನಿಷತ್ತು (ತತ್ವಂ ಅಸಿ), ಮಾಂಡೂಕ್ಯ ಉಪನಿಷತ್ತು (ಆತ್ಮನೇ ಬ್ರಹ್ಮ). ಇವುಗಳ ಮೇಲೆ ರೂಪುಗೊಂಡಿದ್ದು
ಅದ್ವೈತ ಶಾಸ್ತ್ರ. ಧರ್ಮ, ಅರ್ಥ, ಕಾಮ,
ಮೋಕ್ಷ ಎನ್ನುವ ಮನುಷ್ಯ ಜೀವನದ ನಾಲ್ಕು ಧ್ಯೇಯಗಳನ್ನು ಅದು ಸಾರಿ ಹೇಳಿತು. ಆದಿ ಶಂಕರ ಎನ್ನುವ ಅಪರೂಪದ
ವ್ಯಕ್ತಿ ಅದನ್ನು ಜನ ಸಾಮಾನ್ಯರಿಗೆ ಸರಳವಾಗಿ ತಿಳಿಸಿ ಹೋದ. ಆತನ ಮುಂಚಿನ ಮತ್ತು ನಂತರದ ಅನೇಕರು
(ಬುದ್ಧ, ಮಹಾವೀರ, ಬಸವ, ಸ್ವಾಮಿ ವಿವೇಕಾನಂದ) ಮನುಷ್ಯನಿಗೆ ತನ್ನ ಸ್ವಾರ್ಥದಿಂದ ಹೊರ ಬಂದು ಜೀವಿಸಲು
ಪ್ರೇರೇಪಣೆ ನೀಡಿದರು.
ಇಂದಿಗೂ ಪ್ರತಿ
ಊರಿನಲ್ಲಿ, ನಮ್ಮ ನಿಮ್ಮೆಲ್ಲರ ನಡುವೆ, ಪ್ರಾಮಾಣಿಕತೆಯಿಂದ ಸಮಾಜ ಸೇವೆ ಮಾಡುತ್ತಿರುವರು ಇದ್ದಾರಲ್ಲ.
ಅವರನ್ನು ಆಳುತ್ತಿರುವ ಭಾವ ಸ್ವಾರ್ಥವೋ, ನಿಸ್ವಾರ್ಥವೋ ಎಂದು ಗಮನಿಸಿ ನೋಡಿ. ಅವರಿಗೆ ಆಸ್ತಿ-ಅಹಂಕಾರದ
ಪ್ರತಿಷ್ಠೆ ಏಕಿಲ್ಲ ಎಂದು ವಿಚಾರ ಮಾಡಿ ನೋಡಿ. ಗಂಗಾ ನದಿ ತಟದಲ್ಲಿ ಎಷ್ಟೋ ಸಾಧು-ಸಂತರು ವಾಸ ಮಾಡಿಕೊಂಡಿರುತ್ತಾರಲ್ಲ.
ಅವರ ಹೆಸರೇನು ಎಂದು ಕೇಳಿ ನೋಡಿ. 'ಬಾಬಾ ಮುರ್ದಾ ಹೋತಾ ಹೈ' ಎನ್ನುವ ಉತ್ತರ ಬರುತ್ತದೆ. ತಮ್ಮ ಪೂರ್ವಾಶ್ರಮದ
ಹೆಸರು, ಗುರುತುಗಳನ್ನು ಬಿಟ್ಟು ಅವರು ಹುಡುಕುತ್ತಿರುವುದು ಏನನ್ನು? ನಾವು ಮಾತ್ರ ನಮ್ಮ ಹೆಸರು,
ಪ್ರತಿಷ್ಠೆಗೆ ಗಂಟು ಬಿದ್ದಿರುವುದು ಏಕೆ?
ಪ್ರಕೃತಿ ಎಲ್ಲರನ್ನು
ಸ್ವಾರ್ಥಿಯಾಗಿಯೇ ಹುಟ್ಟಿಸಿತು. ಹಾಗೆಯೆ ವಿಚಾರ ಮಾಡುವ ಶಕ್ತಿ, ವಿವೇಕವನ್ನು ಕೂಡ ಕೊಟ್ಟಿತು. ಸ್ವಾರ್ಥವನ್ನೇ
ಆಯುಧವನ್ನಾಗಿಸಿಕೊಂಡ ಹಿಟ್ಲರ್ ತನ್ನ ಹಿತಕ್ಕಾಗಿ ಲಕ್ಷಾಂತರ ಜನರ ಸಾವಿಗೆ ಕಾರಣನಾದರೆ, ಮದರ್ ತೇರೇಸಾ
ನೊಂದ ಜನರ ಸೇವೆಯಲ್ಲಿ ತನ್ನ ಜೀವನದ ಬೆಳಕು ಕಂಡಳು. ಒಬ್ಬ ಸ್ವಾರ್ಥ ಕೂಪದಿಂದ ಹೊರ ಬರದೇ ಹೋದರೆ,
ಇನ್ನೊಬ್ಬಳಿಗೆ ಅದನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು.
ಪ್ರಕೃತಿ ನಮ್ಮಲ್ಲಿ
ಅಸಮಾನತೆಯನ್ನು ಸೃಷ್ಟಿಸುತ್ತದೆ. ಒಬ್ಬರ ಮೇಲೆ ಇನ್ನೊಬ್ಬರು ಪೈಪೋಟಿ ಮಾಡುವಂತೆ ಮಾಡುತ್ತದೆ. ಆದರೆ
ಆ ಅಸಮಾನತೆಯ ಅಂತರ ಕಡಿಮೆ ಮಾಡಲು ಪ್ರಯತ್ನಿಸುವ ಕೆಲವರಾದರೂ ಇದ್ದಾರಲ್ಲ. ಅವರಿಂದ ನಮ್ಮ ಬದುಕು ಸ್ವಲ್ಪ
ಮಟ್ಟಿಗಾದರೂ ಸಹನೀಯವಾಗಿದೆ. ನಿಸ್ವಾರ್ಥ ಸೇವೆಗೆ ನಿಂತವರು ಮುಕ್ತಿ ಪಥದತ್ತ ಹೆಜ್ಜೆ ಹಾಕಿದರೆ, ಉಳಿದವರು
ಕರ್ಮದ ತಿರುಗಣಿಯಲ್ಲೇ ಸುತ್ತುತ್ತಾರೆ. ಪ್ರಕೃತಿಯನ್ನು ಗೆದ್ದವರು, ಪ್ರಕೃತಿಯಲ್ಲಿ ಲೀನವಾಗುತ್ತಾರೆ.
ಉಳಿದವರು ಪ್ರಕೃತಿಯ ನಿಯಮಗಳಿಗೆ ಅನುಸಾರವಾಗಿ ಬದುಕುತ್ತಾರೆ.