ನಿಮಗೆ ನಡು ರಾತ್ರಿಯಲ್ಲಿ ಭೀಕರವಾದ ದುಃಸ್ವಪ್ನ ಬೀಳುತ್ತದೆ. ಅದು ನಿಮ್ಮಲ್ಲಿ ಭಯ ಹುಟ್ಟಿಸಿ, ನಿಮ್ಮ ಉದ್ವೇಗ ಹೆಚ್ಚಾಗಿ ನಿದ್ದೆಯಿಂದ ಎಚ್ಚರವಾಗುತ್ತದೆ. ಎದ್ದ ಮೇಲೆ ಕ್ರಮೇಣ ಅದು ಒಂದು ಕನಸು ಮಾತ್ರ ಎನ್ನುವುದು ನಿಮಗೆ ಅರಿವಿಗೆ ಬರುತ್ತದೆ. ಆಗ ನಿರಾಳವಾಗುತ್ತೀರಿ. ದೇವರಿಗೆ ಧನ್ಯವಾದ ಸಲ್ಲಿಸುತ್ತೀರಿ. ಆದರೆ ಕನಸು ನಡೆದಷ್ಟೂ ಹೊತ್ತು ಅದು ಕನಸು ಎನ್ನುವ ಅರಿವೆಯೇ ನಿಮಗೆ ಇದ್ದಿಲ್ಲ. ಅರಿವು ಬಂದಿದ್ದು ಕನಸಿನಿಂದ ಹೊರ ಬಂದ ಮೇಲೆಯಷ್ಟೇ ಅಲ್ಲವೇ?
ಸಾವಿನ ಅನುಭವವು ಹೀಗೆಯೇ ಇರಬಹುದಲ್ಲವೇ? ಸತ್ತ ನಂತರ ಎಚ್ಚರವಾಗಿ, ನಿರಾಳವಾಗಿ, ಬದುಕಿದ್ದು ಒಂದು ಕನಸಿನ ತರಹ, ಅದು ನಿಜವಲ್ಲ ಎಂದು ಅನಿಸಲು ಸಾಧ್ಯವಿದೆ ಅಲ್ಲವೇ? ಕನಸಿನಲ್ಲಿ ಇದ್ದಷ್ಟು ಹೊತ್ತು ಅದು ವಾಸ್ತವವೇ ಎಂದು ತೋರುತ್ತಿತ್ತು. ಅದು ಮುಗಿದ ಮೇಲೆಯೇ ಅದು ವಾಸ್ತವವಲ್ಲ ಎನ್ನುವುದು ಅರಿವಿಗೆ ಬಂದಿದ್ದು. ಹಾಗೆಯೆ ನಮ್ಮ ಜೀವನವು ಕೂಡ, ಬದುಕಿರುವಾಗ ವಾಸ್ತವ ಎಂದು ಅನ್ನಿಸಿದರೂ ಅದು ಮುಗಿದ ಮೇಲೆ ಅದರ ನಿಜ ಗತಿ ಗೊತ್ತಾಗುವುದು ಅಲ್ಲವೇ?
ಕನಸು, ಜೀವನ ಎರಡು ವಾಸ್ತವ ಅಲ್ಲ ಅಂದರೆ ಅವು ಏನು? ಅದು ಮಾಯೆ ಎನ್ನುವ ಉತ್ತರ ನೀಡುತ್ತವೆ ನಮ್ಮ ವೇದ-ಉಪನಿಷತ್ ಗಳು. Elon Musk ಎನ್ನುವ ಆಧುನಿಕ ಕಾಲದ ಮೇಧಾವಿ "We're Probably Living in a Simulation " ಎಂದು ಹೇಳಿದನಲ್ಲ. ಹಾಗಾದರೆ ನಾವು ನಾಟಕದ ವೇಷಧಾರಿಗಳೇ? ಅನ್ಯಲೋಕದಲ್ಲಿರುವ ಯಾರೋ ನಮ್ಮನ್ನು ವಿಡಿಯೋ ಗೇಮ್ ತರಹ ಆಡುತ್ತಿರಬಹುದೇ? ಈ ಆಟವನ್ನು ಬಲ್ಲವರು, ಜೋತಿಷ್ಯ ಶಾಸ್ತ್ರ ಬರೆದರೆ? ಎಷ್ಟೋ ಸಲ ಜೋತಿಷ್ಯ ಹೇಳಿದಂತೆ ಕರಾರುವಕ್ಕಾಗಿ ನಡೆಯುತ್ತದೆಯಲ್ಲ. ಹಾಗಾದರೆ ಇಲ್ಲಿ ನಮಗೊಪ್ಪಿಸಿದ ಸಂಭಾಷಣೆಯನ್ನು ಹೇಳಿ ಹೋಗವುದು ಮಾತ್ರ ನಮ್ಮ ಕರ್ತವ್ಯವೇ? ಹಾಗಂತ ನಮ್ಮ ಪ್ರಯತ್ನಕ್ಕೆ ಫಲ ಇಲ್ಲ ಎಂದೇನಿಲ್ಲ. ಹಾಗಾದರೆ ಈ ಮಾಯೆ ಎನ್ನುವ ಚಿತ್ರದ ನಟರು, ನಿರ್ದೇಶಕರುಗಳು ನಾವುಗಳೇ? ನಮ್ಮ ಕರ್ಮಗಳಿಗೆ ತಕ್ಕಂತೆ ನಮಗೆ ಇಲ್ಲಿ ಪಾತ್ರ ಸಿಕ್ಕಿತೇ? ಪಾತ್ರ ಚೆನ್ನಾಗಿ ನಿಭಾಯಿಸಿದರೆ ಹೆಚ್ಚಿನ ಮಹತ್ವದ ಪಾತ್ರಗಳು ಸಿಗುವವೇ? ಸಿಕ್ಕಿದ ಪಾತ್ರ ಬಿಟ್ಟು ನಮಗೆ ಬೇರೆ ಏನಾದರು ವ್ಯಕ್ತಿತ್ವ ಇರಲು ಸಾಧ್ಯವೇ?
ವೇದಾಂತ, ವಿಜ್ಞಾನ ಎರಡು ಸಂಧಿಸಿದಾಗ ತರ್ಕಬದ್ಧವಾದ ಉತ್ತರಗಳನ್ನು ಪಡೆಯಬಹುದು. ಆದರೆ ಅಲ್ಲಿಯವರೆಗೆ ಕಾಯುವ ಅವಶ್ಯಕತೆ ಇಲ್ಲ ಎನ್ನುತ್ತಾರೆ ನಮ್ಮ ಸಾಧು-ಸಂತರು. ಈ ಪ್ರಶ್ನೆಗಳಿಗೆ ಅವರು ಹುಡುಕಿಕೊಂಡ ಮಾರ್ಗ 'ಧ್ಯಾನ'. ಧ್ಯಾನ ಉತ್ತರ ಕೊಡುವ ಬದಲು, ನಮ್ಮ ಪ್ರಶ್ನೆಗಳಿಗೆ ಸ್ಪಷ್ಟತೆ ಕೊಡಲಾರಂಭಿಸುತ್ತದೆ. ಕ್ರಮೇಣ ನಮ್ಮ ಪ್ರಶ್ನೆಗಳೇ ಇಲ್ಲವಾಗಿ ಹೋಗಿಬಿಡುತ್ತವೆ. ಭಾಷೆ-ತರ್ಕವನ್ನು ಮೀರಿದ ಮೌನಕ್ಕೆ ಅಲ್ಲಿ ಪ್ರಾಶಸ್ತ್ಯ. ಆ ದಿವ್ಯ ಮೌನ ನಮ್ಮನ್ನು ಮಾಯೆಯಿಂದ ಹೊರದೂಡುತ್ತದೆ. ಇದು ಯೋಗಿಗಳ ಅನುಭವ. ನನಗೆ ಇದರ ಅನುಭವ ಇನ್ನು ಆಗಿರದಿದ್ದರೂ, ಅದು ನಿಜ ಅನ್ನಿಸತೊಡಗಿದೆ.