Tuesday, October 5, 2021

ಎಲ್ಲೂ ಇರದ ಆದರ್ಶ ಸಂಗಾತಿಯ ಬಯಸುತ್ತ

ನಾನು ೫-೬ ವರ್ಷದವನಿದ್ದಾಗ ನನ್ನ ಅಕ್ಕ ಚಿತ್ರ ಮಂದಿರಕ್ಕೆ ಒಬ್ಬಳೇ ಹೋಗಲಾಗದೆ, ನನಗೆ ಒಂದು  ಪಾರ್ಲೆ-ಜಿ ಬಿಸ್ಕಿಟ್ ಕೊಡಿಸಿಕೊಂಡು ಜೊತೆಗೆಂದು ಕರೆದುಕೊಂಡು ಹೋಗುತ್ತಿದ್ದಳು. ಒಂದೇ ಚಿತ್ರ ಅದು ಆಗ ನನಗೆ ಅರ್ಥವಾಗದದಿದ್ದರೂ ಹಲವಾರು ಬಾರಿ ನೋಡಿದ್ದ ನೆನಪಿದೆ. ಅದು ೧೯೮೩ ರಲ್ಲಿ ಬಿಡುಗಡೆಯಾದ 'ಬೆಂಕಿಯ ಬಲೆ' ಚಿತ್ರ. ಗಂಡ-ಹೆಂಡತಿ ನಡುವಿನ ನವಿರು ಪ್ರೇಮ ದುಃಖಾಂತ ಕಾಣುವ ಚಿತ್ರ. ಆ ಚಿತ್ರದಲ್ಲಿ ನಾಯಕ-ನಾಯಕಿ 'ಬಿಸಿಲಾದರೇನು, ಮಳೆಯಾದರೇನು' ಎಂದು ಯಾವ ಕಷ್ಟವನ್ನು ಜೊತೆಯಲ್ಲೇ ಎದುರಿಸುವ ಹಾಡು ಹಾಡುತ್ತಾರೆ. ಗಂಡ ಅನಾರೋಗ್ಯದಿಂದ ಸಾವನ್ನಪ್ಪಿದಾಗ, ಹೆಂಡತಿ  ಅವನ ಹೆಣ ಸಾಗಿಸುವ ಬಂಡಿಯಲ್ಲೇ ಪ್ರಾಣ ತ್ಯಜಿಸುತ್ತಾಳೆ. ಅಂದಿಗೆ ಆ ಚಿತ್ರ ನೋಡಿದವರು ಗಂಡ-ಹೆಂಡತಿ ಅಂದರೆ ಅನಂತನಾಗ್, ಲಕ್ಷ್ಮಿ ತರಹ ಇರಬೇಕು ಎಂದು ಮಾತನಾಡಿಕೊಂಡಿದ್ದರು.

 

ಕಥೆ, ಕಾದಂಬರಿಗಳು, ಚಲನಚಿತ್ರಗಳಲ್ಲಿ ಅದರ ಕರ್ತೃಗಳು ಸದುದ್ದೇಶದಿಂದ ಆದರ್ಶ ತುಂಬುತ್ತಾರೆ. ಅವರ ಉದ್ದೇಶ ಸಮಾಜ ಅದನ್ನು ಅನುಕರಿಸಲಿ ಎನ್ನುವುದು. ಆದರೆ ಅವು ವಾಸ್ತವ ಕಥೆಯಿಂದ ದೂರ ಇರುತ್ತವೆ. ಆ ಚಿತ್ರದ ನಾಯಕಿ ಲಕ್ಷ್ಮಿ ನಿಜ ಜೀವನದಲ್ಲಿ ಮೂರು ಮದುವೆಯಾಗಿ, ಯಾವ ಗಂಡ ಸತ್ತರೆ ತನಗೇನು ಎನ್ನುವಂತೆ ಹಾಯಾಗಿಲ್ಲವೇ? ಹಾಗೆಯೇ ಅನಂತನಾಗ್ ಕೂಡ ತಮ್ಮ ನಿಜ ಜೀವನದ ಹೆಂಡತಿಗೆ 'ನೀನಿಲ್ಲದೆ ಬದುಕುವ ಶಕ್ತಿ ನನಗಿಲ್ಲ' ಎಂದು ಹೇಳಿದ್ದಾರೆಯೇ ಎನ್ನುವುದು ಅನುಮಾನ. ಚಿತ್ರಕಥೆಯೇ ಬೇರೆ. ನಿಜ ಜೀವನವೇ ಬೇರೆ. ಏಕೆ ಹೀಗೆ?

 

ಪ್ರತಿಯೊಬ್ಬ ಮನುಷ್ಯ, ಗಂಡಾಗಲಿ, ಹೆಣ್ಣಾಗಲಿ ಅವರದೇ ಆದ ವೈಯಕ್ತಿಕ ಆಸೆ, ಹಂಬಲಗಳನ್ನು ಹೊಂದಿರುತ್ತಾರೆ. ಬೇರೆ ಬೇರೆ ಕುಟುಂಬಗಳಲ್ಲಿ, ಬೇರೆ ವಾತಾವರಣದಲ್ಲಿ ಬೆಳೆದ ಇಬ್ಬರು, ಮದುವೆಯಲ್ಲಿ ಜೊತೆಯಾದಾಗ ಅವರಿಬ್ಬರ ನಡುವೆ ಸಾಮ್ಯತೆಗಳಿಗಿಂತ, ಬೇರೆ ಬೇರೆ ಪ್ರವೃತ್ತಿಗಳೇ ಹೆಚ್ಚಾಗಿರುತ್ತವೆ. ಇಬ್ಬರ ಆಸೆಗಳು ವಿರುದ್ಧ ದಿಕ್ಕಿನ ಕಡೆಗೆ ಸೆಳೆದಾಗ, ಮದುವೆ ಇಬ್ಬರ ಸಹನೆಯನ್ನು ಪರೀಕ್ಷೆಗೆ ಒಡ್ಡುತ್ತದೆ. ಇಬ್ಬರಲ್ಲಿ ಒಬ್ಬರು ಸಹನೆ ಕಳೆದುಕೊಂಡರೂ ಸಾಕು. ದಾಂಪತ್ಯದ ಬಿರುಕು ಅವರಿಬ್ಬರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಅಲ್ಲಿಂದ ಶುರುವಾಗುವ ದೋಷಾರೋಪಣೆಗಳು ಕುಟುಂಬದ ಇತರೆ ಸದಸ್ಯರನ್ನು ಸೆಳೆದುಕೊಂಡುಬಿಡುತ್ತವೆ. ಆದರ್ಶ ದಂಪತಿಗಳ ಜೀವನ ದ್ವೇಷಮಯವಾಗುತ್ತದೆ.

 

ಇದಕ್ಕೆಲ್ಲ ಮೂಲ ಕಾರಣ, ಗಂಡ ತನಗೆ ತಕ್ಕ ಹೆಂಡತಿ ಸಿಕ್ಕಿಲ್ಲವೆಂದುಕೊಳ್ಳುವುದು. ಮತ್ತು ಹೆಂಡತಿ ನಾನಾದಕ್ಕೆ ಇವರ ಜೊತೆ ಸಂಸಾರ ಮಾಡಿಕೊಂಡು ಹೋಗುತ್ತಿದ್ದೇನೆ ಎನ್ನುವ ಭಾವದಲ್ಲಿ ಬದುಕುವುದು. ಎಂತಹ ಹೆಂಡತಿ ಸಿಕ್ಕಿದ್ದರೂ, ತಾನು ಜಗಳವಾಡುತ್ತಿದ್ದ ಎನ್ನುವುದು ಗಂಡ ಒಪ್ಪುವುದಿಲ್ಲ. ಇವನನ್ನು ಬಿಟ್ಟು, ಇನ್ನೂ ಮೂರು ಮದುವೆಯಾದರು ತಾನು ಹೊಸ ಗಂಡನಲ್ಲಿ ಸಮಸ್ಯೆ ಹುಡುಕದೆ ಬಿಡುತ್ತಿದ್ದಿಲ್ಲ ಎನ್ನುವುದು ಹೆಂಡತಿ ಒಪ್ಪುವುದಿಲ್ಲ. ಸಮಸ್ಯೆ ಅವರ ಮದುವೆಯಲ್ಲಿಲ್ಲ. ಅವರ ವ್ಯಕ್ತಿತ್ವದಲ್ಲಿದೆ. ಅವರಿಬ್ಬರೂ 'ಬೆಂಕಿಯ ಬಲೆ' ಚಿತ್ರದ ಆದರ್ಶ ದಂಪತಿಗಳನ್ನು ನೋಡಿದ್ದಾರೆ. ಆದರೆ ನಿಜ ಜೀವನದಲ್ಲಿ ಅನಂತನಾಗ್, ಲಕ್ಷ್ಮಿ ಬೇರೆಯೇ ತರಹದ ವ್ಯಕ್ತಿತ್ವ ಹೊಂದಿದ್ದಾರೆ ಎನ್ನುವುದು ಮರೆತು ಹೋಗಿದ್ದಾರೆ. ಚಿತ್ರಕಥೆಯಲ್ಲಿರುವ ನಾಯಕ-ನಾಯಕಿಗಿರುವ ಹೊಂದಾಣಿಕೆಯನ್ನು ಕಂಡು ಬೆರಗಾಗುತ್ತಾರೆ. ಆದರೆ ತಾವು ಮಾತ್ರ ಸಣ್ಣ-ಪುಟ್ಟ ಹೊಂದಾಣಿಕೆಗೂ ತಯ್ಯಾರು ಇರುವುದಿಲ್ಲ. ಎಲ್ಲೂ ಇರದ ಆದರ್ಶ ಸಂಗಾತಿ ತಮಗೆ ಸಿಕ್ಕಿದ್ದರೆ ಎಷ್ಟು ಚೆನ್ನ ಇತ್ತು ಎನ್ನುವ ಕೊರಗಿನಲ್ಲೇ ಸಮಯ ದೂಡುತ್ತಾರೆ. ಇರುವ ಸಂಬಂಧಗಳನ್ನು ಆದರ್ಶವಾಗಿಸಿಕೊಳ್ಳಲು ಪ್ರಯತ್ನ ಮಾಡುವುದರಲ್ಲಿ ಸೋತು ಹೋಗುತ್ತಾರೆ.

Saturday, October 2, 2021

ಗೀತೆಯ ಹಿಂದಿನ ಸಾಹಿತಿ: ಕಣಗಾಲ್ ಪ್ರಭಾಕರ ಶಾಸ್ತ್ರಿ

ಹಳೆಯ ಹಾಡುಗಳು ಮಧುರ ಮತ್ತು ಅರ್ಥಪೂರ್ಣ ಇದ್ದವಲ್ಲವೇ? ಅದರ ಹಿಂದಿನ ಕಾರಣ ಗೀತೆ ರಚನೆಕಾರರಿಗಿದ್ದ ಆಳವಾದ ಜೀವನ ಅನುಭವ, ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಗೀತೆಯ ಸವಿಯನ್ನು ಪ್ರೇಕ್ಷಕರಿಗೆ ಸರಳ ಪದಗಳಲ್ಲಿ, ಪ್ರಾಸಬದ್ಧವಾಗಿ ಮುಟ್ಟಿಸುವ ಕಲೆ. ೬೦ ಮತ್ತು ೭೦ ರ ದಶಕದಲ್ಲಿ ತೆರೆ ಕಂಡ ಚಿತ್ರಗಳಲ್ಲಿ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಮತ್ತು ಗೀತೆಗಳನ್ನು ಬರೆದವರು ಕಣಗಾಲ್ ಪ್ರಭಾಕರ ಶಾಸ್ತ್ರಿ. ಇವರು ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣ. ಕಡು ಬಡತನದ ಕುಟುಂಬದಲ್ಲಿ ಬೆಳೆದ ಇವರು, ತಾತನ ತೊಡೆಯ ಮೇಲೆ ಕುಳಿತು ಕೇಳಿದ ಕಥೆಗಳು ಇವರಲ್ಲಿ ಸಾಹಿತ್ಯನ್ನು ಹುಟ್ಟು ಹಾಕಿದವು. ಹೊಟ್ಟೆ ಪಾಡಿಗಾಗಿ ಚಿಕ್ಕ ವಯಸ್ಸಿನಲ್ಲೇ ನಾಟಕ ಕಂಪನಿ ಸೇರಿದ ಇವರು ಸರಸ್ವತಿಯನ್ನು ಒಲಿಸಿಕೊಂಡು, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.


೧೯೫೮ ರಲ್ಲಿ ತೆರೆ ಕಂಡ 'ಸ್ಕೂಲ್ ಮಾಸ್ಟರ್' ಎನ್ನುವ ಚಿತ್ರಕ್ಕೆ ಇವರು ಬರೆದ ಗೀತೆ 'ಅತಿ ಮಧುರ ಅನುರಾಗ' ಜನಪ್ರಿಯವಾಯಿತು. ೧೯೬೩ ರಲ್ಲಿ ತೆರೆ ಕಂಡ ರಾಜಕುಮಾರ್ ಅಭಿನಯದ 'ಕುಲ ವಧು' ಚಿತ್ರದ 'ಒಲವಿನ ಪ್ರಿಯಲತೆ' ಹಾಡು ಗಮನ ಸೆಳೆಯಿತು. ೧೯೭೦ ರಲ್ಲಿ ಬಂದ 'ನನ್ನ ತಮ್ಮ' ಚಿತ್ರದ 'ಇದೆ ಹೊಸ ಹಾಡು, ಹೃದಯಸಾಕ್ಷಿ ಹಾಡು, ಎದೆಯಾಸೆ ಭಾಷೆ ಈ ಹಾಡು' ಎನ್ನುವ ಗೀತೆ ಇವರ ಅಂತರಂಗವನ್ನೇ ಪ್ರತಿನಿಧಿಸುತ್ತಿತ್ತು. 'ಶ್ರೀ ಕೃಷ್ಣದೇವರಾಯ' ಚಿತ್ರದ 'ತಿರುಪತಿ ಗಿರಿ ವಾಸ ಶ್ರೀ ವೆಂಕಟೇಶ' ಹಾಡು ಕೂಡ ಇವರ ರಚನೆಯೇ. ಅಲ್ಲಿಂದ ಸಾಲು ಸಾಲು ಚಿತ್ರಗಳಿಗೆ ಗೀತೆ, ಸಂಭಾಷಣೆ ರಚಿಸುವುದರಲ್ಲಿ ಪ್ರಭಾಕರ ಶಾಸ್ತ್ರಿ ಸಂಪೂರ್ಣ ಮುಳುಗಿ ಹೋದರು. ಆದರೆ ಇವರ ದೈತ್ಯ ಪ್ರತಿಭೆಯ ಅನಾವರಣವಾಗಿದ್ದು ಅವರ ತಮ್ಮ ಪುಟ್ಟಣ್ಣ ಅವರು ತಮ್ಮ ಚಿತ್ರಗಳಿಗೆ ಇವರಿಂದ ಹಾಡು ಬರೆಸಲು ಆರಂಭ ಮಾಡಿದಾಗ.


'ಶರಪಂಜರ' ಚಿತ್ರದ 'ಬಿಳಿಗಿರಿ ರಂಗಯ್ಯ, ನೀನೇ ಹೇಳಯ್ಯ' ಎನ್ನುವ ಮನೋಜ್ಞ ಹಾಡು ಇವರಿಂದ ಹುಟ್ಟಿ ಬಂತು. 'ಸಾಕ್ಷಾತ್ಕಾರ' ಚಿತ್ರಕ್ಕೆ ಇವರು ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು ಹೀಗೆ ಸಮಗ್ರ ಸಾಹಿತ್ಯದ ಜವಾಬ್ದಾರಿ ಹೊತ್ತರು. 'ರಂಗನಾಯಕಿ', 'ಶುಭ ಮಂಗಳ' ಚಿತ್ರಗಳಿಗೆ ಇವರು ರಚಿಸಿದ ಹಾಡುಗಳು ಚಿತ್ರಕ್ಕೆ ಮೆರುಗು ತಂದು ಕೊಟ್ಟವು. ಭಾಷಾ ಪ್ರಜ್ಞೆಯನ್ನು, ಭಾವನೆಗಳ ಜೊತೆ ಮೇಳೈಸಿ ಇವರು ರಚಿಸಿದ 'ಶುಭ ಮಂಗಳ' ಚಿತ್ರದ ಈ ಗೀತೆ ನನಗೆ ಅಚ್ಚು ಮೆಚ್ಚು.


"ಶುಭ ಮಂಗಳ

ಸುಮುಹೂರ್ತವೆ 

ಶುಭವೇಳೆ

ಅಭಿಲಾಷೆಯ

ಅನುಬಂಧವೇ

ಕರೆಯೋಲೆ


ಚೈತ್ರ ವಸಂತವೇ ಮಂಟಪ ಶಾಲೆ 

ತಾರಾಲೋಕದ ದೀಪಮಾಲೆ

ಸದಾನುರಾಗವೇ ಸಂಬಂಧ ಮಾಲೆ

ಬದುಕೇ ಭೋಗದ ರಸರಾಸ ಲೀಲೆ


ಭಾವತರಂಗವೇ ಸಪ್ತಪದಿ ನ ಓಲೆ 

ಭಾವೈಕ್ಯ ಗಾನವೇ ಉರುಟಣೆ ಉಯ್ಯಾಲೆ 

ಭಾವೋನ್ಮಾದವೇ ಶೃಂಗಾರ ಲೀಲೆ 

ಬದುಕೇ ಭಾವದ ನವರಾಗಮಾಲೆ


ಈ ಜೀವನವೇ ನವರಂಗ ಶಾಲೆ

ಯೌವನ ಕಾಲವೇ ಆನಂದ ಲೀಲೆ 

ಹೃದಯ ಮಿಲನವೇ ಹರುಷದ ಹಾಲೆಲೆ

ಬದುಕೇ ಸುಮಧುರ ಸ್ನೇಹ ಸಂಕೋಲೆ


ಶುಭ ಮಂಗಳ

ಸುಮುಹೂರ್ತವೆ 

ಶುಭವೇಳೆ

ಅಭಿಲಾಷೆಯ

ಅನುಬಂಧವೇ

ಕರೆಯೋಲೆ"


ನಮ್ಮ ನಿಮ್ಮ ಜೀವನವನ್ನು ಒಂದೆರಡು ಭಾವಗಳು ಆಳಿದರೆ, ಕಣಗಾಲ್ ಪ್ರಭಾಕರ ಶಾಸ್ತ್ರಿ ತರಹದ ಕವಿಗಳ ಬದುಕೇ ಭಾವದ ನವರಾಗಮಾಲೆ.

Sunday, September 26, 2021

ಬದುಕು ಕರೆದೊಯ್ದ ಕಡೆಗೆ ಹೋದೆ ನಾನು

 ಹಿಂದಿಯ 'ಹಮ್ ದೋನೋ' ಚಿತ್ರದ ಒಂದು ಹಾಡು 'ಮೈ ಜಿಂದಗಿ ಕಾ ಸಾಥ್ ನಿಭಾತಾ ಚಲಾ ಗಯಾ'. ಈ ಹಾಡನ್ನು ಒಬ್ಬ ಉಪೇಕ್ಷೆಯ ವ್ಯಕ್ತಿ ಹಾಡುವ ಹಾಡಿನಂತೆ ಚಿತ್ರೀಕರಿಸಲಾಗಿದೆ. ಆದರೆ ಲೌಕಿಕದಲ್ಲಿ ಎಲ್ಲವನ್ನು ನಿರ್ಲಕ್ಷಿಸುವುದನ್ನೇ ಅಧ್ಯಾತ್ಮ ಕೂಡ ಹೇಳಿಕೊಡುತ್ತದೆ. ಆದ್ದರಿಂದ ಅದನ್ನು ಯಾವ ತರಹ ಬೇಕಾದರೂ ಸ್ವೀಕರಿಸಬಹುದು. ಸಾಹಿರ್ ಲುಧಿಯಾನ್ವಿ ರಚಿಸಿದ, ಮೊಹಮ್ಮದ್ ರಫಿ ಹಾಡಿದ ಈ ಹಾಡು ಇಷ್ಟವಾಯಿತು.  


https://www.youtube.com/watch?v=ZwDvIZA-H9A


ಎಲ್ಲ ಹಾಡುಗಳನ್ನು ಯಥಾವತ್ತಾಗಿ ಭಾಷಾಂತರ ಮಾಡಲು ಎಲ್ಲಿ ಸಾಧ್ಯ? ಆದರೆ ಅರ್ಥವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.


ಬದುಕು ಕರೆದೊಯ್ದ ಕಡೆಗೆ ಹೋದೆ ನಾನು

ನನ್ನೆಲ್ಲ ಚಿಂತೆಗಳನ್ನು ಹೊಗೆಯ ಹಾಗೆ ತೇಲಿ ಬಿಟ್ಟೆ


ವಿನಾಶದ ಬಗ್ಗೆ ಕೊರಗುವುದಲ್ಲಿ ಏನಿದೆ ಅರ್ಥ?

ಅದಕ್ಕೆ ನನ್ನ ವಿನಾಶವನ್ನೇ ಮೆರೆಸತೊಡಗಿದೆ


ಸಿಕ್ಕಿದ್ದೇ ನನ್ನ ದೈವ ಎಂದುಕೊಂಡೆ

ಕಳೆದು ಹೋದದ್ದನ್ನು ನಾನು ಮರೆತುಬಿಟ್ಟೆ


ಸುಖ-ದುಃಖದ ನಡುವೆ ಭೇದವನ್ನೇ ಕಾಣದ

ಸ್ಥಿತಿಗೆ ಹೃದಯವನ್ನು ತಳ್ಳಿಕೊಂಡು ಬಂದೆ


ಬದುಕು ಕರೆದೊಯ್ದ ಕಡೆಗೆ ಹೋದೆ ನಾನು

ನನ್ನೆಲ್ಲ ಚಿಂತೆಗಳನ್ನು ಹೊಗೆಯ ಹಾಗೆ ತೇಲಿ ಬಿಟ್ಟೆ

Saturday, September 25, 2021

ಮುಸ್ಸಲೋನಿ ಎಂಬ ಸರ್ವಾಧಿಕಾರಿ - ಭಾಗ ೨

(ಫ್ರಾಂಕ್ ಡಿಕೊಟ್ಟೆರ್ ಬರೆದ 'How to be a dictator' ಪುಸ್ತಕದ 'ಮುಸ್ಸಲೋನಿ' ಅಧ್ಯಾಯದ ಆಯ್ದ ಭಾಗದ ಭಾವಾನುವಾದ)


೧೯೩೦ ರ ಹೊತ್ತಿಗೆ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ಮುಸ್ಸಲೋನಿ. ಅವನು ಹೋದ ಕಡೆಯೆಲ್ಲ ಜನ ಸಾಗರ ಮತ್ತು ಚಪ್ಪಾಳೆಗಳ ಸುರಿಮಳೆ. ಅಲ್ಲೊಬ್ಬರು, ಇಲ್ಲೊಬ್ಬರು ಮುಸ್ಸಲೋನಿ ಕಟ್ಟಿದ ಪಕ್ಷವನ್ನು ಟೀಕೆ, ವಿಮರ್ಶೆ ಮಾಡುವವರು ಇದ್ದರೂ ಮುಸ್ಸಲೋನಿಯನ್ನು ಟೀಕೆ ಮಾಡುವವರು ಮಾತ್ರ ಸಮಾಜದ ಹೊರ ನೋಟಕ್ಕೆ ಕಾಣುತ್ತಿರಲಿಲ್ಲ. ಏಕೆಂದರೆ ಮುಸ್ಸಲೋನಿ ಅವರಿಗೆಲ್ಲ ಆರಾಧ್ಯ ದೈವ ಆಗಿಬಿಟ್ಟಿದ್ದ. ಅವನಲ್ಲಿ ಏನು ತಪ್ಪು ಹುಡುಕುವುದು?

ಮುಸ್ಸಲೋನಿ ಮತ್ತು ಅವನ ಪಕ್ಷ ಬಿಟ್ಟರೆ ಜನರಿಗೆ ಬೇರೆ ಆಯ್ಕೆಯೇ ಇರಲಿಲ್ಲ. ಮೊದಲಿಗೆ ಮಂತ್ರಮುಗ್ಧರಾಗಿ ಮುಸ್ಸಲೋನಿಯ ಭಾಷಣ ಕೇಳುತ್ತಿದ್ದ ಜನರಿಗೆ ಕ್ರಮೇಣ ಮುಸ್ಸಲೋನಿಯ ನಿಜಮುಖದ ಗೋಚರವಾಗತೊಡಗಿತು. ಅವನೊಬ್ಬ ಅದ್ಭುತ ನಟ ಮತ್ತು ಅವನು ಹಿಂಬಾಲಕರು  ನಾಟಕದ ಇತರ ಪಾತ್ರಧಾರಿಗಳು ಎನ್ನುವ ಅರಿವು ಬರತೊಡಗಿತು. ಬಹಿರಂಗವಾಗಿ ವಿರೋಧಿಸಿದರೆ ಕಠಿಣ ಶಿಕ್ಷೆಗಳಿದ್ದವಲ್ಲ. ಹೀಗಾಗಿ ಹೊರಗೆ ಏನು ಮಾತನಾಡದೆ ಇದ್ದರೂ ತಮ್ಮ ತಮ್ಮ ಜನರೊಡನೆ ಇದ್ದಾಗ M for Mussolini ಅಲ್ಲ ಅದು M for Misery ಎಂದು ನಗೆಯಾಡತೊಡಗಿದರು. ತನ್ನ ಜನಪ್ರಿಯತೆ ಕುಗ್ಗುತ್ತಿರುವುದರ ಸುಳಿವನ್ನು ರಹಸ್ಯ ಏಜೆಂಟ ರಿಂದ ಪಡೆದ ಮುಸ್ಸಲೋನಿ, ಜನರ ಗಮನ ಬೇರೆ ಕಡೆ ಹರಿಸಲು ಹೊಸ ಯೋಜನೆಯೊಂದನ್ನು ಹೆಣೆದ. ಅದು ಪಕ್ಕದ ದೇಶವಾದ ಗ್ರೀಸ್ ಮೇಲೆ ಧಾಳಿ ನಡೆಸುವುದು. ಆದರೆ ಮುಸ್ಸಲೋನಿಯ ದುರಾದೃಷ್ಟಕ್ಕೆ ಅವನ ಸೈನಿಕರು ಪ್ರತಿಕೂಲ ಪರಿಸ್ಥಿತಿಯಿಂದ ಮರಳಿ ಬಂದರು. ತನ್ನ ಸ್ನೇಹಿತ ಹಿಟ್ಲರ್ ನ ಸಹಾಯ ಕೋರಿದ ಮುಸ್ಸಲೋನಿ, ಗ್ರೀಸ್ ದೇಶವನ್ನು ಆಕ್ರಮಿಸಿಕೊಳ್ಳುವಲ್ಲಿ ಸಫಲನಾದ. ಆದರೆ ಹಿಟ್ಲರ್ ನ ಸೈನಿಕರು ಅಲ್ಲಿ ತಮ್ಮ ಅಧಿಪತ್ಯ ಸಾಧಿಸಿ ಮುಸ್ಸಲೋನಿ ಯನ್ನು ಮೂಲೆಗುಂಪು ಮಾಡಿಬಿಟ್ಟರು. ಒಂದು ಕಾಲದ ಸರ್ವಾಧಿಕಾರಿ ಮುಸ್ಸಲೋನಿ ಸುಮ್ಮನೆ ಶಬ್ದ ಮಾಡುವ ಖಾಲಿ ಪಾತ್ರೆಯಾದ. 

ಇಟಲಿ ದೇಶದ ಜನರು ತಮ್ಮ ನಾಯಕನ ಮಾತುಗಳನ್ನು ನಂಬದೆ ನಿಜ ಸುದ್ದಿ ತಿಳಿಯಲು ಬ್ರಿಟಿಷ್ ದೇಶದ ರೇಡಿಯೋ ಸ್ಟೇಷನ್ ಗಳಿಂದ ಸುದ್ದಿ ಕೇಳತೊಡಗಿದದರು. ಇತ್ತ ಆಫ್ರಿಕಾ ದೇಶಗಳ ಕಡೆ ಆಕ್ರಮಣಕ್ಕೆ ಹೋಗಿದ್ದ ಮುಸ್ಸಲೋನಿಯ ಸೇನೆ ಸೋತು ಸುಣ್ಣವಾಯಿತು. ಒಂದು ಕಾಲದಲ್ಲಿ 'ಅತಿ ಹೆಚ್ಚು ಫೋಟೋ ತೆಗೆಸಿಕೊಂಡ ವ್ಯಕ್ತಿ' ಎಂದು ಪ್ರಸಿದ್ಧಿ ಪಡೆದಿದ್ದ ಮುಸ್ಸಲೋನಿಯ ಚಿತ್ರಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗದೆ ತಿಂಗಳುಗಳು ಸವೆದವು. ಸ್ವತಃ ಮುಸ್ಸಲೋನಿ ತನ್ನ ಭಾಷಣಗಳನ್ನು ನಿಲ್ಲಿಸಿಬಿಟ್ಟ. ಅವನು ಬದುಕಿದ್ದಾನೋ, ಇಲ್ಲವೋ ಎಂದು ಅನುಮಾನ ಪಡುವಷ್ಟರ ಮಟ್ಟಿಗೆ ಅವನಿಂದ ಯಾವುದೇ ಸುದ್ದಿ ಬರುವುದು ನಿಂತು ಹೋಯಿತು. 

ಹದಿನೆಂಟು ತಿಂಗಳ ನಂತರ ತನ್ನ ಮೌನ ಮುರಿದು ಮಾತನಾಡಿದ ಮುಸ್ಸಲೋನಿ ಯ ಧ್ವನಿಯಲ್ಲಿ ಯಾವುದೇ ಮಾಂತ್ರಿಕತೆ ಉಳಿದಿರಲಿಲ್ಲ. ಆ ಹೊತ್ತಿಗೆ ಇಟಲಿಯ ದೊಡ್ಡ ಪಟ್ಟಣಗಳ ಮೇಲೆ ಪಕ್ಕದ ದೇಶಗಳ ಧಾಳಿ ನಡೆದಿತ್ತು. ಅದರಿಂದ ಜನರನ್ನು ಉಳಿಸುವ ಶಕ್ತಿ ಮುಸ್ಸಲೋನಿ ಯಲ್ಲಿ ಉಳಿದಿರಲಿಲ್ಲ. ಅವನನ್ನು ಆರಾಧಿಸಿದ ಜನರೇ ಅವನು ಸತ್ತರೆ ಚೆನ್ನ ಎಂದು ಮಾತನಾಡುವಂತೆ ಆಯಿತು. ಇಟಲಿ ದೇಶದ ಜನನಾಯಕರೆಲ್ಲ ಸೇರಿ ಮುಸ್ಸಲೋನಿಯನ್ನು ಕೆಳಗಿಳಿಸುವ ನಿರ್ಧಾರಕ್ಕೆ ಬಂದರು. ಆದರೆ ಮುಸ್ಸಲೋನಿಗೆ ಇನ್ನೂ ಒಬ್ಬ ಸ್ನೇಹಿತ ಉಳಿದೆ ಇದ್ದ. ಅವನು ಹಿಟ್ಲರ್. ಅವನ ಸಹಾಯದಿಂದ ತನ್ನ ಕೆಲವು ವೈರಿಗಳನ್ನು ಮುಸ್ಸಲೋನಿ ಮುಗಿಸಿದರೂ, ಅವನ ಕಾಲ ಮಿಂಚಿ ಹೋಗಿತ್ತು. ಅವನ ವಿರೋಧಿಗಳು ಮುಸ್ಸಲೋನಿಯನ್ನು ಮತ್ತು ಅವನ ಹಿಂಬಾಲಕರನ್ನು ಶೂಟ್ ಮಾಡಿ ಸಾಯಿಸಿ, ಮಿಲಾನ್ ನಗರದಲ್ಲಿ ತಲೆ ಕೆಳಗೆ, ಕಾಲು ಮೇಲೆ ಮಾಡಿ ಜನರ ವೀಕ್ಷಣೆಗೆಂದು ನೇತು ಹಾಕಿದರು. ಅದಕ್ಕೆ ಮೊದಲೇ ಮುಸ್ಸಲೋನಿ ತನ್ನ ಆಪ್ತರಲ್ಲಿ ತನ್ನ ನಟನೆ ಮುಗಿದಿರುವುದಾಗಿ ಮತ್ತು ತಾನು ಜೀವಂತ ಶವ ಅಷ್ಟೇ ಎಂದು ಹೇಳಿಕೊಂಡಿದ್ದ.

ಮುಸ್ಸಲೋನಿ ಎಂಬ ಸರ್ವಾಧಿಕಾರಿ

(ಫ್ರಾಂಕ್ ಡಿಕೊಟ್ಟೆರ್ ಬರೆದ 'How to be a dictator' ಪುಸ್ತಕದ 'ಮುಸ್ಸಲೋನಿ' ಅಧ್ಯಾಯದ ಆಯ್ದ ಭಾಗದ ಭಾವಾನುವಾದ)

 

ಮುಸ್ಸಲೋನಿ ಜನ ಸಾಮಾನ್ಯರನ್ನು ತನ್ನ ಮೋಡಿಗೆ ಒಳಪಡಿಸಲು ಉತ್ಸುಕನಾಗಿದ್ದ. ಅದಕ್ಕಾಗಿ ಅವನು ದೇಶಾದ್ಯಂತ ಪ್ರವಾಸ ಕೈಗೊಂಡ. ಕಾರ್ಯಕರ್ತರ ಸಾಮೂಹಿಕ ಸಭೆಗಳು, ಸರ್ಕಾರೀ ಕೆಲಸಗಳ ಉದ್ಘಾಟನೆಗಳು ಹೀಗೆ ಯಾವುದೇ ಅವಕಾಶ ಇರಲಿ, ಅವುಗಳ ಮೂಲಕ ನೂರಾರು ಪಟ್ಟಣ, ಹಳ್ಳಿಗಳಲ್ಲಿ ಅವನು ಚಿರಪರಿಚಿತನಾಗಿ ಹೋದ. ತನ್ನ ಓಡಾಟಕ್ಕೆಂದೇ ಒಂದು ರೈಲನ್ನು ನಿಯಮಿಸಿಕೊಂಡ. ಮಾರ್ಗ ಮದ್ಯದಲ್ಲಿ ಜನಸಂದಣಿ ಎಲ್ಲೆಲ್ಲಿ ಇರುತ್ತಿತ್ತೋ, ಅಲ್ಲಿ ಅವನಿದ್ದ ರೈಲು ನಿಧಾನವಾಗಿ ಚಲಿಸುತ್ತಿತ್ತು. ಅವನು ಕಿಟಕಿಯಲ್ಲಿ ನಿಂತು ಕೈ ಬೀಸುತ್ತ ಜನರ ಕಣ್ಣಿಗೆ ತಾನು ಬಿದ್ದಿದ್ದೇನೆ ಎನ್ನುವುದನ್ನು ಖಚಿತಗೊಳಿಸಿಕೊಳ್ಳುತ್ತಿದ್ದ. ಮೊದಲಿಗೆ ಯಾವುದು ರಾಜಕೀಯ ಅವಶ್ಯಕತೆಯಾಗಿತ್ತೋ ಅದು ಕಾಲ ಕ್ರಮೇಣ ಒಂದು ಗೀಳಾಗಿ ಮಾರ್ಪಟ್ಟಿತ್ತು.

 

ತನ್ನ ನಂಬಿಕಸ್ಥರಿಗೆ ಕೆಲವು ಕೆಲಸಗಳ ಜವಾಬ್ದಾರಿ ವಹಿಸಿದ. ಅದರಲ್ಲಿ ಮೊದಲನೆಯದು, ತನ್ನ ಅವಶ್ಯಕತೆ ಎಷ್ಟು ಇದೆ ಎಂದು ಜನರಿಗೆ ಮಾಧ್ಯಮಗಳ ಮೂಲಕ ತೋರಿಸುವುದು, ಅದಕ್ಕೆ ನೆರವಾದ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವುದು, ಸಹಾಯ ಮಾಡದವರನ್ನು ತನ್ನ ಕಪಿ ಮುಷ್ಟಿಯಲ್ಲಿ ಹಿಚುಕಿ ಹಾಕುವುದು. ಎರಡನೆಯದು, ತನ್ನ ರಾಜಕೀಯ ವೈರಿಗಳನ್ನು ಒಬ್ಬೊಬ್ಬರನ್ನಾಗಿ ನಿರ್ಮೂಲ ಮಾಡುವುದು. ಇವೆಲ್ಲದರ ನಡುವೆ ಮುಸ್ಸೊಲೊನಿ ಜನರ ಮಧ್ಯೆ ಆವೇಶದಿಂದ ಭಾಷಣ ಮಾಡುತ್ತಿದ್ದ. ಜನರ ಮನಸ್ಸಿನಿಂದ ತಾನು ಕಣ್ಮರೆಯಾಗದಂತೆ, ಅವರಿಗೆ ಉಳಿದಿರುವ ಕೊನೆಯ ಆಶಾಕಿರಣ, ಭರವಸೆ ತಾನೊಬ್ಬನೇ ಎನ್ನುವ ಸಂದೇಶ ಪರೋಕ್ಷವಾಗಿ ನೀಡಲು ಮರೆಯುತ್ತಿರಲ್ಲ. ಪಕ್ಷದ, ಸರಕಾರದ ಎಲ್ಲ ಕಾರ್ಯಗಳು ಅವನ ಹತೋಟಿಗೆ ಬರಲು ಬಹಳ ಸಮಯ ಏನೂ ತಗುಲಲಿಲ್ಲ. ಆಮೇಲಿಂದ ಅವನ ಮಾತೇ ಅಂತಿಮ ಆಗಿ ಹೋಯಿತು. ಎಲ್ಲ ಊರಿನ, ಎಲ್ಲ ಜನ ಸಂಪರ್ಕ ಸ್ಥಳಗಳಲ್ಲಿ ಅವನ ಫೋಟೋಗಳು ರಾರಾಜಿಸತೊಡಗಿದವು. ಮಾಧ್ಯಮಗಳು ಅವನನ್ನು ಹೊಗಳಿ ಪುಟಗಟ್ಟಲೆ ಬರೆದವು. ಅವನ ಜೀವನ ಚರಿತ್ರೆಯ ಪುಸ್ತಕಗಳು ಒಂದಾದರ ನಂತರ ಇನ್ನೊಂದರಂತೆ ಬಿಡುಗಡೆಯಾದವು. ಅಂತರರಾಷ್ಟ್ರೀಯ ಗಣ್ಯ ವ್ಯಕ್ತಿಗಳೆಲ್ಲ ಅವನಿಗೆ ಭೇಟಿಯ ಗೌರವ ಕೊಡಲು ಬಂದರು. ಅವನ ಜೊತೆ ಕಳೆದ ಕೆಲವೇ ಕ್ಷಣಗಳಿಗೆ, ಅವನದು ಸೂಜಿಗಲ್ಲಿನ ವ್ಯಕ್ತಿತ್ವ ಎಂದು ಹೊಗಳಿದರು.

 

ಹೊರಗಿನ ಶತ್ರುಗಳು ಇಲ್ಲವಾದ ಮೇಲೆ, ತನ್ನದೇ ಪಕ್ಷದಲ್ಲಿ ತನಗೆ ಯಾವುದೇ ಉತ್ತರಾಧಿಕಾರಿ ಹುಟ್ಟದಂತೆ ನೋಡಿಕೊಳ್ಳುವುದನ್ನು ಮುಸ್ಸಲೋನಿ ಮರೆಯಲಿಲ್ಲ. ಯಾರಾದರೂ ತನಗಿಂತ ಜನಮನ್ನಣೆ ಪಡೆದರೆ ಸಾಕು ಅವರನ್ನು ಆ ಜಾಗದಿಂದ ಕೆಳಗಿಳಿಸಿ, ಅಲ್ಲಿ ಒಬ್ಬ ಅನಾಮಿಕನನ್ನು ತಂದು ಕೂರಿಸುತ್ತಿದ್ದ. ಅವನಿಗೆ ಸ್ವಾಮಿ ನಿಷ್ಠೆ ತೋರಿಸದವರೆಲ್ಲ ಮೂಲೆ ಗುಂಪಾಗಿ ಹೋದರು. ಪಕ್ಷದ, ದೇಶದ, ಜನ ಹಿತದ ಧ್ಯೇಯಗಳೆಲ್ಲ ಬದಲಾಗಿ 'ಮುಸ್ಸಲೋನಿ ಎಲ್ಲ ವಿಷಯದಲ್ಲೂ ಸರಿ' ಎನ್ನುವುದೇ ವೇದವಾಕ್ಯವಾಗಿ ಹೋಯಿತು. ಅವನೀಗ ತನ್ನ ಭಾಷಣಗಳನ್ನು ರೇಡಿಯೋದಲ್ಲಿ ಪ್ರಸಾರ ಮಾಡಿ ಇಡೀ ಇಟಲಿ ದೇಶ ಒಂದೇ ಸಲಕ್ಕೆ ತನ್ನ ಮಾತು ಕೇಳುವಂತೆ ಮಾಡಿಕೊಂಡ. ಜನ ನಿಬಿಡ ಸ್ಥಳಗಳಲ್ಲಿ ಬೃಹತ್ ಸ್ಪೀಕರ್ ಗಳು ಅವನ ಭಾಷಣವನ್ನು ಬಿತ್ತರಿಸತೊಡಗಿದವು.


ಅವನು ಸಾರ್ವಜನಿಕವಾಗಿ ಯಾವುದಾದರೂ ಊರಲ್ಲಿ ಭಾಷಣ ಮಾಡುವುದು ಇತ್ತೆಂದರೆ, ಅಂದು ಅಲ್ಲಿ ಶಾಲೆಗಳಿಗೆ, ಅಂಗಡಿ-ಮುಗ್ಗಟ್ಟುಗಳಿಗೆ ರಜೆ ಘೋಷಿಸಲಾಗುತ್ತಿತ್ತು. ಅವನ ಭಾಷಣ ಕೇಳುವುದು ಎಲ್ಲರಿಗೂ ಕಡ್ಡಾಯವಾಗಿತ್ತು. ಅವನು ಭಾಷಣ ಮಾಡುವ ವೇದಿಕೆಯಲ್ಲಿ ಅವನು ಪ್ರಕಾಶಮಾನವಾಗಿ ಕಾಣುವಂತೆ ದೀಪಗಳಿಂದ ಸಜ್ಜುಗೊಳಿಸಲಾಗುತ್ತಿತ್ತು. ಅಲ್ಲಿ ಸೇರಿದ ಜನ ಸಮೂಹ ಅವನ ಹೆಸರನ್ನೇ ಜಪಿಸುವಂತೆ ಹಿನ್ನೆಲೆ ಸಂಗೀತ ನೀಡಲಾಗುತ್ತಿತ್ತು. ಜನರ ಉನ್ಮಾದ ತಾರಕಕ್ಕೇರಿದ ಮೇಲೆ ಮುಸ್ಸಲೋನಿ ವೇದಿಕೆಯ  ಮೇಲೆ ಪ್ರತ್ಯಕ್ಷನಾಗಿ ಅವರ ಹುಚ್ಚನ್ನು ಇನ್ನು ಅಧಿಕಗೊಳಿಸುತ್ತಿದ್ದ.