Saturday, July 16, 2022

ಸರ್ವವನ್ನು ಪರಿತ್ಯಾಗ ಮಾಡಿದ ಸರ್ವಜ್ಞನು ತ್ರಿಪದಿ ಹೇಳುವುದನ್ನು ಮರೆಯಲಿಲ್ಲ

ನೀವು ಕಥೆ ಓದುತ್ತಿರೋ, ಕೇಳುತ್ತಿರೋ (ಇನ್ನೊಬ್ಬರಿಂದ ಅಥವಾ ರೇಡಿಯೋನಲ್ಲಿ) ಅಥವಾ ನೋಡುತ್ತಿರೋ (ಸಿನೆಮಾ ಇಲ್ಲವೇ ದೂರದರ್ಶನದಲ್ಲಿ) ಎನ್ನುವುದು ಮುಖ್ಯವಲ್ಲ. ಅದಕ್ಕೆ ಹೇಗೆ ಸ್ಪಂದಿಸುತ್ತೀರಿ ಅನ್ನುವುದು ಮುಖ್ಯ. ಕಥೆಗಳಿಗೆ ಭಾಷೆ ಮತ್ತು ಮಾಧ್ಯಮಕ್ಕಿಂತ ಅವುಗಳು ತಮ್ಮ ವೀಕ್ಷಕರನ್ನು ಹೇಗೆ ಹಿಡಿದಿಡುತ್ತವೆ ಎನ್ನುವುದೇ ಮುಖ್ಯ.

 

ಶಾಲಾ, ಕಾಲೇಜುಗಳಲ್ಲಿ ಒತ್ತಾಯಪೂರ್ವಕವಾಗಿ ನಿಮಗೆ ಕಥೆ ಓದಿಸಿದ್ದರೆ ಅಥವಾ ಬೇಕಿಲ್ಲದ ಸಿನೆಮಾ ನೀವು ನೋಡಿದ್ದರೆ ಅವು ನಿಮ್ಮ ಮನಸ್ಸಿನಲ್ಲಿ ನಿಲ್ಲುವುದೇ ಇಲ್ಲ. ಅದು ಸಮಯ ವ್ಯರ್ಥ ಮಾತ್ರ. ಬರೀ ನಿಮ್ಮದಷ್ಟೇ ಅಲ್ಲ, ಕಥೆ ಬರೆದವರ ಅಥವಾ ಸಿನೆಮಾ ಮಾಡಿದವರದು ಕೂಡ. ಆದರೆ ನೀವು ಚಿಕ್ಕಂದಿನಲ್ಲಿ ಅಜ್ಜಿ ಹೇಳಿದ ಕಥೆ ಆಸಕ್ತಿಯಿಂದ ಕೇಳಿದ್ದರೆ ಅದು ನಿಮ್ಮ ಮನಸ್ಸಿನಲ್ಲಿ ಒಂದು ಶಾಶ್ವತ ಸ್ಥಾನ ಪಡೆಯುತ್ತದೆ. ಮುಂದೆ ನೀವು ಅಜ್ಜ, ಅಜ್ಜಿಯಾದ ಮೇಲೆ ನಿಮ್ಮ ಮೊಮ್ಮಕ್ಕಳಿಗೆ ಅದೇ ಕಥೆ ಹೇಳಲು ಹೊರಡುತ್ತೀರಿ. ಕಾಲ ಬದಲಾಗಿದೆ. ಆದರೂ ನೀವು ಕೇಳಿದ ಕಥೆ ಮೂಲವನ್ನು ಹಾಗೆಯೆ ಇಟ್ಟುಕೊಂಡು ಕೆಲವು ವಿವರಗಳನ್ನು ಮತ್ತು ಹೇಳುವ ಶೈಲಿ ಮಾತ್ರ ಬದಲಾಯಿಸುತ್ತೀರಿ. ನೀವು ಕಥೆ ಕೇಳುಗರಿಂದ, ಕಥೆ ಹೇಳುವವರಾಗಿ ಬದಲಾಗಿದ್ದು ನಿಮ್ಮ ಅರಿವಿಗೆ ಬರುವುದೇ ಇಲ್ಲ. ನಿಮ್ಮ ಮೊಮ್ಮಕ್ಕಳಿಗೂ ನೀವು ಹೇಳುವ ಹಲವು ಕಥೆಗಳು ಇಷ್ಟವಾಗಿ ಬಿಡುತ್ತವೆ. ರಾಮಾಯಣ, ಮಹಾಭಾರತಗಳು ಸಾವಿರಾರು ವರುಷಗಳು ಕಾಲ ಬದುಕಿ ಬಂದದ್ದು ಹಾಗೆಯೆ.

 

ಕಥೆ ಅಂದರೆ ಕೃಷ್ಣನ ಬಾಲ ಲೀಲೆಗಳು, ಶಿವಾಜಿಯ ಸಾಹಸಗಳು ಅಷ್ಟೇ ಅಲ್ಲವಲ್ಲ. ನಮ್ಮ ನಿಮ್ಮ ನಡುವೆ ಹೊಸ ಕಥೆಗಳು ಹುಟ್ಟಿಬಿಡುತ್ತವೆ. ಅಥವಾ ನಾವೇ ಹೊಸ ಕಥೆಯ ವಸ್ತುಗಳಾಗಿ ಬಿಡುತ್ತೇವೆ. ನಮ್ಮ ನಡುವೆ ಅದನ್ನು ಗಮನಿಸಿ ಹೇಳುವ ಹೊಸ ಕಥೆಗಾರ ಹುಟ್ಟಿಯೇ ಬಿಡುತ್ತಾನೆ. ಅವನು ಅದನ್ನು ಹಾಸ್ಯಮಯವಾಗಿ ಹೇಳಬಹುದು.

 

"ದೊಡ್ಡವರೆಲ್ಲ ಜಾಣರಲ್ಲ,

ಚಿಕ್ಕವರೆಲ್ಲ ಕೋಣರಲ್ಲ"

 

ಇಲ್ಲವೇ ವಿಷಾದ ತುಂಬಿ ಹೇಳಬಹುದು

.

" ಕೈ ಸೋತರೆ ಬೊಂಬೆಯ ಕಥೆಯು

ಕೊನೆಯಾಗುವುದೇಕೊನೆಯಾಗುವುದೇ?"

 

ಮನಸ್ಸಿಗೆ ತಟ್ಟಿದ ಕಥೆಗಳೆಲ್ಲ ಒಬ್ಬ ಮನುಷ್ಯನಿಂದ ಇನ್ನೊಬ್ಬನಿಗೆ ವರ್ಗಾವಣೆಯಾಗುತ್ತ ಹೋಗುತ್ತವೆ. ಮಾಧ್ಯಮಕ್ಕಿಂತ (ಪುಸ್ತಕ, ಸಿನೆಮಾ) ಕಥೆಯ ಸಾರವೇ ಮುಖ್ಯವಾಗುತ್ತದೆ. ಆಗ ಕಥೆ ಬರೆದವರಿಗೂ ಮತ್ತು ಸಿನೆಮಾ ಮಾಡಿದವರಿಗೂ ಒಂದು ಸಾರ್ಥಕ ಭಾವನೆ ಹುಟ್ಟುತ್ತದೆ. ಭಾವನೆಯೇ ಬರಹಗಾರರಿಗೆ, ಚಿತ್ರ ನಿರ್ದೇಶಕರಿಗೆ ಸ್ಫೂರ್ತಿ ತುಂಬುತ್ತದೆ. ಸಿನೆಮಾ ನಿರ್ದೇಶಕರ ಮನಸ್ಸು ಕೆದಕಿ ನೋಡಿ. ಅಲ್ಲಿ ಅವರನ್ನು ಪ್ರಭಾವಗೊಳಿಸಿದ ಅನೇಕ ಚಿತ್ರಗಳು ಇರುತ್ತವೆ. ಹಾಗೆಯೆ ಬರಹಗಾರನಲ್ಲಿ ಅವನು ಓದಿದ ಹಲವಾರು ಪುಸ್ತಕಗಳು ಇರುತ್ತವೆ. ಪ್ರಭಾವ ಅವರಲ್ಲಿ ದಟ್ಟವಾಗಿದ್ದು, ತಾವು ಹೊಸ ಕಥೆಗಳ ಹುಡುಕಾಟಕ್ಕೆ ತೊಡಗುತ್ತಾರೆ. ಇನ್ನಾರನ್ನೋ ಪ್ರಭಾವಗೊಳಿಸುತ್ತಾರೆ. ಅವರ ಸಂತತಿ ಬೆಳೆಯುತ್ತ ಹೋಗುತ್ತದೆ. ಅದು ಅಜ್ಜಿ ಹೇಳಿದ ಕಥೆ ಕೇಳಿ ನಾವು ಕಥೆಗಾರ ಆದಂತೆ.

 

ಎಲ್ಲ ಕಥೆಗಾರರಿಗೆ ಅವರ ಸಂದೇಶ ಮುಂದಕ್ಕೆ ದಾಟಿಸುವ ಅವಶ್ಯಕತೆ ಇರುತ್ತದೆ. ಅವರಿಗೆ ಒಬ್ಬ ಓದುಗ ಅದನ್ನು ಮೆಚ್ಚಿಕೊಳ್ಳುತ್ತಾನೆ ಎನ್ನುವ ಆಸೆ ಇರುತ್ತದೆ. ನೋವಿರಲಿ, ಸುಖವಿರಲಿ ಅದನ್ನು ಕೇಳುವ ಕಿವಿಗಳು ಇರುತ್ತವೆ ಎನ್ನುವ ನಂಬಿಕೆ ಕಥೆಗಾರರನ್ನು ಕಥೆ ಹೊಸೆಯುವಂತೆ ಮಾಡುತ್ತವೆ. ಬಸವಣ್ಣ, ಅಲ್ಲಮ ಪ್ರಭುಗಳು ತಾವು ಕಂಡುಕೊಂಡಿದ್ದು ವಚನಗಳನ್ನಾಗಿಸಿದರು. ಮೂಲಕ ತಮ್ಮ ಅನುಭವಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿದರು. ಮೊಗಲ್ ದೊರೆ ಅಕ್ಬರ್ ತನ್ನ ವಿಜಯಗಾಥೆ  ತಿಳಿಸಲು 'ಅಕ್ಬರ್ ನಾಮಾ' ಬರೆಸಿದ. ಅಶೋಕ ಚಕ್ರವರ್ತಿ ತನ್ನ ಸಂದೇಶಗಳನ್ನು ಕಲ್ಲಿನಲ್ಲಿ ಕೆತ್ತಿಸಲಿಲ್ಲವೇ? ಅವುಗಳು ಎರಡು ಸಾವಿರ ವರುಷಗಳ ನಂತರವೂ ಅವನ ಕಥೆ ಹೇಳುವ ಸ್ಮಾರಕಗಳಾಗಿ ಉಳಿದಿವೆ. ಪುರಂದರ ದಾಸರು ಬರೀ ಕೀರ್ತನೆಗಳನ್ನು ಹಾಡುವುದಷ್ಟೇ ಅಲ್ಲ, ಅವುಗಳನ್ನು ಬೇರೆಯವರಿಗೆ ಕಲಿಸಲು ಕೂಡ ಶ್ರಮ ಪಟ್ಟರು. ಸರ್ವವನ್ನು ಪರಿತ್ಯಾಗ ಮಾಡಿದ ಸರ್ವಜ್ಞನು ತ್ರಿಪದಿ ಹೇಳುವುದನ್ನು ಮರೆಯಲಿಲ್ಲ. ಅದು ಅವನ ಜೀವನದ ಸಂದೇಶ. ಋಷಿ ಮುನಿಗಳು ವೇದಗಳನ್ನು ಹುಟ್ಟಿಸಿದ್ದು ಹಾಗೆಯೆ. ಪತಂಜಲಿ ಮಹರ್ಷಿ ಯೋಗ ಸೂತ್ರಗಳನ್ನು ದಾಖಲಿಸಿದ್ದು ಅದೇ ಉದ್ದೇಶದಿಂದಲೇ. ಅವರ ಕಥೆ, ಸಂದೇಶಗಳನ್ನು ಕೇಳಿದ ಆಸಕ್ತರು ಅವುಗಳನ್ನು ಮುಂದಕ್ಕೆ ಸಾಗಿಸುತ್ತ ಬಂದರು.

 

ನಮ್ಮ ನಿಮ್ಮಲ್ಲೂ ಕಥೆಗಳು ಇವೆ. ಅವು ಆಸಕ್ತಿದಾಯಕವಾಗಿದ್ದಲ್ಲಿ ಅವುಗಳನ್ನು ಕೇಳುವವರು ಇರುತ್ತಾರೆ. ಇವತ್ತಲ್ಲದಿದ್ದರೆ ಮುಂದೊಂದು ದಿನ ಬರುತ್ತಾರೆ. ಸಾಕಷ್ಟು ಜನರು ಅಲ್ಲದಿದ್ದರೆ ಒಬ್ಬರಿಬ್ಬರಾದರು ಸರಿ. ಆಸೆ ಮತ್ತು ನಂಬಿಕೆಯೇ ನಮ್ಮ ಜೀವನವನ್ನು ಕುತೂಹಲದಾಯಕವಾಗಿಸುವುದು. ಹಾಗಾಗಿ ಇಲ್ಲಿ ಬರೀ ಕಥೆ ಕೇಳಿ ಹೋಗಬೇಡಿ. ನಿಮ್ಮ ಕಥೆಯನ್ನು ಕೂಡ ಹೇಳಿ ಹೋಗಿ.

No comments:

Post a Comment