Saturday, June 19, 2021

ನೆಲ್ಲಿನಿಂದ ಬದಲಾದ ಊರುಗಳು

ನಮ್ಮೂರು ಮಸ್ಕಿಯಲ್ಲಿ ನದಿಯಿಲ್ಲ. ಆದರೆ ಅದಕ್ಕಿಂತ ಹೆಚ್ಚು ಎನ್ನುವಂತೆ ತುಂಗಭದ್ರಾ ಕಾಲುವೆಯಿದೆ. ಅದನ್ನು ನೆಚ್ಚಿಕೊಂಡು ಸಾವಿರಾರು ಎಕರೆ ಭೂಮಿಯಲ್ಲಿ ನೆಲ್ಲು (ಭತ್ತ) ಬೆಳೆಯುತ್ತಾರೆ. ಕಾಲುವೆ ಮತ್ತು ನೆಲ್ಲು ಇವೆರಡು ಊರಿಗೆ ಊರುಗೋಲಾಗುವ ಮುಂಚೆ ನಮ್ಮೂರಿನ ಕಥೆ ಒಂದು ತರಹ ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಇದು ಬರಿ ನಮ್ಮೂರಷ್ಟೇ ಅಲ್ಲ. ಕಾಲುವೆ ಹರಿದು ಹೋದ ನೂರಾರು ಕಿಲೋ ಮೀಟರ್ ಪ್ರದೇಶದ ಎಲ್ಲ ಊರು-ಹಳ್ಳಿಗಳ ಕಥೆ.

 

ಇಲ್ಲಿ ಹಿಂಗಾರು ಬೆಳೆ ಬೆಳೆದ ರೈತರು ಹಿಂದೆಯೇ ಉಳಿದು ಹೋದರು. ಹಾಗೆಯೇ ಮುಂಗಾರು ಮಳೆ ನಂಬಿದ ರೈತರು ಮುಂದೆಯೇ ಬರಲಿಲ್ಲ. ಆದರೆ ಭತ್ತ ಬೆಳೆದ ಮತ್ತು ವ್ಯಾಪಾರ ಮಾಡಿದವರೆಲ್ಲ ಭರ್ತಿ ಕುಳಗಳಾಗಿ ಹೋದರು. ಸಮಯಕ್ಕೆ ಸರಿಯಾಗಿ ಬರುವ ನೆಲ್ಲಿನ ಬೆಳೆ ಮತ್ತು ಅದಕ್ಕಿದ್ದ ಬೆಲೆ ರೈತ ತಲೆ ಎತ್ತಿ ನಡೆಯುವಂತೆ ಮಾಡಿತು. ಅದಕ್ಕೆ ಪೂರಕವಾಗಿ ಒಂದು ಉದ್ಯಮವೇ ಬೆಳೆದು ನಿಂತಿತು. ಗೊಬ್ಬರ, ಕ್ರಿಮಿನಾಶಕ ಅಂಗಡಿಗಳು, ನೆಲ್ಲನ್ನು ಅಕ್ಕಿಯಾಗಿ ಪರಿಷ್ಕರಿಸುವ ಮಿಲ್ ಗಳು, ಗದ್ದೆಯಲ್ಲಿ ಕೆಲಸ ಮಾಡಲು ಬೇಕಾಗುವ ಟ್ರ್ಯಾಕ್ಟರ್ ಗಳು, ಆ ಟ್ರ್ಯಾಕ್ಟರ್ ಗಳನು ರಿಪೇರಿ ಮಾಡುವ ಗ್ಯಾರೇಜು ಗಳು, ನೆಲ್ಲನ್ನು ಸಂಗ್ರಹಿಸಿ ಇಡುವ ಗೋದಾಮುಗಳು, ಅದರ ಮೇಲೆ ಸಾಲ ಕೊಡುವ ಬ್ಯಾಂಕ್ ಗಳು, ನೆಲ್ಲನ್ನು ಒಂದೂರಿನಿಂದ ಇನ್ನೊಂದೂರಿಗೆ ಹೊತ್ತೊಯ್ಯುವ ಲಾರಿಗಳು, ವ್ಯಾಪಾರ ಸರಾಗ ಮಾಡಿಕೊಡುವ ಏಜೆಂಟ್ ಗಳು ಹೀಗೆ ಅದರ ಪರಿವಾರ ಬಳ್ಳಿಯಂತೆ ಹಬ್ಬುತ್ತ ಊರಿನ ಹೆಚ್ಚಿನ ಜನರೆಲ್ಲಾ ನೆಲ್ಲನ್ನೇ ನಂಬಿ ಜೀವನ ಮಾಡ ತೊಡಗಿದರು.

 

ಮಳೆಯನ್ನೇ ನಂಬಿ ಐವತ್ತು ವರುಷಗಳ ಹಿಂದೆ ಬಿಳಿ ಜೋಳ, ಹತ್ತಿ ಬೆಳೆದು ಆರ್ಥಿಕವಾಗಿ ಮುಂದೆ ಬರಲು ಆಗದೆ ಹೋದ ಇಲ್ಲಿನ ಜನತೆ, ನೆಲ್ಲು ತರುವ ಖಾತರಿ ಎನಿಸುವ ಎರಡು ಬೆಳೆಗಳು ಮತ್ತು ಅದು ತರುವ ಆದಾಯದಿಂದ ಆರ್ಥಿಕವಾಗಿ ಸಬಲರಾಗತೊಡಗಿದರು. ಇಪ್ಪತ್ತು ವರುಷಗಳ ಹಿಂದೆ ಹತ್ತು ಸಾವಿರಕ್ಕೆ ದೊರಕುತ್ತಿದ್ದ ಒಂದೆಕರೆ ಜಮೀನು ಇವತ್ತಿಗೆ ಹತ್ತು ಲಕ್ಷ ಕೊಟ್ಟರೂ ಸಿಗುವುದಿಲ್ಲ. ಅದು ತುಂಗಭದ್ರೆಯ ಆಶೀರ್ವಾದ ಮತ್ತು ನೆಲ್ಲಿನ ಮಹಿಮೆ.

 

ನೆಲ್ಲನ್ನು ಬೆಳೆದು ಬರಿ ಮಾರಲಿಕ್ಕೆ ಆಗುತ್ತದೆಯೇ? ಮೂರು ಒಪ್ಪತ್ತು ರೊಟ್ಟಿ ತಿನ್ನುತ್ತಿದ್ದ ಇಲ್ಲಿನ ಕುಟುಂಬಗಳು ಅದನ್ನು ಒಂದು ಒಪ್ಪತ್ತಿಗೆ ಇಳಿಸಿ ಅನ್ನ ಬೇಯಿಸಲು ಆರಂಭಿಸಿದರು. ಉಳಿದ ಸಾಂಪ್ರದಾಯಿಕ ಬೆಳೆಗಳು ಹಿಂದೆ ಬಿದ್ದವು. ಜನ ಬದುಕುವ ರೀತಿಯು ಬದಲಾಗುತ್ತ ಹೋಯಿತು. ಆಧುನಿಕ ಸವಲತ್ತುಗಳು ಬಂದವು. ಊರಲ್ಲಿ ಇರುವ ಯಾರೂ ಇಂದಿಗೆ ಹಳ್ಳದಿಂದ ನೀರು ಹೊತ್ತು ತರುವುದಿಲ್ಲ. ಹಳ್ಳದಲ್ಲಿ ಸ್ನಾನ ಮಾಡಿದ್ದು ನಮ್ಮ ಪೀಳಿಗೆಗೆ ಕೊನೆ. ಹೊಸ ಪೀಳಿಗೆಯ ಮಕ್ಕಳಿಗೆ ಅದರ ಬಗ್ಗೆ ಗೊತ್ತಿಲ್ಲ. ಆ ಹಳ್ಳಕ್ಕೂ ಆಣೆಕಟ್ಟು ಕಟ್ಟಿಯಾದ ಮೇಲೆ, ಅಲ್ಲಿ ನೀರು ಹರಿಯುವುದು ನಿಂತು, ಹಳ್ಳದ ಉಸುಕು ಕಟ್ಟಡ ನಿರ್ಮಾಣಕ್ಕೆ ಹೊತ್ತು ಸಾಗಿ ಅದರ ರೂಪು ರೇಷೆಯೇ ಬೇರೆಯಾಗಿ ಹೋಗಿದೆ. ಸುತ್ತ ಹಳ್ಳಿಗಳಲ್ಲಿ ಸಾಂಪ್ರದಾಯಿಕ ಕೃಷಿ ಕೆಲಸ ಕಡಿಮೆಯಾದ ಕಡೆ ಕೂಲಿಕಾರರು ದೂರದ ಊರುಗಳಿಗೆ ಕಟ್ಟಡ ನಿರ್ಮಾಣಕ್ಕೆ ಹೊರಟು ಹೋಗಿದ್ದಾರೆ.

 

ಅಂದಿಗೆ ಊರಲ್ಲಿ ಒಂದೋ, ಎರಡೋ ಶ್ರೀಮಂತ ಕುಟುಂಬಗಳಿದ್ದರೆ, ಇಂದು ಊರಲ್ಲೆಲ್ಲ ಶ್ರೀಮಂತರೇ. ಇಂದು ನಮ್ಮೂರಿನ ಎಲ್ಲ ಯುವಕರ ಕೈಲಿ ದುಬಾರಿ ಎನಿಸುವ ಸ್ಮಾರ್ಟ್ ಫೋನ್ ಗಳಿವೆ. ಹಾಗೆಯೇ ಮದುವೆ ಮತ್ತಿತರ ಶುಭ ಕಾರ್ಯಗಳಲ್ಲಿ ಸ್ವಲ್ಪ ಜಾಸ್ತಿಯೇ ಎನಿಸುವಷ್ಟು ಖರ್ಚು ಮಾಡುತ್ತಾರೆ. ಸಾವಿರಾರು ವರುಷ ಬಡತನದಲ್ಲಿ ಬದುಕಿದ ಊರುಗಳು ಇಂದು ಶ್ರೀಮಂತಿಕೆಯ ರುಚಿ ನೋಡುತ್ತಿವೆ. ಇದು ಸಂತೋಷದ ವಿಷಯವೇ ಸರಿ.

 

ಇಲ್ಲಿ ನೆಲ್ಲು ಬೆಳೆಯುವ ರೈತ, ತಲೆ ಎತ್ತಿ ಆಕಾಶ ನೋಡಿ, ಮೋಡ ದಿಟ್ಟಿಸುವುದನ್ನೇ ಮರೆತು ಬಿಟ್ಟಿದ್ದಾನೆ. ಆದರೆ ತುಂಗಭದ್ರೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಯಾದರೆ ಆತಂಕಗೊಳ್ಳುತ್ತಾನೆ. ಐವತ್ತು ವರುಷಗಳಿಗೂ ಹಿಂದೆ ಕಟ್ಟಿದ ಅಣೆಕಟ್ಟಿನಲ್ಲಿ ಇಂದಿಗೆ ಅಪಾರ ಪ್ರಮಾಣದ ಹೂಳು ತುಂಬಿ ನೀರು ಸಂಗ್ರಹಿಸುವ ಸಾಮರ್ಥ್ಯ ಕುಗ್ಗುತ್ತಿದೆಯಲ್ಲ. ಅದು ಇನ್ನು ಐವತ್ತು ವರುಷಗಳ ನಂತರ ಏನಾಗಬಹುದು? ಅದಕ್ಕೆ ಯಾವುದಾದರೂ ಪರಿಹಾರ ದೊರಕಬಹುದೇ? ಇನ್ನೊಂದು ಆಣೆಕಟ್ಟು ಕಟ್ಟಲು, ಲಕ್ಷಾಂತರ ಬೆಲೆ ಬಾಳುವ ಭೂಮಿಯನ್ನು ಇಂದಿಗೆ ಕೊಳ್ಳಲು ಸಾಧ್ಯವೇ? ಹಾಗೆಯೇ ನೆಲ್ಲಿನ ಗದ್ದೆಯಲ್ಲಿ ಅಪಾರ ಪ್ರಮಾಣದ ರಾಸಾಯನಿಕ ಸುರಿದು ಅದರ ಫಲವತ್ತತೆ ಕಡಿಮೆ ಆಗಿ, ಯಾವ ಬೆಳೆಯೂ ಬೆಳೆಯದ ಪರಿಸ್ಥಿತಿ ಬರುವ ಬಗ್ಗೆ ಕೃಷಿ ತಜ್ಞರು ಎಚ್ಚರಿಸುತ್ತಿರುವರಲ್ಲ? ಅದರ ಬಗ್ಗೆ ನಮ್ಮ ಕಡೆಯ ಯಾವ ರೈತನು ಗಮನ ಹರಿಸಿದಂತೆ ಕಾಣುವುದಿಲ್ಲ. ಹಾಗೆಯೇ ಈಶಾನ್ಯ ಭಾರತ ಮತ್ತು ಅದರ ನೆರೆಯ ರಾಷ್ಟ್ರಗಳಲ್ಲಿ ಬ್ರಹ್ಮಪುತ್ರ ನದಿ ನೀರಿನಿಂದ ಅಪಾರ ಪ್ರಮಾಣದ ಭತ್ತದ ಕೃಷಿ ಆರಂಭವಾಗಿದೆಯಲ್ಲ. ಅದರಿಂದ ನೆಲ್ಲಿನ ಬೆಲೆ ಮೊದಲ ಹಾಗೆ ಏರಿಕೆ ಇಲ್ಲ.

 

ಆರ್ಥಿಕವಾಗಿ ಪ್ರಗತಿ ಕಾಣುವಂತ ಕಾಲದಲ್ಲಿ ನಮ್ಮೂರಲ್ಲಿ ಹುಟ್ಟಿದ್ದು ನಮಗೆ ಹೆಮ್ಮೆಯ ವಿಷಯ. ಆದರೆ ಅದು ಸಾಧ್ಯ ಆಗಿದ್ದು ತುಂಗಭದ್ರಾ ಆಣೆಕಟ್ಟು ನೀರು ಹಿಡಿದಿಡುವ ಸಾಮರ್ಥ್ಯ, ನಮ್ಮ ನೆಲದ ಫಲವತ್ತತೆ ಮತ್ತು ಭತ್ತಕಿದ್ದ ಬೆಲೆ, ಇವುಗಳ ಕಾರಣದಿಂದ. ಇನ್ನು ಇಪ್ಪತ್ತು-ಮೂವತ್ತು ವರುಷಗಳಿಗೆ ಇವುಗಳಲ್ಲಿ ಬದಲಾವಣೆ ಬರಲು ಸಾಧ್ಯವೇ? ಆಗ ನಮ್ಮ ಊರುಗಳ ಪ್ರಗತಿ ಏನಾಗಬಹುದು? ಅದರ ಬಗ್ಗೆ ಚಿಂತಿಸುವ ಮನುಷ್ಯರು ನಮ್ಮ ಊರಿನ ಜನ ಅಲ್ಲವೇ ಅಲ್ಲ ಬಿಡಿ. ಅದು ಬಂದಾಗ ನೋಡಿಕೊಂಡರಾಯಿತು. ಇಂದಿಗೆ ನೆಲ್ಲು ನಮ್ಮ ಕೈ ಹಿಡಿದ ಹಾಗೆ ಮುಂದೆ ಬೇರೆ ಯಾವುದೊ ನಮ್ಮನ್ನು ಕೈ ಹಿಡಿಯಬಹುದಲ್ಲ ಎನ್ನುವ ಆಶಾವಾದಿಗಳು ನಾವು.

No comments:

Post a Comment