ಯಾವುದೇ ಮನುಷ್ಯ-ಮನುಷ್ಯ ಸಂಬಂಧಗಳು ಗಟ್ಟಿಯಾಗಿ ನಿಲ್ಲಬೇಕೆಂದರೆ, ಅದರಲ್ಲಿ ಇಬ್ಬರ ಕೊಡುಗೆಯು ಸರಿ ಸಮನಾಗಿ ಇರಬೇಕು ಅಲ್ಲವೇ? ಒಮ್ಮುಖವಾದ ಸಂಬಂಧ, ಸಂಬಂಧ ಎನಿಸಿಕೊಳ್ಳದು. ಅದು ಬರೀ ಬಂಧವಾಗುತ್ತದೆ. ಇಲ್ಲದಿದ್ದರೆ ಕರ್ತವ್ಯವೋ, ಕಟ್ಟುಪಾಡೋ ಎನಿಸಿಕೊಳ್ಳಬಹುದು ಅಷ್ಟೇ. ಗಮನಿಸಿ ನೋಡಿದರೆ ನಮ್ಮ ಸಮಾಜದಲ್ಲಿನ ಎಷ್ಟೋ ಸಂಬಂಧಗಳು, ತಂದೆ-ಮಗ, ಅಣ್ಣ-ತಮ್ಮ, ಗಂಡ-ಹೆಂಡತಿ ಇವುಗಳೆಲ್ಲ ಸಂಬಂಧಗಳಾಗದೆ ಕೇವಲ ಬಂಧಗಳಾಗಿ ಉಳಿದುಬಿಡುತ್ತವೆ. ಏಕೆಂದರೆ ಇವುಗಳಲ್ಲಿ ಸರಿ ಸಮಾನ ಕೊಡುಗೆಯ ಕೊರತೆ. ಅಥವಾ ಅವರಿಬ್ಬರಲ್ಲಿ ಒಬ್ಬರಿಗೆ ತಾನು ಹೆಚ್ಚು ಎಂದು ಶೋಷಣೆಗೆ ಇಳಿಯುವ ಹುಚ್ಚು. ಇಲ್ಲವೇ ಇನ್ನೊಬ್ಬರ ನೋವಿಗೆ ಸ್ಪಂದಿಸದ ಅಥವಾ ಖುಷಿ ಪಡುವ ಪ್ರವೃತ್ತಿ.
ತನಗೆ ಮರ್ಯಾದೆ ಇಲ್ಲ ಎಂದುಕೊಳ್ಳುವ ತಂದೆ, ತನ್ನಿಷ್ಟದಂತೆ ನಡೆಯಲು ಬಿಡುತ್ತಿಲ್ಲ ಎನ್ನುವ ಮಗ, ಇವಳ ಜೊತೆ ಹೇಗೆ ಬದುಕಬೇಕೋ ಎಂದುಕೊಳ್ಳುವ ಗಂಡ, ತನ್ನನ್ನು ಸರಿಯಾಗಿ ಬಾಳಿಸುತ್ತಿಲ್ಲ ಎಂದು ದೂರುವ ಹೆಂಡತಿ, ಇವರೆಲ್ಲರೂ ತಮ್ಮ ಸಂಬಂಧಗಳಲ್ಲಿ ಅಸಮಾನತೆಯನ್ನು ಹುಡುಕಿ ತರುತ್ತಾರೆ. ಆಮೇಲೆ ಶುರುವಾಗುವುದು ಅವರವರ ಕರ್ತವ್ಯಗಳ ಪಾಲನೆ ಬಗ್ಗೆ ಆರೋಪ, ಪ್ರತ್ಯಾರೋಪ. ಅಲ್ಲಿಗೆ ಸಂಬಂಧ ಸತ್ತು ಹೋದ ನಂತರ ಅವರ ನಡುವೆ ಉಳಿಯುವುದು ಸಾಮಾಜಿಕ ಕಟ್ಟು ಪಾಡಿನ ಪಾಲನೆ ಮಾತ್ರ.
ಅವರೆಲ್ಲರೂ ತಮ್ಮ ದೋಷಾರೋಪಣೆಗೆ ಮುಂಚೆ ಆ ಸಂಬಂಧಕ್ಕೆ, ಅದನ್ನು ಸಿಹಿಗೊಳಿಸುವದಕ್ಕೆ, ಗಟ್ಟಿಯಾಗಿಸುವುದಕ್ಕೆ, ಕರ್ತವ್ಯ ಪಾಲನೆಯನ್ನು ಮೀರಿ ತಮ್ಮ ಕೊಡುಗೆಯ ಬಗ್ಗೆ ಸ್ಪಷ್ಟತೆ ಹೊಂದಿದ್ದರೆ, ಆ ಸಂಬಂಧ ಪಡೆದುಕೊಳ್ಳುವ ತಿರುವು ಬೇರೆ. ಸಂಬಂಧ ಅನ್ನುವುದು ವ್ಯಾಪಾರ ಅಲ್ಲದೆ ಇರಬಹುದು. ಆದರೆ ನಾವು ಇನ್ನೊಬ್ಬರಿಗೆ ಆಣೆ, ಭಾಷೆ ತೆಗೆದುಕೊಳ್ಳುವ ಮುನ್ನ ನಾವು ಯಾವ ಆಣೆಗೆ ಸಿದ್ಧರಿದ್ದೇವೆ ಎನ್ನುವುದು ತಿಳಿಸಬೇಕೆಲ್ಲವೇ? ಪುರಂದರ ದಾಸರ ಹಾಡು ಕೇಳಿದ್ದೀರಾ?
"ತನುಮನಧನದಲಿ ವಂಚಕನಾದರೆ ಎನಗೆ ಆಣೆ
ರಂಗಾ ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ
ಕಾಕು ಮನುಜರ ಸಂಗವ ಮಾಡಿದರೆ ಎನಗೆ ಆಣೆ
ರಂಗಾ ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ
ಹರಿ ನಿನ್ನಾಶ್ರಾಯ ಮಾಡದಿದ್ದರೆ ಎನಗೆ ಆಣೆ
ರಂಗಾ ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ
ಎನಗೆ ಆಣೆ ನಿನಗೆ ಆಣೆ
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ"
ಪುರಂದರ ದಾಸರಿಗೆ ತಮ್ಮ ಇಷ್ಟ ದೈವದ ಮೇಲೆ ಆಣೆ ಹಾಕುವ ಆತ್ಮಸ್ಥೈರ್ಯ ತಂದುಕೊಟ್ಟಿದ್ದು ಅವರು ತಮಗೆ ತಾವು ಹಾಕಿಕೊಳ್ಳುವ ಆಣೆಯಿಂದ. ಅವರ ಸಂಬಂಧ ಮನುಷ್ಯ-ದೇವರ ನಡುವಿನದಾದರೂ ಅದು ಒಂದು ಗಟ್ಟಿ ತಳಹದಿಯ ಮೇಲಿತ್ತು. ಹಾಕಿಕೊಂಡ ಆಣೆಗಳು ಸಂಬಂಧಗಳ ಮೇಲಿನ ನಂಬುಗೆಯನ್ನು ಹೆಚ್ಚಿಸಿದವು. ಆ ಸಂಬಂಧದ ಮಾಧುರ್ಯ, ಕಂಪು ಅವರಿಬ್ಬರಿಗೆ ಮೀಸಲಾಗದೆ ಇತರರಿಗೂ ಪಸರಿಸಿ ಪ್ರಭಾವಗೊಳಿಸಿತು. ನಮಗೆ ದಾಸರಿಗಿದ್ದ ಶೃದ್ಧೆ ಇಲ್ಲ. ಕಾಯಿ ಒಡೆದು, ಕೋಟಿ ಕೇಳುವ ನಮಗೆ ದೇವರು ಒಲಿಯುವುದಾದರೂ ಹೇಗೆ?
ನಾವು ಬದುಕುವ ರೀತಿ ನೋಡಿ. ನಮಗೆ ನಾವು ಯಾವ ಆಣೆಗೂ ತಯ್ಯಾರಿಲ್ಲ. ಅದೆಲ್ಲ ಮಾಡಬೇಕಾದ್ದು ಇನ್ನೊಬ್ಬರು ಎನ್ನುವ ಮನೋಭಾವದವರು. ಅದಕ್ಕೆ ನಮ್ಮ ಸಂಬಂಧಗಳಲ್ಲಿ ಕಂಪಿಲ್ಲ. ನಾವು ದಾಸರ ಪದಗಳನ್ನು ಕೇಳುತ್ತೇವೆ. ಹಾಗೆಯೇ ಮುಂದಿನ ಜಗಳಕ್ಕೆ ಸಿದ್ಧರಾಗುತ್ತೇವೆ. ನೆಮ್ಮದಿಯಿಂದ ಬದುಕಲು ಆಗದೆ, ಕರ್ತವ್ಯ ನಮ್ಮನ್ನು ಸಾಯಲು ಬಿಡದೆ, ಮುಕ್ತಿಯ ಆಸೆ ನಾವು ಬಿಡದೆ, ಲೌಕಿಕ ನಮ್ಮನ್ನು ಬಿಡದೆ ಚಡಪಡಿಸುವ ಹಕ್ಕಿಗಳಾಗಿ ಹೊತ್ತುಗಳೆಯುತ್ತೇವೆ.
No comments:
Post a Comment