ಸಂಸ್ಕೃತದಲ್ಲಿ 'ಅಹಂ ಬ್ರಹ್ಮಾಸ್ಮಿ' (ನಾವು ಕೂಡ ಬ್ರಹ್ಮ) ಎನ್ನುವ ಮಾತಿದೆ. ಯೋಗದ ಅರ್ಥ ಮತ್ತು ಉದ್ದೇಶ ಬ್ರಹ್ಮ ಅಥವಾ ಸೃಷ್ಟಿಕರ್ತನಲ್ಲಿ ಒಂದಾಗುವುದು.
ಇಂಗ್ಲಿಷ್ ನಲ್ಲಿ
ಸ್ವಲ್ಪ ಬೇರೆಯ ತರಹದ ವ್ಯಖ್ಯಾನ ಇದೆ . ಅದರ ಪ್ರಕಾರ ನಾವೆಲ್ಲ ನಕ್ಷತ್ರ ಧೂಳು (Star Dust). ಅದು
ನಿಜವೇ. ನಾವು ಜನ್ಮ ತಳೆದದ್ದು ಭೂಮಿಯ ಸಂಪನ್ಮೂಲಗಳಿಂದ. ಭೂಮಿ ಮೈ ತಳೆದದ್ದು ಸೂರ್ಯನಿಂದ ಸಿಡಿದ
ತುಂಡಿನಿಂದ. ಅಂದರೆ ನಾವೆಲ್ಲ ಸೂರ್ಯನ ತುಂಡುಗಳಿಂದ ರೂಪುಗೊಂಡ ದೇಹಗಳೇ. ಅಷ್ಟೇ ಅಲ್ಲ ಸೂರ್ಯನ ಶಕ್ತಿಯೇ
ಗಿಡ, ಮರಗಳಿಗೆ ಜೀವ ತುಂಬಿ ನಮಗೆ ಪ್ರತಿ ದಿನದ ಆಹಾರ ಒದಗಿಸುತ್ತದೆ. ಸೂರ್ಯನಿಂದ ರೂಪುಗೊಂಡ, ಸೂರ್ಯನಿಂದಲೇ
ಜೀವಂತವಾಗಿರುವ ನಾವು ಸೂರ್ಯನ ಧೂಳಿನ ಕಣಗಳೇ ಸರಿ.
ಸತ್ತ ಮೇಲೆ ದೇಹ ಮಣ್ಣಲ್ಲಿ ಮಣ್ಣಾಗಿ ಮತ್ತೆ ಸೃಷ್ಟಿಯಲ್ಲಿ ಒಂದಾಗುತ್ತದೆ. ದೈಹಿಕವಾಗಿ ಗಮನಿಸಿದರೆ ಅಹಂ ಬ್ರಹ್ಮಾಸ್ಮಿ ಮತ್ತು ನಕ್ಷತ್ರ ಧೂಳು ಒಂದೇ ತರಹದ ಅರ್ಥ ಒದಗಿಸುತ್ತದೆ. ಆದರೆ 'ಅಹಂ ಬ್ರಹ್ಮಾಸ್ಮಿ' ಗೆ ಇರುವ ಪಾರಮಾರ್ಥಿಕ ಅರ್ಥ ನಕ್ಷತ್ರ ಧೂಳಿಗೆ ಇಲ್ಲ. ದೈಹಿಕ ಅಸ್ತಿತ್ವಕ್ಕೆ ಮೀರಿದ ಆತ್ಮದ ಇರುವಿಕೆಯ ಬಗ್ಗೆ ನಕ್ಷತ್ರದ ಧೂಳು ಮಾತನಾಡುವುದಿಲ್ಲ. ಅದು ನಂಬುವುದು ಕಣ್ಣಿಗೆ ಕಾಣುವ ಅಥವಾ ಅಳತೆಗೆ ಸಿಗುವಂತಹದ್ದು ಮಾತ್ರ.
ಆದರೆ ವಿಜ್ಞಾನ
ಬೆಳೆದಂತೆಲ್ಲ ಪುರಾತನ ಕಾಲದ ಯೋಗ ಅಭ್ಯಾಸಗಳಿಗೆ, ಧ್ಯಾನ ತಂದುಕೊಡುವ ದೈಹಿಕ ಲಾಭಗಳಿಗೆ ಪುರಾವೆ ಸಿಗತೊಡಗಿದೆ.
ಆದರೆ ಧ್ಯಾನ ನಮ್ಮಲ್ಲಿ ಮೂಡಿಸುವ ಪ್ರಜ್ಞೆಗಳಿಗೆ ವಿಜ್ಞಾನ ಹುಡುಕಿರುವ ವಿವರಣೆ ಅಷ್ಟಕಷ್ಟೇ. ಕ್ರಮೇಣ
ಅದು ಕೂಡ ಬದಲಾಗುತ್ತದೆ. ಕಣ್ಣಿಗೆ ಕಾಣಿಸಿದ ಮತ್ತು ಕಿವಿಗೆ ಕೇಳಿಸದ ತರಂಗಾಂತರಗಳಲ್ಲಿ
(wavelength) ಅದ್ಭುತ ಜಗತ್ತೇ ಅಡಗಿದೆ. ಭೂಮಿಯ ಗುರುತ್ವಾಕರ್ಷಣೆ ಶಕ್ತಿ ನಮ್ಮ ಕಣ್ಣಿಗೆ ಕಾಣುವುದಿಲ್ಲ,
ಕಿವಿಗೆ ಕೇಳಿಸುವುದಿಲ್ಲ, ನಾಲಿಗೆ ರುಚಿಗೆ, ಮೂಗಿನ ವಾಸನೆಗೆ ನಿಲುಕುವುದಿಲ್ಲ ಮತ್ತು ಚರ್ಮದ ಸ್ಪರ್ಶಕ್ಕೆ
ದೊರಕುವುದಿಲ್ಲ. ಆದರೆ ನಮ್ಮ ಅನುಭವಕ್ಕೆ ಬರುತ್ತದೆ. ಅದನ್ನು ಪರೀಕ್ಷೆ ಮಾಡಬೇಕೆ? ಒಂದು ಚೆಂಡನ್ನು
ನಿಮ್ಮ ತಲೆಯ ಮೇಲೆ ತೂರಿ ನೋಡಿ.
ಪಂಚೇದ್ರಿಯಗಳಿಗೆ
ನಿಲುಕದ ಗ್ರಹಿಕೆಗಳು ವಿಶ್ವದ ತುಂಬಾ ವ್ಯಾಪಿಸಿವೆ. ಪ್ರಕೃತಿಯು ನಮ್ಮ ಉಳಿವಿಗೆ ಎಷ್ಟು ಸಾಕೋ ಅಷ್ಟು
ಮಾತ್ರದ ಶಕ್ತಿಯನ್ನು ನಮ್ಮ ಪಂಚೇಂದ್ರಿಯಗಳಿಗೆ ನೀಡಿತು. ಅದರ ಮುಂದಿನ ಕಲಿಕೆ ಮಾತ್ರ ನಮ್ಮ ಪ್ರಯತ್ನಕ್ಕೆ
ಬಿಟ್ಟಿದ್ದು. ವಿಜ್ಞಾನ ಬೆಳೆದಂತೆಲ್ಲ, ತಂತ್ರಜ್ಞಾನ ಅಭಿವೃದ್ಧಿಯಾದಂತೆಲ್ಲ ಅವುಗಳ ಉಪಯೋಗ ಪ್ರತಿದಿನ
ಮಾಡುತ್ತೇವೆ. ಉದಾಹರಣೆಗೆ ಮೈಕ್ರೋವೇವ್ ಓವನ್ ನಲ್ಲಿ ಬೆಂಕಿ ಇಲ್ಲದೆ ಅಡುಗೆ ಬಿಸಿಯಾಗಿದ್ದು ಹೇಗೆ?
ನಮ್ಮ ಸೆಲ್ ಫೋನ್ ಗಳು ಹಿಂದಿನ ತಲೆಮಾರಿನವರಿಗೆ ಒಂದು ಅದ್ಭುತದಂತೆ ತೋರುತ್ತವೆಯೋ ಏನೋ?
ಒಂದು ಕಾಲದಲ್ಲಿ
ಭೂಮಿ ಚಪ್ಪಟೆ ಆಗಿದೆ, ಅದೇ ವಿಜ್ಞಾನ ಎಂದು ನಂಬಿದ್ದ ನಾವುಗಳು ಕಾಲ ಕ್ರಮೇಣ ನಮ್ಮ ನಂಬಿಕೆಗಳನ್ನು
ಬದಲಾಯಿಸಿಕೊಂಡೆವು. ಹಾಗೆಯೆ ಯೋಗ, ಧ್ಯಾನ ತಂದು ಕೊಡುವ ಮಾನಸಿಕ ಪ್ರಭುದ್ಧತೆ ವೈರಾಗ್ಯವನ್ನು ಮೀರಿದ
ವಿಜ್ಞಾನ ಎನ್ನುವ ತಿಳುವಳಿಕೆ ನಮಗೆ ಈಗ ಇರದೇ ಹೋಗಬಹುದು. ಆದರೆ ಆ ಅನಿಸಿಕೆ ಬದಲಾಗುವ ಕಾಲ ತುಂಬಾ
ದೂರ ಇರಲಿಕ್ಕಿಲ್ಲ. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಕಂಡುಕೊಂಡ ಸತ್ಯಗಳ ಹಾಗೆ, ಯೋಗಿಗಳು ಧ್ಯಾನದ
ಮೂಲಕ ಕಂಡ ಸತ್ಯಗಳು ಕೂಡ ಅಷ್ಟೇ ನಿಖರವಾದವು ಎನ್ನುವ ನಂಬಿಕೆ ನಮಗೆ ಕ್ರಮೇಣ ಮೂಡಬಹುದು.
ಇದೆಲ್ಲ ಅನಿಸಿದ್ದು
'Stalking the wild pendulum' ಎನ್ನುವ ಪುಸ್ತಕ ಓದಿದ ಮೇಲೆ. ಆ ಪುಸ್ತಕದ ಪರಿಚಯ ನನ್ನ ಹಿಂದಿನ
ಲೇಖನದಲ್ಲಿದೆ.
No comments:
Post a Comment