Wednesday, June 8, 2022

ಹಾವುಗಳ ಪರವಾಗಿ ಎರಡು ಮಾತು

(ಇದು Ruskin Bond ಅವರು ಬರೆದ 'In Defense of Snakes' ಲೇಖನದ ಭಾವಾನುವಾದ)


ಹಾವನ್ನು ಕಂಡ ತಕ್ಷಣ ಜನ ಅದೇಕೆ ಅಷ್ಟು ತಬ್ಬಿಬ್ಬಾಗುತ್ತಾರೋ ತಿಳಿಯದು. 'ಹಾವು, ಹಾವು' ಎಂದು ಅರಚುತ್ತಾ ಸುತ್ತಲಿನ ಎಲ್ಲ ಜನರ ಗಮನ ಅದರ ಕಡೆಗೆ ಸೆಳೆದುಬಿಡುತ್ತಾರೆ. ಹಾವು ಅಷ್ಟರಲ್ಲಿ ಪಾರಾಗದಿದ್ದರೆ, ಅದು ಬಡಿಸಿಕೊಂಡು ಸಾಯುವುದು ಮಾತ್ರ ಗ್ಯಾರಂಟಿ. ಪಾಪದ ಹಾವು! ಹೊರಗಡೆ ಏಕೆ ಕಾಣಿಸಿಕೊಂಡಿತೋ? ಬಿಸಿಲು ಕಾಯಿಸಲೆಂದು ಬಂದಿತೋ, ಕಪ್ಪೆಯನ್ನು ಹಿಂಬಾಲಿಸಿಕೊಂಡು ಬಂತೋ ಅಥವಾ ರಸ್ತೆ ದಾಟಲು ನೋಡುತ್ತಿತ್ತೋ? ಆದರೆ ಅದನ್ನು ಕಂಡ ಜನ ಮಾತ್ರ ಅದಕ್ಕೆ ಒಂದು ಗತಿ ಕಾಣಿಸದೆ ಬಿಡುವುದಿಲ್ಲ.


ಆ ತರಹ ಸಾವು ಕಾಣುವ ಸಾಕಷ್ಟು ಹಾವುಗಳು ಎಲ್ಲ ವಿಷದ ಹಾವುಗಳಲ್ಲ. ಸುಮಾರು ೩೦೦ ವರ್ಗದ ಹಾವುಗಳಲ್ಲಿ, ಕೇವಲ ೩೦ ವರ್ಗದ ಹಾವು ಮಾತ್ರ ಅಪಾಯಕಾರಿ. ಅದರಲ್ಲಿ ಐದು ಜಾತಿಯ ಹಾವುಗಳು ಮಾತ್ರ ಮನುಷ್ಯನಿಗೆ ಜೀವ ಅಪಾಯ ಒಡ್ಡುವಷ್ಟು ವಿಷಕಾರಿಯಾಗಿವೆ. ಉಳಿದವುಗಳಲ್ಲಿ ವಿಷದ ಪ್ರಮಾಣ ತುಂಬಾ ಕಡಿಮೆ. ತಮ್ಮ ಬೇಟೆಗಳಾದ ಕಪ್ಪೆ, ಇಲಿಗಳನ್ನು ತಪ್ಪಿಸಿ ಕೊಂಡು ಹೋಗದಂತೆ ಅವುಗಳನ್ನು ನಿಷ್ಕ್ರಿಯಗೊಳಿಸಲು ಆ ಸಣ್ಣ ಪ್ರಮಾಣದ ವಿಷ ಹಾವುಗಳಿಗೆ ಸಹಾಯವಾಗುತ್ತದೆ. ಹೆಬ್ಬಾವುಗಳಿಗೆ ವಿಷವೇ ಬೇಕಿಲ್ಲ. ತಮ್ಮ ಬೇಟೆಯನ್ನು ಬಲವಾಗಿ ಸುತ್ತಿಕೊಂಡು, ಉಸಿರುಗಟ್ಟಿಸಿ, ಮೈ ಮೂಳೆಗಳೆನ್ನೆಲ್ಲ ಮುರಿದು ಹಾಕುತ್ತವೆ. ಆಮೇಲೆ ಅವನ್ನು ನುಂಗಿ ಹಾಕುತ್ತವೆ. ಆದರೆ ಅವಕ್ಕೆ ವರುಷಕ್ಕೆ ಎರಡು-ಮೂರು ಬಾರಿ ಮಾತ್ರ ದೊಡ್ಡ ಊಟ ಸಾಕು. ಅವುಗಳು ಹಸಿದಿರದಿದ್ದರೆ ಅವು ನಿಮ್ಮನ್ನು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಮಲಗಿ ನಿದ್ದೆ ಹೊಡೆಯುತ್ತವೆ.


ಅಪಾಯಕಾರಿ ಹಾವುಗಳು ಅನವಶ್ಯಕ ನಿಮಗೆ ತೊಂದರೆ ಕೊಡುವದಿಲ್ಲ. ನೀವು ಅವುಗಳಿಗೆ ಪ್ರಚೋದಿಸಿದರೆ, ತುಳಿದರೆ ಮಾತ್ರ ನಿಮಗೆ ಅಪಾಯ ಎದುರಿಸದೆ ವಿಧಿ ಇಲ್ಲ. ಪ್ರತಿ ವರ್ಷ ಸಾವಿರಾರು ಜನ ಹಾವಿನ ಕಡಿತಕ್ಕೆ ಸತ್ತದ್ದು ಸುದ್ದಿಯಾಗುತ್ತದಲ್ಲ. ಅಲ್ಲಿ ಹಾವಿನ ಆಕ್ರಮಣಕಾರಿ ಪ್ರವೃತ್ತಿಗಿಂತ ಜನರ ಬೇಜವಾಬ್ದಾರಿತನವೇ ಹೆಚ್ಚಿನ ಸಲ ಕಾರಣವಾಗಿರುತ್ತದೆ. ಹಾವುಗಳು ಬೇಟೆಯಾಡುವುದಕ್ಕೆ ಕಚ್ಚುತ್ತವೆ ಹಾಗೆಯೆ ಅಪಾಯದಿಂದ ತಪ್ಪಿಸಿಕೊಳ್ಳಲು ಕೂಡ. ಆದರೆ ದ್ವೇಷದ ಕಾರಣ ಕೊಡುವುದು ಮಾತ್ರ ನಮ್ಮ ಕಲ್ಪನೆ.


ನಾನು ನಮ್ಮ ಮನೆಯ ಸುತ್ತ ಹಾವುಗಳು ಅಡ್ಡಾಡಿದರೂ ಅವುಗಳನ್ನು ಗಮನಿಸದಂತೆ ಇರುತ್ತೇನೆ. ಅದಕ್ಕೆ ಪ್ರತಿಫಲವಾಗಿ ನಮ್ಮ ಮನೆ ಅಂಗಳದಲ್ಲಿ ಕಪ್ಪೆಗಳ ಸಂತತಿ ಕಡಿಮೆ ಆಗಿದೆ. ರಾತ್ರಿ ಎಲ್ಲ ಕಪ್ಪೆ ವಟರುಗುಟ್ಟಿ ನಿದ್ದೆ ಹಾಳಾಗುವ ಸಂದರ್ಭಗಳು ಈಗ ಇಲ್ಲ. ಮನೆ ಹೊರಗಡೆ ಇರುವ ಆ ಹಸಿರು ಹಾವನ್ನು ಮನೆ ಒಳಗೆ ಬಿಟ್ಟು ಕೊಂಡರೆ, ಮನೆಯಲ್ಲಿ ಸೇರಿಕೊಂಡಿರುವ ಇಲಿಗಳ ಕಾಟ ಅದು ತಪ್ಪಿಸುತ್ತದೆ ಏನೋ ಎಂದು ಕೂಡ ವಿಚಾರ ಮಾಡುತ್ತೇನೆ. ಇಲ್ಲಿ ಸುತ್ತ ಮುತ್ತ ಇರುವ ಹಾವುಗಳನ್ನು ಕಂಡ ನನ್ನ ಸ್ನೇಹಿತರು ನನ್ನನ್ನು ಭೇಟಿಯಾಗಲು ಮನೆಗೆ ಬರುವುದು ನಿಲ್ಲಿಸಿದ್ದಾರೆ. ಹಾಗೆಯೇ ನನಗೆ ಸಾಲ ಕೊಟ್ಟವರೂ ಕೂಡ.

No comments:

Post a Comment