Sunday, July 11, 2021

ಕಥೆ: ಇದೂ ಒಂದು ಕನಸಲ್ಲವೇ?

ಸಂತೆಗೆ ಜನ ತರಕಾರಿ ಕೊಳ್ಳಲು ಹೋಗುತ್ತಾರೆ. ಆದರೆ ನೆಮ್ಮದಿ ಹುಡುಕಲು ಹೋಗುತ್ತಾರೆಯೇ? ಹಾಗೇಯೇ ಅನಿಸಿತ್ತು ನನಗೆ ಬೆಂಗಳೂರಿನ ಜೀವನ. ಬೆಂಗಳೂರು ಅಲ್ಲಿ ಬದುಕಿದ ಇಪ್ಪತ್ತು ವರುಷಗಳಲ್ಲಿ, ಹಣ, ಅನುಭವ ಎರಡನ್ನು ಯಥೇಚ್ಛವಾಗಿ ಕೊಟ್ಟಿತ್ತಾದರೂ, ಅಲ್ಲಿ ನೆಮ್ಮದಿ ಬಯಸುವ ಯಾರೂ ಬದುಕಲು ಸಾಧ್ಯವಿಲ್ಲ ಎನಿಸಿ, ೪೫ನೇ ವಯಸ್ಸಿನಲ್ಲಿ ಹುಟ್ಟೂರಿಗೆ ಮರಳಿ ಬಂದುಬಿಟ್ಟಿದ್ದೆ. ನಮ್ಮೂರು ಮಸ್ಕಿಯೂ ಸಾಕಷ್ಟು ಬದಲಾಗಿತ್ತಲ್ಲ. ಚಿಕ್ಕವರಾಗಿದ್ದಾಗ ಇಲ್ಲಿ ಎಲ್ಲವರು ಒಳ್ಳೆಯವರೇ ಆಗಿ ಕಾಣುತ್ತಿದ್ದರು. ಅದು ಚಿಕ್ಕ ವಯಸ್ಸಿನ ಮುಗ್ಧತೆಯ ಪ್ರಭಾವವೋ ಏನೋ? ಆದರೆ ಎದುರಿಗಿರುವ ವ್ಯಕ್ತಿಯ ಕಣ್ಣಾಚೆಗಿನ ಮನಸ್ಸನ್ನು ಓದಲು ಕಲಿತ ಮೇಲೆ, ಅಂತಹ ಅನಿಸಿಕೆ ಈಗೇನು ಉಳಿದಿಲ್ಲ. ಆದರೆ ಹಳೆ ಗೆಳೆಯರು, ಚಿಕ್ಕಂದಿನಲ್ಲಿ ಓಡಾಡಿದ ಜಾಗಗಳು, ಹಳೆಯ ನೆನಪುಗಳು ಇಲ್ಲಿ ಉಳಿದುಕೊಂಡಿವೆಯಾದ್ದರಿಂದ, ಬೆಂಗಳೂರಿನಷ್ಟು ಅನುಕೊಲಗಳು ಇಲ್ಲಿ ಇರಲು ಸಾಧ್ಯವಿಲ್ಲವಾದರೂ, ಒಂದು ಸಮಾಧಾನದ ಬದುಕು ಸಾಧ್ಯವಾಗಿತ್ತು. ಇಲ್ಲಿ ಬೇರೆಯ ದಿನಚರಿಗೆ ಹೊಂದಿಕೊಂಡು, ಹತ್ತಾರು ವರುಷಗಳು ಕಳೆದೇ ಹೋದವು. 


ಬೆಂಗಳೂರು ಮಾತ್ರ ಬೆಳೆಯಬೇಕೆ? ನಮ್ಮೂರು ಮಸ್ಕಿ ಹಿಂದೆ ಒಂದು ಕಾಲಕ್ಕೆ ಬೆಟ್ಟ ಹತ್ತಿ ಮಲ್ಲಿಕಾರ್ಜುನ ದೇವಸ್ಥಾನದಿಂದ ನೋಡಿದರೆ, ಒಂದು ಕಡೆ ಹಳ್ಳ, ಇನ್ನೊಂದು ಕಡೆ ಕಾಲುವೆ ಮತ್ತು ಮುಖ್ಯ ರಸ್ತೆ, ಈ ಮೂರು ಗಡಿಗಳ ನಡುವೆ ತ್ರಿಕೋನಾಕಾರದ ಪ್ರದೇಶ ಬಿಟ್ಟು ಬೆಳೆದಿರಲಿಲ್ಲ. ಆದರೆ ಇಂದಿಗೆ ಅದರ ರೂಪು ರೇಷೆಯೇ ಬೇರೆಯಾಗಿಬಿಟ್ಟಿದೆ. ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿ ದೇವರ ದರ್ಶನ ಪಡೆಯುವರು ಕಡಿಮೆಯಾಗಿ, ಬೆಟ್ಟದ ಹಿಂಭಾಗದ ರಸ್ತೆಯ ಮೂಲಕ ಭುರ್ರೆಂದು ವಾಹನದಲ್ಲಿ ಬಂದು ಧಿಢೀರ್ ದರ್ಶನ ಪಡೆಯುವರು ಹೆಚಾಗಿದ್ದರಲ್ಲ. ಅದು ಬದಲಾದ ನಮ್ಮೂರಿನ ಸಮಾಜದ ಮನಸ್ಥಿತಿಯನ್ನು ಸಹ ತೋರಿಸುತ್ತದೆ. ಸಹನೆ ಇಲ್ಲದ ಜನರು ಬೆಂಗಳೂರು ಮಾತ್ರವಲ್ಲ, ಎಲ್ಲ ಕಡೆಯೂ ಇದ್ದಾರೆ ಎನ್ನುವ ಪಾಠವನ್ನು ಅದು ನನಗೆ ಕಲಿಸಿತ್ತು. ಆದರೆ ಪರಿಚಿತರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಪುರುಸೊತ್ತಿಲ್ಲದ ಬೆಂಗಳೂರಿನ ಜನ ಸಾಗರಕ್ಕಿಂತ, ಯಾವುದೇ ಸಹಾಯ ಮಾಡದಿದ್ದರೂ, "ಆರಾಮಿದ್ದಿರಾ?" ಎಂದು ಕೇಳುವ ನಮ್ಮೂರ ಜನರೇ ಹಿತವೆನಿಸಿದ್ದರು.


ಏರು ಜವ್ವನದಲ್ಲಿ ನಾವು ವರ್ಷಕ್ಕೆ ಒಂದು ಸಲವೋ, ಇಲ್ಲವೇ ಎರಡು ವರುಷಕ್ಕೆ ಒಂದು ಸಲವೋ ವೈದ್ಯರನ್ನು ಭೇಟಿಯಾದರೆ, ವಯಸ್ಸಾಗುತ್ತ ದೈಹಿಕ ಶಕ್ತಿ ಕುಗ್ಗಿದಾಗ, ತಿಂಗಳಿಗೆ ಎರಡು ಸಲ ವೈದ್ಯರನ್ನು ನೋಡುವ ಅವಶ್ಯಕತೆ ಬಂದು ಬಿಡುತ್ತದೆ. ಇಂತಹುದೇ ಸಂದರ್ಭದಲ್ಲಿ ಹೆಚ್ಚು ಕಡಿಮೆ ನನ್ನದೇ ವಯಸ್ಸಿನ ವೈದ್ಯ ಒಬ್ಬರನ್ನು ನಾನು ನಾಲ್ಕಾರು ಸಲ ಭೇಟಿಯಾದ ಮೇಲೆ, ನಮ್ಮಿಬ್ಬರ ನಡುವೆ ಒಂದು ಸ್ನೇಹ, ಸಲಿಗೆ ಬೆಳೆದಿತ್ತು. ಅವರಿಗೆ ಅದೇನು ಅನ್ನಿಸಿತೋ ಒಂದು ದಿನ ರಾತ್ರಿ ಊಟಕ್ಕೆ ನನ್ನನ್ನು ತಮ್ಮ ಮನೆಗೆ ಆಹ್ವಾನಿಸಿದರು. ಸರಿ, ಹೋದರಾಯಿತು ಎಂದು ಅವರ ಮನೆ ಎಲ್ಲಿ ಎಂದು ವಿಚಾರಿಸಿಕೊಂಡೆ. ಕವಿತಾಳ ರಸ್ತೆಗೆ ಬಂದು, ಬಲಕ್ಕೆ ಒಂದು ಅಡ್ಡ ರಸ್ತೆಯಲ್ಲಿ ತಿರುಗಿಕೊಳ್ಳಿ. ಅವಶ್ಯಕತೆ ಬಿದ್ದಲ್ಲಿ ಫೋನ್ ಮಾಡಿ, ರಾತ್ರಿ ಎಂಟು ಗಂಟೆ ಹೊತ್ತಿಗೆಲ್ಲ ಬಂದು ಬಿಡಿ ಎಂದು ತಿಳಿಸಿದ್ದರು.


ರಾಯಚೂರಿಗೆ ಸಂಪರ್ಕ ಕಲ್ಪಿಸುವ ಆ ಕವಿತಾಳ ರಸ್ತೆಯಲ್ಲಿ ನಾನು ಓಡಾಡಿದ್ದರೂ, ಅಲ್ಲಿ ಬೆಳೆದಿದ್ದ ಊರಿನ ಪರಿಚಯ ಇರಲಿಲ್ಲ. ಚಿಕ್ಕವನಾಗಿದ್ದಾಗ ನಮ್ಮ ಮನೆ ಇದ್ದದ್ದು ಊರ ಮಧ್ಯದಲ್ಲಿ ಮತ್ತು ನಂತರದ ಜೀವನವೆಲ್ಲ ಕಳೆದದ್ದು ಸಿಂಧನೂರು ರಸ್ತೆಯ ಆಸು ಪಾಸಿಗೆ ಬೆಳೆದ ಪ್ರದೇಶದಲ್ಲಿ.  ಏಕಾದರೂ ಇರಲಿ, ಸ್ವಲ್ಪ ಬೇಗ ಹೊರಟರಾಯಿತು ಎಂದು ಸಂಜೆ ಕತ್ತಲಾಗುವ ಸಮಯಕ್ಕೆ ನನ್ನ ಕಾರನ್ನು ತೆಗೆದುಕೊಂಡು  ಕವಿತಾಳ ರಸ್ತೆಗೆ  ಹೊರಟೆ. ಅಡ್ಡ ರಸ್ತೆಯಲ್ಲಿ ಕಾರು ಸರಾಗವಾಗಿ ಓಡಾಡುವಷ್ಟು ರಸ್ತೆಗಳು ಅಗಲ ಇರದಿದ್ದರಿಂದ, ಕಾರನ್ನು ಒಂದು ಕಡೆ ನಿಲ್ಲಿಸಿ, ನಡೆಯುತ್ತಾ ಡಾಕ್ಟರ್ ರ ಮನೆ ಹುಡುಕಿದರೆ ಆಯಿತು ಎಂದು ನಿರ್ಧರಿಸಿದೆ. 


ಅಡ್ಡ ರಸ್ತೆಯ ಕೊನೆಯವರೆಗೂ ಹೋದರೂ, ಡಾಕ್ಟರ್ ಹೆಸರಿರುವ ಫಲಕ ಯಾರ ಮನೆ ಮುಂದೆಯೂ ಕಾಣಲಿಲ್ಲ. ಇಷ್ಟಕ್ಕೂ ಈ ಡಾಕ್ಟರ್ ಗೆ ಮನೆ ಕಟ್ಟಲು ಬೇರೆ ಯಾವ ಪ್ರದೇಶವು ಸಿಗಲಿಲ್ಲವೇ ಎಂದು ಕೂಡ ಅನಿಸಿತು.  ಅಲ್ಲಿ ಒಬ್ಬರನ್ನು ವಿಚಾರಿಸಿ ನೋಡಿದೆ. ಅಲ್ಲಿ ಯಾವ ಡಾಕ್ಟರ್ ಮನೆ ಇಲ್ಲ, ಆದರೆ ಹತ್ತಿರದ ಸ್ಮಶಾನದ ಸುತ್ತ ಮುತ್ತ ಕೂಡ ಸಾಕಷ್ಟು ಮನೆಗಳಾಗಿದ್ದು ಅಲ್ಲಿ ವಿಚಾರಿಸಿ ನೋಡಿ ಎಂದರು. ಅಲ್ಲಿಂದ ಇನ್ನೊಂದು ರಸ್ತೆಯಲ್ಲಿ ಹೊರಳಿದರೆ ಅದು ಸ್ಮಶಾನಕ್ಕೆ ಹೋಗುವ ಮಾರ್ಗವಾಗಿತ್ತು. ಅಲ್ಲಿಗೆ ಬಂದಾಗ, ಎಷ್ಟೋ ವರುಷಗಳು ಹಿಂದೆ  ತೀರಿಕೊಂಡ ನನ್ನ ದೊಡ್ಡಮ್ಮಳ ಅಂತ್ಯ ಸಂಸ್ಕಾರಕ್ಕೆಂದು ಆ ಅಡ್ಡ ರಸ್ತೆಯಲ್ಲಿ ಒಮ್ಮೆ ಓಡಾಡಿದ್ದು ನೆನೆಪಿಗೆ ಬಂತು. ನಾನು ಅವತ್ತು ಬಂದಿದ್ದು ಹಗಲಿನಲ್ಲಿ. ಆದರೆ ಇಂದು ಕತ್ತಲಾಗಿ ಸಂಪೂರ್ಣ ಗುರುತು ಸಿಗುತ್ತಿರಲಿಲ್ಲ. ಸ್ಮಶಾನದ ಪ್ರವೇಶದಲ್ಲಿ ಕಟ್ಟಿರುವ ಒಂದು ಕಮಾನಿನವರೆಗೆ ನಡೆದು ಬಂದರೂ, ದಾರಿಯಲ್ಲಿದ್ದ ಯಾವ ಮನೆಗಳು ನಾನು ಭೇಟಿಯಾಗಬೇಕಿರುವ ಡಾಕ್ಟರ್ ದ್ದು ಎಂದು ಅನಿಸಲಿಲ್ಲ. 


ಸ್ಮಶಾನದ ಅಂಚಿನಲ್ಲಿ ಒಬ್ಬ ಹೆಣ್ಣು ಮಗಳು ನನ್ನನ್ನು ನೋಡಿದರೂ ನೋಡದಂತೆ ಹೊರಟು ಹೋದಳು. ಅವಳ ಮುಖ ನಾನು ಚಿಕ್ಕವನಾಗಿದ್ದಾಗ ವರದಕ್ಷಿಣೆ ಕಿರುಕುಳ ತಾಳದೆ ವಿಷ ಕುಡಿದು ಸತ್ತ ಹೆಣ್ಣು ಮಗಳನ್ನು ಹೋಲುತ್ತಿತ್ತು. ಅಂದು ಊರಿನ ಜನರೆಲ್ಲಾ ಆ ಮನೆ ಮುಂದೆ ಸೇರಿದ್ದಲ್ಲ. ಅವಳ ದೇಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಮುಖ ಮಾತ್ರ ಕಾಣುವಂತೆ ಮಲಗಿಸಿಟ್ಟಿದ್ದರು. ಇಂದು ಕೂಡ ಅಲ್ಲಿರುವ ಮಬ್ಬೆಳಕಿನಲ್ಲಿ ಆ ಹೆಣ್ಣು ಮಗಳ ಮುಖ ನೀಲಿ ಮಿಶ್ರಿತ ಕಪ್ಪಾಗಿರುವುದು ಕಾಣುತ್ತಿತ್ತು. ಛೆ, ಕಾರನ್ನು ಹಿಂದೆಯೇ ಬಿಟ್ಟು ಬರಬಾರದಿತ್ತು, ಅದರ ಬೆಳಕು ಇಲ್ಲಿ ಸಹಾಯವಾಗುತ್ತಿತ್ತು ಎಂದು ಅನಿಸಿತು. ಪ್ಯಾಂಟಿನ ಜೇಬಿಗೆ ಕೈ ಹಾಕಿ ನೋಡಿದೆ. ಕಾರಿನ ಕೀ ಅಲ್ಲಿ ಭದ್ರವಾಗಿತ್ತು. ಮತ್ತೆ ಹಿಂದೆ ಹೋಗುವುದಕ್ಕಿಂತ ಮುನ್ನ ಯಾರನ್ನಾದರೂ ವಿಚಾರ ಮಾಡಿದರಾಯಿತು ಎಂದು ಸುತ್ತ ಮುತ್ತ ನೋಡಿದೆ. ಸ್ಮಶಾನ ದ್ವಾರ ಮಂಟಪದ ಕೆಳಗೆ ಕತ್ತಲಿನಲ್ಲಿ ಒಬ್ಬ ಅಜಾನುಬಾಹು ವ್ಯಕ್ತಿ ನಿಂತಿದ್ದ. ಆತನ ಆಕಾರ ಹೆದರಿಕೆ ತರುತ್ತಿದ್ದರೂ, ಧೈರ್ಯ ತೆಗೆದುಕೊಂಡು ಹತ್ತಿರ ಹೋಗಿ,


"ಇಲ್ಲಿ ಹತ್ತಿರದಲ್ಲಿ ಡಾಕ್ಟರ್ ಮನೆ ಇದೆಯೇ?" ಎಂದು ಕೇಳಿದೆ. 


ತನಗೆ ಯಾವ ಡಾಕ್ಟರ್ ಗೊತ್ತಿಲ್ಲ ಎಂದು ಹೇಳಿದ ಅವನು ತಾನು ನಿಂತ ಆ ಜಾಗದಿಂದಾಚೆ ಹೋದವರನ್ನು ಮತ್ತೆ ಆಚೆಗೆ ಬಿಡುವುದಿಲ್ಲ ಎಂದು ಧೃಢ ನಿರ್ಧಾರದ ಧ್ವನಿಯಲ್ಲಿ ಹೇಳಿದ. ಇವನು ಸ್ಮಶಾನದ ಕಾವಲುಗಾರನೋ, ಇಲ್ಲವೇ ನಿಜ ಯಮಧರ್ಮನೊ, ಮತ್ತು ಅವನು ನನಗೇಕೆ ಹಾಗೆ ಹೇಳಿದ ಎಂದು ಒಂದು ಕ್ಷಣ ಕಸಿವಿಸಿ ಆಯಿತು. ಕತ್ತಲು ಮನಸಿಗೂ ಕವಿದಂತಾಗಿತ್ತು. 


"ಇದೇನು ನಿಜವೋ, ಕನಸೋ?" ಎಂದು ನನಗೆ ನಾನೇ ಕೇಳಿಕೊಂಡೆ.


ಆ ವ್ಯಕ್ತಿ ನನ್ನನ್ನೇ ದಿಟ್ಟಿಸಿ ನೋಡುತ್ತಾ, ನಿನಗಿನ್ನೂ ಅರ್ಥವಾಗಿಲ್ಲವೇ ಎನ್ನುವ ಭಾವದಲ್ಲಿ ಹೇಳಿದ "ಜೀವನ ಕೂಡ ಒಂದು ಕನಸಲ್ಲವೇ?"

Friday, July 9, 2021

ಎನಗೂ ಆಣೆ, ನಿನಗೂ ಆಣೆ

ಯಾವುದೇ ಮನುಷ್ಯ-ಮನುಷ್ಯ ಸಂಬಂಧಗಳು ಗಟ್ಟಿಯಾಗಿ ನಿಲ್ಲಬೇಕೆಂದರೆ, ಅದರಲ್ಲಿ ಇಬ್ಬರ ಕೊಡುಗೆಯು ಸರಿ ಸಮನಾಗಿ ಇರಬೇಕು ಅಲ್ಲವೇ? ಒಮ್ಮುಖವಾದ ಸಂಬಂಧ, ಸಂಬಂಧ ಎನಿಸಿಕೊಳ್ಳದು. ಅದು ಬರೀ ಬಂಧವಾಗುತ್ತದೆ. ಇಲ್ಲದಿದ್ದರೆ ಕರ್ತವ್ಯವೋ, ಕಟ್ಟುಪಾಡೋ ಎನಿಸಿಕೊಳ್ಳಬಹುದು ಅಷ್ಟೇ. ಗಮನಿಸಿ ನೋಡಿದರೆ ನಮ್ಮ ಸಮಾಜದಲ್ಲಿನ ಎಷ್ಟೋ ಸಂಬಂಧಗಳು, ತಂದೆ-ಮಗ, ಅಣ್ಣ-ತಮ್ಮ, ಗಂಡ-ಹೆಂಡತಿ ಇವುಗಳೆಲ್ಲ ಸಂಬಂಧಗಳಾಗದೆ ಕೇವಲ ಬಂಧಗಳಾಗಿ ಉಳಿದುಬಿಡುತ್ತವೆ. ಏಕೆಂದರೆ ಇವುಗಳಲ್ಲಿ ಸರಿ ಸಮಾನ ಕೊಡುಗೆಯ ಕೊರತೆ. ಅಥವಾ ಅವರಿಬ್ಬರಲ್ಲಿ ಒಬ್ಬರಿಗೆ ತಾನು ಹೆಚ್ಚು ಎಂದು ಶೋಷಣೆಗೆ ಇಳಿಯುವ ಹುಚ್ಚು. ಇಲ್ಲವೇ ಇನ್ನೊಬ್ಬರ ನೋವಿಗೆ ಸ್ಪಂದಿಸದ ಅಥವಾ ಖುಷಿ ಪಡುವ ಪ್ರವೃತ್ತಿ.


ತನಗೆ ಮರ್ಯಾದೆ ಇಲ್ಲ ಎಂದುಕೊಳ್ಳುವ ತಂದೆ, ತನ್ನಿಷ್ಟದಂತೆ ನಡೆಯಲು ಬಿಡುತ್ತಿಲ್ಲ ಎನ್ನುವ ಮಗ, ಇವಳ ಜೊತೆ ಹೇಗೆ ಬದುಕಬೇಕೋ ಎಂದುಕೊಳ್ಳುವ ಗಂಡ, ತನ್ನನ್ನು ಸರಿಯಾಗಿ ಬಾಳಿಸುತ್ತಿಲ್ಲ ಎಂದು ದೂರುವ ಹೆಂಡತಿ, ಇವರೆಲ್ಲರೂ ತಮ್ಮ ಸಂಬಂಧಗಳಲ್ಲಿ ಅಸಮಾನತೆಯನ್ನು ಹುಡುಕಿ ತರುತ್ತಾರೆ. ಆಮೇಲೆ ಶುರುವಾಗುವುದು ಅವರವರ ಕರ್ತವ್ಯಗಳ ಪಾಲನೆ ಬಗ್ಗೆ ಆರೋಪ, ಪ್ರತ್ಯಾರೋಪ. ಅಲ್ಲಿಗೆ ಸಂಬಂಧ ಸತ್ತು ಹೋದ ನಂತರ ಅವರ ನಡುವೆ ಉಳಿಯುವುದು ಸಾಮಾಜಿಕ ಕಟ್ಟು ಪಾಡಿನ ಪಾಲನೆ ಮಾತ್ರ.


ಅವರೆಲ್ಲರೂ ತಮ್ಮ ದೋಷಾರೋಪಣೆಗೆ ಮುಂಚೆ ಆ ಸಂಬಂಧಕ್ಕೆ, ಅದನ್ನು ಸಿಹಿಗೊಳಿಸುವದಕ್ಕೆ, ಗಟ್ಟಿಯಾಗಿಸುವುದಕ್ಕೆ, ಕರ್ತವ್ಯ ಪಾಲನೆಯನ್ನು ಮೀರಿ ತಮ್ಮ ಕೊಡುಗೆಯ ಬಗ್ಗೆ ಸ್ಪಷ್ಟತೆ ಹೊಂದಿದ್ದರೆ, ಆ ಸಂಬಂಧ ಪಡೆದುಕೊಳ್ಳುವ ತಿರುವು ಬೇರೆ. ಸಂಬಂಧ ಅನ್ನುವುದು ವ್ಯಾಪಾರ ಅಲ್ಲದೆ ಇರಬಹುದು. ಆದರೆ ನಾವು ಇನ್ನೊಬ್ಬರಿಗೆ ಆಣೆ, ಭಾಷೆ ತೆಗೆದುಕೊಳ್ಳುವ ಮುನ್ನ ನಾವು ಯಾವ ಆಣೆಗೆ ಸಿದ್ಧರಿದ್ದೇವೆ ಎನ್ನುವುದು ತಿಳಿಸಬೇಕೆಲ್ಲವೇ? ಪುರಂದರ ದಾಸರ ಹಾಡು ಕೇಳಿದ್ದೀರಾ?


"ತನುಮನಧನದಲಿ ವಂಚಕನಾದರೆ ಎನಗೆ ಆಣೆ

ರಂಗಾ ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ


ಕಾಕು ಮನುಜರ ಸಂಗವ ಮಾಡಿದರೆ ಎನಗೆ ಆಣೆ

ರಂಗಾ ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ


ಹರಿ ನಿನ್ನಾಶ್ರಾಯ ಮಾಡದಿದ್ದರೆ ಎನಗೆ ಆಣೆ

ರಂಗಾ ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ


ಎನಗೆ ಆಣೆ ನಿನಗೆ ಆಣೆ

ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ"


ಪುರಂದರ ದಾಸರಿಗೆ ತಮ್ಮ ಇಷ್ಟ ದೈವದ ಮೇಲೆ ಆಣೆ ಹಾಕುವ ಆತ್ಮಸ್ಥೈರ್ಯ ತಂದುಕೊಟ್ಟಿದ್ದು ಅವರು ತಮಗೆ ತಾವು ಹಾಕಿಕೊಳ್ಳುವ ಆಣೆಯಿಂದ. ಅವರ ಸಂಬಂಧ ಮನುಷ್ಯ-ದೇವರ ನಡುವಿನದಾದರೂ ಅದು ಒಂದು ಗಟ್ಟಿ ತಳಹದಿಯ ಮೇಲಿತ್ತು. ಹಾಕಿಕೊಂಡ ಆಣೆಗಳು ಸಂಬಂಧಗಳ ಮೇಲಿನ ನಂಬುಗೆಯನ್ನು ಹೆಚ್ಚಿಸಿದವು. ಆ ಸಂಬಂಧದ ಮಾಧುರ್ಯ, ಕಂಪು ಅವರಿಬ್ಬರಿಗೆ ಮೀಸಲಾಗದೆ ಇತರರಿಗೂ ಪಸರಿಸಿ ಪ್ರಭಾವಗೊಳಿಸಿತು. ನಮಗೆ ದಾಸರಿಗಿದ್ದ ಶೃದ್ಧೆ ಇಲ್ಲ. ಕಾಯಿ ಒಡೆದು, ಕೋಟಿ ಕೇಳುವ ನಮಗೆ ದೇವರು ಒಲಿಯುವುದಾದರೂ ಹೇಗೆ?


ನಾವು ಬದುಕುವ ರೀತಿ ನೋಡಿ. ನಮಗೆ ನಾವು ಯಾವ ಆಣೆಗೂ ತಯ್ಯಾರಿಲ್ಲ. ಅದೆಲ್ಲ ಮಾಡಬೇಕಾದ್ದು ಇನ್ನೊಬ್ಬರು ಎನ್ನುವ ಮನೋಭಾವದವರು. ಅದಕ್ಕೆ ನಮ್ಮ ಸಂಬಂಧಗಳಲ್ಲಿ ಕಂಪಿಲ್ಲ. ನಾವು ದಾಸರ ಪದಗಳನ್ನು ಕೇಳುತ್ತೇವೆ. ಹಾಗೆಯೇ ಮುಂದಿನ ಜಗಳಕ್ಕೆ ಸಿದ್ಧರಾಗುತ್ತೇವೆ. ನೆಮ್ಮದಿಯಿಂದ ಬದುಕಲು ಆಗದೆ, ಕರ್ತವ್ಯ ನಮ್ಮನ್ನು ಸಾಯಲು ಬಿಡದೆ, ಮುಕ್ತಿಯ ಆಸೆ ನಾವು ಬಿಡದೆ, ಲೌಕಿಕ ನಮ್ಮನ್ನು ಬಿಡದೆ ಚಡಪಡಿಸುವ ಹಕ್ಕಿಗಳಾಗಿ ಹೊತ್ತುಗಳೆಯುತ್ತೇವೆ.

Sunday, July 4, 2021

ಇಲ್ಲಿ ಹಿಟ್ಲರ್ ನು ಇದ್ದ, ಮದರ್ ತೇರೇಸಾ ಳೂ ಇದ್ದಳು

ಪ್ರಕೃತಿ ಎಲ್ಲರನ್ನು ಹೇಗೆ ಹುಟ್ಟು ಸ್ವಾರ್ಥಿಗಳನ್ನಾಗಿಸುತ್ತದೆ ಎಂದು ಕಳೆದ ಲೇಖನದಲ್ಲಿ ಗಮನಿಸಿದ್ದೆವು. ಆದರೆ ಕೆಲವೇ ಕೆಲವರಿಗಾದರೂ ಸ್ವಾರ್ಥ ಭಾವದಿಂದ ಹೊರ ಬಂದು ಮಾನವ ಕಲ್ಯಾಣ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದಲ್ಲ. ಇಲ್ಲದಿದ್ದರೆ ಎಷ್ಟೊಂದು ಗುಡಿ, ಮಠಗಳು, ಅನಾಥಾಶ್ರಮಗಳು, ಮನುಷ್ಯ ಕಲ್ಯಾಣಕ್ಕೆಂದೇ ಮೀಸಲಾಗಿರುವ ಸಂಘ-ಸಂಸ್ಥೆಗಳು ಹುಟ್ಟಿಕೊಳ್ಳಲು ಸಾಧ್ಯವಿತ್ತೇ? ಮನುಷ್ಯನ ಆ ಇನ್ನೊಂದು ಪ್ರಕ್ರಿಯೆ ಬಗ್ಗೆ ಗಮನ ಹರಿಸೋಣ.

 

ವಿಪರೀತ ನೋವನ್ನುಂಡ ಮನುಷ್ಯನಲ್ಲಿ, ಇತರೆ ಜೀವಿಗಳಲ್ಲಿ ಆ ನೋವನ್ನು ಗುರುತಿಸುವುದು ಮತ್ತು ಮತ್ತು ಅವರ ನೋವಿಗೆ ಮಿಡಿಯುವುದು ಸಾಧ್ಯವಾಗುತ್ತದೆ. ಸಾಮ್ರಾಟ್ ಅಶೋಕನಿಗೆ ಸಾಧ್ಯವಾಗಿದ್ದು ಅದೇ. ಯುದ್ಧ ಮಾಡಿ ಸಾಮ್ರಾಜ್ಯ ಗೆಲ್ಲುವ ಆಕಾಂಕ್ಷೆಯನ್ನು ಅಲ್ಲಿಗೆ ಕೊನೆಗೊಳಿಸಿ, ಪ್ರಜೆಗಳನ್ನು ಮಕ್ಕಳ ಹಾಗೆ ಗಮನಿಸಲು ಆರಂಭ ಮಾಡಿದಾಗ ಅವನು ಗೆದ್ದದ್ದು ಅವನ ಮನದಲ್ಲಿನ ಸ್ವಾರ್ಥ ಭಾವವನ್ನು. ಇಂದಿಗೂ ಇತಿಹಾಸ ಅವನನ್ನು ದಾಖಲಿಸುವುದು ಒಬ್ಬ ಕರುಣಾಮಯಿ ಚಕ್ರವರ್ತಿಯನ್ನಾಗಿ.

 

ಸಕಲ ಜೀವಾತ್ಮಗಳಲ್ಲಿರುವ ಶಕ್ತಿ ಒಂದೇ. ನಾವು ಮತ್ತು ಈ ಜಗತ್ತು ಬೇರೆ ಬೇರೆಯಲ್ಲ ಎಂದು ತಿಳಿಸಿದ್ದು ಪ್ರಾಚೀನ ಕಾಲದಲ್ಲಿ ರೂಪುಗೊಂಡ ಉಪನಿಷತ್ತುಗಳು - ಐತ್ತರಿಯ ಉಪನಿಷತ್ತು (ಪ್ರಜ್ಞೆಯೇ ಬ್ರಹ್ಮ), ಬೃಹದಾರಣ್ಯಕ ಉಪನಿಷತ್ತು (ಅಹಂ ಬ್ರಹ್ಮಾಸ್ಮಿ), ಚಂದೋಗ್ಯ ಉಪನಿಷತ್ತು (ತತ್ವಂ ಅಸಿ), ಮಾಂಡೂಕ್ಯ ಉಪನಿಷತ್ತು (ಆತ್ಮನೇ ಬ್ರಹ್ಮ). ಇವುಗಳ ಮೇಲೆ ರೂಪುಗೊಂಡಿದ್ದು ಅದ್ವೈತ ಶಾಸ್ತ್ರ. ಧರ್ಮ, ಅರ್ಥ, ಕಾಮ, ಮೋಕ್ಷ ಎನ್ನುವ ಮನುಷ್ಯ ಜೀವನದ ನಾಲ್ಕು ಧ್ಯೇಯಗಳನ್ನು ಅದು ಸಾರಿ ಹೇಳಿತು. ಆದಿ ಶಂಕರ ಎನ್ನುವ ಅಪರೂಪದ ವ್ಯಕ್ತಿ ಅದನ್ನು ಜನ ಸಾಮಾನ್ಯರಿಗೆ ಸರಳವಾಗಿ ತಿಳಿಸಿ ಹೋದ. ಆತನ ಮುಂಚಿನ ಮತ್ತು ನಂತರದ ಅನೇಕರು (ಬುದ್ಧ, ಮಹಾವೀರ, ಬಸವ, ಸ್ವಾಮಿ ವಿವೇಕಾನಂದ) ಮನುಷ್ಯನಿಗೆ ತನ್ನ ಸ್ವಾರ್ಥದಿಂದ ಹೊರ ಬಂದು ಜೀವಿಸಲು ಪ್ರೇರೇಪಣೆ ನೀಡಿದರು.

 

ಇಂದಿಗೂ ಪ್ರತಿ ಊರಿನಲ್ಲಿ, ನಮ್ಮ ನಿಮ್ಮೆಲ್ಲರ ನಡುವೆ, ಪ್ರಾಮಾಣಿಕತೆಯಿಂದ ಸಮಾಜ ಸೇವೆ ಮಾಡುತ್ತಿರುವರು ಇದ್ದಾರಲ್ಲ. ಅವರನ್ನು ಆಳುತ್ತಿರುವ ಭಾವ ಸ್ವಾರ್ಥವೋ, ನಿಸ್ವಾರ್ಥವೋ ಎಂದು ಗಮನಿಸಿ ನೋಡಿ. ಅವರಿಗೆ ಆಸ್ತಿ-ಅಹಂಕಾರದ ಪ್ರತಿಷ್ಠೆ ಏಕಿಲ್ಲ ಎಂದು ವಿಚಾರ ಮಾಡಿ ನೋಡಿ. ಗಂಗಾ ನದಿ ತಟದಲ್ಲಿ ಎಷ್ಟೋ ಸಾಧು-ಸಂತರು ವಾಸ ಮಾಡಿಕೊಂಡಿರುತ್ತಾರಲ್ಲ. ಅವರ ಹೆಸರೇನು ಎಂದು ಕೇಳಿ ನೋಡಿ. 'ಬಾಬಾ ಮುರ್ದಾ ಹೋತಾ ಹೈ' ಎನ್ನುವ ಉತ್ತರ ಬರುತ್ತದೆ. ತಮ್ಮ ಪೂರ್ವಾಶ್ರಮದ ಹೆಸರು, ಗುರುತುಗಳನ್ನು ಬಿಟ್ಟು ಅವರು ಹುಡುಕುತ್ತಿರುವುದು ಏನನ್ನು? ನಾವು ಮಾತ್ರ ನಮ್ಮ ಹೆಸರು, ಪ್ರತಿಷ್ಠೆಗೆ ಗಂಟು ಬಿದ್ದಿರುವುದು ಏಕೆ?

 

ಪ್ರಕೃತಿ ಎಲ್ಲರನ್ನು ಸ್ವಾರ್ಥಿಯಾಗಿಯೇ ಹುಟ್ಟಿಸಿತು. ಹಾಗೆಯೆ ವಿಚಾರ ಮಾಡುವ ಶಕ್ತಿ, ವಿವೇಕವನ್ನು ಕೂಡ ಕೊಟ್ಟಿತು. ಸ್ವಾರ್ಥವನ್ನೇ ಆಯುಧವನ್ನಾಗಿಸಿಕೊಂಡ ಹಿಟ್ಲರ್ ತನ್ನ ಹಿತಕ್ಕಾಗಿ ಲಕ್ಷಾಂತರ ಜನರ ಸಾವಿಗೆ ಕಾರಣನಾದರೆ, ಮದರ್ ತೇರೇಸಾ ನೊಂದ ಜನರ ಸೇವೆಯಲ್ಲಿ ತನ್ನ ಜೀವನದ ಬೆಳಕು ಕಂಡಳು. ಒಬ್ಬ ಸ್ವಾರ್ಥ ಕೂಪದಿಂದ ಹೊರ ಬರದೇ ಹೋದರೆ, ಇನ್ನೊಬ್ಬಳಿಗೆ ಅದನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು.

 

ಪ್ರಕೃತಿ ನಮ್ಮಲ್ಲಿ ಅಸಮಾನತೆಯನ್ನು ಸೃಷ್ಟಿಸುತ್ತದೆ. ಒಬ್ಬರ ಮೇಲೆ ಇನ್ನೊಬ್ಬರು ಪೈಪೋಟಿ ಮಾಡುವಂತೆ ಮಾಡುತ್ತದೆ. ಆದರೆ ಆ ಅಸಮಾನತೆಯ ಅಂತರ ಕಡಿಮೆ ಮಾಡಲು ಪ್ರಯತ್ನಿಸುವ ಕೆಲವರಾದರೂ ಇದ್ದಾರಲ್ಲ. ಅವರಿಂದ ನಮ್ಮ ಬದುಕು ಸ್ವಲ್ಪ ಮಟ್ಟಿಗಾದರೂ ಸಹನೀಯವಾಗಿದೆ. ನಿಸ್ವಾರ್ಥ ಸೇವೆಗೆ ನಿಂತವರು ಮುಕ್ತಿ ಪಥದತ್ತ ಹೆಜ್ಜೆ ಹಾಕಿದರೆ, ಉಳಿದವರು ಕರ್ಮದ ತಿರುಗಣಿಯಲ್ಲೇ ಸುತ್ತುತ್ತಾರೆ. ಪ್ರಕೃತಿಯನ್ನು ಗೆದ್ದವರು, ಪ್ರಕೃತಿಯಲ್ಲಿ ಲೀನವಾಗುತ್ತಾರೆ. ಉಳಿದವರು ಪ್ರಕೃತಿಯ ನಿಯಮಗಳಿಗೆ ಅನುಸಾರವಾಗಿ ಬದುಕುತ್ತಾರೆ.

Wednesday, June 30, 2021

ನಿಸರ್ಗ ನಮ್ಮಲ್ಲಿ ಹುಟ್ಟಿಸಿದ ಸ್ಪರ್ಧೆ

ಪ್ರಾಣಿ, ಪಕ್ಷಿ, ಸರೀಸೃಪಗಳ ವಿಚಾರ ಶಕ್ತಿ ಮನುಷ್ಯರಿಗೆ ಹೋಲಿಸಿದರೆ ತುಂಬಾ ಕಡಿಮೆ. ಅವುಗಳ ತಲೆಯಲ್ಲಿ ಓಡುವುದು ಪ್ರಮುಖವಾಗಿ ನಾಲ್ಕೇ ವಿಷಯಗಳು. ಆ ದಿನದ ಆಹಾರ, ತಾವು ಇನ್ನೊಂದು ಪ್ರಾಣಿಗೆ ಆಹಾರವಾಗದಂತೆ ಕಾಪಾಡಿಕೊಳ್ಳುವುದು, ಸಂಗಾತಿಯನ್ನು ಹುಡುಕಿಕೊಳ್ಳುವುದು ಮತ್ತು ತಮ್ಮ ಮರಿಗಳನ್ನು ಬೆಳೆಸುವುದು. ಜಿಂಕೆಗೆ ಹಸಿರು ಹುಲ್ಲು ಹುಡುಕುವುದು ಎಷ್ಟು ಮುಖ್ಯವೋ, ಮರೆಯಲ್ಲಿ ಅಡಗಿರುವ ಹುಲಿಯ ಬಾಯಿಗೆ ತಾನು ಆಹಾರವಾಗದಂತೆ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಈ ಸ್ಪರ್ಧೆಯಲ್ಲಿ, ಸದಾ ಜಾಗರೂಕತೆಯಿಂದ ಇರುವ ಮತ್ತು ಅಗತ್ಯ ಬಿದ್ದಾಗ ಅತಿ ವೇಗದಲ್ಲಿ ಓಡಿ ಪ್ರಾಣ ಉಳಿಸಿಕೊಳ್ಳುವ ಜಿಂಕೆಗಳು ಮಾತ್ರ ಪ್ರೌಢಾವಸ್ಥೆಗೆ ತಲುಪಲು ಸಾಧ್ಯ. ಹಾಗಾಗಿ ಆ ಗುಣ ಲಕ್ಷಣಗಳನ್ನು ಉಳ್ಳ ಜಿಂಕೆಗಳ ಸಂತತಿ ಮಾತ್ರ ಉಳಿದುಕೊಂಡು ಬಂದಿತು. ಬೇಟೆಗಾರ ಪ್ರಾಣಿಗಳಾದ ಸಿಂಹಗಳಲ್ಲಿ, ಪ್ರತಿಸ್ಪರ್ಧಿ ಸಿಂಹಗಳೊಡನೆ ಕಾದಾಡಿ ಗೆದ್ದ ಸಿಂಹಕ್ಕೆ ಮಾತ್ರ ಸಂತತಿ ಮುಂದುವರೆಸುವ ಅವಕಾಶ ಉಂಟು. ಹಾಗಾಗಿ ಸಿಂಹಗಳಲ್ಲಿ ಕಾದಾಟಕ್ಕೆ ಅನುಕೂಲವಾಗುವ ಭೀಕರತೆಯ ಅಂಶಗಳು ವಂಶವಾಹಿಯಾದವು. ಅಬ್ಬರಿಸುವ ಸಿಂಹ ಕಾಡಿನ ರಾಜನಾದರೆ, ಅವನ ಗುಣ ಲಕ್ಷಣಗಳು ಹೇಗಿದ್ದರೆ ಚೆನ್ನ ಎಂದು ನಿರ್ಧರಿಸುವ ಹೆಣ್ಣು ಸಿಂಹ ನ್ಯಾಚುರಲ್ ಸೆಲೆಕ್ಷನ್ ಮಾಡುವ ಕಿಂಗ್ ಮೇಕರ್ ಆಯಿತು. ನವಿಲುಗಳಲ್ಲಿ ಇರುವುದು ಸೌಂದರ್ಯದ ಸ್ಪರ್ಧೆ. ಆಕರ್ಷಕ ಗರಿಯನ್ನು ಹೊಂದದೆ ಇದ್ದ ನವಿಲುಗಳು ಬ್ರಹ್ಮಚಾರಿಗಳಾಗಿ ಉಳಿದವು. ವೈರಿಗಳ ಜೊತೆ ಕಾದಾಟಕ್ಕೆ ಮತ್ತು ಬೇರೆ ಯಾವುದೇ ಉಪಯೋಗಕ್ಕೆ ಬಾರದ ತನ್ನ ಗರಿಯನ್ನು ಮುಚ್ಚಿಕೊಂಡು ಓಡುವ ನವಿಲು, ಗರಿಗಳು ತನಗೆ ಹೊರೆಯಾದರೂ ತನ್ನ ಸಂತತಿ ಮುಂದುವರೆಸುವದಕ್ಕೆ, ಹೆಣ್ಣುಗಳನ್ನು ಆಕರ್ಷಿಸುವುದಕ್ಕೆ ಪೋಷಿಸುತ್ತದೆ. ವಂಶ ಮುಂದುವರೆಯುವುದಕ್ಕೆ ಅದು ಪ್ರಕೃತಿ ತಂದಿಟ್ಟ ಅನಿವಾರ್ಯತೆ.


ಮನುಷ್ಯ ವಿಕಾಸ ಹೊಂದುತ್ತ ಪ್ರಾಣಿ ಲೋಕಕ್ಕಿಂತ ಭಿನ್ನ ಜೀವನ ಮಾಡುತ್ತಾನೆ. ಅವನು ಕೃಷಿ ಕಲಿತ ನಂತರ ಪ್ರತಿ ದಿನ ಆಹಾರಕ್ಕಾಗಿ ಅಲೆಯಬೇಕಾಗಿಲ್ಲ. ಮತ್ತು ಅವನಿಗೆ ನೈಸರ್ಗಿಕವಾಗಿ ಯಾವುದೇ ಶತ್ರುಗಳಿಲ್ಲವಾದ್ದರಿಂದ ಅವನು ಪ್ರತಿ ಕ್ಷಣ ಯಾವ ಕಡೆಯಿಂದ ಆಪತ್ತು ಬಂದಿತು ಎಂದು ವಿಚಾರ ಮಾಡಬೇಕಿಲ್ಲ. ಆದರೂ ಜೀವ ವಿಕಾಸದ ಪ್ರವೃತ್ತಿಗಳು ಅವನಲ್ಲಿ ಇನ್ನು ಹಾಸು ಹೊಕ್ಕಾಗಿದೆ. ಅವನಿಗೆ  ಸಂಗಾತಿಯನ್ನು ಆಕರ್ಷಿಸಲು ನವಿಲಿನ ಹಾಗೆ ಗರಿ ಇಲ್ಲ. ಬದಲಿಗೆ ಆಕರ್ಷಕ ಮುತ್ತಿನ ಹಾರದ ಕಾಣಿಕೆ ನೀಡಿ ತನ್ನ ಸಂಗಾತಿಗೆ ತನ್ನ ಶ್ರೀಮಂತಿಕೆಯ ಸಾಮರ್ಥ್ಯ ತೋರಿಸುತ್ತಾನೆ. ಹಾಸ್ಯ ಮಾತುಗಳನ್ನಾಡುತ್ತಾ, ತಾನೆಷ್ಟು ಚತುರ ಎಂದು ಬಿಂಬಿಸಲು ಪ್ರಯತ್ನಿಸುತ್ತಾನೆ. ಹೆಣ್ಣು ತಾನು ಉಡುವ ವಸ್ತ್ರಾಭರಣಗಳಲ್ಲಿ ಕುಶಲತೆ ತೋರಿಸುತ್ತಾಳೆ. ತನ್ನ ಸೊಂಟ ಬಳುಕಿಸಿ ತನಗೆ ಸರಿಯಾದ ಜೋಡಿಯನ್ನು ಆಕರ್ಷಿಸುತ್ತಾಳೆ. ಕಾಡಿನಲ್ಲಿ ಪ್ರಾಣಿಗಳು ಹೆಣ್ಣಿಗಾಗಿ ಕಾದಾಡುತ್ತವೆ. ಮನುಷ್ಯನು ಹಿಂದೆ ರಾಜ-ಮಹಾರಾಜರ ಕಾಲದಲ್ಲಿ ಹೆಣ್ಣಿಗಾಗಿ ಕಾದಿದ್ದು ಉಂಟು. ಆದರೆ ಇಂದು ಅದು ಮಾರ್ಪಾಡಾಗಿ, ಸೌಂದರ್ಯ-ಶ್ರೀಮಂತಿಕೆ-ಸಾಮಾಜಿಕ ಸ್ಥಾನಮಾನ ಇವುಗಳ ಮೇಲೆ ಗಂಡು-ಹೆಣ್ಣು ಜೋಡಿಯ ಏರ್ಪಾಡುಗಳಾಗುತ್ತವೆ. ಪ್ರಾಣಿಗಳು ದೈಹಿಕ ಶಕ್ತಿಯಿಂದ ಹೆಚ್ಚಿನ ಸಾಮಾಜಿಕ ಸ್ಥಾನಮಾನ ಹೊಂದಲು ಪ್ರಯತ್ನಿಸಿದರೆ, ನಾವುಗಳು ನಮ್ಮ ಓದು, ವರಮಾನ, ನಾವು ಧರಿಸುವ ವಸ್ತ್ರ, ಓಡಿಸುವ ಕಾರು, ನಮ್ಮ ಉದ್ಯೋಗ ತಂದು ಕೊಡುವ ಅಧಿಕಾರ ಇವುಗಳ ಮೂಲಕ ಸಾಮಾಜಿಕ ಸ್ಥಾನಮಾನ ಗಳಿಸಲು ಮತ್ತು ಅದರ ಮೂಲಕ ಒಳ್ಳೆಯ ಸಂಗಾತಿಯನ್ನು ಆಕರ್ಷಿಸಲು ಮತ್ತು ಸಂತತಿ ಮುಂದುವರೆಸಲು ಜೀವನ ಸವೆಸುತ್ತೇವೆ. ಮನುಷ್ಯನ ಜೀವನ ರೀತಿಗಳು ಪ್ರಾಣಿಗಳಿಗಿಂತ ಬೇರೆ ಇರಬಹುದು ಆದರೆ ಉದ್ದೇಶ ಮಾತ್ರ ಒಂದೇ. ಪ್ರಕೃತಿಗೆ ಮನುಷ್ಯನು ಕೂಡ ಒಂದು ಪ್ರಾಣಿಯೇ.


ಮನುಷ್ಯನು ತನ್ನ ಜೀನ್ ಗಳನ್ನೂ ಸೃಷ್ಟಿಸುವುದಿಲ್ಲ ಬದಲಿಗೆ ಜೀನ್ ಗಳು ಮನುಷ್ಯನನ್ನು ಸೃಷ್ಟಿಸುತ್ತವೆ ಎಂದು ನಾವು ಕಲಿತುಕೊಂಡಾಗಿದೆಯಲ್ಲ. ಆ ಜೀನ್ ಗಳು ಮನುಷ್ಯ ಸೇರಿದಂತೆ ಎಲ್ಲ ಪ್ರಾಣಿ, ಪಕ್ಷಿಗಳಲ್ಲಿ ತಾನು ಸ್ವಾರ್ಥಿಯಾಗುವಂತೆ, ಮೊದಲು ತಾನು ಆಹಾರ ಹುಡುಕಿ ಕೊಳ್ಳುವಂತೆ, ಹಾಗೆಯೇ ಕಾದಾಟ ಮಾಡಿದರು ಸರಿ, ಮೋಸದಿಂದ ಆದರೂ ಸರಿ ತನ್ನ ವಂಶವನ್ನು ಬೆಳೆಸುವಂತೆ ಪ್ರಚೋದಿಸುತ್ತವೆ. ಒಬ್ಬ ವ್ಯಕ್ತಿ ಸತ್ತರೂ, ಅವನ/ಅವಳ ಜೀನ್ ಗಳು ಅವರ ಮಕ್ಕಳ ಪೀಳಿಗೆಗೆ ಹರಿದು ಹೋಗಿ, ತಾವು ಬದುಕಿಕೊಳ್ಳುತ್ತವೆ. ಹಾಗೆಯೇ ಆ ಪೀಳಿಗೆಯಲ್ಲೂ, ಮುಂದಿನ ಪೀಳಿಗೆಗೆ ಹರಿದು ಹೋಗುವ ಏರ್ಪಾಡು ಮಾಡಿಕೊಂಡು ಚಿರಂಜೀವಿಯಾಗುತ್ತವೆ.


ಸ್ವಾರ್ಥ ಎನ್ನುವುದು ನಿಸರ್ಗದಲ್ಲಿ ಬದುಕಿರುವ ಎಲ್ಲ ಜೀವಿಗಳಲ್ಲಿ ಇರುವ ಸಹಜ ಸ್ವಭಾವ. ಮೊದಲಿಗೆ ತಾನು, ತನ್ನ ಊಟ, ತನ್ನ ಸಂಗಾತಿ, ತನ್ನ ಮಕ್ಕಳು. ಅವರ ಏಳಿಗೆಗೆ ಬೇರೆಯವರು ಜೀವ ತೆರಬೇಕಾದರೆ ಅದು ಆಗಿ ಹೋಗಲಿ ಎನ್ನುವುದು ಎಲ್ಲ ಜೀವಿಗಳಲ್ಲಿ ಜೀನ್ ಗಳು ಬರೆದ ಸಾಂಕೇತಿಕ ಭಾಷೆ. ಹಾಗಾಗಿ ಪ್ರಕೃತಿ ಯಾವ ಕಾಲಕ್ಕೂ ಆದರ್ಶ ಎನ್ನಿಸುವ ಸಮಾಜ ಸೃಷ್ಟಿಸಲಾರದು. ಇಲ್ಲಿ ಪ್ರತಿ ದಿನ ನಿಮ್ಮ ಇರುವನ್ನು ನೀವು ಧೃಢ ಪಡಿಸಬೇಕು. ಇಲ್ಲದಿದ್ದರೆ ಪ್ರಕೃತಿ ನಿಮ್ಮನ್ನು ಕಡೆಗಣಿಸಿ ಇತರೆ ಪ್ರಬಲರಿಗೆ ಅವಕಾಶ ಮಾಡಿಕೊಡುತ್ತದೆ.


References:

1. The Rise and Fall of The Third Chimpanzee by Jared Diamond

2. The Red Queen by Matt Ridley

3. The Selfish Gene by Richard Dawkins


Friday, June 25, 2021

ಯಾವಾಗ ಕೆಟ್ಟವರಾಗಬೇಕು ಎಂದು ತಿಳಿಯದೆ ಹೋದರೆ

ನಮಗೆ ಬೇಕೋ ಬೇಡವೋ, ಕೆಲವು ಸಲ ನಮಗೆ ಕೆಟ್ಟದು ಮಾಡಬೇಕು ಎನ್ನುವ ಉದ್ದೇಶ ಹೊಂದಿರುವ ಜನರ ನಡುವೆ ಸಿಕ್ಕಿ ಹಾಕಿಕೊಂಡು ಬಿಡುತ್ತೇವೆ. ನಮಗೆ ಸರಿ ತಪ್ಪು ಪ್ರಶ್ನಿಸುವ ಆ ಜನ ತಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ವಿಚಾರ ಮಾಡಿರುವುದಿಲ್ಲ. ತಾವೇ ಅನ್ಯಾಯ ಮಾಡಿ ನಮಗೆ ಸಾಕ್ಷಿ ಕೇಳುವ ಜನರನ್ನು ನಾನು ನೋಡಿದ್ದೇನೆ. ನ್ಯಾಯ ನೀತಿ ಪಾಲನೆ ಮಾಡಬೇಕಾದದ್ದು ಪರರು, ತಾವು ಏನು ಮಾಡಿದರು ನಡೆಯುತ್ತೆ ಎನ್ನುವ ಆಕ್ರಮಣಕಾರಿ ಪ್ರವೃತ್ತಿಯನ್ನು ಆ ಜನ ಹೊಂದಿರುತ್ತಾರೆ. ಅವರಿಗೆ ನೀವು ಸೌಮ್ಯ ಸ್ವಭಾವದ, ಹೊಂದಿಕೊಂಡು ಹೋಗುವ ತರಹದ ಮನುಷ್ಯರಾಗಿ ಕಂಡರೆ ಸಾಕು, ಅವರು ನಿಮ್ಮ ಶೋಷಣೆಗೆ ಇಳಿದು ಬಿಡುತ್ತಾರೆ.

 

ನಿಮಗೆ ಶಾಲಾ ದಿನಗಳಲ್ಲಿ, ಯಾರ ಜೊತೆಗೂ ಜಗಳವಾಡದ ಹುಡುಗನಿಗೆ ಹೆಚ್ಚಿನ ಅನ್ಯಾಯವಾಗುವುದು ನೆನಪಿರಬೇಕು. ಹಾಗೆಯೇ ತಮ್ಮ ತಂಟೆಗೆ ಬಂದರೆ ನೋಡು ಎಂಬಂತಿರುವ ಹುಡುಗರ ತಂಟೆಗೆ ಯಾರೂ ಹೋಗದೆ ಇರುವುದು ನೆನಪಿರಬೇಕು. ದೊಡ್ಡವರ ಜಗತ್ತು ತುಂಬಾ ಬೇರೆಯೇನಲ್ಲ. ನೀವು ಯಾರ ತಂಟೆಗೂ ಹೋಗದ, ನಿರುಪದ್ರವಿ ಜೀವಿಯ ಹಾಗೆ ನಿಮ್ಮನ್ನು ತೋರ್ಪಡಿಸಿಕೊಂಡರೆ ನಿಮ್ಮ ಕತೆ ಮುಗಿಯಿತು. ನಿಮ್ಮ ಮೇಲೆ ದಬ್ಬಾಳಿಕೆ ಆಗುವುದು ಶತಸಿದ್ಧ. ಹಾವು ಕಚ್ಚದಿದ್ದರೆ, ಭುಸ್ ಆದರೂ ಅನ್ನಬೇಕಲ್ಲವೇ? ಇಲ್ಲದಿದ್ದರೆ ಯಾರು ಬೇಕಾದರೂ ಅದರ ಬಾಲ ಹಿಡಿದು ಎಳೆದಾಡಿಬಿಡುತ್ತಿದ್ದರು. ಅದಕ್ಕೆ ಅದು ಹೆಡೆ ಎತ್ತಿ, ನೋಡು ನನ್ನ ತಂಟೆಗೆ ಬಂದರೆ ಎಂದು ಭುಸ್ ಅನ್ನುತ್ತದೆ. ಆ ಮೂಕ ಪ್ರಾಣಿಯ ಧೈರ್ಯವನ್ನು ನಮ್ಮ ನಿರುಪದ್ರವಿ ಮನುಷ್ಯರು ತೆಗೆದುಕೊಳ್ಳಬೇಕು. ತಾಳ್ಮೆಯ ಸೀಮಾ ರೇಖೆಯನ್ನು ದಾಟಿದರೆ, ಯಾವುದೇ ಹೋರಾಟಕ್ಕೂ ನೀವು ಸಿದ್ಧ, ಸೋಲು ಗೆಲುವಿನ ಬಗ್ಗೆ ನೀವು ವಿಚಾರ ಮಾಡದೆ ಜಗಳ ಕಾಯಲು ನೀವು ಹಿಂಜರಿಯುವುದಿಲ್ಲ ಎನ್ನುವ ಸಂದೇಶ ನಿಮ್ಮಿಂದ ಸ್ಪಷ್ಟವಾಗಿ ಹೋದರೆ, ಬಹುತೇಕ ಜಗಳಗಳು ಆರಂಭದಲ್ಲೇ ಮುಗಿದು ಹೋಗುತ್ತವೆ.

 

ನೀವು ಕೆಟ್ಟವರಾಗಿ ಬಿಡಿ ಎಂದು ನಾನು ಹೇಳುತ್ತಿಲ್ಲ. ಆದರೆ ನಿಮಗೆ ಅನ್ಯಾಯ ಮಾಡುವ ಉದ್ದೇಶ ಹೊಂದಿದ ಜನರು ನಿಮ್ಮ ಸಂಪರ್ಕಕ್ಕೆ ಬಂದಾಗ, ನನಗೂ ಕೂಡ ಕೆಟ್ಟವನಾಗಲು ಬರುತ್ತದೆ ಎನ್ನುವ ಸಂದೇಶ ಪ್ರತ್ಯಕ್ಷವೋ  ಪರೋಕ್ಷವೋ ನೀವು ನೀಡಲೇಬೇಕು. ಕೆಲವರು ಮೋಸ, ಅನ್ಯಾಯದಲ್ಲಿ ನುರಿತವರು ಇರುತ್ತಾರಲ್ಲ. ಅವರ ಮುಖಾಮುಖಿ ನಿಮಗೆ ಆದಾಗ, ಅವರದೇ ಕಲೆಗಳಾದ ಮಾಹಿತಿ ತಿರುಚುವುದು, ಸುಳ್ಳು ಅಪವಾದ ಸೃಷ್ಟಿಸುವುದು, ದೈಹಿಕ ಜಗಳಗಳಿಗೆ ಇಳಿಯುವುದು ಇವುಗಳನ್ನು ನೀವು ಕೂಡ ಅಗತ್ಯಕ್ಕೆ ತಕ್ಕಂತೆ ಉಪಯೋಗ ಮಾಡಬೇಕು. ಇಲ್ಲದೆ ಹೋದರೆ ಆ ಜನ ನಿಮ್ಮ ಪ್ರಾಣ ಹಿಂಡದೆ ಬಿಡುವುದಿಲ್ಲ. ಮೂಕ ಬಸವನಾಗಿ, ನೊಗ ಹೊತ್ತು, ಬಾರುಕೋಲು ಏಟು ತಿನ್ನುತ್ತಿರೋ, ಇಲ್ಲವೇ ಜೇನುಹುಳುಗಳ ಹಾಗೆ ತಂಟೆಗೆ ಬಂದವರನ್ನು ಮುಖ-ಮೂತಿ ನೋಡದೆ ಚುಚ್ಚಿ, ಸ್ವತಂತ್ರವಾಗಿ ಬದುಕುತ್ತಿರೋ ಎನ್ನುವ ಆಯ್ಕೆ ನಿಮಗೆ ಬಿಟ್ಟಿದ್ದು.

 

ಜನರನ್ನು, ಸಮಾಜವನ್ನು ನೀವು ಸಂತೋಷ ಪಡಿಸಲು ಹೋಗಬೇಡಿ. ಸ್ವಾರ್ಥ ಸಮಾಜದಲ್ಲಿ ಬಹುತೇಕ ಜನರು, ಕಣ್ಣಿಗೆ ಕಂಡದ್ದನ್ನು, ತಾವು ಆಸೆ  ಪಟ್ಟದ್ದನು ತಮ್ಮದಾಗಿಸಿ ಕೊಳ್ಳಲು ಹೊರಡುತ್ತಾರೆ. ಮಾರ್ಗ ನ್ಯಾಯದ್ದೋ, ಅನ್ಯಾಯದ್ದೋ ಎನ್ನುವ ವಿವೇಚನೆ ಅವರಿಗೆ ಬೇಕಿಲ್ಲ.  ಅವರಿಗೆ ನೀವು ಸುಲಭದ ತುತ್ತಾಗಬೇಡಿ. ಒಳ್ಳೆಯತನ ನಿಮ್ಮ ಹೃದಯದಲ್ಲಿರಲಿ. ಆದರೆ ನಿಮ್ಮ ಕೈ-ಬಾಯಿಗಳು ಅಗತ್ಯ ಬಿದ್ದಾಗ ಬಿರುಸಾಗಿರಲಿ. ಯಾವಾಗ ಕೆಟ್ಟವರಾಗಬೇಕು ಎಂದು ನಿಮಗೆ ಮೊದಲೇ ಗೊತ್ತಿರಲಿ.