ಸಂತೆಗೆ ಜನ ತರಕಾರಿ ಕೊಳ್ಳಲು ಹೋಗುತ್ತಾರೆ. ಆದರೆ ನೆಮ್ಮದಿ ಹುಡುಕಲು ಹೋಗುತ್ತಾರೆಯೇ? ಹಾಗೇಯೇ ಅನಿಸಿತ್ತು ನನಗೆ ಬೆಂಗಳೂರಿನ ಜೀವನ. ಬೆಂಗಳೂರು ಅಲ್ಲಿ ಬದುಕಿದ ಇಪ್ಪತ್ತು ವರುಷಗಳಲ್ಲಿ, ಹಣ, ಅನುಭವ ಎರಡನ್ನು ಯಥೇಚ್ಛವಾಗಿ ಕೊಟ್ಟಿತ್ತಾದರೂ, ಅಲ್ಲಿ ನೆಮ್ಮದಿ ಬಯಸುವ ಯಾರೂ ಬದುಕಲು ಸಾಧ್ಯವಿಲ್ಲ ಎನಿಸಿ, ೪೫ನೇ ವಯಸ್ಸಿನಲ್ಲಿ ಹುಟ್ಟೂರಿಗೆ ಮರಳಿ ಬಂದುಬಿಟ್ಟಿದ್ದೆ. ನಮ್ಮೂರು ಮಸ್ಕಿಯೂ ಸಾಕಷ್ಟು ಬದಲಾಗಿತ್ತಲ್ಲ. ಚಿಕ್ಕವರಾಗಿದ್ದಾಗ ಇಲ್ಲಿ ಎಲ್ಲವರು ಒಳ್ಳೆಯವರೇ ಆಗಿ ಕಾಣುತ್ತಿದ್ದರು. ಅದು ಚಿಕ್ಕ ವಯಸ್ಸಿನ ಮುಗ್ಧತೆಯ ಪ್ರಭಾವವೋ ಏನೋ? ಆದರೆ ಎದುರಿಗಿರುವ ವ್ಯಕ್ತಿಯ ಕಣ್ಣಾಚೆಗಿನ ಮನಸ್ಸನ್ನು ಓದಲು ಕಲಿತ ಮೇಲೆ, ಅಂತಹ ಅನಿಸಿಕೆ ಈಗೇನು ಉಳಿದಿಲ್ಲ. ಆದರೆ ಹಳೆ ಗೆಳೆಯರು, ಚಿಕ್ಕಂದಿನಲ್ಲಿ ಓಡಾಡಿದ ಜಾಗಗಳು, ಹಳೆಯ ನೆನಪುಗಳು ಇಲ್ಲಿ ಉಳಿದುಕೊಂಡಿವೆಯಾದ್ದರಿಂದ, ಬೆಂಗಳೂರಿನಷ್ಟು ಅನುಕೊಲಗಳು ಇಲ್ಲಿ ಇರಲು ಸಾಧ್ಯವಿಲ್ಲವಾದರೂ, ಒಂದು ಸಮಾಧಾನದ ಬದುಕು ಸಾಧ್ಯವಾಗಿತ್ತು. ಇಲ್ಲಿ ಬೇರೆಯ ದಿನಚರಿಗೆ ಹೊಂದಿಕೊಂಡು, ಹತ್ತಾರು ವರುಷಗಳು ಕಳೆದೇ ಹೋದವು.
ಬೆಂಗಳೂರು ಮಾತ್ರ ಬೆಳೆಯಬೇಕೆ? ನಮ್ಮೂರು ಮಸ್ಕಿ ಹಿಂದೆ ಒಂದು ಕಾಲಕ್ಕೆ ಬೆಟ್ಟ ಹತ್ತಿ ಮಲ್ಲಿಕಾರ್ಜುನ ದೇವಸ್ಥಾನದಿಂದ ನೋಡಿದರೆ, ಒಂದು ಕಡೆ ಹಳ್ಳ, ಇನ್ನೊಂದು ಕಡೆ ಕಾಲುವೆ ಮತ್ತು ಮುಖ್ಯ ರಸ್ತೆ, ಈ ಮೂರು ಗಡಿಗಳ ನಡುವೆ ತ್ರಿಕೋನಾಕಾರದ ಪ್ರದೇಶ ಬಿಟ್ಟು ಬೆಳೆದಿರಲಿಲ್ಲ. ಆದರೆ ಇಂದಿಗೆ ಅದರ ರೂಪು ರೇಷೆಯೇ ಬೇರೆಯಾಗಿಬಿಟ್ಟಿದೆ. ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿ ದೇವರ ದರ್ಶನ ಪಡೆಯುವರು ಕಡಿಮೆಯಾಗಿ, ಬೆಟ್ಟದ ಹಿಂಭಾಗದ ರಸ್ತೆಯ ಮೂಲಕ ಭುರ್ರೆಂದು ವಾಹನದಲ್ಲಿ ಬಂದು ಧಿಢೀರ್ ದರ್ಶನ ಪಡೆಯುವರು ಹೆಚಾಗಿದ್ದರಲ್ಲ. ಅದು ಬದಲಾದ ನಮ್ಮೂರಿನ ಸಮಾಜದ ಮನಸ್ಥಿತಿಯನ್ನು ಸಹ ತೋರಿಸುತ್ತದೆ. ಸಹನೆ ಇಲ್ಲದ ಜನರು ಬೆಂಗಳೂರು ಮಾತ್ರವಲ್ಲ, ಎಲ್ಲ ಕಡೆಯೂ ಇದ್ದಾರೆ ಎನ್ನುವ ಪಾಠವನ್ನು ಅದು ನನಗೆ ಕಲಿಸಿತ್ತು. ಆದರೆ ಪರಿಚಿತರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಪುರುಸೊತ್ತಿಲ್ಲದ ಬೆಂಗಳೂರಿನ ಜನ ಸಾಗರಕ್ಕಿಂತ, ಯಾವುದೇ ಸಹಾಯ ಮಾಡದಿದ್ದರೂ, "ಆರಾಮಿದ್ದಿರಾ?" ಎಂದು ಕೇಳುವ ನಮ್ಮೂರ ಜನರೇ ಹಿತವೆನಿಸಿದ್ದರು.
ಏರು ಜವ್ವನದಲ್ಲಿ ನಾವು ವರ್ಷಕ್ಕೆ ಒಂದು ಸಲವೋ, ಇಲ್ಲವೇ ಎರಡು ವರುಷಕ್ಕೆ ಒಂದು ಸಲವೋ ವೈದ್ಯರನ್ನು ಭೇಟಿಯಾದರೆ, ವಯಸ್ಸಾಗುತ್ತ ದೈಹಿಕ ಶಕ್ತಿ ಕುಗ್ಗಿದಾಗ, ತಿಂಗಳಿಗೆ ಎರಡು ಸಲ ವೈದ್ಯರನ್ನು ನೋಡುವ ಅವಶ್ಯಕತೆ ಬಂದು ಬಿಡುತ್ತದೆ. ಇಂತಹುದೇ ಸಂದರ್ಭದಲ್ಲಿ ಹೆಚ್ಚು ಕಡಿಮೆ ನನ್ನದೇ ವಯಸ್ಸಿನ ವೈದ್ಯ ಒಬ್ಬರನ್ನು ನಾನು ನಾಲ್ಕಾರು ಸಲ ಭೇಟಿಯಾದ ಮೇಲೆ, ನಮ್ಮಿಬ್ಬರ ನಡುವೆ ಒಂದು ಸ್ನೇಹ, ಸಲಿಗೆ ಬೆಳೆದಿತ್ತು. ಅವರಿಗೆ ಅದೇನು ಅನ್ನಿಸಿತೋ ಒಂದು ದಿನ ರಾತ್ರಿ ಊಟಕ್ಕೆ ನನ್ನನ್ನು ತಮ್ಮ ಮನೆಗೆ ಆಹ್ವಾನಿಸಿದರು. ಸರಿ, ಹೋದರಾಯಿತು ಎಂದು ಅವರ ಮನೆ ಎಲ್ಲಿ ಎಂದು ವಿಚಾರಿಸಿಕೊಂಡೆ. ಕವಿತಾಳ ರಸ್ತೆಗೆ ಬಂದು, ಬಲಕ್ಕೆ ಒಂದು ಅಡ್ಡ ರಸ್ತೆಯಲ್ಲಿ ತಿರುಗಿಕೊಳ್ಳಿ. ಅವಶ್ಯಕತೆ ಬಿದ್ದಲ್ಲಿ ಫೋನ್ ಮಾಡಿ, ರಾತ್ರಿ ಎಂಟು ಗಂಟೆ ಹೊತ್ತಿಗೆಲ್ಲ ಬಂದು ಬಿಡಿ ಎಂದು ತಿಳಿಸಿದ್ದರು.
ರಾಯಚೂರಿಗೆ ಸಂಪರ್ಕ ಕಲ್ಪಿಸುವ ಆ ಕವಿತಾಳ ರಸ್ತೆಯಲ್ಲಿ ನಾನು ಓಡಾಡಿದ್ದರೂ, ಅಲ್ಲಿ ಬೆಳೆದಿದ್ದ ಊರಿನ ಪರಿಚಯ ಇರಲಿಲ್ಲ. ಚಿಕ್ಕವನಾಗಿದ್ದಾಗ ನಮ್ಮ ಮನೆ ಇದ್ದದ್ದು ಊರ ಮಧ್ಯದಲ್ಲಿ ಮತ್ತು ನಂತರದ ಜೀವನವೆಲ್ಲ ಕಳೆದದ್ದು ಸಿಂಧನೂರು ರಸ್ತೆಯ ಆಸು ಪಾಸಿಗೆ ಬೆಳೆದ ಪ್ರದೇಶದಲ್ಲಿ. ಏಕಾದರೂ ಇರಲಿ, ಸ್ವಲ್ಪ ಬೇಗ ಹೊರಟರಾಯಿತು ಎಂದು ಸಂಜೆ ಕತ್ತಲಾಗುವ ಸಮಯಕ್ಕೆ ನನ್ನ ಕಾರನ್ನು ತೆಗೆದುಕೊಂಡು ಕವಿತಾಳ ರಸ್ತೆಗೆ ಹೊರಟೆ. ಅಡ್ಡ ರಸ್ತೆಯಲ್ಲಿ ಕಾರು ಸರಾಗವಾಗಿ ಓಡಾಡುವಷ್ಟು ರಸ್ತೆಗಳು ಅಗಲ ಇರದಿದ್ದರಿಂದ, ಕಾರನ್ನು ಒಂದು ಕಡೆ ನಿಲ್ಲಿಸಿ, ನಡೆಯುತ್ತಾ ಡಾಕ್ಟರ್ ರ ಮನೆ ಹುಡುಕಿದರೆ ಆಯಿತು ಎಂದು ನಿರ್ಧರಿಸಿದೆ.
ಅಡ್ಡ ರಸ್ತೆಯ ಕೊನೆಯವರೆಗೂ ಹೋದರೂ, ಡಾಕ್ಟರ್ ಹೆಸರಿರುವ ಫಲಕ ಯಾರ ಮನೆ ಮುಂದೆಯೂ ಕಾಣಲಿಲ್ಲ. ಇಷ್ಟಕ್ಕೂ ಈ ಡಾಕ್ಟರ್ ಗೆ ಮನೆ ಕಟ್ಟಲು ಬೇರೆ ಯಾವ ಪ್ರದೇಶವು ಸಿಗಲಿಲ್ಲವೇ ಎಂದು ಕೂಡ ಅನಿಸಿತು. ಅಲ್ಲಿ ಒಬ್ಬರನ್ನು ವಿಚಾರಿಸಿ ನೋಡಿದೆ. ಅಲ್ಲಿ ಯಾವ ಡಾಕ್ಟರ್ ಮನೆ ಇಲ್ಲ, ಆದರೆ ಹತ್ತಿರದ ಸ್ಮಶಾನದ ಸುತ್ತ ಮುತ್ತ ಕೂಡ ಸಾಕಷ್ಟು ಮನೆಗಳಾಗಿದ್ದು ಅಲ್ಲಿ ವಿಚಾರಿಸಿ ನೋಡಿ ಎಂದರು. ಅಲ್ಲಿಂದ ಇನ್ನೊಂದು ರಸ್ತೆಯಲ್ಲಿ ಹೊರಳಿದರೆ ಅದು ಸ್ಮಶಾನಕ್ಕೆ ಹೋಗುವ ಮಾರ್ಗವಾಗಿತ್ತು. ಅಲ್ಲಿಗೆ ಬಂದಾಗ, ಎಷ್ಟೋ ವರುಷಗಳು ಹಿಂದೆ ತೀರಿಕೊಂಡ ನನ್ನ ದೊಡ್ಡಮ್ಮಳ ಅಂತ್ಯ ಸಂಸ್ಕಾರಕ್ಕೆಂದು ಆ ಅಡ್ಡ ರಸ್ತೆಯಲ್ಲಿ ಒಮ್ಮೆ ಓಡಾಡಿದ್ದು ನೆನೆಪಿಗೆ ಬಂತು. ನಾನು ಅವತ್ತು ಬಂದಿದ್ದು ಹಗಲಿನಲ್ಲಿ. ಆದರೆ ಇಂದು ಕತ್ತಲಾಗಿ ಸಂಪೂರ್ಣ ಗುರುತು ಸಿಗುತ್ತಿರಲಿಲ್ಲ. ಸ್ಮಶಾನದ ಪ್ರವೇಶದಲ್ಲಿ ಕಟ್ಟಿರುವ ಒಂದು ಕಮಾನಿನವರೆಗೆ ನಡೆದು ಬಂದರೂ, ದಾರಿಯಲ್ಲಿದ್ದ ಯಾವ ಮನೆಗಳು ನಾನು ಭೇಟಿಯಾಗಬೇಕಿರುವ ಡಾಕ್ಟರ್ ದ್ದು ಎಂದು ಅನಿಸಲಿಲ್ಲ.
ಸ್ಮಶಾನದ ಅಂಚಿನಲ್ಲಿ ಒಬ್ಬ ಹೆಣ್ಣು ಮಗಳು ನನ್ನನ್ನು ನೋಡಿದರೂ ನೋಡದಂತೆ ಹೊರಟು ಹೋದಳು. ಅವಳ ಮುಖ ನಾನು ಚಿಕ್ಕವನಾಗಿದ್ದಾಗ ವರದಕ್ಷಿಣೆ ಕಿರುಕುಳ ತಾಳದೆ ವಿಷ ಕುಡಿದು ಸತ್ತ ಹೆಣ್ಣು ಮಗಳನ್ನು ಹೋಲುತ್ತಿತ್ತು. ಅಂದು ಊರಿನ ಜನರೆಲ್ಲಾ ಆ ಮನೆ ಮುಂದೆ ಸೇರಿದ್ದಲ್ಲ. ಅವಳ ದೇಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಮುಖ ಮಾತ್ರ ಕಾಣುವಂತೆ ಮಲಗಿಸಿಟ್ಟಿದ್ದರು. ಇಂದು ಕೂಡ ಅಲ್ಲಿರುವ ಮಬ್ಬೆಳಕಿನಲ್ಲಿ ಆ ಹೆಣ್ಣು ಮಗಳ ಮುಖ ನೀಲಿ ಮಿಶ್ರಿತ ಕಪ್ಪಾಗಿರುವುದು ಕಾಣುತ್ತಿತ್ತು. ಛೆ, ಕಾರನ್ನು ಹಿಂದೆಯೇ ಬಿಟ್ಟು ಬರಬಾರದಿತ್ತು, ಅದರ ಬೆಳಕು ಇಲ್ಲಿ ಸಹಾಯವಾಗುತ್ತಿತ್ತು ಎಂದು ಅನಿಸಿತು. ಪ್ಯಾಂಟಿನ ಜೇಬಿಗೆ ಕೈ ಹಾಕಿ ನೋಡಿದೆ. ಕಾರಿನ ಕೀ ಅಲ್ಲಿ ಭದ್ರವಾಗಿತ್ತು. ಮತ್ತೆ ಹಿಂದೆ ಹೋಗುವುದಕ್ಕಿಂತ ಮುನ್ನ ಯಾರನ್ನಾದರೂ ವಿಚಾರ ಮಾಡಿದರಾಯಿತು ಎಂದು ಸುತ್ತ ಮುತ್ತ ನೋಡಿದೆ. ಸ್ಮಶಾನ ದ್ವಾರ ಮಂಟಪದ ಕೆಳಗೆ ಕತ್ತಲಿನಲ್ಲಿ ಒಬ್ಬ ಅಜಾನುಬಾಹು ವ್ಯಕ್ತಿ ನಿಂತಿದ್ದ. ಆತನ ಆಕಾರ ಹೆದರಿಕೆ ತರುತ್ತಿದ್ದರೂ, ಧೈರ್ಯ ತೆಗೆದುಕೊಂಡು ಹತ್ತಿರ ಹೋಗಿ,
"ಇಲ್ಲಿ ಹತ್ತಿರದಲ್ಲಿ ಡಾಕ್ಟರ್ ಮನೆ ಇದೆಯೇ?" ಎಂದು ಕೇಳಿದೆ.
ತನಗೆ ಯಾವ ಡಾಕ್ಟರ್ ಗೊತ್ತಿಲ್ಲ ಎಂದು ಹೇಳಿದ ಅವನು ತಾನು ನಿಂತ ಆ ಜಾಗದಿಂದಾಚೆ ಹೋದವರನ್ನು ಮತ್ತೆ ಆಚೆಗೆ ಬಿಡುವುದಿಲ್ಲ ಎಂದು ಧೃಢ ನಿರ್ಧಾರದ ಧ್ವನಿಯಲ್ಲಿ ಹೇಳಿದ. ಇವನು ಸ್ಮಶಾನದ ಕಾವಲುಗಾರನೋ, ಇಲ್ಲವೇ ನಿಜ ಯಮಧರ್ಮನೊ, ಮತ್ತು ಅವನು ನನಗೇಕೆ ಹಾಗೆ ಹೇಳಿದ ಎಂದು ಒಂದು ಕ್ಷಣ ಕಸಿವಿಸಿ ಆಯಿತು. ಕತ್ತಲು ಮನಸಿಗೂ ಕವಿದಂತಾಗಿತ್ತು.
"ಇದೇನು ನಿಜವೋ, ಕನಸೋ?" ಎಂದು ನನಗೆ ನಾನೇ ಕೇಳಿಕೊಂಡೆ.
ಆ ವ್ಯಕ್ತಿ ನನ್ನನ್ನೇ ದಿಟ್ಟಿಸಿ ನೋಡುತ್ತಾ, ನಿನಗಿನ್ನೂ ಅರ್ಥವಾಗಿಲ್ಲವೇ ಎನ್ನುವ ಭಾವದಲ್ಲಿ ಹೇಳಿದ "ಜೀವನ ಕೂಡ ಒಂದು ಕನಸಲ್ಲವೇ?"