ಕರ್ಮ ಎನ್ನುವುದು ಅಂತೆ-ಕಂತೆಗಳ ಪುರಾಣ. ಅದರಲ್ಲಿ ನಿಮಗೆ ನಂಬಿಕೆ ಇರದೇ ಇದ್ದರೆ ಮುಂದಕ್ಕೆ ಓದಲೇಬೇಡಿ. ಆದರೆ ನನಗೆ ಆಗುತ್ತಿರುವ ಅನುಭವಗಳು ಅದರ ಮೇಲೆ ನಂಬಿಕೆ ಮೂಡಿಸಿವೆ.
ಸದ್ಗುರು, ರವಿಶಂಕರ್,
ಶಿವಾನಿ ಅವರು ಕರ್ಮದ ಬಗ್ಗೆ ಮಾತನಾಡಿರುವ ಹಲವಾರು ವಿಡಿಯೋಗಳನ್ನು ನೋಡಿದ್ದೇನೆ. ಇಂಟರ್ನೆಟ್ ನಲ್ಲಿ
ಸಾಕಷ್ಟು ಲೇಖನಗಳನ್ನು ಓದಿದ್ದೇನೆ. ಅದರ ಬಗ್ಗೆ ಸಾಕಷ್ಟು ವಿಚಾರ ಮಾಡಿದ್ದೇನೆ. ಮತ್ತು ನನ್ನ ಬದುಕಿಗೆ
ತಾಳೆ ಹಾಕಿ ನೋಡಿದ್ದೇನೆ. ಕೊನೆಗೆ ನನಗೆ ಅರ್ಥವಾಗಿರುವುದಿಷ್ಟು.
ಕರ್ಮ ಎನ್ನುವುದು
ಪಾಪ-ಪುಣ್ಯಗಳ ಪ್ರತ್ಯೇಕ ಲೆಖ್ಖ. ಆದರೆ ಅದು ಗಣಿತದ ಲೆಖ್ಖವಲ್ಲ. ಅನುಭವಗಳ ಲೆಖ್ಖ. ನೀವು ಇತರರಲ್ಲಿ
ಒಳ್ಳೆಯ ಅನುಭೂತಿ ಮೂಡಿಸಿದ್ದರೆ ಅದರ ಫಲವು ನಿಮಗೆ ಉಂಟು. ಹಾಗೆಯೆ ನೀವು ಇತರರಿಗೆ ಅನ್ಯಾಯ ಮತ್ತು
ನೋವು ಉಂಟು ಮಾಡಿದ್ದರೆ ಅದೇ ಅನುಭವ ನಿಮಗೆ ಕಟ್ಟಿಟ್ಟ ಬುತ್ತಿ. ಆ ಅನುಭವಗಳ ಪಾಠ ಕಲಿಯುವವರೆಗೆ ಆ
ಸನ್ನಿವೇಶಗಳು ಮತ್ತು ವ್ಯಕ್ತಿಗಳು ನಮ್ಮ ಜೀವನದಲ್ಲಿ ಪುನರಾವರ್ತನೆ ಆಗುತ್ತಲೇ ಇರುತ್ತಾರೆ. ಹಾಗಾಗಿ
ನೀವು ಎಷ್ಟು ಬೇಗ ಪಾಠ ಕಲಿಯುತ್ತಿರೋ ಅಷ್ಟು ಉತ್ತಮ.
ಸುಲಭ ಲೆಕ್ಕಾಚಾರದ ಪ್ರಕಾರ (ಜನ್ಮ ದಿನ ಮತ್ತು ರಾಶಿಯ ಅನುಗುಣವಾಗಿ) ನಾನು ಈ ಜನ್ಮಕ್ಕೆ ತಂದ ಕರ್ಮದ ಹೊರೆ ಎಂದರೆ, ಹಿಂದಿನ ಜನ್ಮಗಳಲ್ಲಿ ಅಹಂಕಾರಿಯಾಗಿ ಬೇರೆಯವರ ಭಾವನೆಗಳಿಗೆ ಬೆಲೆ ಕೊಡದೆ ನಡೆದುಕೊಂಡಿದ್ದು. ಅದರ ಫಲವಾಗಿಯೇನೋ ಎನ್ನುವಂತೆ ನನಗೆ ನನ್ನ ಭಾವನೆಗಳಿಗೆ ಬೆಲೆ ಕೊಡದ ಒರಟರೆ ಇಂದಿಗೆ ನನ್ನ ಬಂಧು-ಬಳಗವಾಗಿದ್ದಾರೆ. ಅದು ನಾನು ಮಾಡಿದ ಕರ್ಮ ನಾನು ಅನುಭವಿಸದೇ ವಿಧಿ ಇಲ್ಲ ಎನ್ನುವಂತೆ. ಆದರೆ ಅದರ ಪಾಠ ನನಗೆ ಮನದಟ್ಟಾಗಿ ಹೋಗಿದೆ. ಪಾಠ ಕಲಿಯದೇ ಇರುವ ಮೂರ್ಖತನದ ಶಾಪ ನನಗೆ ದೇವರು ನೀಡಿಲ್ಲ. ಅದು ಯಾವ ಪುಣ್ಯ ಕರ್ಮದ ಫಲವೋ?
ಕರ್ಮವನ್ನು ನೀವು
ನಂಬಿದರೆ, ಈಗ ನಮ್ಮ ಜೊತೆಗೆ ಅನ್ಯಾಯದಿಂದ ನಡೆದುಕೊಳ್ಳುವ ಜನರನ್ನು ನಾವು ಬೈದುಕೊಳ್ಳುವಂತೆ ಇಲ್ಲ.
ಹಾಗೆ ಮಾಡಿದರೆ ಮುಂದಿನ ಜನ್ಮದಲ್ಲಿ ಅದೇ ಜನರ ಜೊತೆಗೆ ನಮ್ಮ ಜೀವನ. ಅದು ಪಾಠ ಕಲಿಯದೇ ಇದ್ದದ್ದಕ್ಕಾಗಿ.
ಬಿ.ಕೆ.ಶಿವಾನಿ ಅವರ ಪ್ರಕಾರ ನಾವು ಅವರಿಗೆ ಕ್ಷಮೆ ಕೇಳಬೇಕು. ಅದು ನಮಗೆ ನೆನಪಿರದ ಯಾವುದೊ ಜನ್ಮದಲ್ಲಿ
ನಾವು ಅವರಿಗೆ ಮಾಡಿರಬಹುದಾದ ಅನ್ಯಾಯಕ್ಕಾಗಿ. ಕ್ಷಮೆ ಯಾಚನೆಯಿಂದ ನಮ್ಮ ಕರ್ಮದ ಹೊರೆ ಕಡಿಮೆ ಆಗುತ್ತದೆ.
ಹಾಗೆ ಪಾಠ ಸಂಪೂರ್ಣ ಕಲಿತ ಮೇಲೆ, ನಮಗೆ ಅವರ ಜೊತೆ ಇರುವ ಕರ್ಮದ ಸಂಬಂಧ ಕಳಚಿ ಬೀಳುತ್ತದೆ. ಅದಾಗದೆ
ಹೊಸ ಜೀವನ ಶುರು ಆಗದು.
ನೀವು ಯೋಗಿಗಳನ್ನು
ಗಮನಿಸಿದರೆ ಅವರು ಯಾರ ಜೊತೆಗೂ ಕರ್ಮವನ್ನು ಕಟ್ಟಿಕೊಳ್ಳುವ ಗೊಡವೆಗೆ ಹೋಗುವುದೇ ಇಲ್ಲ. ಬುದ್ಧನ ಬಗ್ಗೆ
ಒಂದು ಕಥೆಯಿದೆ. ಒಬ್ಬ ಮನುಷ್ಯ ಬುದ್ಧನ ಎದುರಿಗೆ ನಿಂತು, ಎಲ್ಲರ ಎದುರಿಗೆ ಬುದ್ಧನನ್ನು ವಾಚಾಮಗೋಚರವಾಗಿ
ನಿಂದಿಸುತ್ತಾನೆ. ತಾಳ್ಮೆ ಕಳೆದುಕೊಳ್ಳದ ಬುದ್ಧ ಶಾಂತಿಯಿಂದ ಉತ್ತರಿಸುತ್ತಾನೆ. "ನೀನು ಕೊಟ್ಟ
ಯಾವ ಉಡುಗೊರೆಯನ್ನು ನಾನು ಸ್ವೀಕರಿಸುತ್ತಿಲ್ಲ. ಅವೆಲ್ಲ ನಿನ್ನಲ್ಲೇ ಇರಲಿ."
ಬುದ್ಧನಿಗಿದ್ದ ಪ್ರೌಢಿಮೆ ನಮಗಿಲ್ಲ. ಉದ್ವೇಗಕ್ಕೆ ಸಿಕ್ಕು ಮನಸ್ಸಿಗೆ ತೋಚಿದ ಉತ್ತರ ನೀಡಿ ಕರ್ಮದ ಸುಳಿಗೆ ಸಿಲುಕಿ ನಾವು ಒದ್ದಾಡುತ್ತೇವೆ. ಪಾಠ ಪುನರಾವರ್ತನೆ ಆಗುತ್ತಾ ಹೋಗುತ್ತದೆ. ಶಿವಾನಿ ಅಕ್ಕಳ ಮಾತಿಗೆ ತಲೆಬಾಗಿ ಇಂದು ನಾನು ಹಿಂದೆ ಮಾಡಿರಬಹುದಾದ ಎಲ್ಲ ಅನ್ಯಾಯಗಳಿಗೆ, ಅದರಿಂದ ನೋವು ಅನುಭವಿಸಿದ ಎಲ್ಲರಲ್ಲಿ ಕ್ಷಮೆ ಕೋರುತ್ತೇನೆ. ಮುಂದೆ ಒಂದು ದಿನ ಕರ್ಮದ ಹೊರೆ ಕಡಿಮೆ ಎನಿಸಿದರೆ ನಿಮಗೆ ಖಂಡಿತ ತಿಳಿಸುತ್ತೇನೆ.
ಇದ್ಯಾವ ಪುರಾಣ
ಎಂದು ನಿಮಗೆ ಅನ್ನಿಸಿದರೆ, ನಾನು ನಿಮಗೆ ಮುಂಚೆಯೇ ಈ ಲೇಖನ ಓದದೇ ಇರಲು ಎಚ್ಚರಿಸಿದ್ದೆ. ಧನ್ಯವಾದಗಳು!