Friday, June 25, 2021

ಯಾವಾಗ ಕೆಟ್ಟವರಾಗಬೇಕು ಎಂದು ತಿಳಿಯದೆ ಹೋದರೆ

ನಮಗೆ ಬೇಕೋ ಬೇಡವೋ, ಕೆಲವು ಸಲ ನಮಗೆ ಕೆಟ್ಟದು ಮಾಡಬೇಕು ಎನ್ನುವ ಉದ್ದೇಶ ಹೊಂದಿರುವ ಜನರ ನಡುವೆ ಸಿಕ್ಕಿ ಹಾಕಿಕೊಂಡು ಬಿಡುತ್ತೇವೆ. ನಮಗೆ ಸರಿ ತಪ್ಪು ಪ್ರಶ್ನಿಸುವ ಆ ಜನ ತಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ವಿಚಾರ ಮಾಡಿರುವುದಿಲ್ಲ. ತಾವೇ ಅನ್ಯಾಯ ಮಾಡಿ ನಮಗೆ ಸಾಕ್ಷಿ ಕೇಳುವ ಜನರನ್ನು ನಾನು ನೋಡಿದ್ದೇನೆ. ನ್ಯಾಯ ನೀತಿ ಪಾಲನೆ ಮಾಡಬೇಕಾದದ್ದು ಪರರು, ತಾವು ಏನು ಮಾಡಿದರು ನಡೆಯುತ್ತೆ ಎನ್ನುವ ಆಕ್ರಮಣಕಾರಿ ಪ್ರವೃತ್ತಿಯನ್ನು ಆ ಜನ ಹೊಂದಿರುತ್ತಾರೆ. ಅವರಿಗೆ ನೀವು ಸೌಮ್ಯ ಸ್ವಭಾವದ, ಹೊಂದಿಕೊಂಡು ಹೋಗುವ ತರಹದ ಮನುಷ್ಯರಾಗಿ ಕಂಡರೆ ಸಾಕು, ಅವರು ನಿಮ್ಮ ಶೋಷಣೆಗೆ ಇಳಿದು ಬಿಡುತ್ತಾರೆ.

 

ನಿಮಗೆ ಶಾಲಾ ದಿನಗಳಲ್ಲಿ, ಯಾರ ಜೊತೆಗೂ ಜಗಳವಾಡದ ಹುಡುಗನಿಗೆ ಹೆಚ್ಚಿನ ಅನ್ಯಾಯವಾಗುವುದು ನೆನಪಿರಬೇಕು. ಹಾಗೆಯೇ ತಮ್ಮ ತಂಟೆಗೆ ಬಂದರೆ ನೋಡು ಎಂಬಂತಿರುವ ಹುಡುಗರ ತಂಟೆಗೆ ಯಾರೂ ಹೋಗದೆ ಇರುವುದು ನೆನಪಿರಬೇಕು. ದೊಡ್ಡವರ ಜಗತ್ತು ತುಂಬಾ ಬೇರೆಯೇನಲ್ಲ. ನೀವು ಯಾರ ತಂಟೆಗೂ ಹೋಗದ, ನಿರುಪದ್ರವಿ ಜೀವಿಯ ಹಾಗೆ ನಿಮ್ಮನ್ನು ತೋರ್ಪಡಿಸಿಕೊಂಡರೆ ನಿಮ್ಮ ಕತೆ ಮುಗಿಯಿತು. ನಿಮ್ಮ ಮೇಲೆ ದಬ್ಬಾಳಿಕೆ ಆಗುವುದು ಶತಸಿದ್ಧ. ಹಾವು ಕಚ್ಚದಿದ್ದರೆ, ಭುಸ್ ಆದರೂ ಅನ್ನಬೇಕಲ್ಲವೇ? ಇಲ್ಲದಿದ್ದರೆ ಯಾರು ಬೇಕಾದರೂ ಅದರ ಬಾಲ ಹಿಡಿದು ಎಳೆದಾಡಿಬಿಡುತ್ತಿದ್ದರು. ಅದಕ್ಕೆ ಅದು ಹೆಡೆ ಎತ್ತಿ, ನೋಡು ನನ್ನ ತಂಟೆಗೆ ಬಂದರೆ ಎಂದು ಭುಸ್ ಅನ್ನುತ್ತದೆ. ಆ ಮೂಕ ಪ್ರಾಣಿಯ ಧೈರ್ಯವನ್ನು ನಮ್ಮ ನಿರುಪದ್ರವಿ ಮನುಷ್ಯರು ತೆಗೆದುಕೊಳ್ಳಬೇಕು. ತಾಳ್ಮೆಯ ಸೀಮಾ ರೇಖೆಯನ್ನು ದಾಟಿದರೆ, ಯಾವುದೇ ಹೋರಾಟಕ್ಕೂ ನೀವು ಸಿದ್ಧ, ಸೋಲು ಗೆಲುವಿನ ಬಗ್ಗೆ ನೀವು ವಿಚಾರ ಮಾಡದೆ ಜಗಳ ಕಾಯಲು ನೀವು ಹಿಂಜರಿಯುವುದಿಲ್ಲ ಎನ್ನುವ ಸಂದೇಶ ನಿಮ್ಮಿಂದ ಸ್ಪಷ್ಟವಾಗಿ ಹೋದರೆ, ಬಹುತೇಕ ಜಗಳಗಳು ಆರಂಭದಲ್ಲೇ ಮುಗಿದು ಹೋಗುತ್ತವೆ.

 

ನೀವು ಕೆಟ್ಟವರಾಗಿ ಬಿಡಿ ಎಂದು ನಾನು ಹೇಳುತ್ತಿಲ್ಲ. ಆದರೆ ನಿಮಗೆ ಅನ್ಯಾಯ ಮಾಡುವ ಉದ್ದೇಶ ಹೊಂದಿದ ಜನರು ನಿಮ್ಮ ಸಂಪರ್ಕಕ್ಕೆ ಬಂದಾಗ, ನನಗೂ ಕೂಡ ಕೆಟ್ಟವನಾಗಲು ಬರುತ್ತದೆ ಎನ್ನುವ ಸಂದೇಶ ಪ್ರತ್ಯಕ್ಷವೋ  ಪರೋಕ್ಷವೋ ನೀವು ನೀಡಲೇಬೇಕು. ಕೆಲವರು ಮೋಸ, ಅನ್ಯಾಯದಲ್ಲಿ ನುರಿತವರು ಇರುತ್ತಾರಲ್ಲ. ಅವರ ಮುಖಾಮುಖಿ ನಿಮಗೆ ಆದಾಗ, ಅವರದೇ ಕಲೆಗಳಾದ ಮಾಹಿತಿ ತಿರುಚುವುದು, ಸುಳ್ಳು ಅಪವಾದ ಸೃಷ್ಟಿಸುವುದು, ದೈಹಿಕ ಜಗಳಗಳಿಗೆ ಇಳಿಯುವುದು ಇವುಗಳನ್ನು ನೀವು ಕೂಡ ಅಗತ್ಯಕ್ಕೆ ತಕ್ಕಂತೆ ಉಪಯೋಗ ಮಾಡಬೇಕು. ಇಲ್ಲದೆ ಹೋದರೆ ಆ ಜನ ನಿಮ್ಮ ಪ್ರಾಣ ಹಿಂಡದೆ ಬಿಡುವುದಿಲ್ಲ. ಮೂಕ ಬಸವನಾಗಿ, ನೊಗ ಹೊತ್ತು, ಬಾರುಕೋಲು ಏಟು ತಿನ್ನುತ್ತಿರೋ, ಇಲ್ಲವೇ ಜೇನುಹುಳುಗಳ ಹಾಗೆ ತಂಟೆಗೆ ಬಂದವರನ್ನು ಮುಖ-ಮೂತಿ ನೋಡದೆ ಚುಚ್ಚಿ, ಸ್ವತಂತ್ರವಾಗಿ ಬದುಕುತ್ತಿರೋ ಎನ್ನುವ ಆಯ್ಕೆ ನಿಮಗೆ ಬಿಟ್ಟಿದ್ದು.

 

ಜನರನ್ನು, ಸಮಾಜವನ್ನು ನೀವು ಸಂತೋಷ ಪಡಿಸಲು ಹೋಗಬೇಡಿ. ಸ್ವಾರ್ಥ ಸಮಾಜದಲ್ಲಿ ಬಹುತೇಕ ಜನರು, ಕಣ್ಣಿಗೆ ಕಂಡದ್ದನ್ನು, ತಾವು ಆಸೆ  ಪಟ್ಟದ್ದನು ತಮ್ಮದಾಗಿಸಿ ಕೊಳ್ಳಲು ಹೊರಡುತ್ತಾರೆ. ಮಾರ್ಗ ನ್ಯಾಯದ್ದೋ, ಅನ್ಯಾಯದ್ದೋ ಎನ್ನುವ ವಿವೇಚನೆ ಅವರಿಗೆ ಬೇಕಿಲ್ಲ.  ಅವರಿಗೆ ನೀವು ಸುಲಭದ ತುತ್ತಾಗಬೇಡಿ. ಒಳ್ಳೆಯತನ ನಿಮ್ಮ ಹೃದಯದಲ್ಲಿರಲಿ. ಆದರೆ ನಿಮ್ಮ ಕೈ-ಬಾಯಿಗಳು ಅಗತ್ಯ ಬಿದ್ದಾಗ ಬಿರುಸಾಗಿರಲಿ. ಯಾವಾಗ ಕೆಟ್ಟವರಾಗಬೇಕು ಎಂದು ನಿಮಗೆ ಮೊದಲೇ ಗೊತ್ತಿರಲಿ.

No comments:

Post a Comment