Monday, November 22, 2021

ಗಂಡನ ಮನೆಯಲಿ ಮಾರಿ ಮುತ್ತು, ತವರು ಮನೆಯಲಿ ಸ್ವಾತಿ ಮುತ್ತು

ಹಾಗೆ ಕೆಲವು ಹೆಂಡತಿಯರಿರುತ್ತಾರೆ (ಎಲ್ಲರೂ ಅಲ್ಲ). ಅವರಿಗೆ ತವರು ಮನೆ ಪ್ರೇಮಲೋಕ. ಗಂಡನ ಮನೆ ರಣರಂಗ. ಅವರಿಗೆ ತಮ್ಮ ತಂದೆ ಎಂದರೆ ಹೀರೋ. ಗಂಡ ಎಂದರೆ ಶುದ್ಧ ಶನಿ. ಗಂಡನ ಮನೆಯವರೆಲ್ಲ ಸೋಂಭೇರಿಗಳು. ತವರು ಮನೆಯಲ್ಲಿರುವ ತಮ್ಮಂದಿರು ಎಷ್ಟೋ ವರ್ಷ ಖಾಲಿ ಅಡ್ಡಾಡಿದರೂ, ಅವರಿಗಿನ್ನೂ ಸಮಯ ಬಂದಿರಲಿಲ್ಲ ಅಷ್ಟೇ. ಅವರ ತಾಯಿ ಕರುಣಾಮಯಿ. ಆದರೆ ಅತ್ತೆ ಮಾತ್ರ ಜಗತ್ತಿನಲ್ಲಿ ಎಲ್ಲೂ ಇಲ್ಲದ ಕ್ರೂರಿ.


ಹಾಲುಂಡ ತವರಿಗೆ ಮಾತ್ರ ಅವರಲ್ಲಿ ಎಲ್ಲೂ ಇಲ್ಲದ ಮಮಕಾರ. ಗಂಡನ ಮನೆಯವರೆದ್ದೆಲ್ಲ  ಸುಮ್ಮನೆ ಹಾಹಾಕಾರ. ತಮ್ಮ ಸೋದರ-ಸೋದರಿಯರು ಪ್ರೀತಿ ಸೂಸುವ ಚಂದನೆಯ ಗಿಳಿಗಳು. ಗಂಡನ ಸೋದರ-ಸೋದರಿಯರು ಕಾ-ಕಾ ಎಂದು ಅರಚುವ ಕಾಗೆಗಳು.


ತವರು ಮನೆಯ ಅಸ್ತಿ ತಮ್ಮಂದಿರಿಗೆ ಇರಲಿ ಎನ್ನುವ ಔದಾರ್ಯತೆ. ಗಂಡನ ಮನೆಯ ಆಸ್ತಿಯೋ? ಕಾನೂನು-ಕೋರ್ಟ್ ಎಂದು ವೀರಾವೇಶ ತೋರುವ ಝಾನ್ಸಿ ರಾಣಿ ಲಕ್ಷ್ಮೀಬಾಯಿಯರು. ತಮ್ಮ ತಂದೆ ತಪ್ಪು ಮಾತನಾಡಿದನೋ, ಅದು ಏನೋ ಬಾಯಿ ತಪ್ಪಿನಿಂದ ಬಂದ ಮಾತು ಅಷ್ಟೇ. ಅದೇ ಗಂಡ ಮಾತನಾಡಿದನೋ, ಜೈಲಿಗೆ ಕಳಿಸದೆ ಹಾಗೆ ಬಿಟ್ಟರೆ ಬುದ್ಧಿ ಬರದು ಎನ್ನುವ ಕ್ರೋಧ. ತಮ್ಮ ತಮ್ಮಂದಿರು ತಪ್ಪು ಮಾಡಿದರೋ, ಅದು ಆವೇಶ ಅಷ್ಟೇ. ಅದನ್ನು ಬೇಗ ಮರೆತಷ್ಟು ವಾಸಿ. ಅದೇ ಗಂಡನ ಮನೆಯವರು ಮಾಡಿದರೆ, ಅವರನ್ನು ಆಗಿಂದಾಗಲೇ ಮನೆಯಿಂದ ಆಚೆ ತಳ್ಳಿ ಬಿಡಬೇಕು.


ತಾವೇ ತಪ್ಪು ಮಾತನಾಡಿದರೆ, ಅದನ್ನು ಅಲ್ಲೇ ಕ್ಷಮಿಸಿಬಿಟ್ಟರೆ ವಾಸಿ. ಇಲ್ಲವೆಂದರೆ ಎಷ್ಟು ಸಲ ಅದೇ ಮಾತು ಆಡುವಿರಿ ಎಂದು ಗಂಡನ ಮೇಲೆ ಅಪವಾದ ಹೊರಿಸುತ್ತಾರೆ. ಅದೇ ಗಂಡ ಮಾತನಾಡಿದನೋ, ಅವನನ್ನು ಚುಚ್ಚಿ, ಚುಚ್ಚಿ ಹುಚ್ಚನನ್ನಾಗಿ ಮಾಡದಿದ್ದರೆ ಕೇಳಿ.


ಒಂದೇ ನಾಣ್ಯಕ್ಕೆ ಎರಡು ಮುಖವಿದ್ದ ಹಾಗೆ ಹೆಂಡತಿಯರಿಗೆ ಕೂಡ ಎರಡು ಮುಖ ಉಂಟು. ಕೆಲವರಲ್ಲಿ ಆ ಮುಖಗಳ ನಡುವೆ ಹೆಚ್ಚು ವ್ಯತ್ಯಾಸ ಇರದಿದ್ದರೆ, ಇನ್ನು ಕೆಲವರು ಮಾತ್ರ ಗಂಡನ ಮನೆಯಲಿ ಮಾರಿ ಮುತ್ತು, ತವರು ಮನೆಯಲಿ ಸ್ವಾತಿ ಮುತ್ತು.

No comments:

Post a Comment