ಕಳೆದ ವರುಷದ ಬದುಕು ನೀಡಿದ ಅನುಭವಗಳ ಒಂದು ಹಿನ್ನೋಟ.
೧. ನನಗೆ ಹೊಸ ಅಭ್ಯಾಸ ಎನ್ನುವಂತೆ, ಪ್ರತಿ ದಿನ ಅಲ್ಲದಿದ್ದರೂ ಸಾಕಷ್ಟು ದಿನಗಳ ಆರಂಭ ಆಗಿದ್ದು ಭಕ್ತಿ ಗೀತೆಗಳಿಂದ. ಪುರಂದರ ದಾಸರ 'ಬೇವು ಬೆಲ್ಲದೊಳಿಡಲೇನು ಫಲ', 'ಕಲ್ಲು ಸಕ್ಕರೆ ಕೊಳ್ಳಿರೋ', ಕನಕದಾಸರ 'ಎಸು ಕಾಯಂಗಳ ಕಳೆದು', 'ಬಾಗಿಲನು ತೆರೆದು', ಶಿಶುನಾಳ ಶರೀಫರ 'ಹಾಕಿದ ಜನಿವಾರವ', 'ದೇಹದ ಗುಡಿಯ ನೋಡಿರಣ್ಣ' ಈ ಗೀತೆಗಳು ಮಾತ್ರ ಪ್ರತಿದಿನ ಖಾಯಂ. ಕೇಳುವುದಷ್ಟೇ ಅಲ್ಲದೆ ಮೆಲ್ಲಗೆ ಅವುಗಳನ್ನು ಹಾಡಿಕೊಳ್ಳುವಷ್ಟು ತಲ್ಲೀನತೆ. ದಾಸರು ಹೃದಯದಾಳದಷ್ಟೇ ಅಲ್ಲ, ನಾಲಿಗೆಯ ತುದಿ ಮೇಲೂ ನಲಿಯುತ್ತಾರೆ.
೨. ಒಟ್ಟಾರೆ ಓದಿದ ಪುಸ್ತಕಗಳು ಸುಮಾರು ೪೦. ಸಂಖ್ಯೆಗಿಂತ ಗುಣಮಟ್ಟಕ್ಕೆ ಒತ್ತು ಕೊಡುತ್ತಿರುವುದರಿಂದ, ಕೈಗೆತ್ತಿಕೊಳ್ಳುವ ಪುಸ್ತಕದಲ್ಲಿ ಈಗ ನಾನು ತುಂಬಾ ಕಟ್ಟು ನಿಟ್ಟು. ಅತಿ ಪ್ರಭಾವ ಬೀರಿದ ಪುಸ್ತಕ ಎಂದರೆ 'Yuval Harrari' ಅವರು ಬರೆದ 'Sapiens' ಪುಸ್ತಕ. ವೇದ, ಉಪನಿಷತ್ತುಗಳಲ್ಲಿ ದೊರಕದ ಉತ್ತರಗಳು ನನಗೆ ಈ ಪುಸ್ತಕದಲ್ಲಿ ಸಿಕ್ಕವು. ಅರ್ಥವಿಲ್ಲದ ಜೀವನದಲ್ಲಿ, ಅರ್ಥ ಹುಡುಕುವ ಅಥವಾ ತನ್ನದೇ ಅರ್ಥ ತುಂಬುವ ಪ್ರಯತ್ನವನ್ನು ಮಾನವ ಅನಾದಿ ಕಾಲದಿಂದಲೂ ಜಾರಿಯಲ್ಲಿಟ್ಟಿದ್ದಾನೆ. ಪ್ರಕೃತಿ (ಜೀನ್, ಹಾರ್ಮೋನ್ ಗಳ ಮೂಲಕ) ಆಡಿಸುವ ಆಟದ ಕೈಗೊಂಬೆಯಾದ ಮಾನವ ಲಕ್ಷಾಂತರ ವರುಷಗಳ ಕಾಲ ವಿಕಾಸ ಹೊಂದಿದ ಬಗೆಯನ್ನು ವಿವರಿಸುವ ಈ ಪುಸ್ತಕ ಅಸಾಮಾನ್ಯವಾದದ್ದು.
೩. ಕಳೆದ ವರ್ಷ ನನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿ 'ನವಲ್ ರವಿಕಾಂತ್'. ಭಾರತೀಯ ಮೂಲದ, ಅಮೇರಿಕಾದಲ್ಲಿ ವಾಸಿಸುವ, ಹೊಸ ತರಹದ ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಈತ, ತನ್ನ podcast ಗಳ ಮೂಲಕ ಜೀವನಾನುಭವಗಳನ್ನು ಹಂಚಿಕೊಂಡಿದ್ದಾನೆ. ಆತನ ಮಾತುಗಳು ನನಗೆ ಸರಿಯಾದ ನಿರ್ಧಾರಗಳು ತೆಗೆದುಕೊಳ್ಳುವುದರಲ್ಲಿ ಅತ್ಯಂತ ಸಹಕಾರಿ ಎನಿಸಿದವು.
೪. ನಾನು ಬ್ಲಾಗ್ ನಲ್ಲಿ ಬರಹಗಳನ್ನು ಬರೆಯುವುದನ್ನು ೨೦೧೩ ರಲ್ಲೇ ಪ್ರಾರಂಭಿಸಿದರೂ, ಅವುಗಳನ್ನು ನಿರ್ಭಯದಿಂದ Facebook ನಲ್ಲಿ ಹಂಚಿಕೊಳ್ಳುವುದನ್ನು ಪ್ರಾರಂಭಿಸಿದ್ದು ಕಳೆದ ವರುಷ. ಅದರ ಪರಿಣಾಮವಾಗಿ, ಕೆಲವು ಗೆಳೆಯರು ನನ್ನಲ್ಲಿರುವ ಬರಹಗಾರನನ್ನು ಗುರುತಿಸುತ್ತಿರುವುದು ಸಂತೋಷದ ವಿಷಯ. ಕಳೆದ ವರುಷ ಬರೆದ ಬರಹಗಳ ಸಂಖ್ಯೆ ೧೦೧.
೫. ಹಣಕಾಸಿನ ವಿಚಾರದಲ್ಲಿ ಕಳೆದ ವರ್ಷ ತೆಗೆದುಕೊಂಡ ನಿರ್ಧಾರಗಳು ನಿರೀಕ್ಷೆಗೂ ಮೀರಿದ ಲಾಭವನ್ನು ತಂದುಕೊಟ್ಟವು. ನನ್ನನ್ನು ಕೆಲಸದಲ್ಲಿಟ್ಟುಕೊಂಡು ಸಲಹುವ 'Applied Materials' ಕಂಪನಿಗೂ ಮತ್ತು ದೊಡ್ಡ ಮಟ್ಟದ ಹಣ ಸರಾಗವಾಗಿ ಖರ್ಚು ಮಾಡುವಷ್ಟು ಸವಲತ್ತು ನೀಡಿದ ಷೇರು ಮಾರುಕಟ್ಟೆಗೂ ನಮೋ ನಮಃ.
೬. ಕೆಲ ಕುಟುಂಬದ ಸದಸ್ಯರು ತಮ್ಮ ದೌರ್ಬಲ್ಯಗಳಿಗೆ ನಮ್ಮನ್ನು ಹೊಣೆಗಾರರನ್ನಾಗಿಸಿ, ಅತಿ ಎನಿಸುವಷ್ಟು ದೋಷಾರೋಪಗಳನ್ನು ಮಾಡಿ ನಮ್ಮನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರಲ್ಲ. ಅಂತಹ ಒಂದು ಬೆನ್ನೇರಿದ ಬೇತಾಳವನ್ನು ಕೆಳಗಿಳಿಸುವುದಷ್ಟರಲ್ಲಿ, ನನ್ನ ತಲೆಯ ಕೂದಲಿನ ಸ್ವಲ್ಪ ಭಾಗ ಬೆಳ್ಳಗಾಗಿ ಹೋಗಿದ್ದು ಕಳೆದ ವರುಷದ ವಿಶಿಷ್ಟ ಅನುಭವ. ಸಮಯಕ್ಕೆ ಸರಿಯಾಗಿ ಧೈರ್ಯ ತುಂಬಿದ ಸ್ನೇಹಿತರಿಗೊಂದು ಹೃದಯಪೂರ್ವಕ ಸಲಾಂ.
೭. ಸಾಮಾಜಿಕ ಸೇವೆಯ ಕಾರ್ಯಗಳಿಗೆ ಕಳೆದ ವರುಷ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡಲು ಸಾಧ್ಯವಾದರೂ ಅದನ್ನು ಇನ್ನು ಉತ್ತಮವಾಗಿಸಲು ಸಾಧ್ಯವಿತ್ತು ಎಂದು ನನಗೇ ಅನ್ನಿಸಿದೆ.
೮. ಎರಡು ವಾರ ಟೈಫಾಯಿಡ್ ಗುಮಾನಿಯಿಂದ ಮಲಗಿದ್ದು ಬಿಟ್ಟರೆ, ಆರೋಗ್ಯ ಕೈ ಕೊಟ್ಟಿಲ್ಲ.
೯. ವರುಷದ ಆರಂಭದಲ್ಲಿ ಶೃಂಗೇರಿ, ಹೊರನಾಡು ಪ್ರವಾಸ ಮಾಡಿದ್ದು ಬಿಟ್ಟರೆ, ಕೋವಿಡ್ ಮೂದೇವಿ ಬೇರೆ ಪ್ರವಾಸ ಮಾಡಲು ಬಿಟ್ಟಿಲ್ಲ.
ಇದು ನನ್ನ ೨೦೨೧ ರ ಹೈಲೈಟ್ಸ್.
ಆಸೆ-ನಿರಾಸೆಗಳ ಉಯ್ಯಾಲೆ ಏರದೇ, ಬಂದಿದ್ದು ಬರಲಿ ಎನ್ನುವ ನಿರ್ಲಿಪ್ತತೆಯಿಂದ ಹೊಸ ವರುಷಕ್ಕೆ ಕಾಲಿಟ್ಟಿದ್ದೇನೆ. ದಾಸರು ಮನದಲ್ಲಿ ಜಾಗ ಮಾಡಿದರೂ, ವ್ಯಾಪಾರೀ ಬುದ್ಧಿ ಇನ್ನೂ ಹೋಗಿಲ್ಲ. ಹಣ ಗಳಿಸುವುದನ್ನು, ಮಕ್ಕಳ ಜವಾಬ್ದಾರಿಯನ್ನು ಇಷ್ಟ ಪಟ್ಟೇ ಮಾಡುತ್ತೇನೆ. ಓದಲು ಸಾಕಷ್ಟು ಪುಸ್ತಕಗಳು ಉಳಿದಿವೆ. ಸಮಯ ಕಳೆದದ್ದು ಗೊತ್ತಾಗದಂತೆ ಇರಲು, ಕಷ್ಟ-ಸುಖ ಹಂಚಿಕೊಳ್ಳಲು ನಿಮ್ಮಂತಹ ಸಮ ಮನಸ್ಸಿನ ಸ್ನೇಹಿತರಿದ್ದೀರಿ.
ಕಳೆದ ವರುಷ ನಿಮಗೆ ಹೇಗಿತ್ತು? ಹತ್ತರ ಜೊತೆಗೆ ಹನ್ನೊಂದೋ ಅಥವಾ ವಿಶಿಷ್ಟವೋ? ಈ ವರುಷದ ನಿಮ್ಮ ಗುರಿಗಳು ಏನು? ಮಾತಾಡೋಣ, ಸಿಗ್ತೀವಲ್ಲ.