ಕವಿ ಕುವೆಂಪು ಬರೆದರು:
'ತೆರೆದಿದೆ ಮನೆ
ಓ, ಬಾ ಅತಿಥಿ
ಹೊಸ ಬೆಳಕಿನ
ಹೊಸ ಗಾಳಿಯ
ಹೊಸ ಬಾಳನು
ತಾ ಅತಿಥಿ'
ಇದು ಒಬ್ಬ ಆಶಾವಾದಿಯ
ಗೀತೆ. ಆದರೆ ಬಂದಿರುವ ಅತಿಥಿ ಸಂತೋಷ ತರಲಿದ್ದಾನೋ ಅಥವಾ ಪಾಪದ ಕೂಪಕ್ಕೆ ತಳ್ಳಲಿದ್ದಾನೋ ಅನುಭವಿಸಿದ
ಮೇಲೆಯಷ್ಟೇ ಗೊತ್ತಾಗುವುದು. ಸಂತೋಷ ನಮ್ಮಲ್ಲಿರದೆ ಅದನ್ನು ಒಬ್ಬ ಅತಿಥಿ ತಂದು ಕೊಡುತ್ತಾನೆ ಎಂದುಕೊಂಡರೆ
ಬದುಕು ನಮಗೆ ಪಾಠ ಕಲಿಸದೇ ಬಿಡದು. ಒಂದು ವೇಳೆ ನಿಮಗೆ ಬೇಕಾದ ಅತಿಥಿ ನಿಮ್ಮಿಂದ ದೂರವಾಗಿ, ಬೇಡವಾದ
ಅತಿಥಿ ನಿಮ್ಮ ಮನೆಗೆ ವಕ್ಕರಿಸಿಕೊಂಡರೆ ಆಗೇನು ಮಾಡುವಿರಿ? ಆಗ ಇದೇ ಹಾಡನ್ನು ಹಾಡಲು ಸಾಧ್ಯವೇ? ನಾವು
ಕಲಿಯದ ಪಾಠಗಳನ್ನು ಬದುಕು ಮತ್ತೆ ಮತ್ತೆ ಕಲಿಸದೇ ಬಿಡುವುದಿಲ್ಲ. ಹತ್ತಿರದವರ ಅಗಲಿಕೆ, ಬಲವಾಗಿ ನಂಬಿದ್ದಲ್ಲಿ
ಮೋಸ, ಮನಸ್ಸಿಟ್ಟು ಮಾಡಿದ ಕೆಲಸದಲ್ಲಿ ಸೋಲು ಇವುಗಳು ಸ್ವಾರ್ಥಭರಿತ ಸಂಬಂಧಗಳ ಅರ್ಥಹೀನ ಬದುಕನ್ನು
ಮನದಟ್ಟು ಮಾಡಿಕೊಡುತ್ತವೆ. 'ನಾನು' ಎನ್ನುವ 'ಅಹಂ' ಕರಗಿದಷ್ಟು 'ಮಾಯೆ' ಎನ್ನುವ ಪೊರೆಯು ಕಳಚುತ್ತಾ
ಹೋಗುತ್ತದೆ. ಆಗ ನಮಗೆ ಗೋಪಾಲಕೃಷ್ಣ ಅಡಿಗರ ಕಾವ್ಯ ಅರ್ಥವಾಗುತ್ತಾ ಹೋಗುತ್ತದೆ.
'ಸಪ್ತಸಾಗರದಾಚೆ
ಎಲ್ಲೊ
ಸುಪ್ತ ಸಾಗರ
ಕಾದಿದೆ'
ಕವಿ ಆಶಾವಾದಿ.
ಕವಿ ನಿರಾಶಾವಾದಿ. ಭಾವನೆಗಳು ಉಯ್ಯಾಲೆಯ ಹಾಗೆ. ಮುಂದೆ ಜೀಕಿದಷ್ಟು ಬಲವಾಗಿ ಹಿಂದೆ ತಳ್ಳುತ್ತವೆ.
ಭಾವನೆಗಳೆಂಬ ಸಪ್ತ ಸಾಗರಗಳನ್ನು ಗೆದ್ದು ತಟಸ್ಥ ಸ್ಥಿತಿಗೆ ತಲುಪಿದಾಗ ಅದುವರೆಗೆ ಅರಿವಿಗೆ ಬರದಿದ್ದ
ಸುಪ್ತ ಸಾಗರ ನಮ್ಮ ಅನುಭವಕ್ಕೆ ಬರತೊಡಗುತ್ತದೆ. ಅದು ನಮ್ಮದೇ ಸುಪ್ತ ಮನಸ್ಸು. ಮನದಾಳದ ರಾಗ-ದ್ವೇಷಗಳು
ತಮ್ಮ ಅಲೆಯ ಬಡಿತ ನಿಲ್ಲಿಸಿದಾಗ, ಕಂಪನವಿಲ್ಲದ ನೀರಿನ ಭಾವಿಯ ತಳ ಗೋಚರವಾಗತೊಡಗುತ್ತದೆ. ಬೀಸುವ ಗಾಳಿಗೆ
ನೀರು ಕಂಪಿಸಿದರೆ ಮತ್ತೆ ಎಲ್ಲವೂ ಅಸ್ಪಷ್ಟ. ತಹಬದಿಗೆ ಬಂದಾಗ ಸುಪ್ತ ಮನಸ್ಸಿನ ಆಳ, ಅಗಲಗಳು ಸ್ಪಷ್ಟ.
ಸ್ಪಷ್ಟತೆಯೊಡನೆ 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ
ತುಡಿವುದೇ ಜೀವನ' ಎನ್ನುವ ಕವಿಯ ಮಾತು ನಮ್ಮ ಅನುಭವಕ್ಕೆ ಬರತೊಡಗುತ್ತದೆ. ಆ ಸತ್ಯ ಅರ್ಥವಾದ ಮೇಲೂ
ಮತ್ತೆ ಸ್ವಾರ್ಥ ತುಂಬಿದ ಸಂಬಂಧಗಳಿಗೆ ಹಾತೊರೆದರೆ ನಮ್ಮ ಕಲಿಕೆ ಅಪೂರ್ಣ.
'ಇಂತಾದರೂ ಬಾ
ಅಂತಾದರೂ ಬಾ
ಎಂತಾದರೂ ಬಾ'
ಎಂದು ಬರಲಿರುವ ಅಥವಾ ಬಾರದಿರುವ ಅತಿಥಿಗೆ ಕಾಯದೆ, ಬದುಕಿನ ತಿರುಗಣಿಗೆ ಸಿಕ್ಕು ಸುತ್ತದೆ, ನಮ್ಮ ಸುಪ್ತ ಮನಸಿನ ಭಾವಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮದಲ್ಲವೇ? ಬೇಕಿದ್ದ ಅತಿಥಿ ಸಂತೋಷ ತರಬಹುದು ಹಾಗೆಯೇ ಬೇಡದ ಅತಿಥಿ ನಮ್ಮ ಭಾವಿಗೆ ಕಲ್ಲು ಹಾಕಬಹುದು. ಆದರೆ ಎಷ್ಟು ಬೇಗನೆ ಕಂಪನ ನಿಲ್ಲಿಸಬೇಕು ಎನ್ನುವುದು ಮಾತ್ರ ನಮಗೆ ಇರುವ ಸ್ವಾತಂತ್ರ್ಯ. ನಮ್ಮ ಸಂತೋಷ, ನಮ್ಮ ಸ್ವಾತಂತ್ರ್ಯ ಯಾವುದೋ ಅತಿಥಿ ನಿರ್ಧರಿಸಬಾರದಲ್ಲವೇ?
ಕುವೆಂಪು ರಚಿಸಿದ ಆ ಗೀತೆ ಕೇಳಲು ನನಗೆ ಇಷ್ಟ. ಆದರೆ ಅದು ಬದುಕುವ ದಾರಿಯಲ್ಲ ಎನ್ನುವುದು ಮಾತ್ರ ನನಗೆ ಜೀವನ ಕಲಿಸಿ ಕೊಟ್ಟ ಪಾಠ. ಹಾಗೆಯೇ ಅಡಿಗರ ಕಾವ್ಯ ಎಲ್ಲರಿಗೂ ಸಿದ್ಧಾಂತ ಆಗಬೇಕೆಂದು ಏನಿಲ್ಲ. ಬದುಕು ಕೊಡಮಾಡುವ ವಿಶಿಷ್ಟ ಅನುಭವ ಎಲ್ಲರಿಗೂ ಒಂದೇ ಆಗಬೇಕೆಂದಿಲ್ಲ. ನಮ್ಮ ನಮ್ಮ ಬುತ್ತಿ ನಾವು ಉಣ್ಣಬೇಕು ಅಷ್ಟೇ.
No comments:
Post a Comment