ಕನಕದಾಸರ ರಚನೆ ಹೀಗಿದೆ:
"ಏಸು ಕಾಯಂಗಳ ಕಳೆದು
ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು
ದಾಟಿ ಬಂದ ಈ ಶರೀರ ...
ದಾಸನಾಗು, ವಿಶೇಷನಾಗು"
ಆಧುನಿಕ ವಿಕಾಸ ವಿಜ್ಞಾನ (Evolutionary Science) ಕೂಡ ಇದನ್ನೇ ಹೇಳುವುದು. ಜಲಚರಗಳಿಂದ, ಉಭಯವಾಸಿ, ಪಕ್ಷಿಗಳು, ಪ್ರಾಣಿಗಳು, ಸಸ್ತನಿಗಳು ಮತ್ತು ಕೊನೆಗೆ ಅವು ಮಾರ್ಪಾಡಾಗಿ ಮಾನವ ವಿಕಾಸ ಹೊಂದಿದ್ದು. ನಮ್ಮ ವಿಷ್ಣು ಪುರಾಣ ಕೂಡ ಅದನ್ನೇ ಹೇಳುತ್ತದೆ. ವಿಷ್ಣುವಿನ ದಶಾವತಾರ ಆರಂಭ ಆಗುವುದು "ಮತ್ಸ್ಯಾವತಾರ" ದಿಂದ. ನಂತರ ಕೂರ್ಮಾವತಾರ. ಹೀಗೆ ಕೊನೆಯಲ್ಲಿ "ಕೃಷ್ಣ" ಬರುತ್ತಾನೆ.
ಮಾನವನ ದೇಹದಲ್ಲಿರುವ ಸಂಕೀರ್ಣ ನರಮಂಡಲ, ಹೊಸ ವಿಷಯಗಳನ್ನು ಗ್ರಹಿಸಬಲ್ಲ ಮೆದುಳು ಮತ್ತು ಅಗತ್ಯಕ್ಕೆ ತಕ್ಕಂತೆ ಮಾರ್ಪಾಡಾದ ಅಂಗಾಂಗಗಳು, ಪಂಚೇಂದ್ರಿಯಗಳು ಬೇರೆ ಯಾವುದೇ ಪ್ರಾಣಿ-ಪಕ್ಷಿಯಲ್ಲಿ ಅಭಿವೃದ್ಧಿ ಹೊಂದಿಲ್ಲ. ಅದಕ್ಕೆ ಮಾನವ ಬೇರೆ ಜೀವ ಸಂಕುಲಕ್ಕಿಂತ ಹೆಚ್ಚಿನ ಅನುಭವಗಳನ್ನು ಹೊಂದುತ್ತಾನೆ. ಮನುಷ್ಯನ ಮೆದುಳು ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ತನ್ನನ್ನು ಕೂಡ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ.
ದೇಹ ಮತ್ತು ಮನಸ್ಸು ಬೇರೆ ಬೇರೆಯಲ್ಲ. ದೇಹದ ಅಭಿವೃದ್ಧಿ ಹೊಂದಿದ ಭಾಗವೇ ಮನಸ್ಸು. ಅದಕ್ಕೆ ನೋಡಿ ಮನಸ್ಸು ಭಾರವಾದಾಗ ದೇಹ ನಿಶ್ಚಲವಾಗುತ್ತದೆ. ಮತ್ತು ದೇಹ ರೋಗದಿಂದ ಬಳಲಿದಾಗ ಮನಸ್ಸು ಮಂಕಾಗುತ್ತದೆ. ದೇಹ ಮತ್ತು ಮನಸ್ಸು ಒಂದರೊಂದಿಗೆ ಇನ್ನೊಂದು ಸಂಪೂರ್ಣ ಬೆಸೆದುಕೊಂಡಿವೆ. ಆರೋಗ್ಯವಂತ ಮನಸ್ಸು, ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುತ್ತದೆ. ಅರೋಗ್ಯವಂತ ದೇಹ, ಮನಸ್ಸು ಹೊಸ ಅನುಭವಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ. ದೇಹ ಅರ್ಥವಾದರೆ ಮನಸ್ಸು ಕೂಡ ಅರ್ಥವಾಗುತ್ತಾ ಹೋಗುತ್ತದೆ.
ದೇಹವನ್ನು ಅರ್ಥ ಮಾಡಿಕೊಳ್ಳಲು, ದಂಡಿಸಲು ಮತ್ತು ಅದರಿಂದ ಮನಸ್ಸು ಹೊಸ ಪ್ರಪಂಚಕ್ಕೆ ತೆರೆದೆಕೊಳ್ಳುವಂತೆ ಮಾಡಲು ಹುಟ್ಟಿದ್ದೇ ಹಠ ಯೋಗ, ಯೋಗಾಸನಗಳು. ಸಾಧು, ಸಂತರು ಅಧ್ಯಾತ್ಮ ಸಾಧನೆಗೆ ತೊಡಗಿದ್ದೆ ದೇಹವನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ. ಅದಕ್ಕೆ ಸಂತ ಶಿಶುನಾಳ ಶರೀಫರು ಹಾಡಿದ್ದು:
"ಗುಡಿಯ ನೋಡಿರಣ್ಣ
ದೇಹದ ಗುಡಿಯ ನೋಡಿರಣ್ಣ,
ಗುಡಿಯ ನೋಡಿರಿದು
ಪೊಡವಿಗೆ ಒಡೆಯನು,
ಅಡಗಿಕೊಂಡು
ಕಡುಬೆಡಗಿನಲಿರುತಿಹ,
ಗುಡಿಯ ನೋಡಿರಣ್ಣ
ದೇಹದ ಗುಡಿಯ ನೋಡಿರಣ್ಣ"
ಈ ಹಾಡು ನನಗೆ ಇನ್ನೂ ಸಂಪೂರ್ಣ ಅರ್ಥ ಆಗಿಲ್ಲ. ಅರ್ಥ ಆದ ದಿನ, ನನ್ನ ಜೀವನವು ಮುಗಿದಿರುತ್ತದೆ ಎನ್ನುವ ಅರಿವು ನನಗಿದೆ.