Sunday, August 22, 2021

ಸಾಲ ಮಾಡುವುದಕ್ಕಿಂತ ಉಪವಾಸವಿರುವುದೇ ಮೇಲು

“Rather go to bed without dinner than to rise in debt” – Benjamin Franklin


ಯಾವುದೇ ರಸ್ತೆಯನ್ನು ಒಮ್ಮೆ ಸುತ್ತು ಹಾಕಿ ಬನ್ನಿ. ನಿಮಗೆ ಬ್ಯಾಂಕ್ ಗಳು, ಫೈನಾನ್ಸ್ ಕಂಪನಿ ಗಳು, ಕಾಣದೆ ಇರುವುದಿಲ್ಲ. ಅವುಗಳಲ್ಲಿ ನಡೆಯುವ ವ್ಯವಹಾರ ಎಂದರೆ ಒಂದು ಠೇವಣಿ ತೆಗೆದುಕೊಳ್ಳುವುದು ಮತ್ತು ಎರಡನೆಯದು ಮುಖ್ಯವಾಗಿ ಸಾಲ ಕೊಡುವುದು. ಠೇವಣಿ ಇಡುವವರು ಸ್ವಲ್ಪ ಜನ ಆದರೆ ಸಾಲ ತೆಗೆದುಕೊಳ್ಳುವವವರು ನೂರಾರು, ಸಾವಿರಾರು ಜನ. ಸಾಲಗಳಲ್ಲಿ ಕೂಡ ಈಗ ಹಲವಾರು ವಿಧ. ಮನೆ ಮೇಲಿನ ಸಾಲ, ವ್ಯಾಪಾರದ ಮೇಲಿನ ಸಾಲ, ಆಭರಣಗಳ ಮೇಲೆ ಸಾಲ, ಕೃಷಿ ಸಾಲ, ಗೃಹ ಉಪಯೋಗಿ ಉಪಕರಣಗಳ ಮೇಲೆ ಸಾಲ, ಇವೆಲ್ಲ ಬಿಟ್ಟು ಓವರ್ ಡ್ರಾಫ್ಟ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ಗಳು.


ಸಾಲ ಮತ್ತು ನಮ್ಮ ಜೀವನ ಇವೆರಡು ಬೇರ್ಪಡಿಸಲಾಗದ ಸಂಗತಿಗಳು. ಸಾಲ ಮಾಡದ ಗಂಡಸಿಲ್ಲ ಎಂಬುದು ನಮ್ಮ ನಾಣ್ಣುಡಿ. ಜಗತ್ತು ಸುತ್ತಿ ಬಂದರೆ ಸಾಲವನ್ನು ದ್ವೇಷಿಸುವ ದೇಶಗಳು, ಧರ್ಮಗಳನ್ನು ಕಾಣಬಹುದು. ಆದರೆ ಸಾಲವನ್ನು ಬಿಗಿದಪ್ಪಿದ ದೇಶಗಳು, ನಾಗರಿಕತೆಗಳೇ ಹೆಚ್ಚು. ಸಾಲ ಮಾಡುವುದು ತಪ್ಪು ಎಂದೇನಿಲ್ಲ. ಸಾಲ ಯಾವ ಕಾರಣಕ್ಕಾಗಿ ಮಾಡುತ್ತಿದ್ದೇವೆ ಮತ್ತು ಅದನ್ನು ನಮ್ಮಿಂದ ತೀರಿಸಲು ಸಾಧ್ಯವೇ? ಅದು ಮುಗಿದು ಹೋಗುವ ಮುನ್ನ ನಮ್ಮ ಎಷ್ಟು ಜೀವನವನ್ನು ಬಸಿದುಬಿಡುತ್ತದೆ ಎನ್ನುವ ಲೆಕ್ಕಾಚಾರ ಮುಖ್ಯ. ಆದರೆ ಸಾಕಷ್ಟು ಜನ ಸಾಲ ಪಡೆಯುವ ಮುನ್ನ ಅವುಗಳ ಬಗ್ಗೆ ಆಲೋಚನೆಯೇ ಮಾಡುವುದಿಲ್ಲ. ಅದು ಅವರನ್ನು ಫಜೀತಿಗೆ ಬೀಳಿಸುತ್ತದೆ.  ಅವಿವೇಕಿಯ ಕೈಯಲ್ಲಿನ ದುಡ್ಡು, ಬೊಗಸೆಯಲ್ಲಿನ ನೀರಿನ ಹಾಗೆ. ಹೆಚ್ಚು ಹೊತ್ತು ಹಿಡಿದಿಡಲು ಸಾಧ್ಯವಿಲ್ಲ. ಆದರೆ ಸಾಲ ಮಾತ್ರ, ಬಡ್ಡಿಯ ಜೊತೆ ಬಳ್ಳಿಯ ಹಾಗೆ ನಮ್ಮ ದೇಹವನ್ನು ಆವರಿಸಿ ಬೆಳೆಯುತ್ತ ಕೊನೆಗೆ ನಮ್ಮ ಕುತ್ತಿಗೆ ಸುತ್ತುವರಿದು ಉಸಿರುಗಟ್ಟಿಸುವ ಹಾಗೆ ಆದಾಗ ತಪ್ಪಿನ ಅರಿವಾಗುತ್ತದೆ. ಆದರೆ ಕಾಲ ಮಿಂಚಿ ಹೋಗಿರುತ್ತದೆ.


ಎಷ್ಟೋ ಕುಟುಂಬಗಳು ಬೀದಿಗೆ ಬಂದದ್ದು ಆ ಮನೆಗಳಲ್ಲಿನ ಸಾಲಗಾರರಿಂದ. ಸಾಲ ಮಾಡಿ ಬೇಕಾಬಿಟ್ಟಿ ಖರ್ಚು ಮಾಡುವುದು ಬರಿ ಕುಟುಂಬಗಳನ್ನಲ್ಲ, ಸರ್ಕಾರಗಳನ್ನೇ ದಿವಾಳಿ ಎಬ್ಬಿಸಿಬಿಡುತ್ತದೆ. ಅದೇ ಕಾರಣಕ್ಕೆ ಹಣಕಾಸು ಸಚಿವರು ಇಂದಿಗೆ ಮುಖ್ಯ ಮಂತ್ರಿ, ಪ್ರಧಾನ ಮಂತ್ರಿಗಳಷ್ಟೇ ಪ್ರಮುಖರು. ಯಾವುದೇ ಯಶಸ್ವಿ ಕಂಪನಿ ಯಲ್ಲಿ, CEO ಗೆ ಸರಿ ಸಮನಾಗಿ CFO ಕೂಡ  ಜವಾಬ್ದಾರಿ ಹೊತ್ತಿರುತ್ತಾನೆ. ಅವರು ಸಾಲ ಮಾಡುವುದಿಲ್ಲ ಎಂದೇನಿಲ್ಲ. ಆದರೆ ಎಷ್ಟು ಸಾಲ ಮಾಡಬೇಕು. ಅದನ್ನು ಯಾವ ರೂಪದಲ್ಲಿ, ಎಷ್ಟು ಬಡ್ಡಿ ದರಕ್ಕೆ ತರಬೇಕು ಮತ್ತು ಅದನ್ನು ಹಿಂತಿರುಗಿಸುವ ಬಗೆ ಹೇಗೆ ಎಂದು ಕೂಲಂಕುಷವಾಗಿ ಯೋಚಿಸಿರುತ್ತಾರೆ ಮತ್ತು ಅದನ್ನು ಕಾರ್ಯರೂಪಕ್ಕೆ ಇಳಿಸುತ್ತಾರೆ. ಅವರುಗಳು ಬ್ಯಾಂಕ್ ನ ಸಾಲದಿಂದ ಅಭಿವೃದ್ಧಿ ಹೊಂದಿದರೆ, ಜವಾಬ್ದಾರಿ ಇರದವರು ತಮ್ಮ ಕುಟುಂಬಕ್ಕೆ ದುಡಿದದ್ದಕ್ಕಿಂತ ಹೆಚ್ಚು ಬ್ಯಾಂಕ್ ಗಳ ಸಲುವಾಗಿ ದುಡಿಯುತ್ತಾರೆ.


ತಂದ ಸಾಲವನ್ನು ನಾವು ಬಂಡವಾಳದ ಹಾಗೆ ಬಳಕೆ ಮಾಡಿ, ಬಡ್ಡಿ ದರಕ್ಕಿಂತ ಹೆಚ್ಚಿಗೆ ದುಡಿಸಲು ಸಾಧ್ಯವಾಗದೆ ಹೋದರೆ, ಆ ಸಾಲ ಪಡೆಯುವ ಮುನ್ನ ವಿಚಾರ ಮಾಡುವುದು ಒಳಿತು. ನಮ್ಮ ಪ್ರವಾಸಗಳಿಗೆ, ಮನೆ ಉಪಕರಣಗಳಿಗೆ ಸಾಲ ಮಾಡುವುದಕ್ಕಿಂತ ಮೊದಲು ಉಳಿತಾಯ ಮಾಡಿ ಆ ಹಣವನ್ನೇ ಬಳಸುವುದು ಕ್ಷೇಮ. ಈ ಸಾಮಾನ್ಯ ವಿಚಾರ ಎಲ್ಲರಿಗೂ ತಿಳಿದಿದ್ದರೂ, ತಮ್ಮ ಆಸೆಗಳನ್ನು ಹಲವು ದಿನ ತಡೆ ಹಿಡಿಯುವದರಲ್ಲಿ ಸೋತು ಹೋಗುತ್ತಾರೆ. ಅಂತಹವರಿಗೆ ಅರ್ಥ ಆಗಲೆಂದೇ ಬೆಂಜಮಿನ್ ಫ್ರಾಂಕ್ಲಿನ್ ಸಾಲ ಮಾಡುವುದಕ್ಕಿಂತ ಉಪವಾಸವಿರುವುದೇ ಮೇಲು ಎಂದು ಹೇಳಿದ್ದು.

No comments:

Post a Comment