ನಮ್ಮ ಮೆದುಳಿನಲ್ಲಿ ಉತ್ಪತ್ತಿಯಾಗುವ ಹಲವಾರು ರಾಸಾಯನಿಕಗಳಲ್ಲಿ ಒಂದು ಈ ಡೋಪಮೈನ್ (Dopamine). ಇದು ಸಂತೋಷ ಮತ್ತು ಆಸೆಗೆ ಸಂಬಂಧಿಸಿದ್ದು. ಆದರೆ ಸಂತೋಷ ಇದ್ದಲ್ಲಿ ದುಃಖ ಮತ್ತು ಆಸೆ ಇದ್ದಲ್ಲಿ ನಿರಾಸೆ ಸಹಜ ಅಲ್ಲವೇ. ಹಾಗಾಗಿ ಈ ಡೋಪಮೈನ್ ಪ್ರಮಾಣ ಹೆಚ್ಚಾದರೂ ಸಮಸ್ಯೆ, ಕಡಿಮೆ ಆದರೂ ಸಮಸ್ಯೆ.
ಹೊಸ ವಸ್ತು ಕೊಂಡುಕೊಳ್ಳುವುದಕ್ಕೆ ಮುನ್ನ ನಮ್ಮ ಮನದಲ್ಲಿ
ಆ ವಸ್ತು ನಮ್ಮದಾದರೆ ಎಷ್ಟು ಚೆನ್ನ ಎಂದು ಅನಿಸುತ್ತದಲ್ಲವೇ? ಆ ಭಾವನೆಯನ್ನು ನಮ್ಮಲ್ಲಿ ಉಂಟು ಮಾಡುವ
ರಾಸಾಯನಿಕವೇ ಈ ಡೋಪಮೈನ್. ಆದರೆ ಆ ವಸ್ತು ನಮ್ಮದಾದ ಮೇಲೆ ಅದು ಸಂತೋಷ ಉಂಟು ಮಾಡುವುದು ಕಡಿಮೆ ಆಗಿ
ಮನಸ್ಸು ಬೇರೆಯ ವಸ್ತುವಿನ ಕಡೆಗೆ ಕಣ್ಣು ಹಾಕುತ್ತದೆ. ಇದು ಕೂಡ ಡೋಪಮೈನ್ ದೇ ಪ್ರಭಾವ. ಏಕೆಂದರೆ
ಡೋಪಮೈನ್ ಭವಿಷ್ಯದ ಬಗ್ಗೆ ಮಾತ್ರ ಯೋಚಿಸುತ್ತದೆ. ಇತಿಹಾಸದ ಬಗ್ಗೆ ಅಲ್ಲ. ಅಲ್ಲದೆ ಇದರ ಅಡ್ಡ ಪರಿಣಾಮ
ಎಂದರೆ ಅದು ನಿಮ್ಮ ಮನಸ್ಸನ್ನು ಇನ್ನು ಹೆಚ್ಚಿನ ವಸ್ತುಗಳಿಗೆ ಆಸೆ ಪಡುವಂತೆ ಮಾಡುತ್ತದೆ. ಉದಾಹರಣೆಗೆ
ನೀವು ಮೊದಲನೇ ಬಾರಿಗೆ ಒಂದು ಕಾರು ಖರೀದಿಸಿ ಖುಷಿ ಪಟ್ಟಿದ್ದರೆ ಮುಂದಿನ ಸಲ ಅದೇ ತರಹದ ಕಾರು ನಿಮಗೆ
ಮೊದಲಿನಷ್ಟು ಖುಷಿ ಹುಟ್ಟಿಸುವುದಿಲ್ಲ. ಬದಲಿಗೆ ನೀವು ಇನ್ನು ದೊಡ್ಡ ಬೆಲೆಯ ಕಾರು ಖರೀದಿಸಬೇಕು.
ಮೊದಮೊದಲಿಗೆ ನೀವು ದಿನಕ್ಕೆ ಒಂದೇ ಸಿಗರೆಟ್ ಸೇದಿದರೆ ಕ್ರಮೇಣ ದಿನ ಕಳೆದಂತೆ ಅದರ ಪ್ರಮಾಣ ಹೆಚ್ಚುತ್ತಾ
ಹೋಗುವಂತೆ ಮಾಡುತ್ತದೆ ಈ ಡೋಪಮೈನ್. ಆಸೆಗಳೇ ಆಗಲಿ ಅಥವಾ ದುಶ್ಚಟಗಳೇ ಆಗಲಿ ಅವುಗಳ ಪ್ರಮಾಣ ಹೆಚ್ಚುವಂತೆ
ಮಾಡುತ್ತ ಹೋಗುತ್ತದೆ ಡೋಪಮೈನ್.
ಆದರೆ ಮೆದುಳು ಎನ್ನುವುದು ಮಾಯಾ ಪ್ರಪಂಚ. ನೀವು ಗಟ್ಟಿ ಮನಸ್ಸಿನಿಂದ
ದುಶ್ಚಟಗಳಿಂದ ಮತ್ತು ಆಸೆಬುರುಕತನದಿಂದ ಹೊರ ಬಂದರೆ, ಮೊದಲಿಗೆ ಅದು ಕಿರಿಕಿರಿ ಮಾಡುತ್ತದೆ. ಆದರೆ
ನೀವು ಜಗ್ಗದಿದ್ದಲ್ಲಿ ಅದು ಮತ್ತೆ ಮೆದುಳನ್ನು ಕಡಿಮೆ ಆಸೆಗಳಿಗೆ ಹೊಂದಿಕೊಳ್ಳುವಂತೆ ಮಾಡಿಕೊಳ್ಳುತ್ತದೆ.
ಆದರೆ ಡೋಪಮೈನ್ ಪ್ರಮಾಣ ತುಂಬಾ ಕಡಿಮೆ ಆದಲ್ಲಿ ಅದು ಮನುಷ್ಯನನ್ನು ಖಿನ್ನತೆಗೆ ದೂಡಿಬಿಡುತ್ತದೆ.
ಯಾವುದೇ ಕೆಲಸದಲ್ಲಿ ಆಸಕ್ತಿ ಇಲ್ಲದಂತೆ ಮಾಡುತ್ತದೆ. ಹಾಗಾಗಿ ಇದರ ಪ್ರಮಾಣ ನಿಯಮಿತವಾಗಿದ್ದಷ್ಟು
ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಆಸೆಗಳಿಗೆ ಕಡಿವಾಣ ಹಾಕುವುದು, ಧ್ಯಾನ ಮಾಡುವುದು ಇದರ ಸಮತೋಲನಕ್ಕೆ
ಸಹಾಯವಾಗುತ್ತವೆ.
ನಿಮ್ಮಲ್ಲಿ ಡೋಪಮೈನ್ ಸರಿ ಪ್ರಮಾಣದಲ್ಲಿ ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳುವುದು ಸುಲಭ. ನಿಮಗೆ ಸಣ್ಣ ಸಣ್ಣ ವಿಷಯಗಳು ಸಂತೋಷ ತರುವುದೇ ಇಲ್ಲವೇ ಎನ್ನುವುದು ಗಮನಿಸಿ ನೋಡಿ. ಉದಾಹರಣೆಗೆ ಒಂದು ಸೊಗಸಾದ ಸಂಜೆ, ಸೂರ್ಯಾಸ್ತ ಮೂಡಿಸಿದ ಆಕಾಶದಲ್ಲಿನ ರಂಗು ರಂಗಿನ ಚಿತ್ತಾರ, ನಾಯಿ ಮರಿ ಜೊತೆಗಿನ ಆಟ, ಒಂದು ಶೃಂಗಾರ ಕಾವ್ಯ ಈ ತರಹದ್ದು ನಿಮ್ಮಲ್ಲಿ ಸಂತೋಷ ಉಂಟು ಮಾಡಿದರೆ ನಿಮಗೆ ಅಭಿನಂದನೆಗಳು.
ಒಂದು ವೇಳೆ ನಿಮಗೆ ದುಡ್ಡು, ಕೀರ್ತಿ, ಆಸ್ತಿ ಇವು ಕೊಟ್ಟಷ್ಟು
ಸಂತೋಷ ನಿಮಗೆ ಬೇರೆ ಏನು ಕೊಡುವುದಿಲ್ಲವಾದರೆ ನಿಮ್ಮಲ್ಲಿ ಡೋಪಮೈನ್ ಪ್ರಚೋದನೆ ಹೆಚ್ಚಿನ ಪ್ರಮಾಣದಲ್ಲಿ
ಇದೆ. ನಿಮಗೆ ಒಂದು ಸುಂದರ ಸ್ಥಳದಲ್ಲಿ ಮನೆ ಖರೀದಿಸುವ ತಾಕತ್ತು ಇರುತ್ತದೆ ಆದರೆ ಅದರ ಸಂತೋಷ ಅನುಭವಿಸುವ
ಮನಸ್ಥಿತಿ ಇರುವುದಿಲ್ಲ. ಏಕೆಂದರೆ ನಿಮ್ಮಲ್ಲಿರುವ ಡೋಪಮೈನ್ ನಿಮ್ಮನ್ನು ಅಲ್ಲಿಗೆ ಸುಮ್ಮನಾಗಲು ಬಿಡುವುದಿಲ್ಲ.
ಹಾಗೆಯೆ ದುಶ್ಚಟಕ್ಕೆ ದಾಸರಾದವರು ಮತ್ತು ಜೀವನದಲ್ಲಿ ಬೇಸರಗೊಂಡವರು
ಕ್ರಮೇಣ ಅವಕ್ಕೆ ಕಡಿವಾಣ ಹಾಕಿಕೊಂಡು, ಮನಸ್ಸನ್ನು ವಿಮುಖ ಮಾಡಿಕೊಂಡು, ಬೇರೆ ಕೆಲಸಗಳಲ್ಲಿ ತಲ್ಲೀನರಾಗುವ
ಮೂಲಕ ಅದರಿಂದ ಹೊರಗೆ ಬಂದು ಬಿಡಬಹುದು. ಆದರೆ ನಮ್ಮನ್ನು ನಾವು ಗಮನಿಸಿಕೊಳ್ಳುವ ವ್ಯವಧಾನ ಇರಬೇಕಷ್ಟೆ.
ಇಂದಿನ ಅತಿ ವೇಗದ ಜೀವನದಲ್ಲಿ ಆಸೆಗಳಿಗೆ ಮಿತಿ ಇಲ್ಲದಂತೆ
ಬದುಕುವ ನಾವುಗಳು ನಮ್ಮ ಬದುಕಿನ ರೀತಿ ಗಮನಿಸಿಕೊಳ್ಳುವದನ್ನು ಮರೆತೇ ಬಿಟ್ಟಿದ್ದೇವೆ. ಇವತ್ತಿನ ಮಾತು
ಬಿಡಿ. ಸಾವಿರಾರು ವರುಷಗಳ ಹಿಂದೆಯೇ ಬುದ್ಧ 'ಆಸೆಯೇ ದುಃಖಕ್ಕೆ ಮೂಲ' ಎಂದು ಹೇಳಲಿಲ್ಲವೇ? ಆದರೆ ಅದಕ್ಕೆ
ಡೋಪಮೈನ್ ಕಾರಣ ಎನ್ನುವುದನ್ನು ಇಂದಿನ ವೈದ್ಯಕೀಯ ವಿಜ್ಞಾನ ಬಿಡಿಸಿ ಹೇಳುತ್ತಿದೆ. ಈ ನಿಟ್ಟಿನಲ್ಲಿ
ಹಲವಾರು ಸಂಶೋಧನೆಗಳು ಸಾಗುತ್ತಿವೆ. ಇಂದ್ರಿಯ ಮೋಹಗಳಿಗೆ ಸಿಲುಕುವುದನ್ನು ಬಿಡಿಸುವುದು ಕಲಿಸುವ ಧ್ಯಾನ
ಕೂಡ ಮುಂದೆ ಒಂದು ದಿನ ವೈದ್ಯಕೀಯ ವಿಜ್ಞಾನದ ಅದರಲ್ಲೂ ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಮಬಾಣವಾಗಬಹುದು
ಎನ್ನುವುದು ನನ್ನ ಅನಿಸಿಕೆ.
References:
1. Dopamine Nation by Anna Lembke (Book)
2. The Molecule of More by Daniel Z. Lieberman (Book)
3. Podcast: How Dopamine drives crave by Daniel Lieberman (Audio)
4. Podcast: Huberman Lab on Neuroscience (Audio)