Tuesday, December 28, 2021

ಕುರಿಯಲ್ಲಿ ಕುರಿ ಬುದ್ಧಿ ತುಂಬಿದವರಾರು?

ಸುಮಾರು ೭೦,೦೦೦ ವರುಶಗಳಷ್ಟು ಹಿಂದೆ ಆದಿವಾಸಿ ಮನುಷ್ಯ ಗುಡ್ಡಗಾಡು ಅಲೆಯುತ್ತ, ಚಿಕ್ಕ ಪುಟ್ಟ ಪ್ರಾಣಿಗಳನ್ನು ಬೇಟೆಯಾಡುತ್ತ ಬದುಕುತ್ತಿರಲಿಲ್ಲವೇ? ಗುಹೆಗಳಲ್ಲಿ ವಾಸಿಸುತ್ತಿದ್ದ ಅವನು ದೊಡ್ಡ ಪ್ರಾಣಿಗಳನ್ನು ಬೇಟೆಯಾಡಲು ಅಸಮರ್ಥನಾಗಿದ್ದ. ಹುಲಿ, ಸಿಂಹಗಳಿಗಿದ್ದಷ್ಟು ದೈಹಿಕ ಸಾಮರ್ಥ್ಯ, ಬಲವಾದ ಉಗುರುಗಳು, ಕೋರೆ ಹಲ್ಲುಗಳು ಅವನಿಗಿರಲಿಲ್ಲ. ತನ್ನ ದೌರ್ಬಲ್ಯ ನೀಗಿಸಲು ಅವನು ಸಂಘ ಜೀವಿಯಾದ. ಗುಂಪಾಗಿ ಬೇಟೆಯಾಡುವುದು ಆ ಕಾಲದ ಮನುಷ್ಯನಿಗೆ ಅನುಕೂಲ ಎನಿಸಿತು. ಬೆಂಕಿಯ ಉಪಯೋಗ ಕಲಿತ ಮೇಲೆ, ಮಾಂಸ ಬೇಯಿಸಿ ತಿನ್ನುವುದನ್ನು ಕಲಿತ. ಅದರಿಂದ ಅವನ ಜೀರ್ಣ ಶಕ್ತಿಯ ಮೇಲೆ ಒತ್ತಡ ಕಡಿಮೆಯಾಗಿ, ಹಲ್ಲುಗಳು ಚಿಕ್ಕವಾಗಿ, ಕರುಳಿನ ಉದ್ದ ಕಡಿಮೆ ಆಗಿ ಅಲ್ಲಿ ವ್ಯಯವಾಗುತ್ತಿದ್ದ ಶಕ್ತಿಯನ್ನು, ಇಂದ್ರಿಯಗಳಿಗೆ ಮತ್ತು ಮೆದುಳಿಗೆ ವರ್ಗಾಯಿಸಲು ಸಾಧ್ಯ ಆಯಿತು. ಅಲ್ಲಿಂದ ಅವನ ವಿಚಾರ ಶಕ್ತಿ ಮತ್ತು ಹೊಸ ವಿಷಯ ಗ್ರಹಿಸುವ ಶಕ್ತಿ ಹೆಚ್ಚಾಗುತ್ತಾ ಹೋಯಿತು.

 

ಕಾಲ ಕ್ರಮೇಣ ತನ್ನೊಂದಿಗೆ ಬೇಟೆಗೆ ಸ್ಪರ್ಧಿಸುತ್ತಿದ್ದ ಒಂದು ಜಾತಿಯ ತೋಳಗಳ ಗುಂಪನ್ನು ಪಳಗಿಸಿಕೊಂಡ. ಅವು ನಂಬಿಕಸ್ಥ ನಾಯಿಯಾಗಿ ಬದಲಾದವು. ನಾಯಿಗಳು ಅವನಿಗೆ ಬೇಟೆಯಲ್ಲಿ ಸಹಾಯ ಮಾಡುವುದರ ಜೊತೆಗೆ, ರಾತ್ರಿ ಕಾವಲು ಕಾಯಲು, ಇತರೆ ಪ್ರಾಣಿಗಳು ಬಂದಾಗ ಎಚ್ಚರಿಸಲು ಸಹಾಯ ಮಾಡುತ್ತಿದ್ದವು. ತಾನು ಬೇಟೆಯಾಡುತ್ತಿದ್ದ ಮೊಲ, ಕೋಳಿ, ಆಡು-ಕುರಿಗಳನ್ನು ಸಾಕಲು ಆರಂಭಿಸಿದ. ಹಸು-ಎಮ್ಮೆಗಳನ್ನು ಹಾಲಿಗಾಗಿ ಸಾಕಲಾರಂಭಿಸಿದ. ಕುದುರೆಗಳು ಅವನಿಗೆ ಸಾಮಾನು ಸಾಗಿಸಲು, ವೇಗವಾಗಿ ಓಡಾಡಲು ಸಹಾಯವಾಗತೊಡಗಿದವು.

 

ಮೊದಲಿಗೆ ವನ್ಯ ಜೀವಿಗಳಾಗಿದ್ದ ಅವುಗಳಿಗೆ ಮಾನವನಿಗೆ ಹೊಂದಾಣಿಕೆ ಇರಲಿಲ್ಲ. ಆದರೆ ಮಾನವನ ಗ್ರಹಣ ಶಕ್ತಿ ಹೆಚ್ಚುತ್ತಾ ಹೋಗುತ್ತಿತ್ತಲ್ಲವೇ? ಅವನು ಕುರಿ ಮರಿಗಳನ್ನು ಕೊಲ್ಲದೇ, ಅವುಗಳ ದೊಡ್ಡವು ಆಗುವವರೆಗೆ ಸಹನೆ ತೋರಿಸಲು ಆರಂಭಿಸಿದ. ಹಾಗೆಯೆ ಮರಿ ಹಾಕುವ ಹೆಣ್ಣು ಕುರಿಗಳನ್ನು ಕೊಲ್ಲುವುದಕ್ಕಿಂತ ಕಾಯುವುದು ಮೇಲು ಎನ್ನುವುದು ಗ್ರಹಿಸಿದ. ದೊಡ್ಡ ಕುರಿ ಹಿಂಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಗಂಡು ಕುರಿಗಳು, ಮುದಿ ಕುರಿಗಳು ಅವನಿಗೆ ಮೊದಲು ಬಲಿಯಾದವು. ಆಕ್ರಮಣಕಾರಿ ಪ್ರವೃತ್ತಿಯ ಗಂಡು ಕುರಿಗಳನ್ನು ಕಂಡ ಕೂಡಲೇ ಕೊಂದು ಹಾಕುತ್ತಿದ್ದ ಅವನು ಅಂತಹ ಗುಣಗಳು ಕುರಿಗಳಲ್ಲಿ ವಂಶವಾಹಿಯಾಗುವುದನ್ನು ಕಡಿಮೆ ಮಾಡಿದ. ಮನುಷ್ಯನಿಗೆ ಸಹನೆ ತೋರಿಸುವ ಗಂಡು ಕುರಿ ಮತ್ತು ಮಂದ ಗತಿಯಲ್ಲಿ ಓಡುವ ಹೆಣ್ಣು ಕುರಿಗಳನ್ನು ಜೊತೆ ಮಾಡಿದ. ಮುಂದೆ ಹುಟ್ಟುವ ಕುರಿ ಮರಿಗಳು ಮನುಷ್ಯನಿಗೆ ಅನುಕೂಲ ಆಗುವ ಗುಣಗಳನ್ನು ಹೊಂದುತ್ತ ಹೋದವು. ಅವುಗಳ ಕಾಡು ಪ್ರವೃತ್ತಿ ಕ್ರಮೇಣ ಮರೆಯಾಗುತ್ತಾ ಹೋಗಿ ಸಾಕು ಪ್ರಾಣಿಗಳಾಗಿ ಬದಲಾದವು. 'Natural Selection' ಎನ್ನುವ ಪ್ರಾಕೃತಿಕ ಕ್ರಿಯೆಯ ಮಧ್ಯಕ್ಕೆ ಕೈ ಹಾಕಿದ ಮಾನವ, ಕೆಲ ಪ್ರಾಣಿ, ಪಕ್ಷಿಗಳಲ್ಲಿ ತನಗೆ ಬೇಕಾದ ಗುಣಗಳು ವಿಕಾಸ ಹೊಂದುವಂತೆ ಮಾಡಲು ಸಫಲನಾದ.

 

ಮನುಷ್ಯ ತಾನು ಪ್ರಕೃತಿಯ ಕೈಗೊಂಬೆಯಾದರೂ, ಇತರೆ ಕೆಲವು ಪ್ರಾಣಿಗಳನ್ನು ತನ್ನ ಅಂಕೆಯಂತೆ ಆಡಿಸಲು ಯಶಸ್ವಿಯಾದ. ಕುರಿಯಲ್ಲಿ ಕುರಿ ಬುದ್ಧಿಯನ್ನು ತುಂಬಿದವರಾರು ಎನ್ನುವ ಪ್ರಶ್ನೆಗೆ ನೀವು ದೇವರು ಅಥವಾ ಪ್ರಕೃತಿ ಎನ್ನುವ ಉತ್ತರ ಕೊಟ್ಟಿರಿ ಜೋಕೆ. ಅದು ನಿಸ್ಸಂದೇಹವಾಗಿ ಮಾನವನದೇ ಕೆಲಸ.

Reference: ‘Sapience’ by Yuval Noah Harrari

No comments:

Post a Comment