ವರ್ಷ: 2010
ಬೆಂಗಳೂರಿನಿಂದ ನಮ್ಮ ಊರಿಗೆ ಬಸ್ಸಲ್ಲಿ ಹೋದರೆ, ಬಳ್ಳಾರಿ ಬರುವುದು ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ. ಬಸ್ ಸ್ಟಾಂಡ್ ನಲ್ಲಿ ಇಳಿದು ದೇಹ ಭಾಧೆ ತೀರಿಸಿಕೊಂಡು ಮತ್ತೆ ಬಸ್ ಹತ್ತಿ ನಿದ್ರೆಗೆ ಜಾರಿದರೆ, ಈ ಊರಿನ ಬಸ್ ಸ್ಟಾಂಡ್ ಮಾತ್ರ ನಮ್ಮ ಮನಸಿನಲ್ಲಿ ಉಳಿದು ಹೋಗುತ್ತದೆ. ಉಳಿದೆಲ್ಲ ವಿಷಯಗಳನ್ನು ಪೇಪರ್ ಓದಿಯೇ ತಿಳಿದುಕೊಳ್ಳಬೇಕು. ೨೦೦೮-೨೦೦೯ ರ ಹೊತ್ತಿನಲ್ಲಿ ಬಳ್ಳಾರಿ ಪ್ರತಿ ದಿನವೂ ಸುದ್ದಿಯಾಗುತಿತ್ತಲ್ಲ. ಅದರ ಹಿಂದೆ ಇದ್ದಿದ್ದು ಪ್ರಮುಖವಾಗಿ ಗಣಿಗಾರಿಕೆ ವಿಷಯ. ಕುತೂಹಲಕ್ಕಾಗಿ ಬಳ್ಳಾರಿಯ ಮಣ್ಣಿಗೇಕೆ ಬೇಡಿಕೆ ಎಂದು ಗಮನಿಸುತ್ತಾ ಹೋದೆ. ನಮ್ಮ ದೇಶದ ಬೇರೆಡೆ ಸಿಗುವ ಕಬ್ಬಿಣದ ಅದಿರು 40% Fe ಆದರೆ ಬಳ್ಳಾರಿಯಲ್ಲಿ ಸಿಗುವುದು ಉತ್ತಮ ಗುಣಮಟ್ಟದ 65% Fe ಅದಿರು. ಈ ಮಣ್ಣನ್ನು ಸಂಸ್ಕರಿಸಿದರೆ ಹೆಚ್ಚಿನ ಮಟ್ಟದ ಕಬ್ಬಿಣವನ್ನು ತಯಾರಿಸಬಹುದು. ಹಾಗಾಗಿ ಬಳ್ಳಾರಿಯ ಅದಿರಿಗೆ ಬೇಡಿಕೆ ಅಷ್ಟೇ ಅಲ್ಲ ಬೆಲೆ ಕೂಡ ಹೆಚ್ಚು. ಸರಿ ಇದನ್ನು ಕೊಂಡುಕೊಳ್ಳುವವರು ಯಾರು? ಪ್ರಮುಖವಾಗಿ ಚೀನಾ ದೇಶ. ಅವರೇಕೆ ಅಪಾರ ಪ್ರಮಾಣದಲ್ಲಿ ಅದಿರು ಕೊಳ್ಳುತ್ತಿದ್ದಾರೆ? ೨೦೦೮ ರಲ್ಲಿ ಆ ದೇಶದಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ಅದ್ಭುತವೆನಿಸುವ ಸ್ಟೇಡಿಯಂ ಗಳನ್ನು ಕಟ್ಟುವ ಸಲುವಾಗಿ ಮತ್ತು ತಮ್ಮ ಪಟ್ಟಣಗಳಲ್ಲಿನ ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕಾಗಿ. ಇಷ್ಟು ಮಾಹಿತಿಗಳು ದಿನ ಪತ್ರಿಕೆ, ಇಂಟರ್ನೆಟ್ ಮೂಲಕ ತಿಳಿದುಕೊಂಡದ್ದಾಯಿತು. ಆದರೆ ರಾಜಕೀಯ, ವ್ಯವಹಾರ ಮೀರಿ ಸಾಮಾನ್ಯ ಜನಜೀವನಕ್ಕೆ ಇದರ ಕೊಡುಗೆ ಏನು ಎಂದು ನಾನು ಖುದ್ದು ತಿಳಿದುಕೊಳ್ಳಬೇಕಿತ್ತು.
ನಾನು ೨೦೦೫ ರಿಂದ ಕಾರು ಓಡಿಸಲು ಕಲಿತುಕೊಂಡು, ಅವಶ್ಯಕತೆ ಬಿದ್ದಾಗ ನಮ್ಮೂರಿಗೆ ಕಾರಲ್ಲೇ ಹೋಗುವುದಕ್ಕೆ ಆರಂಭಿಸಿದ್ದೆ. ಬೆಂಗಳೂರಿನಿಂದ ತುಮಕೂರಿನವರೆಗೆ ಟ್ರಾಫಿಕ್ ದಟ್ಟಣೆಯಲ್ಲಿ ಕಾರು ಓಡಿಸುವುದು ಕಿರಿ ಕಿರಿ ಅನಿಸಿದರೆ, ಅಲ್ಲಿಂದ ಸಿರಾ, ಹಿರಿಯೂರಿನವರೆಗೆ ರಸ್ತೆ ಅಕ್ಕ-ಪಕ್ಕದ ತೆಂಗಿನ ತೋಟಗಳನ್ನು ನೋಡುತ್ತಾ ಉಲ್ಲಾಸದಾಯಕವಾಗಿ ಡ್ರೈವ್ ಮಾಡಬಹುದು. ಹೈವೇ ನಿಂದ ಬಲಕ್ಕೆ ತಿರುಗಿ ಚಳ್ಳಕೆರೆ ದಾಟಿದರೆ ಅಲ್ಲಿಂದ ಬಳ್ಳಾರಿ ಸುಮಾರು ನೂರು ಕಿ.ಮೀ. ದೂರ. ಆ ನೂರು ಕಿ.ಮೀ. ಉದ್ದದ ಪ್ರದೇಶದಲ್ಲಿ ಹೆಚ್ಚಿನ ಕೃಷಿ ಮತ್ತು ವಾಣಿಜ್ಯ ಚಟುವಟಿಕೆ ಕಾಣುವುದಿಲ್ಲವಾದ್ದರಿಂದ, ಮಾರ್ಗ ಮಧ್ಯದಲ್ಲಿ ಯಾವುದೇ ದೊಡ್ಡ ಪಟ್ಟಣಗಳಿಲ್ಲ. ಆದರೆ ಓಬಳಾಪುರಂ ದಾಟಿ ಬಳ್ಳಾರಿ ಇನ್ನು ೨೦ ಕಿ.ಮೀ. ಇರುವಾಗಲೇ, ಅದಿರು ಹೊತ್ತ ದೊಡ್ಡ ದೊಡ್ಡ ಟಿಪ್ಪರ್ ಗಳು ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತವೆ. ಅವು ಧೊಳೆಬ್ಬಿಸುತ್ತ, ರಸ್ತೆಯನ್ನು ಕೆಂಪಾಗಿಸುತ್ತ ಬಳ್ಳಾರಿ ಪ್ರದೇಶದ ಗಣಿಗಾರಿಕೆಯ ಪ್ರಥಮ ಅನುಭವವನ್ನು ನಮಗೆ ಕೊಡುತ್ತವೆ.
ಒಂದು ಸಲ ಮುಖ್ಯ ರಸ್ತೆಯಲ್ಲಿ ಯಾವುದೊ ಕಾರಣಕ್ಕಾಗಿ ಸಂಚಾರ ನಿಲ್ಲಿಸಿ, ನಾವು ಸುತ್ತು ಹಾಕಿ ಹಳ್ಳಿಗಳ ಮಾರ್ಗದ ಮೂಲಕ ಬಳ್ಳಾರಿ ತಲುಪವ ಅವಶ್ಯಕತೆ ಬಂದಿತು. ಕೆಂಪು ರಸ್ತೆಗಳ ಮೇಲೆ, ಕಡಿಮೆ ವೇಗದಲ್ಲಿ ಕಾರು ನಡೆಸತೊಡಗಿದೆ. ದೂರದಲ್ಲಿ ಕಾಣುತ್ತಿರುವ ಬೆಟ್ಟಗಳು ಕರಗುತ್ತಿರುವುದು ಯಾರಾದರೂ ಮೇಲ್ನೋಟಕ್ಕೆ ಗಮನಿಸಬಹುದಿತ್ತು. ಹಳ್ಳಿಗಳ ರಸ್ತೆ ಬದಿಯ ಮನೆಗಳು ಧೂಳು ಸುರಿದಂತಿದ್ದವು. ನೀರಿಲ್ಲದ ಊರುಗಳಲ್ಲಿ ಧೂಳು ತೊಳೆಯವರು ಯಾರು? ಬರಿ ಮನೆಗಳಲ್ಲ, ದಾರಿಯಲ್ಲಿ ಸಿಕ್ಕ ಎಮ್ಮೆಗಳು ಕೂಡ ಕಂದಾಗಿ ಕಾಣುತ್ತಿದ್ದವು. ರಸ್ತೆ ಬದಿಯ ತಟ್ಟೆ ಹೋಟೆಲು ಸಂಪೂರ್ಣ ಧೂಳುಮಯವಾಗಿತ್ತು. ಅಲ್ಲಿನ ಟೇಬಲ್ ಗಳು, ಪಾತ್ರೆಗಳು ಸಹ ಧೂಳುಮಯವಾಗಿದ್ದವು. ಚಹಾ ಕುಡಿಯುವ ಒತ್ತಾಸೆಯನ್ನು ನಾನು ಅದುಮಿಕೊಂಡು ಸುಮ್ಮನಾದೆ.
ಹಳ್ಳಿಗಳು ಶೋಚನೀಯ ಸ್ಥಿತಿಯಲ್ಲಿದ್ದರೆ, ಬಳ್ಳಾರಿ ನಗರಕ್ಕೆ ಶ್ರೀಮಂತಿಕೆಯ ವೈಭವ ಬಂದು ಬಿಟ್ಟಿತ್ತು. ಕೆಲವು ಅರಮನೆಯಂತಹ ಮನೆಗಳು, ರೋಡಿನ ಮೇಲೆ ಲಕ್ಸುರಿ ಕಾರುಗಳು, ರಸ್ತೆಗೆ ಅಲಂಕಾರಿಕ ದೀಪಗಳು ಹೀಗೆ ಸಂಪೂರ್ಣ ಊರು ಬದಲಾಗದಿದ್ದರೂ, ಆ ಊರಿನ ಕೆಲವರಾದರೂ ಗಣಿಗಾರಿಕೆಯ ಲಾಭ ಪಡೆದುಕೊಂಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹಾಗೆಯೇ ಆ ಊರಲ್ಲಿ ಮೊದಲಿಗಿಂತ ಹೆಚ್ಚಿನ ಸಂಖ್ಯೆಯ ಆಸ್ಪತ್ರೆಗಳು ನನಗೆ ಕಾಣಿಸಲಾರಂಭಿಸಿದವು. ಅಲ್ಲಿ ಮೆಡಿಕಲ್ ಕಾಲೇಜು ಇದೆ ಎನ್ನುವ ಕಾರಣಕ್ಕೆ ಅಲ್ಲಿ ಡಾಕ್ಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆಯೇ ಅಥವಾ ರೋಗಿಗಳು ಹೆಚ್ಚಾಗಿದ್ದರೆ ಎನ್ನುವ ಕಾರಣಕ್ಕೆ ಡಾಕ್ಟರ್ ಗಳು ಹೆಚ್ಚಾಗಿದ್ದರೆ ಎನ್ನುವುದು ತಿಳಿಯದೆ ಹೋಯಿತು. ಬಿಸಿಲ ನಾಡಿನಲ್ಲಿ ಆರೋಗ್ಯವಾಗಿದ್ದ ಜನರು ಗಣಿಗಾರಿಕೆಯ ಧೂಳಿಗೆ ಬಲಿಪಶುಗಳಾಗುತ್ತಿದ್ದಾರೆಯೇ ಎನ್ನುವ ಅನುಮಾನ ಕೂಡ ಮೂಡಿತು.
ವರ್ಷ: 2021
ಕೆಲವು ವರುಷಗಳು ಕಳೆದು ಹೋದವು. ರಾಜ್ಯ ರಾಜಕಾರಣವನ್ನೇ ಬದಲಿಸಿದ ಬಳ್ಳಾರಿಯ ಗಣಿಗಾರಿಕೆ ತನ್ನ ಸದ್ದು ಕಳೆದುಕೊಂಡಿತ್ತು. ಚೀನಾ ದೇಶ ತನ್ನ ಆರ್ಥಿಕ ಪ್ರಗತಿಯ ವೇಗವನ್ನು ಕಳೆದುಕೊಂಡಿತ್ತು. ಗಣಿಗಾರಿಕೆಗೆ ಹಲವಾರು ನಿರ್ಬಂಧಗಳನ್ನು ಸರ್ಕಾರ ಹೇರಿತ್ತು. ನಾನು ಮತ್ತೆ ಊರಿಗೆ ಹೊರಟಾಗ ಬಳ್ಳಾರಿಯ ಬಸ್ ಸ್ಟಾಂಡ್ ಪಕ್ಕದಲ್ಲಿ ಬಾಡಿಗೆ ಸಿಗದೇ ಸುಮ್ಮನೆ ನಿಂತ ನೂರಾರು ಜೆಸಿಬಿ ಮತ್ತು ಟಿಪ್ಪರ್ ಗಳು ಕಂಡವು. ಅವು ವಾಹನಗಳೆನಿಸದೆ ಗತ ಕಾಲ ವೈಭವದ ಪಳೆಯುಳಿಕೆ ತರಹ ಕಂಡವು. ಕೆಲ ದಿನಗಳ ನಂತರ, ನಾನು ಬೆಂಗಳೂರಿಗೆ ಹೊಸಪೇಟೆ ಮಾರ್ಗ ಮೂಲಕ ವಾಪಸ್ಸಾದೆ. ಗಣಿಗಾರಿಕೆ ಪ್ರದೇಶದಲ್ಲಿದ್ದ ಹಳ್ಳಿಗಳ ಮೂಲಕ ಸಾಗಿ ಬಂದೆ. ಅಲ್ಲಿ ರಸ್ತೆ ಪಕ್ಕದ ಒಂದು ಮನೆಯಲ್ಲಿ ಟಿವಿ ನೋಡುತ್ತಿರುವುದು ಕಾಣುತ್ತಿತ್ತು. ಆ ಧೂಳು ತುಂಬಿದ ಟಿವಿ ಯಲ್ಲಿ ಚೀನಾ ದೇಶದ ಸ್ಟೇಡಿಯಂ ಗಳನ್ನು ತೋರಿಸುತ್ತಿದ್ದರು. ತಮ್ಮ ಊರಿನ ಮಣ್ಣೇ ಅಲ್ಲಿ ಸ್ಟೇಡಿಯಂ ಆಗಿರುವ ಪರಿವೆ ಅಲ್ಲಿ ಟಿವಿ ನೋಡುತ್ತಿರುವವರಿಗೆ ತಿಳಿದಿದೆಯೋ ಇಲ್ಲವೋ ನಿರ್ಧರಿಸಲು ಆಗಲಿಲ್ಲ. ಅಷ್ಟಕ್ಕೂ ಮಣ್ಣನ್ನು ಕಳೆದುಕೊಂಡ ಅವರಿಗೆ ಸಿಕ್ಕ ಪ್ರತಿಫಲ ಏನು ಎಂದು ಕೂಡ ತಿಳಿಯದೆ ಹೋಯಿತು.
No comments:
Post a Comment