ಅಮೆರಿಕಕ್ಕೆ ವಲಸೆ ಬಂದ, ೪೫ ರ ಹರೆಯದ ಸ್ಟಮ್ಯಾಟಿಸ್ ಎನ್ನುವ ವ್ಯಕ್ತಿಗೆ ವೈದ್ಯರು ತಪಾಸಣೆ ಮಾಡಿ, ಅವನಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆ ಹಚ್ಚಿ, ಅವನು ಇನ್ನು ಒಂಭತ್ತು ತಿಂಗಳಿಗೂ ಹೆಚ್ಚು ಕಾಲ ಬದುಕುವ ಸಾಧ್ಯತೆ ಇಲ್ಲ ಎಂದು ತಿಳಿಸುತ್ತಾರೆ. ಚಿಕಿತ್ಸೆ, ಉಪಚಾರ ಮಾಡಿದರೂ ಅದು ಅವನ ಜೀವಿತಾವಧಿಯನ್ನು ವಿಸ್ತರಿಸುವುದು ಕಷ್ಟವಿತ್ತು. ಉಳಿದಿರುವುದು ಒಂಭತ್ತು ತಿಂಗಳು ಆದರೆ ಅದನ್ನು ತನ್ನ ತಾಯ್ನಾಡಾದ ಗ್ರೀಸ್ ನಲ್ಲೆ ಕಳೆಯುವುದಾಗಿ ಮತ್ತು ಸತ್ತ ನಂತರ ತನ್ನ ಪೂರ್ವಿಕರ ಸಮಾಧಿಗಳ ಜೊತೆ ತನ್ನದು ಒಂದಾಗಲಿ ಎನ್ನುವ ಆಶಯದೊಂದಿಗೆ ಗ್ರೀಸ್ ಗೆ ಅವನು ವಾಪಸ್ಸು ಆಗುತ್ತಾನೆ. ಅವನು ವಾಪಸ್ಸು ಬಂದಿರುವ ವಿಷಯ ತಿಳಿದು ಅವನ ಹಳೆಯ ಸ್ನೇಹಿತರೆಲ್ಲ ಅವನನ್ನು ಕಾಣಲು ಕೈಯಲ್ಲಿ ವೈನ್ ಬಾಟಲಿ ಹಿಡಿದು ಬರುತ್ತಾರೆ. ತಾನು ಚಿಕ್ಕವನಿದ್ದಾಗ ಹೋಗುತ್ತಿದ್ದ ಚರ್ಚ್ ಗೆ ಮತ್ತೆ ಹೋಗಲು ಸ್ಟಮ್ಯಾಟಿಸ್ ಆರಂಭಿಸುತ್ತಾನೆ. ತನ್ನ ತೋಟದಲ್ಲಿ ವಿಧ ವಿಧದ ತರಕಾರಿ, ಹಣ್ಣಿನ ಗಿಡಗಳನ್ನು ಹಾಕುತ್ತಾನೆ. ಅವು ಬೆಳೆ ಬರುವುದರಲ್ಲಿ ತಾನು ಉಳಿಯುತ್ತೇನೋ, ಇಲ್ಲವೋ ಎನ್ನುವುದರ ಬಗ್ಗೆ ಅವನು ತಲೆ ಕೆಡಿಸಿಕೊಳ್ಳದೆ, ತನಗೆ ಆನಂದ ಕೊಡುವ ಕೆಲಸಗಳಲ್ಲಿ ಅವನು ಮುಳುಗಿ ಹೋಗುತ್ತಾನೆ. ಅವನ ತೋಟದ ಬೆಳೆಗಳು ಬರಲಾರಂಭಿಸುತ್ತವೆ. ಒಂದು ವರ್ಷದ ನಂತರ ಇನ್ನೊಂದು ಕಳೆದು ಹೋಗುತ್ತದೆ. ಸ್ಟಮ್ಯಾಟಿಸ್ ಗೆ ಈಗ ೯೮ ವರ್ಷ ವಯಸ್ಸು.
ಈ ಜೀವನ ವೃತ್ತಾಂತ ತಿಳಿಸಿದ್ದು ಡಾ. ಲಿಸ್ಸಾ ರಾಂಕಿನ್. ಅವಳನ್ನು ಕಾಣಲು ಬರುವ ರೋಗಿಗಳಿಗೆ ಈ ವೈದ್ಯೆ ಬರೀ ಔಷಧವನ್ನಷ್ಟೇ ಕೊಡುವುದಿಲ್ಲ. ಅವರ ಜೀವನವನ್ನು ಸಮಗ್ರವಾಗಿ, ಕೂಲಂಕುಷವಾಗಿ ವಿಚಾರಿಸಿಕೊಳ್ಳುತ್ತಾಳೆ. ಅವರ ಆರೋಗ್ಯದ ಮತ್ತು ವೈಯಕ್ತಿಕ ಸಮಸ್ಯೆಗಳಿಗೆ ಯಾವ ಔಷದಿ ಕೊಟ್ಟರೆ ಚೆನ್ನ ಎಂದು ಅವರಿಗೆ ಅನ್ನಿಸುತ್ತದೆ ಎಂದು ಕೇಳುತ್ತಾಳೆ. ಆಗ ಸಮಸ್ಯೆಗಳ ಮೂಲ ಮತ್ತು ಪರಿಹಾರ ರೋಗಿಗಳ ಬಾಯಿಂದಲೇ ಬರುತ್ತದೆ.
ಒತ್ತಡದ ಉದ್ಯೋಗ, ಹಣಕಾಸಿನ ಸಮಸ್ಯೆ, ಕೌಟುಂಬಿಕ ಕಲಹಗಳು, ನಿದ್ದೆಗೆಡುವುದು, ಒಬ್ಬಂಟಿ ಜೀವನ ಮುಂತಾದವುಗಳು ಕಾಲ ಕ್ರಮೇಣ ರೋಗಗಳಾಗಿ ಬದಲಾಗಿ ಅನಾರೋಗ್ಯಕ್ಕೆ ಈಡು ಮಾಡುತ್ತವೆ. ಬದುಕುವ ಆಸೆ ಕಡಿಮೆಯಾದಂತೆಲ್ಲ ರೋಗಗಳು ಉಲ್ಬಣಗೊಳ್ಳುತ್ತ ಹೋಗುತ್ತವೆ. ಮೂಲ ಸಮಸ್ಯೆಗಳನ್ನು ಬಗೆಹರಿಸದೆ ಬರೀ ಔಷಧಿ ತೆಗೆದುಕೊಂಡರೆ ಆಗುವ ಪ್ರಯೋಜನ ಅಂತಹ ದೊಡ್ಡದೇನಲ್ಲ. ಇದಕ್ಕೆ ತದ್ವಿರುದ್ಧವಾಗಿ, ಜೀವನ ಉಲ್ಲಾಸಮಯವಾದಂತೆಲ್ಲ ರೋಗಗಳ ತೀವ್ರತೆಯು ಕಡಿಮೆಯಾಗುತ್ತ ಹೋಗುತ್ತದೆ. ಶಾಂತ ಮನಸ್ಸು ನಮ್ಮ ದೇಹದ ಸ್ವ-ರಿಪೇರಿ ಮಾಡುವ ತಾಕತ್ತನ್ನು ಹೆಚ್ಚಿಸುತ್ತ ಹೋಗುತ್ತದೆ. ಸ್ವಸ್ಥ ಮನಸ್ಸು ದೇಹದ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
ಕೆಲಸದಲ್ಲಿ ಒತ್ತಡ ಯಾರಿಗಿಲ್ಲ? ಆದರೆ ಸಹೋದ್ಯೋಗಿಗಳೊಂದಿಗೆ ಸ್ಪರ್ಧೆಗೆ ಬೀಳದೆ ಒತ್ತಡ ಕಡಿಮೆ ಮಾಡಿಕೊಳ್ಳುವ ಆಯ್ಕೆ ನಮಗೆ ಬಿಟ್ಟಿದ್ದು. ಇರುವ ರಜೆಗಳ ಸಂಪೂರ್ಣ ಉಪಯೋಗ ಪಡೆದು, ಒತ್ತಡ ಕಡಿಮೆ ಮಾಡುವ ಹವ್ಯಾಸಗಳಲ್ಲಿ ತೊಡಗಿ, ಮನಸ್ಸಿಗೆ ಮತ್ತು ದೇಹಕ್ಕೆ ವಿಶ್ರಾಂತಿ ಕೊಟ್ಟರೆ ಅದು ಆರೋಗ್ಯವನ್ನು ಪುನಶ್ಚೇತನಗೊಳಿಸುತ್ತದೆ. ಕೌಟುಂಬಿಕ ಸಂಬಂಧಗಳು ಸರಿ ಹೋಗದಿದ್ದರೆ, ಸಹನೆಯ ಮಿತಿಯನ್ನು ದಾಟಿದ್ದರೆ, ಪ್ರತಿ ದಿನ ವಿಷ ನುಂಗುವುದಕ್ಕಿಂತ ಧೈರ್ಯ ತೆಗೆದುಕೊಂಡು ಆ ಸಂಬಂಧಗಳನ್ನು ಕೊನೆಗೊಳಿಸಿ ಎನ್ನುವ ಸಲಹೆ ನೀಡುತ್ತಾರೆ ಈ ವೈದ್ಯೆ. ಉತ್ತಮ ಸ್ನೇಹಿತರು ನಿಮ್ಮ ಆಯಸ್ಸನ್ನು ಹೆಚ್ಚಿಗೆ ಮಾಡುತ್ತಾರೆ ಮತ್ತು ನಿಮಗೆ ಬದುಕುವ ಉಲ್ಲಾಸ ತುಂಬುತ್ತಾರೆ. ಹಳೆಯ ಸ್ನೇಹಿತರನ್ನು ಕಳೆದುಕೊಳ್ಳಬೇಡಿ ಮತ್ತು ಹೊಸಬರ ಸ್ನೇಹ ಆಗುತ್ತಿರಲಿ ಎನ್ನುವುದು ಇವರ ಅಭಿಪ್ರಾಯ. ಯೋಗ, ಧ್ಯಾನ, ಆಟಗಳು, ಸಂಗೀತ, ಚಿತ್ರಕಲೆ ಹೀಗೆ ಯಾವುದರಲ್ಲಿ ನಿಮಗೆ ಆಸಕ್ತಿ ಇದೆಯೋ ಅದರಲ್ಲಿ ನಿಮ್ಮ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಿ. ಇವೆಲ್ಲ ನೀವು ರೋಗಗಳಿಂದ ದೂರಾಗುವಲ್ಲಿ ನೆರವಾಗುತ್ತವೆ. ದೇಹದ ಕಾರ್ಯ ಕ್ಷಮತೆ ಹೆಚ್ಚಿಸಿ, ನಿಮ್ಮ ಜೀವನ ಕಾಲ ವಿಸ್ತರಿಸುವಂತೆ ಮಾಡುತ್ತವೆ. ನೀವು ಸಂತೋಷವಾಗಿಲ್ಲದೆ, ಔಷಧಿ ಮಾತ್ರ ತೆಗೆದುಕೊಂಡರೆ ಅದರ ಪ್ರಯೋಜನ ಅಷ್ಟಕಷ್ಟೇ ಎನ್ನುವ ಸತ್ಯ ಬಿಚ್ಚಿಡುತ್ತಾರೆ.
ಇದು ನಮಗೆ ತಿಳಿಯದ ಹೊಸ ವಿಷಯವೇನಲ್ಲ. ಆದರೆ ವೈದ್ಯರೇ ಇದನ್ನು ಧೃಡೀಕರಿಸುವದು ಇದರ ಪ್ರಾಮುಖ್ಯತೆ ತೋರಿಸುತ್ತದೆ. ಔಷಧಿ ಚೀಟಿಯನ್ನು ಈ ವೈದ್ಯರು ಬರೆದು ಕೊಡದೆ, ನಮಗೆ ನಾವೇ ಬರೆದುಕೊಳ್ಳುವಂತೆ ಪ್ರಚೋದಿಸುವ ಈ ವೈದ್ಯೆ ವಿಶಿಷ್ಟ ಎನಿಸುತ್ತಾರೆ. ಇನ್ನು ಹೆಚ್ಚಿನ ವಿಷಯಗಳನ್ನು ಅವರಿಂದಲೇ ತಿಳಿದುಕೊಳ್ಳಿ.
https://www.youtube.com/watch?v=gcai0i2tJt0