ಕಳೆದ ವರ್ಷ ನಾನು ಮನೆ ರಿಪೇರಿ ಕೆಲಸ ಮಾಡಿಸುತ್ತಿದ್ದಾಗ, ಗಾರೆ ಕೆಲಸಕ್ಕೆ ಒಂದು ಕುಟುಂಬ ಬರುತ್ತಿತ್ತು. ಗಂಡ, ಹೆಂಡತಿ ಮತ್ತು ಹೆಂಡತಿಯ ತಾಯಿ. ಗಂಡ ಗೋಡೆ ಕಟ್ಟುವ ಕೆಲಸ ಮಾಡಿದರೆ ಹೆಂಡತಿ ಅವನಿಗೆ ಸರಕು ತಂದು ಕೊಡುವ ಸಹಾಯದ ಕೆಲಸ. ಅವಳ ತಾಯಿಗೆ ಉಸುಕು ಹಿಡಿಯುವ ಕೆಲಸ. ಮೈ ಮುರಿಯುವ ದುಡಿತ. ಮಧ್ಯಾಹ್ನದ ಹೊತ್ತಿಗೆ ಕಟ್ಟಿಕೊಂಡು ಬಂದ ರೊಟ್ಟಿ ತಿನ್ನುತ್ತಿದ್ದರು. ಮತ್ತೆ ದುಡಿತಕ್ಕೆ ಹಾಜರು. ಸಂಜೆ ಹೊತ್ತಿಗೆ ಸಡಗರದಿಂದ ತಮ್ಮ ಮನೆಗೆ ಧಾವಿಸುತ್ತಿದ್ದರು. ಇದು ಪ್ರತಿ ದಿನದ ಊಟಕ್ಕೆ ಕುಟುಂಬದ ಎಲ್ಲರೂ ದುಡಿಯಬೇಕಾದ ಪರಿಸ್ಥಿತಿ. ಕೆಲಸ ನಡೆದಷ್ಟೂ ದಿನ ಗಂಡ ಅನವಶ್ಯಕ ರೇಗಿದ್ದು, ಹೆಂಡತಿ ಗಂಡನನ್ನು ಆಡಿಕೊಂಡಿದ್ದು, ಅತ್ತೆ ಹೀಯಾಳಿಸಿದ್ದು ಇಂತಹದ್ದು ಯಾವುದು ನನ್ನ ಗಮನಕ್ಕೆ ಇರಲಿಲ್ಲ. ಅವರಿಗಿದ್ದದ್ದು ಹೊಟ್ಟೆ ತುಂಬಿಸಿಕೊಳ್ಳಲು ಬೇಕಾದ ಕೆಲಸ ಮಾತ್ರ. ಕೆಲಸದಲ್ಲೇ ಅವರ ನೆಮ್ಮದಿ.
ಇದು ಮನೆ ಹೊರಗೆ ಬಿಸಿಲಲ್ಲಿ ದುಡಿಯುವ ಪಾಡಾದರೆ, ಮನೆ ಒಳಗೆ ನೆರಳಲ್ಲಿ ಕುಳಿತು, ಇಂದಿನ ಊಟಕ್ಕೆ ಏನು ಎಂದು ಚಿಂತೆ ಮಾಡುವ ಅವಶ್ಯಕತೆ ಇಲ್ಲದ ನಮ್ಮ ಕುಟುಂಬದಲ್ಲಿ ಮಾತ್ರ ಅಸಮಾಧಾನ. ಗಂಡನಿಗೆ ಚುಚ್ಚಿ ಮಾತನಾಡುವ ಹೆಂಡತಿ, ಇವಳೆದೆಷ್ಟು ಧಿಮಾಕು ಎಂದು ನೋಡುವ ಗಂಡ, ಅವರನ್ನು ನೋಡಿ ಇವರ ಹಣೆಬರಹವೇ ಇಷ್ಟು ಎಂದುಕೊಳ್ಳುವ ಉಳಿದ ಕುಟುಂಬದ ಸದಸ್ಯರು. ಪ್ರತಿ ದಿನ ಬಿಸಿಲಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ದುಡಿಯುವುದು ಮನೆ ಕಟ್ಟುವವರ ನಿಜವಾದ ಕಷ್ಟಗಳಾದರೆ, ಮನೆ ಮಾಲೀಕರ ಸಮಸ್ಯೆಗಳು ಮಾತ್ರ ಸುಖಕ್ಕೆ ಹುಟ್ಟಿದವು. ಅಲ್ಲಿ ಗಂಡನಿಗೆ ಮನೆ ಇನ್ನು ಚೆನ್ನಾಗಿ ಕಟ್ಟಿಸಬಹುದಿತ್ತು ಎನ್ನುವ ಚಿಂತೆ, ಹೆಂಡತಿಗೆ ಇವನ ಬುದ್ಧಿಯೇ ಸರಿ ಇಲ್ಲ ಎನ್ನುವ ಚಿಂತೆ, ಇವರಿಬ್ಬರು ಏಕೆ ಹೀಗೆ ಆಡುತ್ತಾರೋ ಎನ್ನುವ ಚಿಂತೆ ಅವರ ಮಕ್ಕಳಿಗೆ.
ಹೊಟ್ಟೆ ಹಸಿದಿದ್ದಾಗ ಅಲ್ಲಿರುವುದು ಒಂದೇ ಗಮನ. ಆದರೆ ಹೊಟ್ಟೆ ತುಂಬಿದವರಿಗೆ? ಉಡಲು ಬಟ್ಟೆ ಇಲ್ಲದವರಿಗೆ ಒಂದೇ ಚಿಂತೆ. ನಿಮ್ಮ ಹತ್ತಿರ ಸಾಕಷ್ಟು ಉಡುಪುಗಳಿದ್ದರೆ ಯಾವುದನ್ನು ಯಾವುದಕ್ಕೆ ಮ್ಯಾಚ್ ಮಾಡಿ ಉಟ್ಟುಕೊಳ್ಳುವುದು ಎನ್ನುವ ಚಿಂತೆ. ಬಡವರಿಗೆ ಕತ್ತಲ್ಲಿ ಕರಿಮಣಿ ಸರ ಒಂದೇ ಆಭರಣ ಆದರೆ ಉಳ್ಳವರಿಗೆ ತಮ್ಮ ಹತ್ತಿರ ಬರೀ ಎರಡೇ ನೆಕ್ಕ್ಲೆಸ್ ಇರುವುದಲ್ಲ ಎನ್ನುವ ಚಿಂತೆ. ದುಡಿಯುವವನಿಗೆ ಬಟ್ಟೆ ಕೊಳಕಾಗಿದ್ದರ ಕಡೆಗೆ ಲಕ್ಷವೇ ಇರುವುದಿಲ್ಲ. ಆದರೆ ಮನೆಯೊಳಗೇ ಕನ್ನಡಿಯ ಮುಂದೆ ಬಹು ಹೊತ್ತು ಅಲಂಕಾರ ಮಾಡಿಕೊಂಡು ಹೊರ ಬರುವ ಹೆಂಗಸಿಗೆ ಪೌಡರ್ ಜಾಸ್ತಿ ಆಯಿತೇನೋ ಎನ್ನುವ ಅನುಮಾನ. ಬಡ ಮಕ್ಕಳಿಗೆ ಶಾಲಾ ಪುಸ್ತಕಗಳಿಗೆ ದುಡ್ಡು ಹೊಂದಿಸುವುದೇ ಕಷ್ಟ. ಆದರೆ ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಕಡಿಮೆ ಮಾರ್ಕ್ಸ್ ಬಂದದ್ದಕ್ಕೆ ಕೊರಗುವ ಅನುಕೂಲಸ್ಥ ಕುಟುಂಬದ ಹುಡುಗರಿಗೆ ಅನಿಸುವುದು ಏನು?
ಅವರವರ ಕಷ್ಟ ಅವರವರಿಗೆ ಎಂದು ನೀವು ಹೇಳಬಹುದು. ಆದರೆ ಗಮನಿಸಿ ನೋಡಿ. ಸಾಕಷ್ಟು ಕಷ್ಟಗಳು ಸುಖಕ್ಕೆ ಹುಟ್ಟಿದ ಕಷ್ಟಗಳು. ನಿಜವಾದ ಕಷ್ಟಗಳನ್ನು ಅರಿತವಿರಿಗೆ ಸುಖಕ್ಕೆ ಹುಟ್ಟಿದ ಕಷ್ಟಗಳು ಬಾಧಿಸುವುದಿಲ್ಲ. ಆದರೆ ಅಂತಹ ಅರಿವು ಮತ್ತು ಅನುಭವ ನಮ್ಮಲ್ಲಿ ಸಾಕಷ್ಟು ಜನರಿಗೆ ಇಲ್ಲ. ಇರುವ ಆಸ್ತಿ ಕಡಿಮೆ ಆಯಿತು ಎಂದು ಕೊರಗುವ ಗಂಡಸು, ಇನ್ನಷ್ಟು ಸೀರೆ ಬೇಕಿತ್ತು ಎಂದು ಬೇಜಾರಾಗುವ ಹೆಂಗಸು ಅವರೆಲ್ಲರೂ ನಿಜ ಕಷ್ಟಗಳಿಂದ ದೂರವೇ ಉಳಿದಿದ್ದಾರೆ. ಅವರಿಗೆ ತಮ್ಮ ಕಷ್ಟಗಳು ಸುಖಕ್ಕೆ ಹುಟ್ಟಿದ ಕಷ್ಟಗಳು ಎನ್ನುವ ತಿಳುವಳಿಕೆಗೆ ಬಂದರೆ ಅವರ ನೋವು ಕಡಿಮೆ ಆಗುತ್ತದೆ. ಆದರೆ ವಿಪರ್ಯಾಸ ನೋಡಿ. ಅವರು ನೋಡುತ್ತಿರುವುದು ಬಡವರನ್ನಲ್ಲ. ತಮಗಿಂತ ಶ್ರೀಮಂತರನ್ನ. ಹಾಗಾಗಿ ಕಷ್ಟಗಳು (ಸುಖಕ್ಕೆ ಹುಟ್ಟಿದವು) ಅವರನ್ನು ಭಾದಿಸುವುದು ಬಿಡುವುದೇ ಇಲ್ಲ.
No comments:
Post a Comment